ದೂರಸಂಪರ್ಕ ಕ್ಷೇತ್ರದ ವಿವಿಧ ಕಂಪನಿಗಳು ಸರ್ಕಾರಕ್ಕೆ ನೀಡಬೇಕಿರುವ ಅಂದಾಜು ₹ 1.6
ಲಕ್ಷ ಕೋಟಿ ಮೊತ್ತದ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್) ಪಾವತಿ ಮಾಡಲು 10 ವರ್ಷಗಳ ಕಾಲಾವಕಾಶವನ್ನುಸುಪ್ರೀಂ ಕೋರ್ಟ್ ನೀಡಿದೆ. ಇದು, ಸಾಲದ ಸುಳಿಗೆ ಸಿಲುಕಿರುವ ಹಾಗೂ ಗ್ರಾಹಕರಿಂದ ಬರುತ್ತಿರುವ ಆದಾಯವು ‘ಸುಸ್ಥಿರ ಬೆಳವಣಿಗೆಗೆ ಸಾಕಾಗುತ್ತಿಲ್ಲ’ ಎಂದು ಹೇಳುತ್ತಿರುವ ದೂರಸಂಪರ್ಕ ವಲಯದ ಕೆಲವು ಕಂಪನಿಗಳ ಪಾಲಿಗೆ ಸಮಾಧಾನ ತರುವಂತೆ ಇದೆ. ಇಷ್ಟು ದೊಡ್ಡ ಮೊತ್ತವನ್ನು ಬಾಕಿ ಇರಿಸಿಕೊಂಡಿರುವ ಕಂಪನಿಗಳ ಸಾಲಿನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಕೆಲವು ಕಂಪನಿಗಳೂ ಇವೆ. ಎಜಿಆರ್ ಬಾಕಿ ಪಾವತಿ ಮಾಡಲು ಕಂಪನಿಗಳು ಹೆಚ್ಚಿನ ಕಾಲಾವಕಾಶ ಕೋರಿದ್ದವು. ಕೇಂದ್ರ ಸರ್ಕಾರ ಕೂಡ ದೂರಸಂಪರ್ಕ ಇಲಾಖೆಯ ಮೂಲಕ ಪ್ರಸ್ತಾವವೊಂದನ್ನು ಇರಿಸಿ, ಬಾಕಿ ಮೊತ್ತವನ್ನು 20 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು ಎಂದು ಹೇಳಿತ್ತು. ಆದರೆ, ಈ ಪ್ರಸ್ತಾವವನ್ನೂ ಕಂಪನಿಗಳ ಕೋರಿಕೆಯನ್ನೂ ಪೂರ್ತಿಯಾಗಿ ಮಾನ್ಯ ಮಾಡದ ಸುಪ್ರೀಂ ಕೋರ್ಟ್, 10 ವರ್ಷಗಳಲ್ಲಿ ಅಷ್ಟೂ ಮೊತ್ತ ಪಾವತಿಸಬೇಕು ಎಂದು ಹೇಳಿದೆ. ಬಾಕಿ ಮೊತ್ತದಲ್ಲಿ ಶೇಕಡ 10ರಷ್ಟನ್ನು 2021ರ ಮಾರ್ಚ್ 31ರೊಳಗೆ ಪಾವತಿಸಬೇಕು ಎಂದು ಕಂಪನಿಗಳಿಗೆ ತಾಕೀತು ಮಾಡಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಮಾನವು ಕೆಲವು ಕಂಪನಿಗಳಿಗೆ ಪೂರ್ತಿಯಾಗಿ ಸಮಾಧಾನ ತಂದಿಲ್ಲದೆ ಇರಬಹುದು. ಅವುಗಳಿಗೆ ತೀರ್ಪು ಪ್ರಶ್ನಿಸಿ ಪರಿಹಾರಾತ್ಮಕ ಅರ್ಜಿ ಸಲ್ಲಿಸುವ ಅವಕಾಶಗಳೂ ಇವೆ. ಆದರೆ, ಅದೇನೇ ಇದ್ದರೂ ಇದು ಬ್ಯಾಂಕಿಂಗ್ ವಲಯಕ್ಕೆ ಸಮಾಧಾನ ತಂದಿರುವುದು ನಿಜ. ದೂರಸಂಪರ್ಕ ಕ್ಷೇತ್ರಕ್ಕೆ ಸಾಲದ ರೂಪದಲ್ಲಿ ದೊಡ್ಡ ಮಟ್ಟದಲ್ಲಿ ಹಣ ನೀಡಿರುವ ವಿವಿಧ ಬ್ಯಾಂಕುಗಳು, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದದ್ದು ನಿಜ.
ಎಜಿಆರ್ ಬಾಕಿ ಪಾವತಿಗೆ ಸಂಬಂಧಿಸಿದ ತೀರ್ಪು ಪ್ರಕಟವಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿರುವ ಒಂದು ಕಂಪನಿಯ ಪ್ರತಿನಿಧಿಯೊಬ್ಬರು, ‘ಇನ್ನು ಹತ್ತು ವರ್ಷಗಳಂತೂ ನಾವು ದೂರಸಂಪರ್ಕ ಸೇವಾ ಕ್ಷೇತ್ರದಲ್ಲಿ ಉಳಿದುಕೊಳ್ಳುತ್ತೇವೆ’ ಎಂದು ಸಮಾಧಾನದ ಮಾತು ಆಡಿರುವುದಾಗಿ ವರದಿಯಾಗಿದೆ. ನಿರ್ದಿಷ್ಟ ದೂರಸಂಪರ್ಕ ಕಂಪನಿಯೊಂದಕ್ಕೆ ಎಜಿಆರ್ ಬಾಕಿ ಪಾವತಿಸಲು ಆಗದಿದ್ದಂತಹ ತೀರ್ಮಾನ ಹೊರಬಿದ್ದಿದ್ದರೆ, ಆ ಕಂಪನಿಗೆ ಸಾಲ ನೀಡಿದ ಬ್ಯಾಂಕುಗಳು ಕೂಡ ಹಣಕಾಸಿನ ಒತ್ತಡಕ್ಕೆ ಸಿಲುಕುತ್ತಿದ್ದವು. ಅಷ್ಟೇ ಅಲ್ಲ, ಅಂತಹ ಸ್ಥಿತಿಯು ದೂರಸಂಪರ್ಕದಂತಹ ಮಹತ್ವದ ಕ್ಷೇತ್ರದಲ್ಲಿ ಎರಡೇ ದೊಡ್ಡ ಕಂಪನಿಗಳು ಉಳಿದುಕೊಳ್ಳುವ ಸ್ಥಿತಿಯನ್ನು ನಿರ್ಮಾಣಮಾಡಿಬಿಡುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ ಈಗ ನೀಡಿರುವ ತೀರ್ಪನ್ನು ಗಮನಿಸಿದರೆ, ಕಂಪನಿಗಳನ್ನು ಪ್ರತಿನಿಧಿಸುವವರೇ ಆಡಿರುವ ಕೆಲವು ವಿಶ್ವಾಸದ ಮಾತುಗಳನ್ನು ನೋಡಿದರೆ, ಅಂತಹ ಕೆಟ್ಟ ಸ್ಥಿತಿ ನಿರ್ಮಾಣ ಆಗಲಿಕ್ಕಿಲ್ಲ ಎಂದು ಹೇಳಬಹುದು. ಎಜಿಆರ್ ಬಾಕಿ ಮೊತ್ತವನ್ನು ತಕ್ಷಣಕ್ಕೆ ಪಾವತಿಸಲು ಸಾಧ್ಯವಾಗದ ಸ್ಥಿತಿ ತಲುಪಿರುವುದರಲ್ಲಿ ದೂರಸಂಪರ್ಕ ಕಂಪನಿಗಳ
ಪಾಲೂ ಇದೆ. ಒಂದು ಕಂಪನಿಯ ಪ್ರವೇಶದ ನಂತರ, ಈ ಕ್ಷೇತ್ರದಲ್ಲಿ ದರ ಸಮರ ತೀರಾ ಹೆಚ್ಚಾಯಿತು. ಈಗ ಪ್ರತೀ ಗ್ರಾಹಕನಿಂದ ಬರುತ್ತಿರುವ ಆದಾಯವು ಕಂಪನಿಗಳಿಗೆ ಸುಸ್ಥಿರ ವಹಿವಾಟು ನಡೆಸಲು ಸಾಕಾಗುವಂತೆ ಇಲ್ಲ ಎಂಬ ಮಾತನ್ನು ಕ್ಷೇತ್ರದ ತಜ್ಞರೂ ಉದ್ಯಮಿಗಳೂ ಮತ್ತೆ ಮತ್ತೆ ಹೇಳಿದ್ದಾರೆ. ದರ ಸಮರದ ಪರಿಣಾಮವಾಗಿ ಈ ಕ್ಷೇತ್ರದ ಕೆಲವು ಕಂಪನಿಗಳು ಬಾಗಿಲು ಮುಚ್ಚಿವೆ, ಕೆಲವು ಕಂಪನಿಗಳು ವಿಲೀನ ಆಗಿವೆ. ದರ ಸಮರಕ್ಕೆ ಇಳಿಯುವ ಬದಲು, ದರವನ್ನು ಸುಸ್ಥಿರ ವಹಿವಾಟಿಗೆ ಅಗತ್ಯವಿರುವ ಮಟ್ಟದಲ್ಲಿ ಇರಿಸಿಕೊಂಡು, ಗುಣಮಟ್ಟದ ಸೇವಾ ಸಮರವನ್ನು ನಡೆಸಿದ್ದಿದ್ದರೆ ಗ್ರಾಹಕರಿಗೂ ಅನುಕೂಲ ಆಗಿರುತ್ತಿತ್ತು. ಎಜಿಆರ್ ಪ್ರಕರಣದಲ್ಲಿ ಕಂಪನಿಗಳು ತಾವು ಎದುರಿಸಿದ ಆತಂಕದ ಸಂದರ್ಭಗಳನ್ನು ಒಂದು ಪಾಠವಾಗಿ ಪರಿಗಣಿಸಿ, ಸಮರ್ಥನೀಯ ಮಟ್ಟಕ್ಕೆ ಸೇವಾ ಶುಲ್ಕವನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಅದರ ಜೊತೆಯಲ್ಲೇ, ತಮ್ಮ ಆಸ್ತಿಗಳನ್ನು ನಗದಾಗಿ ಅಥವಾ ಹೆಚ್ಚುವರಿ ಆದಾಯ ಮೂಲಗಳನ್ನಾಗಿ ಪರಿವರ್ತಿಸಿಕೊಳ್ಳುವ ಕಡೆಗೂ ಗಮನ ನೀಡಬಹುದು. ಆ ಮೂಲಕ ಎಜಿಆರ್ ಬಾಕಿ ಮೊತ್ತ ಪಾವತಿಗೆ ದಾರಿ ಕಂಡುಕೊಂಡು, ಗ್ರಾಹಕನಿಗೆ ಹೆಚ್ಚಿನ ಗುಣಮಟ್ಟದ ಸೇವೆ ನೀಡುವ ಕಡೆ ಗಮನ ನೀಡಲು ಇದು ಸಕಾಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.