ಅಸ್ಸಾಂ ಮತ್ತು ಮಿಜೋರಾಂ ನಡುವಣ ಗಡಿಗೆ ಸಂಬಂಧಿಸಿ ಹಿಂಸಾಚಾರ ನಡೆದಿರುವುದು ನಿಜವಾಗಿಯೂ ಹೆಚ್ಚು ಕಳವಳಕ್ಕೆ ಕಾರಣವಾಗಿರುವ ವಿಚಾರ. ಏಕೆಂದರೆ, ವಿವಿಧ ರೀತಿಯಲ್ಲಿ ಸಾಮಾಜಿಕ ಅಥವಾ ರಾಜಕೀಯ ಸಂಘರ್ಷ ಅಥವಾ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಬಲ್ಲ ಹಲವು ಅಂಶಗಳು ಈಶಾನ್ಯ ರಾಜ್ಯಗಳಲ್ಲಿ ಇವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ನಡೆದಿರುವ ಹಿಂಸಾಚಾರವು ಹೆಚ್ಚು ಸಮಸ್ಯಾತ್ಮಕ. ಏಕೆಂದರೆ, ಇದರಲ್ಲಿ ಎರಡು ರಾಜ್ಯ ಸರ್ಕಾರಗಳ ಪಾತ್ರ ಇದೆ. ಸಂಘರ್ಷದ ಬಳಿಕ ಸಂಧಾನ ಅಥವಾ ಮೃದು ಧೋರಣೆ ತಳೆಯುವುದಕ್ಕೆ ಬದಲಾಗಿ ಎರಡೂ ರಾಜ್ಯಗಳು ತಮ್ಮ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿವೆ. ಎರಡೂ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ನಡೆದ ಕಾಳಗದಲ್ಲಿ ಅಸ್ಸಾಂನ ಐವರು ಪೊಲೀಸರು ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದಾರೆ. ಹೊಡೆದಾಟದಲ್ಲಿ ನಾಗರಿಕ ಗುಂಪುಗಳು ಕೂಡ ಭಾಗಿಯಾಗಿವೆ. ಗಡಿಗೆ ಸಂಬಂಧಿಸಿ ಎರಡೂ ರಾಜ್ಯಗಳ ನಡುವೆ ತಕರಾರು ಇದೆ. ಗಡಿ ವಿವಾದದ ಕಾರಣಕ್ಕೆ ಎರಡೂ ರಾಜ್ಯಗಳ ನಡುವೆ ವಾಗ್ವಾದಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ವಾಗ್ವಾದಗಳು ಹೆಚ್ಚಾಗಿವೆ ಮತ್ತು ಅವು ತೀವ್ರ ಸಂಘರ್ಷದ ಸ್ವರೂಪವನ್ನೂ ಪಡೆದುಕೊಳ್ಳುತ್ತಿವೆ.ಈಶಾನ್ಯ ರಾಜ್ಯಗಳ ಪೈಕಿ ಹಲವು ರಾಜ್ಯಗಳ ನಡುವಣ ಗಡಿಗಳು ವಿವಾದಕ್ಕೆ ಕಾರಣವಾಗಿವೆ. ಈ ವಿವಾದಗಳು ವಿವಿಧ ರೀತಿಯಲ್ಲಿ ಬಹಿರಂಗವಾಗುತ್ತಲೂ ಇವೆ. ಮಿಜೋರಾಂ ಜತೆಗೆ ಮಾತ್ರವಲ್ಲ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಜತೆಗೂ ಅಸ್ಸಾಂ ಗಡಿ ತಕರಾರು ಹೊಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಎರಡೇ ದಿನಗಳಲ್ಲಿ ಅಸ್ಸಾಂ–ಮಿಜೋರಾಂ ನಡುವೆ ಹಿಂಸಾತ್ಮಕ ಸಂಘರ್ಷ ಉಂಟಾಗಿದೆ. ಇತರೆಲ್ಲ ವಿಚಾರಗಳ ಜತೆಗೆ ಗಡಿ ವಿವಾದವೂ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ಆಗಿತ್ತು. ಎಲ್ಲ ವಿವಾದಗಳನ್ನೂ ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಚರ್ಚೆಯ ಬಳಿಕವೇ ಹಿಂಸೆ ಉಂಟಾಯಿತು ಎಂಬುದು ಕಳವಳವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳೆರಡೂ ಪರಿಸ್ಥಿತಿಯನ್ನು ಕೆಟ್ಟದಾಗಿ ನಿಭಾಯಿಸಿವೆ ಮತ್ತು ತಮ್ಮ ಬುದ್ಧಿಯನ್ನು ಭಾವನೆಯ ಕೈಗೆ ಕೊಟ್ಟಿವೆ. ಎರಡೂ ಸರ್ಕಾರಗಳು ಸಂಘರ್ಷದ ನಂತರ ನೀಡಿದ ಹೇಳಿಕೆಗಳು ಕೂಡ ಅಪ್ರಬುದ್ಧವೇ ಆಗಿದ್ದವು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಮಿಜೋರಾಂ ಮುಖ್ಯಮಂತ್ರಿ ಝೋರಮ್‌ತಂಗಾ ಅವರು ಹಿಂಸಾಚಾರದ ನಂತರ ಟ್ವಿಟರ್‌ನಲ್ಲಿ ಕೆಸರೆರಚಾಟವನ್ನೂನಡೆಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮುಖ್ಯಮಂತ್ರಿಗಳಿಬ್ಬರೂ ಟ್ವೀಟ್‌ಗೆಲಗತ್ತಿಸಿದ್ದರು. ಈ ವಿಡಿಯೊಗಳು ಎರಡೂ ಕಡೆಯಲ್ಲಿ ಹಿಂಸೆಗೆ ಮತ್ತೆ ಪ್ರಚೋದನೆ ನೀಡುವ ಸಾಧ್ಯತೆ ಇತ್ತು. ನಾಲ್ಕು ಸಾವಿರ ಕಮಾಂಡೊಗಳನ್ನು ಗಡಿಯಲ್ಲಿ ನಿಯೋಜಿಸಲು ಆದೇಶ ನೀಡಿದ್ದಾಗಿ ಶರ್ಮಾ ಅವರು ಹೇಳಿಕೆ ನೀಡಿದ್ದರು. ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಮಿಜೋರಾಂನಲ್ಲಿ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ನೇತೃತ್ವದ ಸರ್ಕಾರ ಇದೆ. ಬಿಜೆಪಿ ಮತ್ತು ಎಂಎನ್‌ಎಫ್‌ಎರಡೂ ಈಶಾನ್ಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯ ಪಕ್ಷಗಳು. ಈ ಮೈತ್ರಿಕೂಟಕ್ಕೆ ಶರ್ಮಾ ಅವರೇ ಸಂಚಾಲಕ.
ಈಶಾನ್ಯ ರಾಜ್ಯಗಳಲ್ಲಿ ಈಗಲೂ ಇರುವ ಗಡಿ ತಕರಾರು ಮತ್ತು ಅದಕ್ಕೆ ಸಂಬಂಧಿಸಿದ ಸಂಘರ್ಷಗಳನ್ನು ವಸಾಹತು ಆಳ್ವಿಕೆ ಕಾಲದ ಪಳೆಯುಳಿಕೆಗಳು ಎಂದೂ ಪರಿಗಣಿಸಬಹುದು. ಈಶಾನ್ಯದ ಎಲ್ಲ ರಾಜ್ಯಗಳು ಅಸ್ಸಾಂನ ಭಾಗವೇ ಆಗಿದ್ದವು. 50 ವರ್ಷಗಳಲ್ಲಿ ಇವು ಬೇರೆ ಬೇರೆ ರಾಜ್ಯಗಳಾಗಿವೆ. ಆದರೆ, ರಾಜ್ಯಗಳ ಗಡಿಗಳ ಬಗ್ಗೆ ಹೆಚ್ಚು ಚಿಂತನೆ ನಡೆಯಲಿಲ್ಲ. ರಾಜ್ಯಗಳಿಗೆ ಸಂಬಂಧಿಸಿ ಒಂದರ ಮೇಲೊಂದು ಆವರಿಸಿದಂತಿರುವ ಹಿತಾಸಕ್ತಿಗಳಿಗೂ ಹೆಚ್ಚಿನ ಪರಿಗಣನೆ ಸಿಕ್ಕಿಲ್ಲ. ಅದುವೇ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಕಾರಣ ಆಗಿದೆ. ಬುಡಕಟ್ಟು ಅಸ್ಮಿತೆಯೇ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ವಿಭಜನೆಯು ಎದ್ದು ಕಾಣುವಂತಿದೆ. ಈ ವಿಭಜನೆಯನ್ನು ಸರಿಪಡಿಸಲು ರಾಜಕೀಯವಾದ ಪ್ರಯತ್ನವು ಪರಿಣಾಮಕಾರಿಯಾಗಿ ನಡೆದಿಲ್ಲ. ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿರುವ ಈ ಪ್ರದೇಶವನ್ನು ಹೀಗೆ ನಡೆಸಿಕೊಳ್ಳುವುದು ಸರಿಯಾದ ಕ್ರಮ ಅಲ್ಲ. ಪರಿಸ್ಥಿತಿಯನ್ನು ತಕ್ಷಣಕ್ಕೆ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಈಗ ತುರ್ತಾಗಿ ಆಗಬೇಕಿರುವ ಕೆಲಸ. ಜತೆಗೆ, ಸಂಘರ್ಷವು ಇನ್ನಷ್ಟು ತೀವ್ರವಾಗದಂತೆ ಎಚ್ಚರವನ್ನೂ ವಹಿಸಬೇಕು. ಎಲ್ಲ ರಾಜ್ಯಗಳನ್ನೂ ಸೇರಿಸಿಕೊಂಡು ರಾಜಕೀಯವಾದ ಪರಿಹಾರವನ್ನು ಕಂಡುಕೊಳ್ಳುವುದೇ ಈ ಪ್ರದೇಶದ ಗಡಿ ತಕರಾರು ಮತ್ತು ಇತರ ಎಲ್ಲ ಸಮಸ್ಯೆಗಳಿಗೆ ಮಾದರಿ ಪರಿಹಾರೋಪಾಯ. ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಯೋಚನೆ ಮಾಡಿ, ತಕ್ಷಣವೇ ಕಾರ್ಯಪ್ರವೃತ್ತ ಆಗಬೇಕಾದ ಅಗತ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.