ADVERTISEMENT

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ಯತ್ನ; ಕಲೆಗೆ ಮಾರಕ, ಸರ್ವಾಧಿಕಾರಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 19:31 IST
Last Updated 27 ಜೂನ್ 2021, 19:31 IST
   

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಪ್ರಸ್ತಾವವು ಸಿನಿಮಾ ಮಾಧ್ಯಮ ವನ್ನು ನಿಯಂತ್ರಿಸುವ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು ಮೊಟಕುಗೊಳಿಸುವ ಪ್ರಯತ್ನದಂತಿದೆ. ಉದ್ದೇಶಿತ ತಿದ್ದುಪಡಿಯಿಂದಾಗಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಾಮುಖ್ಯ ಕಳೆದುಕೊಂಡು, ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ರಾಜಕಾರಣ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ. ಚಲನಚಿತ್ರವೊಂದು ಸಾರ್ವಜನಿಕ ಪ್ರದರ್ಶನ ಕಾಣಲು ಅಗತ್ಯವಾದ ಪ್ರಮಾಣಪತ್ರವನ್ನು ಪ್ರಸ್ತುತ ಸಿಬಿಎಫ್‌ಸಿ ನೀಡುತ್ತಿದೆ. ಮಂಡಳಿಯ ನಿರ್ಧಾರ ಒಪ್ಪಿಗೆಯಾಗದಿದ್ದಲ್ಲಿ ಮರುಪರಿಶೀಲನಾ ಸಮಿತಿಗೆ, ಅಂತಿಮವಾಗಿ ನ್ಯಾಯಾಲಯದ ಮೊರೆಹೋಗಲು ನಿರ್ಮಾಪಕರಿಗೆ ಅವಕಾಶವಿದೆ.

ಈ ವ್ಯವಸ್ಥೆಯನ್ನು ಬದಲಿಸುವ ಉದ್ದೇಶವನ್ನು ಸಿನಿಮಾಟೊಗ್ರಫಿ ಕಾಯ್ದೆಯ ತಿದ್ದುಪಡಿ ಪ್ರಸ್ತಾವ ಒಳಗೊಂಡಿದೆ. ಪ್ರಮಾಣಪತ್ರ ಪಡೆದ ಸಿನಿಮಾದ ವಿರುದ್ಧ ಆಕ್ಷೇಪಗಳು ವ್ಯಕ್ತವಾದಲ್ಲಿ ಸರ್ಕಾರವೇ ಮಧ್ಯಪ್ರವೇಶಿಸಿ, ಸಿಬಿಎಫ್‌ಸಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸು ವಂತೆ ಆದೇಶಿಸಲು ಅವಕಾಶ ದೊರೆಯಲಿದೆ. ಸಿನಿಮಾ ತೆರೆಕಾಣುವಲ್ಲಿ ಸಿಬಿಎಫ್‌ಸಿ ಪ್ರಮಾಣಪತ್ರದ್ದು ಅಂತಿಮಪಾತ್ರವೇ ಹೊರತು, ಸರ್ಕಾರದ್ದಲ್ಲ ಎನ್ನುವುದನ್ನು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಸಿಬಿಎಫ್‌ಸಿ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ 1991ರಲ್ಲಿ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ಆ ಆದೇಶವನ್ನು ಅಪ್ರಸ್ತುತಗೊಳಿಸಿ, ‘ಸೂಪರ್‌ ಸೆನ್ಸಾರ್‌’ ಆಗಲು ಸರ್ಕಾರ ಹೊರಟಿದೆ. ತಜ್ಞರ ಸಮಿತಿ ಗಳ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾಗಿ ನೇರವಾಗಿ ಆಡಳಿತಯಂತ್ರವೇ ಮೂಗು ತೂರಿಸುವ ಕ್ರಮ ಸಿನಿಮಾ ಮಾಧ್ಯಮದ ಹಿತಾಸಕ್ತಿಗೆ ಒಳ್ಳೆಯದಲ್ಲ, ಸಂವಿಧಾನದ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಹೊತ್ತಿರುವ ಸರ್ಕಾರದ ವರ್ಚಸ್ಸಿಗೂ ತಕ್ಕುದಾದುದಲ್ಲ. ಉದ್ದೇಶಿತ ತಿದ್ದುಪಡಿಗಳು ಅನುಷ್ಠಾನಕ್ಕೆ ಬಂದಲ್ಲಿ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಹಲ್ಲು ಕಿತ್ತ ಹಾವಿನಂತಾಗಲಿದೆ. ಸರ್ಕಾರದ ಆದೇಶಗಳನ್ನು ಯಾರೂ ಪ್ರಶ್ನಿಸಬಾರದು ಎನ್ನುವ ಮನೋಭಾವವನ್ನು ಮಸೂದೆಯ ಕರಡುವಿ ನಲ್ಲಿರುವ ಅಂಶಗಳು ಸ್ಪಷ್ಟವಾಗಿ ಪ್ರತಿಫಲಿಸುತ್ತಿವೆ.

ADVERTISEMENT

ಇತ್ತೀಚಿನ ವರ್ಷಗಳಲ್ಲಿ, ಸರ್ಕಾರ ಹಾಗೂ ಸರ್ಕಾರದ ಬೆಂಬಲಿಗರು ಸಿನಿಮಾಗಳನ್ನು ಹತ್ತಿಕ್ಕಲು ಆಡಳಿತಯಂತ್ರ ಬಳಸಿಕೊಂಡಿರುವ ಉದಾಹರಣೆ ಗಳಿವೆ. ‘ಸರ್ಕಾರ್‌’ ತಮಿಳು ಸಿನಿಮಾದಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನು ಲೇವಡಿ ಮಾಡುವ ದೃಶ್ಯಗಳಿವೆ ಎನ್ನುವ ಕಾರಣಕ್ಕಾಗಿ ಆಗ ಅಧಿಕಾರದಲ್ಲಿದ್ದ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಚಿತ್ರ ಮಂದಿರಗಳ ಮೇಲೆ ದಾಳಿ ನಡೆಸಿ, ಹಿಂಸಾಚಾರಕ್ಕೆ ಕಾರಣರಾಗಿದ್ದರು. ‘ಪದ್ಮಾವತ್‌’ ಸಿನಿಮಾ ಪ್ರದರ್ಶನಕ್ಕೆ ಸಮುದಾಯವೊಂದು ವ್ಯಕ್ತಪಡಿಸಿದ ಪ್ರತಿಭಟನೆಗೆ ಕೆಲವು ರಾಜ್ಯಸರ್ಕಾರಗಳೇ ಬೆಂಬಲ ವ್ಯಕ್ತಪಡಿಸಿ, ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿದ್ದವು. ‘ಪದ್ಮಾವತ್‌’ ಚಿತ್ರ ಪ್ರದರ್ಶನಕ್ಕೆ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

‘ಉಡ್ತಾ ಪಂಜಾಬ್‌’ ವಿರುದ್ಧ ಎದುರಾದ ಪ್ರತಿಭಟನೆ ಯಲ್ಲೂ ರಾಜಕೀಯದ ಪಾತ್ರವಿತ್ತು. ಇಂಥ ಪ್ರತಿಭಟನೆಗಳ ಸಂದರ್ಭದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಕಾನೂನುಬದ್ಧಗೊಳಿಸಲು ಕಾರಣವಾಗುವ ಅಂಶಗಳು ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿ ಮಸೂದೆಯ ಕರಡುವಿನಲ್ಲಿವೆ. ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಉಂಟಾಗುವ ಸಂಗತಿಗಳನ್ನು ಹೊಂದಿರುವ ಚಲನಚಿತ್ರಗಳನ್ನು ಅಥವಾ ಯಾವುದೇ ಕಲಾಕೃತಿಯನ್ನು ನಿರ್ಬಂಧಿಸುವ ಅವಕಾಶ ಈಗಾಗಲೇ ಕಾನೂನಿನಲ್ಲಿದೆ. ಆ ನಿಯಮಗಳನ್ನು ಸರ್ಕಾರ ಇನ್ನಷ್ಟು ಬಲಪಡಿಸಬಹುದು. ಆದರೆ, ಮನೋವಿಕಾಸ ಮತ್ತು ಮನರಂಜನೆಯ ಉದ್ದೇಶವನ್ನು ಹೊಂದಿರುವ ಸಿನಿಮಾದಂಥ ಸೃಜನಶೀಲ ಮಾಧ್ಯಮವನ್ನು ಕಣ್ಗಾವಲಿಗೆ ಒಳಪಡಿಸುವ ಕ್ರಮ ಅನಗತ್ಯವಾದುದು.

ಹತ್ತು ವರ್ಷಗಳಿಗೊಮ್ಮೆ ಸಿನಿಮಾ ಪ್ರಮಾಣೀಕರಣವನ್ನು ನವೀಕರಿಸಬೇಕು ಎನ್ನುವ ಪ್ರಸ್ತಾಪವೂ ಗೊಂದಲಗಳಿಗೆ ಎಡೆಮಾಡಿಕೊಡುವಂತಿದೆ. ಬದಲಾದ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕಳೆದ ದಶಕಗಳಲ್ಲಿ ತೆರೆಕಂಡಿರುವ ಸಿನಿಮಾಗಳನ್ನು ಒರೆಗೆ ಹಚ್ಚುವ ಕ್ರಮ ಹೊಸ ವಿವಾದಗಳಿಗೆ ಆಸ್ಪದ ಕಲ್ಪಿಸುವಂತಹದ್ದು, ಭಾರತೀಯ ಚಲನಚಿತ್ರ ಪರಂಪರೆಯನ್ನೇ ಬುಡಮೇಲು ಮಾಡುವಂತಹದ್ದು.

ಭಾರತದಂತಹ ಸ್ವತಂತ್ರ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ದೇಶದಲ್ಲಿ ಸಿನಿಮಾಗಳನ್ನು ಸೆನ್ಸಾರ್‌ಗೆ ಒಳಪಡಿಸುವ ವ್ಯವಸ್ಥೆಯೇ ಸರಿಯಲ್ಲ ಎನ್ನುವ ವಾದಗಳಿವೆ. ಕಿರುತೆರೆಗಿಲ್ಲದ ಸೆನ್ಸಾರ್‌ ವ್ಯವಸ್ಥೆಯು ಸಿನಿಮಾಕ್ಕಿರುವುದು ವಿಚಿತ್ರವಾಗಿದೆ. ಡಿಜಿಟಲ್‌ ಜಗತ್ತಿನಲ್ಲಿ ಎಲ್ಲ ಬಗೆಯ ದೃಶ್ಯಸರಕು ತುಂಬಿ ತುಳುಕು ತ್ತಿರುವಾಗ ಸಿನಿಮಾಕ್ಕೆ ಅಂಕುಶಗಳನ್ನು ಹೆಚ್ಚಿಸುತ್ತಿರುವುದು ಅರ್ಥಹೀನ ಹಾಗೂ ಸೃಜನಶೀಲ ಕಲಾಪ್ರಕಾರವನ್ನು ಸರ್ಕಾರದ ಹಿಡಿತದಲ್ಲಿರಿಸಿಕೊಳ್ಳುವ ಹುನ್ನಾರ. ವ್ಯಾಪಾರಿ ಸಿನಿಮಾಗಳಿಗೆ ಪರ್ಯಾಯವಾಗಿ, ಸಾಮಾಜಿಕ ಬಿಕ್ಕಟ್ಟುಗಳಿಗೆ ಸೃಜನಶೀಲ ಸ್ಪಂದನದ ರೂಪದಲ್ಲಿ ಸಿನಿಮಾಗಳನ್ನು ನಿರ್ಮಿಸುವ ನಿರ್ದೇಶಕ– ನಿರ್ಮಾಪಕರು ಇತ್ತೀಚಿನ ವರ್ಷಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಭಿನ್ನ ಧ್ವನಿಯ ಪರ್ಯಾಯ ಸಿನಿಮಾಗಳನ್ನು ರಾಷ್ಟ್ರಪ್ರಶಸ್ತಿಗಳಿಂದ ಹೊರಗಿಟ್ಟು, ಮನರಂಜನೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಂಡ ವ್ಯಾಪಾರಿ ಚಿತ್ರಗಳು ಹಾಗೂ ಸರ್ಕಾರದ ನೀತಿ ಗಳಿಗೆ ಪೂರಕವಾದ ಒಲವನ್ನು ಹೊಂದಿರುವ ಸಿನಿಮಾ ನಿರ್ಮಾತೃಗಳಿಗೆ ಪ್ರಶಸ್ತಿ, ಪುರಸ್ಕಾರ ನೀಡುವ ಬದಲಾವಣೆ ಶುರುವಾಗಿದೆ. ಈ ಮೂಲಕ, ಪರ್ಯಾಯ ಸಿನಿಮಾಗಳ ನಿರ್ಮಾತೃಗಳನ್ನು ನಿರುತ್ಸಾಹ ಗೊಳಿಸಲಾಗುತ್ತಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕಾರಣದ ಹಸ್ತಕ್ಷೇಪದಿಂದಾಗಿ, ಸಿನಿಮಾ ಮಾಧ್ಯಮದ ಸೌಂದರ್ಯಪ್ರಜ್ಞೆ ಹಾಗೂ ಸಾಧ್ಯತೆಗಳನ್ನು ಗುರುತಿಸಿ ಗೌರವಿಸುವ ರಾಷ್ಟ್ರಪ್ರಶಸ್ತಿಗಳ ಮೂಲ ಉದ್ದೇಶವೇ ಮೂಲೆಗುಂಪಾಗಿದೆ. ಪ್ರಸ್ತುತ ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವು ಭಿನ್ನ ಸಿನಿಮಾಗಳ ತಯಾರಕರಿಗೆ ಮೂಗುದಾರ ತೊಡಿಸುವ ಮತ್ತೊಂದು ಪ್ರಯತ್ನವಾಗಿದ್ದು, ತನ್ನ ಮೂಗಿನ ನೇರಕ್ಕೆ ಸಿನಿಮಾ ತಯಾರಿಸುವವರಿಗೆ ಮಾತ್ರ ಅವಕಾಶ ಎನ್ನುವುದನ್ನು ಸರ್ಕಾರ ಪರೋಕ್ಷವಾಗಿ ಹೇಳಲು ಹೊರಟಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.