ರಾಜ್ಯ ಸರ್ಕಾರವು ಈಚೆಗೆ ಅನುಮೋದಿಸಿರುವ ಪ್ರವಾಸೋದ್ಯಮ ನೀತಿಯು ಹಲವು ಸ್ವಾಗತಾರ್ಹ ಅಂಶಗಳನ್ನು ಒಳಗೊಂಡಿದೆ. ಇದರಿಂದಾಗಿ, ಪ್ರವಾಸೋದ್ಯಮಕ್ಕೆ ಇಂಬು ಕೊಡುವ ದಿಸೆಯಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇರಿಸಿದಂತಾಗಿದೆ. ಅದರಲ್ಲೂ ಮುಖ್ಯವಾಗಿ ಬಹಳ ಮಹತ್ವಾಕಾಂಕ್ಷೆಯ ಗುರಿಯೊಂದನ್ನು ಈ ನೀತಿಯು ಹೊಂದಿದೆ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರವಾಸಿ ತಾಣಗಳನ್ನು ಗಮನದಲ್ಲಿ ಇರಿಸಿಕೊಂಡಿದೆ. ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿ ಪ್ರವಾಸಿಗರ ಸಂಖ್ಯೆಯು ಈಗ ವಾರ್ಷಿಕ 28 ಕೋಟಿ ಇರುವುದನ್ನು 48 ಕೋಟಿಗೆ ಹೆಚ್ಚಿಸಬೇಕು, ವಿದೇಶಗಳಿಂದ ಬರುವ ಪ್ರವಾಸಿಗರ ಸಂಖ್ಯೆಯನ್ನು ಈಗ ವಾರ್ಷಿಕ ಇರುವ 4 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಸರ್ಕಾರದ ಬಯಕೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ 47 ಸಾವಿರ ನೇರ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸರ್ಕಾರ ಅಂದಾಜು ಮಾಡಿದೆ ಹಾಗೂ ಈ ವಲಯದ ಯೋಜನೆಗಳಿಗೆ ₹ 7,800 ಕೋಟಿ ಹೂಡಿಕೆ ಹರಿದುಬರಲಿದೆ ಎಂದು ಕೂಡ ಅಂದಾಜಿಸಿದೆ. ರಾಜ್ಯದಲ್ಲಿ ಅಂದಾಜು 320 ಕಿ.ಮೀ. ಉದ್ದದ, ಪ್ರಕೃತಿದತ್ತವಾದ ಕಡಲತಡಿ ಇದೆ. ಬಹಳ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆ ಇಲ್ಲಿದೆ. ರಾಜ್ಯದ ಭೂಪ್ರದೇಶಗಳಲ್ಲಿ ಬಹಳ ವೈವಿಧ್ಯ ಇದೆ. ಈ ಎಲ್ಲ ಕಾರಣಗಳಿಂದಾಗಿ ರಾಜ್ಯವು ಪ್ರವಾಸೋದ್ಯಮದ ದೃಷ್ಟಿಯಿಂದ ಬಹಳ ಆಕರ್ಷಕ. ಸಾಹಸ ಪ್ರವಾಸೋದ್ಯಮ, ಆಹಾರ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ ಸೇರಿದಂತೆ ವಿವಿಧ ವಿಷಯಗಳನ್ನು ಹೊಸ ನೀತಿಯು ಒಳಗೊಂಡಿದೆ. ‘ಒಂದು ಜಿಲ್ಲೆ, ಒಂದು ತಾಣ’ ಪರಿಕಲ್ಪನೆಯು ರಾಜ್ಯದಲ್ಲಿ ಕನಿಷ್ಠ 30 ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಾರಣವಾಗಿ ಒದಗಿಬರಲಿದೆ, ಆ ಮೂಲಕ ರಾಜ್ಯದ ಪ್ರತಿ ಜಿಲ್ಲೆಯೂ ಪ್ರವಾಸೋದ್ಯಮದ ಬೆಳವಣಿಗೆಗೆ ನೆರವಾಗುವಂತೆ ಆಗಲಿದೆ.
2029ಕ್ಕೆ ಮೊದಲು ರಾಜ್ಯದಲ್ಲಿ 50 ಸಾಹಸ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಉದ್ದೇಶಿಸಿದೆ. ಕಾಫಿ ಮಂಡಳಿ ಜೊತೆಗಿನ ಸಹಭಾಗಿತ್ವವು ಕಾಫಿ ಪ್ರವಾಸೋದ್ಯಮದ ನಕಾಶೆಯಲ್ಲಿ ರಾಜ್ಯವನ್ನು ಪ್ರಮುಖ ತಾಣವನ್ನಾಗಿಸಲಿದೆ. ರಾಜ್ಯದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ಹಾಗೂ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಅಂತರರಾಷ್ಟ್ರೀಯ ಮಟ್ಟದ ಕನಿಷ್ಠ 50 ಪ್ರವಾಸೋದ್ಯಮ ಮೇಳಗಳಲ್ಲಿ ಭಾಗಿಯಾಗುವ ಆಲೋಚನೆಯನ್ನು ಸರ್ಕಾರವು ಹೊಂದಿದೆ. ಹೀಗಿದ್ದರೂ, ಸುಸ್ಥಿರತೆಯ ವಿಚಾರವಾಗಿ ಹೆಚ್ಚಿನ ಗಮನ ನೀಡದೇ ಇರುವುದು, ಅದರಲ್ಲೂ ಮುಖ್ಯವಾಗಿ ಪರಿಸರದ ದೃಷ್ಟಿಯಿಂದ ಬಹಳ ಸೂಕ್ಷ್ಮವಾಗಿರುವ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈ ವಿಚಾರವಾಗಿ ಅಗತ್ಯ ಗಮನ ನೀಡದೇ ಇರುವುದು ಕಳವಳ ಮೂಡಿಸುವಂಥದ್ದು. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಪ್ರವಾಸಿಗರ ಸಂಖ್ಯೆ ಅತಿ ಆಗಿರುವುದರ ಪರಿಣಾಮವನ್ನು ಈಗಾಗಲೇ ಅನುಭವಿಸುತ್ತಿವೆ. ವಿಶ್ವಸಂಸ್ಥೆಯು ವ್ಯಾಖ್ಯಾನ ಮಾಡಿರುವಂತೆ, ಸುಸ್ಥಿರ ಪ್ರವಾಸೋದ್ಯಮವು ಆರ್ಥಿಕ, ಸಾಮಾಜಿಕ ಹಾಗೂ ಪಾರಿಸರಿಕ ಪರಿಣಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಪ್ರವಾಸೋದ್ಯಮವು ಸ್ಥಳೀಯ ಸಮುದಾಯಗಳಿಗೆ ಪ್ರಯೋಜನ ತಂದುಕೊಡುವ ಖಾತರಿಯನ್ನು ಹೊಂದಿರಬೇಕು ಎಂದು ಕೂಡ ಅದು ಹೇಳುತ್ತದೆ. ಪ್ರವಾಸಿಗರ ಸಂಖ್ಯೆಯ ಮೇಲೆ ನಿಯಂತ್ರಣವೇ ಇಲ್ಲದಿದ್ದರೆ, ಸ್ಥಳೀಯ ಸಂಪನ್ಮೂಲಗಳ ಮೇಲೆ ವಿಪರೀತ ಹೊರೆ ಉಂಟಾಗಬಹುದು, ಸ್ಥಳೀಯ ಸಂಸ್ಕೃತಿಗಳನ್ನು ಹಾಳುಮಾಡಬಹುದು, ನೈಸರ್ಗಿಕವಾದ ಆವಾಸ ಸ್ಥಾನಗಳಿಗೆ ಧಕ್ಕೆ ಉಂಟುಮಾಡಬಹುದು. ಆದರೆ, ಮೂಲ ಉದ್ದೇಶದ ಜೊತೆ ಸುಸ್ಥಿರತೆಯನ್ನು ಜೋಡಿಸಿದರೆ ಸರ್ಕಾರವು ರಾಜ್ಯದಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸಬಹುದು ಮತ್ತು ಪ್ರವಾಸಿಗರಿಗೂ ಸ್ಥಳೀಯ ಸಮುದಾಯಗಳಿಗೂ ಅನುಕೂಲ ಸೃಷ್ಟಿಸುವ ಪ್ರವಾಸೋದ್ಯಮವನ್ನು ಕಟ್ಟಬಹುದು. ಇದು ಸಾಧ್ಯವಾಗಬೇಕು ಎಂದಾದರೆ ಸೂಕ್ಷ್ಮವಾಗಿ ಯೋಜನೆಗಳನ್ನು ರೂಪಿಸಬೇಕು, ಪಾಲುದಾರರ ಜೊತೆ ಸಮಾಲೋಚನೆ ನಡೆಸಬೇಕು ಹಾಗೂ ಪ್ರವಾಸೋದ್ಯಮದ ಕೆಟ್ಟ ಪರಿಣಾಮಗಳನ್ನು ತಗ್ಗಿಸುವ ಒಂದಿಷ್ಟು ಕಾರ್ಯಕ್ರಮಗಳು ಬೇಕು.
ರಾಜ್ಯದ ಪ್ರವಾಸೋದ್ಯಮ ನೀತಿಗಳು ಹಿಂದೆಯೂ ತಮ್ಮ ಗುರಿಯನ್ನು ತಲುಪಲು ವಿಫಲವಾದ ನಿದರ್ಶನಗಳು ಇವೆ. ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಇಲ್ಲದಿದ್ದುದು, ಉತ್ತರದಾಯಿತ್ವದ ಕೊರತೆ ಹಾಗೂ ಸ್ಥಳೀಯ ಸಮುದಾಯಗಳನ್ನು ಅಗತ್ಯ ಪ್ರಮಾಣದಲ್ಲಿ ತೊಡಗಿಸಿಕೊಳ್ಳದೇ ಇದ್ದುದು ಈ ವೈಫಲ್ಯಕ್ಕೆ ಕೆಲವು ಕಾರಣಗಳು. ಹಿಂದಿನ ಪ್ರಯತ್ನಗಳು ಅರ್ಥಪೂರ್ಣವಾದ ಹಾಗೂ ಸುಸ್ಥಿರವಾದ ಅನುಭವವನ್ನು ಪ್ರವಾಸಿಗರಿಗೆ ಸೃಷ್ಟಿಸಿಕೊಡುವ ಬದಲು, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವನ್ನು ಮಾತ್ರ ಹೊಂದಿದ್ದವು. ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ, ಶುಚಿತ್ವದಂತಹ ಮೂಲಸೌಕರ್ಯವನ್ನು ಕಲ್ಪಿಸಲು ಸಾಧ್ಯವಾಗದೇ ಇದ್ದುದು ಕೂಡ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡರಾಗಿ ಪರಿಣಮಿಸಿದ್ದವು. ರಾಜ್ಯದಲ್ಲಿ ಬಹಳ ವಿಶಿಷ್ಟವಾದ ಪ್ರವಾಸಿ ತಾಣಗಳು ಇವೆ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಂಡರೂ ಪ್ರವಾಸಿ ತಾಣಗಳನ್ನು ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಂಡಿಲ್ಲ. ಹೊಸ ಪ್ರವಾಸೋದ್ಯಮ ನೀತಿಯು ಮಹತ್ವಾಕಾಂಕ್ಷಿ ಆಗಿದ್ದರೂ, ಬಹಳ ಭರವಸೆ ಮೂಡಿಸುವಂತೆ ಇದೆಯಾದರೂ, ಅದರ ಅನುಷ್ಠಾನ ಯಾವ ರೀತಿಯಲ್ಲಿ ಆಗುತ್ತದೆ ಎಂಬುದು ಅದರ ಯಶಸ್ಸನ್ನು ತೀರ್ಮಾನಿಸುತ್ತದೆ. ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವ ಬಯಕೆಯನ್ನು ರಾಜ್ಯವು ಹೊಂದಿದೆ. ಹಾಗೆ ಆಗಬೇಕು ಎಂದಾದರೆ, ಬೆಳವಣಿಗೆಯು ಸುಸ್ಥಿರವಾಗಿರಬೇಕು, ಪ್ರವಾಸಿಗರಿಗೆ, ಸ್ಥಳೀಯ ನಿವಾಸಿಗಳಿಗೆ ಹಾಗೂ ಪರಿಸರಕ್ಕೆ ಪೂರಕವಾಗಿ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.