ADVERTISEMENT

ಸಂಪಾದಕೀಯ | ಉತ್ತರದಾಯಿತ್ವ ಇಲ್ಲದ ಕೆಪಿಎಸ್‌ಸಿ: ಬೇಕಿದೆ ಆಮೂಲಾಗ್ರ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
   

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದ ರೀತಿ ಅತ್ಯಂತ ಕಳಪೆಯಾಗಿತ್ತು. ಈ ಕಾರಣಕ್ಕೆ ಆಯೋಗ ಮತ್ತೆ ಸುದ್ದಿಯಲ್ಲಿದೆ. ಕೆಪಿಎಸ್‌ಸಿ ಒಳ್ಳೆಯದಲ್ಲದ ಕಾರಣಕ್ಕೆ ಸುದ್ದಿಯಾಗುವುದೇ ಹೆಚ್ಚು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಟಮಾರಿ ಧೋರಣೆಯಂತಹ ಕಾರಣಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಆಯೋಗದ ಕಾರ್ಯವೈಖರಿ ಸುಧಾರಣೆಗೆ ನಡೆಸಿದ ಎಲ್ಲ ಯತ್ನಗಳೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತೆ ಆಗಿವೆ. ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಸೇರಿ ಸಂಬಂಧಪಟ್ಟ ಎಲ್ಲರೂ ತಮಗೆ ಉತ್ತರದಾಯಿತ್ವ ಇಲ್ಲವೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಮೂಗುದಾರ ಇಲ್ಲದಂತಾಗಿದೆ. ರಾಜ್ಯ ಸರ್ಕಾರ, ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶ ಮಾಡಿ ಕಿವಿಹಿಂಡದೇ ಇದ್ದರೆ ಇದು ಇನ್ನಷ್ಟು ಅಧೋಗತಿಗೆ ಇಳಿಯುವ ಸಾಧ್ಯತೆ ಇದೆ. ಕರ್ನಾಟಕದ ಯುವಕರ ಕನಸುಗಳನ್ನು ನುಚ್ಚುನೂರು ಮಾಡುವುದೇ ತನ್ನ ಗುರಿ ಎಂದು ಕೆಪಿಎಸ್‌ಸಿ ಭಾವಿಸಿದಂತೆ ಇದೆ. ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದ ತೀರಾ ಅಸಂಬದ್ಧವಾಗಿತ್ತು.ಇಂಗ್ಲಿಷ್‌ ಮತ್ತು ಕನ್ನಡದ ಕೆಲವು ಪ್ರಶ್ನೆಗಳು ತದ್ವಿರುದ್ಧ ಅರ್ಥ ಧ್ವನಿಸುವಂತಿದ್ದವು. ಹಲವಾರು ವರ್ಷಗಳಿಂದ ಕಷ್ಟಪಟ್ಟು ತಯಾರಿ ನಡೆಸಿದ ಅಭ್ಯರ್ಥಿಗಳು ಪ್ರಶ್ನೆಗಳನ್ನು ನೋಡಿ ಕಕ್ಕಾಬಿಕ್ಕಿಯಾದರು ಎಂದೂ ವರದಿಯಾಗಿದೆ. ಗೂಗಲ್ ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಸಿ ಭಾಷಾಂತರ ಮಾಡಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೆಪಿಎಸ್‌ಸಿ ಕಾರ್ಯದರ್ಶಿ, ಪ್ರಶ್ನೆಗಳನ್ನು ಭಾಷಾಂತರ ಇಲಾಖೆಯ ಭಾಷಾಂತರಕಾರರೇ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಷ್ಟು ಕೆಟ್ಟದಾಗಿ ಭಾಷಾಂತರ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಕನ್ನಡದ ಕಗ್ಗೊಲೆಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅನುವಾದದಲ್ಲಿನ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸುವ ಸೌಜನ್ಯ ಕೂಡ ಕೆಪಿಎಸ್‌ಸಿ ಆಡಳಿತಕ್ಕೆ ಇಲ್ಲದಿರುವುದು ನೋವಿನ ಸಂಗತಿ. ಅಲ್ಲದೆ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಆಕ್ಷೇಪ ಇದ್ದರೆ ಸಲ್ಲಿಸಬಹುದು ಎಂದೂ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಆಕ್ಷೇಪ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹ 50 ಶುಲ್ಕ ನಿಗದಿ ಮಾಡಿರುವುದಾಗಿಯೂ ಆಯೋಗ ಹೇಳಿದೆ. ಆಯೋಗವೇ ಮಾಡಿರುವ ತಪ್ಪಿನ ಕುರಿತು ಆಕ್ಷೇಪ ಸಲ್ಲಿಸುವುದಕ್ಕೂ ಅಭ್ಯರ್ಥಿಗಳೇ ದಂಡ ತೆರಬೇಕು ಎನ್ನುವ ಧೋರಣೆ ಸರಿಯಲ್ಲ. ಅನುವಾದದಲ್ಲಿನ ಅಧ್ವಾನಗಳನ್ನು ನೋಡಿದರೆ, ಕನ್ನಡದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಬೇಕು ಎಂಬ ಬೇಡಿಕೆ ನ್ಯಾಯಯುತವಾಗಿದೆ ಅನ್ನಿಸುತ್ತದೆ. ಇಂತಹ ಎಡವಟ್ಟುಗಳನ್ನು ನಿವಾರಿಸಬೇಕಾದರೆ ಇಂಗ್ಲಿಷ್‌ನಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ, ಅದನ್ನು ಕನ್ನಡಕ್ಕೆ ಅನುವಾದಿಸುವ ಪರಿಪಾಟ ಕೈಬಿಡಬೇಕು. ಕನ್ನಡದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಸಾಧ್ಯತೆ ಕುರಿತು ಪರಿಶೀಲಿಸಿ, ನಿರ್ಧಾರಕ್ಕೆ ಬರಬೇಕು. 

ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸಲು ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ
ಆಗಿದ್ದಾಗ ಪಿ.ಸಿ.ಹೋಟಾ ಸಮಿತಿಯನ್ನು ರಚಿಸಿದ್ದರು. ಸಮಿತಿಯ ಹಲವು ಶಿಫಾರಸುಗಳು ಜಾರಿಗೆ ಬಂದಿವೆ. ಆದರೂ ಆಯೋಗದ ಕಾರ್ಯವೈಖರಿಯಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ. ಸುಧಾರಣೆಯ ದೃಷ್ಟಿಯಿಂದ ಈ ಎರಡು ದಶಕಗಳಲ್ಲಿ ಆಯೋಗ ಒಂದು ಹೆಜ್ಜೆ ಕೂಡ ಮುಂದೆ ಇಟ್ಟಿಲ್ಲ. ರಾಜ್ಯದ ಉದ್ಯೋಗ ಆಕಾಂಕ್ಷಿಗಳು ಸಂಪೂರ್ಣ ಭ್ರಮನಿರಸನಗೊಂಡಿದ್ದು ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಪ್ರತಿವರ್ಷ ಪರೀಕ್ಷೆ ನಡೆಸಬೇಕು, ಆ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು ಮತ್ತು ಪಾರದರ್ಶಕವಾಗಿ ಇರಬೇಕು. ಆಯೋಗ ಇತ್ತೀಚಿನ ವರ್ಷಗಳಲ್ಲಿ ನಡೆಸಿದ ನೇಮಕಾತಿಗೆ ಸಂಬಂಧಿಸಿದ ಬಹುತೇಕ ಪರೀಕ್ಷೆಗಳು ವಿವಾದಕ್ಕೆ ಒಳಗಾಗಿವೆ. ಈ ಕುರಿತು ನ್ಯಾಯಾಲಯಗಳಲ್ಲಿ ವಿಚಾರಣೆಗಳೂ ನಡೆಯುತ್ತಿವೆ. ಸಾಂವಿಧಾನಿಕ ಸಂಸ್ಥೆಯೊಂದು ನಡೆಸುವ ಪರೀಕ್ಷೆಗೆ ಇಂತಹ ಸ್ಥಿತಿ ಬರಬಾರದು. ಈಗಲಾದರೂ ಎಚ್ಚೆತ್ತುಕೊಂಡು ಆಯೋಗವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಮತ್ತು ಅಲ್ಲಿಗೆ ಹಿರಿಯ ಅಧಿಕಾರಿಗಳ ನಿಯೋಜನೆಯಲ್ಲಿ ಅತಿಯಾದ ರಾಜಕೀಯ ಹಸ್ತಕ್ಷೇಪ ಇರುವುದು ಕೂಡ ಈ ದುರವಸ್ಥೆಗೆ ಒಂದು ಪ್ರಧಾನ ಕಾರಣ. ಈ ರೀತಿಯ ಸಮಸ್ಯೆಗಳು ಮರುಕಳಿಸದಂತೆ ಮಾಡಲು ಕೆಪಿಎಸ್‌ಸಿಗೆ ಸದಸ್ಯರ ನೇಮಕಾತಿ, ಅಧಿಕಾರಿಗಳ ನಿಯೋಜನೆಯೂ ಸೇರಿದಂತೆ ಆಯೋಗಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿ, ಆಮೂಲಾಗ್ರ ಬದಲಾವಣೆ ತರುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT