ಮರಣದಂಡನೆಗೆ ಗುರಿಯಾದ ಅಪರಾಧಿಯನ್ನು ಗಲ್ಲಿಗೇರಿಸಿ ಕೊಲ್ಲುವ ಬದಲು, ಅದಕ್ಕಿಂತ ಹೆಚ್ಚು ಮಾನವೀಯವಾದ ಮಾರ್ಗ ಅನುಸರಿಸಿ ಆ ಅಪರಾಧಿಯ ಪ್ರಾಣಹರಣ ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಕೋರ್ಟ್‌ನ ಈ ನಡೆಯು ಅಪರಾಧಿಗೆ ಶಿಕ್ಷೆಯ ರೂಪದಲ್ಲಿ ಮರಣದಂಡನೆಯನ್ನು ನೀಡುವುದರ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ವಾಸ್ತವದಲ್ಲಿ ಮರಣದಂಡನೆಯೇ ಅನ್ಯಾಯದ್ದು. ಮರಣದಂಡನೆಗೆ ಗುರಿಯಾದ ಅಪರಾಧಿಯು ತನ್ನ ಜೀವನದ ಕೊನೆಯ ಕ್ಷಣಗಳಲ್ಲಿ ಎದುರಿಸುವ ಮಾನಸಿಕ ಹಾಗೂ ದೈಹಿಕ ಯಾತನೆಯನ್ನು ಪರಿಗಣಿಸಿ ಹೇಳುವುದಾದರೆ, ನೇಣು ಬಿಗಿದು ಕೊಲ್ಲುವುದಕ್ಕಿಂತ ಹೆಚ್ಚು ಮಾನವೀಯವಾದ ಪರ್ಯಾಯವನ್ನು ಅರಸುವುದು ಸ್ವಾಗತಾರ್ಹ ಹೌದು. ಆದರೆ, ಪ್ರಭುತ್ವವೊಂದರ ಪಾಲಿಗೆ ನೈತಿಕವಾಗಿ ಸರಿಯಲ್ಲದ ಮರಣದಂಡನೆಯನ್ನು ಇಲ್ಲವಾಗಿಸುವುದೇ ನಿಜವಾದ ಪರ್ಯಾಯವಾಗುತ್ತದೆ. ಅಪರಾಧಿಗೆ ವಿದ್ಯುತ್ ಶಾಕ್ ನೀಡಿ ಆತನನ್ನು ಕೊಲ್ಲುವುದು, ಆತನಿಗೆ ಗುಂಡು ಹೊಡೆದು ಕೊಲ್ಲುವುದು, ಸಿರಿಂಜ್ ಮೂಲಕ ವಿಷ ನೀಡಿ ಕೊಲ್ಲುವುದು ಯಾತನೆ ಇಲ್ಲದ ಮರಣದಂಡನೆ ಎಂದು ಪರಿಗಣಿಸಲು ಆಗದು ಎಂದು ಕೋರ್ಟ್ ಹೇಳಿದೆ. ಏಕೆಂದರೆ ಮರಣ ದಂಡನೆಯನ್ನು ಈ ಬಗೆಗಳಲ್ಲಿ ವಿಧಿಸುವಾಗ ಲೋಪಗಳಾಗುವ ಸಾಧ್ಯತೆ ಇರುತ್ತದೆ. ಗಲ್ಲಿಗೆ ಏರಿಸಿ ಅಪರಾಧಿಯನ್ನು ಕೊಲ್ಲುವುದು ಎಷ್ಟು ಸರಿ ಎಂಬುದನ್ನು ಸರ್ಕಾರ ಪರಿಶೀಲಿಸದೇ ಇದ್ದರೆ, ಕೋರ್ಟ್ ತಾನೇ ತಜ್ಞರ ಸಮಿತಿಯೊಂದನ್ನು ರಚಿಸುವ ಇರಾದೆ ಹೊಂದಿರುವಂತಿದೆ. ಮರಣದಂಡನೆಯನ್ನು ವಿಧಿಸಲು ಕಡಿಮೆ ಯಾತನೆಯ ಹಾಗೂ ‘ಮನುಷ್ಯನ ಘನತೆಗೆ ಹೆಚ್ಚು ಅನುಗುಣವಾಗಿ ಇರುವ’ ಇನ್ನೊಂದು ಆಯ್ಕೆ ಇದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇರುವುದಾದರೆ, ಗಲ್ಲಿಗೇರಿಸಿ ಮರಣದಂಡನೆ ಜಾರಿಗೆ ತರುವುದು ಅಸಾಂವಿಧಾನಿಕ ಎಂದು ಘೋಷಿಸಲು ತಾನು ಸಿದ್ಧವಿರುವುದಾಗಿಯೂ ಕೋರ್ಟ್ ಹೇಳಿದೆ.
ಆದರೆ ಅಪರಾಧಿಗೆ ಸಾವಿನ ಶಿಕ್ಷೆಯನ್ನು ವಿಧಿಸುವುದರಲ್ಲಿ ಇರುವ ನಿಜ ಸಮಸ್ಯೆಯು ಯಾವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುತ್ತದೆ, ಅದು ಯಾತನಾಮಯ ಹೌದೋ ಅಲ್ಲವೋ ಎಂಬುದಲ್ಲ. ಬದಲಿಗೆ, ಇಲ್ಲಿ ನಿಜವಾಗಿ ಗಮನಿಸಬೇಕಾಗಿದ್ದು ಮಾನವನ ಘನತೆಗೆ ಸಂಬಂಧಿಸಿದ ಅಂಶಗಳನ್ನು. ಯಾವುದೇ ವ್ಯಕ್ತಿಯನ್ನು ಪ್ರಭುತ್ವವು ತಾನೇ ಮುಂದೆ ನಿಂತು ಕೊಲ್ಲುವುದು ಮಾನವನ ಘನತೆಗೆ ಚ್ಯುತಿ ತರುವ ಕೆಲಸ. ಕೊಲ್ಲುವುದು ಮಾನವೀಯ ಕೆಲಸ ಅಲ್ಲವೇ ಅಲ್ಲ. ಮರಣದಂಡನೆಯು ಇತರ ಎಲ್ಲ ಬಗೆಯ ಶಿಕ್ಷೆಗಳಿಗಿಂತ ಭಿನ್ನ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಗುರುತಿಸಿದೆ. ಹಾಗಾಗಿಯೇ, ಈ ಶಿಕ್ಷೆಯನ್ನು ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ವಿಧಿಸಬೇಕು ಎಂದು ಅದು ಹೇಳಿದೆ.
ನೇಣುಗಂಬಕ್ಕೆ ಏರಿಸಿ ಅಪರಾಧಿಯನ್ನು ಕೊಲ್ಲುವ ಪ್ರಕ್ರಿಯೆಯಲ್ಲಿ ಯಾತನೆಯು ಸಾಧ್ಯವಿರುವಷ್ಟು ಕಡಿಮೆ ಮಟ್ಟದಲ್ಲಿರಬೇಕು ಎಂದು ಕೂಡ ಕೋರ್ಟ್ ಇನ್ನೊಂದು ಪ್ರಕರಣದಲ್ಲಿ ಹೇಳಿದೆ. ಮರಣದಂಡನೆಯನ್ನು ವಿಧಿಸುವ ಪ್ರಕರಣಗಳಲ್ಲಿ ಪರಾಮರ್ಶೆಯು ಅತ್ಯಂತ ಕಠಿಣವಾಗಿ ಆಗಬೇಕು, ಇಂತಹ ಪ್ರಕರಣಗಳಲ್ಲಿ ಮೇಲ್ಮನವಿಗಳ ನಂತರದಲ್ಲಿಯೂ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಗೆ ಅವಕಾಶಗಳು ಇರಬೇಕು ಎಂದು ಕೂಡ ಕೋರ್ಟ್ ತಾಕೀತು ಮಾಡಿದೆ. ಮರಣದಂಡನೆಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಸುವ ಅರ್ಜಿಗಳ ವಿಚಾರದಲ್ಲಿ ಕೋರ್ಟ್ ಬಹಳ ಅನುಕಂಪದ ನಡೆಯನ್ನು ಇರಿಸಿದ್ದಿದೆ. ಮರಣದಂಡನೆ ವಿಚಾರದಲ್ಲಿ ಕೋರ್ಟ್ ಪಾಲಿಸಿಕೊಂಡು ಬಂದಿರುವ ನಿಲುವುಗಳ ಮುಂದುವರಿದ ಭಾಗವಾಗಿ ಈಗ ವ್ಯಕ್ತಪಡಿಸಿರುವ ಕಳಕಳಿಯನ್ನು ಗ್ರಹಿಸಬಹುದು. ಇಂತಹ ಯೋಚನೆಗಳು ಸಹಜವಾಗಿಯೇ, ಮರಣದಂಡನೆಯನ್ನು ಒಪ್ಪದೇ ಇರುವ ಹಂತವನ್ನು ತಲುಪುತ್ತವೆ. ಮರಣದಂಡನೆ ಎಂಬುದು ಬಹಳ ಕ್ರೂರವಾದ ಶಿಕ್ಷೆ. ವ್ಯಕ್ತಿಯನ್ನು ಸಾಯಿಸುವ ಶಿಕ್ಷೆಯನ್ನು ವಿಧಿಸುವುದರ ಹಿಂದೆ ಇರುವುದು ಹಗೆ ತೀರಿಸಿಕೊಳ್ಳುವ ಆಲೋಚನೆ. ಅಪರಾಧ ಹಾಗೂ ಶಿಕ್ಷೆಯ ವಿಚಾರವಾಗಿ ರೂಪುಗೊಂಡಿರುವ ಸುಧಾರಣಾವಾದಿ ಆಲೋಚನೆಗಳಿಗೆ ಇದು ಪೂರಕವಾಗಿಲ್ಲ. ಸಮಾಜ ಹಾಗೂ ಕಾನೂನಿನ ಗುರಿಯು ಅಪರಾಧಿಯಲ್ಲಿ ಸುಧಾರಣೆ ತರುವುದು ಮತ್ತು ಆತನನ್ನು ಮತ್ತೆ ಸಮಾಜದಲ್ಲಿ ಒಂದಾಗಿ ಬದುಕುವುದಕ್ಕೆ ಸೂಕ್ತ
ವ್ಯಕ್ತಿಯನ್ನಾಗಿ ಮಾಡುವುದಾಗಿರಬೇಕು. ಹಲವು ದೇಶಗಳು ಮರಣದಂಡನೆಯನ್ನು ರದ್ದು ಮಾಡಿವೆ. ಹಲವು ದೇಶಗಳು ಈ ಶಿಕ್ಷೆಯನ್ನು ರದ್ದು ಮಾಡುವತ್ತ ಹೆಜ್ಜೆ ಇರಿಸಿವೆ. ಸುಪ್ರೀಂ ಕೋರ್ಟ್ ಈಗ ಆಲೋಚಿಸುತ್ತಿರುವ ರೀತಿಯು ಭಾರತದಲ್ಲಿಯೂ ಮುಂದೊಂದು ದಿನ ಮರಣದಂಡನೆ ರದ್ದಾಗುವಂತೆ ಮಾಡಬಹುದು ಎಂದು ಆಶಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.