ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ವಿರೋಧ ಪಕ್ಷಗಳಿಗೆ ‘ಎಲ್ಲವೂ ಮುಗಿದಿಲ್ಲ’ ಎಂಬ ಕಿವಿಮಾತನ್ನು ಮತದಾರ ಹೇಳಿದ್ದಾನೆ
ಚುನಾವಣೆ ಎಂಬುದು ಸರಳ ಗಣಿತ ಅಲ್ಲ. ಮತದಾರನ ಒಲವು– ನಿಲುವು, ಪ್ರೀತಿ– ಮುನಿಸು ಅರಿಯುವುದು ಸುಲಭದ ಮಾತಲ್ಲ. ಈಗ ಪ್ರಕಟವಾಗಿರುವ, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶದಲ್ಲೂ ಇದು ಪ್ರತಿಫಲಿತವಾಗಿದೆ. ಚುನಾವಣೆ ವೇಳೆ ಮಾಧ್ಯಮಗಳಲ್ಲಿ ಬಿಂಬಿತವಾದ ಚಿತ್ರಣಕ್ಕೂ ಮತಗಟ್ಟೆ ಸಮೀಕ್ಷೆಗಳು ಕಂಡುಕೊಂಡಿದ್ದಕ್ಕೂ ಸಂಬಂಧ ಇಲ್ಲದ ರೀತಿಯಲ್ಲಿ ಫಲಿತಾಂಶ ಇದೆ. ವಿರೋಧ ಪಕ್ಷಗಳ ಅಸ್ತಿತ್ವವನ್ನೇ ಅನುಮಾನಿಸುವ ರೀತಿಯಲ್ಲಿ ಮತ್ತು ಆಡಳಿತಾರೂಢರ ಪರ ಜೋರು ಅಲೆ ಎದ್ದಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವ ರೀತಿ ವಿಶ್ಲೇಷಣೆಗಳು ಇದ್ದವು. ಫಲಿತಾಂಶವು ಅವುಗಳನ್ನೆಲ್ಲ ಸುಳ್ಳಾಗಿಸಿರುವುದು ಈ ಚುನಾವಣೆಯ ವೈಶಿಷ್ಟ್ಯ. 2014ರ ವಿಧಾನಸಭಾ ಚುನಾವಣೆಯಲ್ಲಿ, ತನ್ನ ದೀರ್ಘಕಾಲದ ಮಿತ್ರಪಕ್ಷ ಶಿವಸೇನಾ ಜೊತೆ ಮೈತ್ರಿ ಇಲ್ಲದೆಯೇ ಬಿಜೆಪಿ 122 ಸ್ಥಾನ ಪಡೆಯುವ ಮೂಲಕ ಅಸಾಧಾರಣವಾದುದನ್ನು ಸಾಧಿಸಿತ್ತು. ಈ ಸಲದ ಚುನಾವಣೆಯಲ್ಲಿ ಶಿವಸೇನಾ ಜೊತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡರೂ ಕಳೆದ ಸಲ ಪಡೆದಷ್ಟು ಸ್ಥಾನ ಪಡೆಯಲು ಆಗಿಲ್ಲ. 15ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿರುವುದು ನಿಸ್ಸಂದೇಹವಾಗಿಯೂ ಆ ಪಕ್ಷಕ್ಕೆ ಆಗಿರುವ ದೊಡ್ಡ ಹಿನ್ನಡೆ. ಮೈತ್ರಿಯಿಂದ ಶಿವಸೇನಾಕ್ಕೂ ಪ್ರಯೋಜನವಾಗಿಲ್ಲ. ಹೀಗಿದ್ದೂ, ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂಬುದೇ ಮೈತ್ರಿಕೂಟಕ್ಕೆ ಸಮಾಧಾನದ ಸಂಗತಿ.ವಿರೋಧ ಪಕ್ಷಗಳ ಹಲವು ಪ್ರಭಾವಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದೂ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಹಲವು ಸುತ್ತು ಪ್ರಚಾರ ನಡೆಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಸಲು ಪಡೆದ ಪಕ್ಷಕ್ಕೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಡೆ ನೆರವಿಗೆ ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅವು ನಿರೀಕ್ಷಿತ ಮಟ್ಟದಲ್ಲಿ ಫಲ ಕೊಟ್ಟಿಲ್ಲ. ವಿರೋಧ ಪಕ್ಷವಾದ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹವೇ ಉಡುಗಿದಂತಿತ್ತು. ಎನ್‌ಸಿಪಿಯ ಅಗ್ರಗಣ್ಯ ನಾಯಕರಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಯ ಬಿಸಿ ತಟ್ಟಿ, ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿ ತಳಮಳಕ್ಕೆ ಕಾರಣವಾಗಿತ್ತು. ಆದರೆ, ಇ.ಡಿಯ ಈ ಕ್ರಮವೇ ಪಕ್ಷದಲ್ಲಿನ ಸಡಿಲ ಕೊಂಡಿಗಳನ್ನು ಬಿಗಿಗೊಳಿಸಿತು ಎಂಬ ವಿಶ್ಲೇಷಣೆ ಇದೆ. ಇಷ್ಟೆಲ್ಲದರ ನಡುವೆಯೂ ಸಂಖ್ಯಾಬಲವನ್ನು ಎನ್‌ಸಿಪಿ ಹೆಚ್ಚಿಸಿಕೊಂಡಿದೆ. ಸಂಖ್ಯೆಯ ದೃಷ್ಟಿಯಿಂದ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ಸರಿದಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದದ್ದಕ್ಕಿಂತ ಒಂದೆರಡು ಸ್ಥಾನ ಹೆಚ್ಚು ಪಡೆದಿರುವುದಕ್ಕೆ ಆ ಪಕ್ಷ ಸಮಾಧಾನ ಹೊಂದಬಹುದು.
ಹರಿಯಾಣದ ಫಲಿತಾಂಶವೂ ಬಹುಪಾಲು ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಬಿಜೆಪಿಗೆ ಗೆಲುವು ಸುಲಭದ ತುತ್ತು ಎಂಬ ವಿಶ್ಲೇಷಣೆಗಳು ಇದ್ದವು. ಆದರೆ, ಅಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆತಿಲ್ಲ. ಅತಂತ್ರ ಸ್ಥಿತಿ ಉಂಟಾಗಿದೆ. 2014ರ ಚುನಾವಣೆಯಲ್ಲಿ ಸರಳ ಬಹುಮತ ಪಡೆದು ಆ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ಅಧಿಕಾರ ಉಳಿಸಿಕೊಳ್ಳಲು ಈ ಬಾರಿ ಬೇರೆಯವರ ಬೆಂಬಲಕ್ಕೆ ಹುಡುಕಾಟ ನಡೆಸಬೇಕಾಗಿದೆ. ಬಿಜೆಪಿ ವಿರೋಧಿ ಮತಗಳು ಎರಡು ಪಕ್ಷಗಳ ನಡುವೆ ಹಂಚಿಹೋಗಿದ್ದರೂ ಅದರ ಪೂರ್ಣ ಲಾಭ ಪಡೆಯುವಲ್ಲಿ ಬಿಜೆಪಿ ಯಶಸ್ಸು ಕಂಡಿಲ್ಲ. ಚುನಾವಣೆ ಬಾಗಿಲು ಬಡಿದಾಗ ಪಕ್ಷದ ಅಂತಃಕಲಹ ಶಮನಗೊಳಿಸುವ ಮತ್ತು ಚುನಾವಣೆಗೆ ನಾಯಕರನ್ನು ಅಣಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತು. ಭೂಪಿಂದರ್ ಸಿಂಗ್ ಹೂಡ ಅವರಿಗೆ ಪಕ್ಷ ಮುನ್ನಡೆಸುವ ಹೊಣೆ ವಹಿಸಲಾಯಿತು. ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತಾಗಿದ್ದರೂ ಕಾಂಗ್ರೆಸ್ ನಿರೀಕ್ಷೆಗೂ ಮೀರಿ ಚೇತರಿಸಿಕೊಂಡಿದೆ. ಆಡಳಿತ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಿದೆ.ಕೌಟುಂಬಿಕ ಜಗಳದಿಂದ ಸಿಡಿದೆದ್ದು, ಐಎನ್‌ಎಲ್‌ಡಿಯಿಂದ ಹೊರಬಂದು ‘ಜನನಾಯಕ ಜನತಾಪಾರ್ಟಿ’ ಸ್ಥಾಪಿಸಿದ ದುಷ್ಯಂತ್ ಚೌಟಾಲ ಅವರತ್ತ ಈಗ ಬಿಜೆಪಿ ಮತ್ತು ಕಾಂಗ್ರೆಸ್ ಆಸೆಗಣ್ಣಿನಿಂದ ನೋಡುವಂತಾಗಿದೆ. ಎರಡೂ ರಾಜ್ಯಗಳ ಫಲಿತಾಂಶವನ್ನು ಒಟ್ಟಿಗೆ ಇರಿಸಿ ನೋಡಿದಾಗ, ಎಲ್ಲ ಪಕ್ಷಗಳಿಗೂ ಪಾಠ ಇರುವುದು ಕಾಣಿಸುತ್ತದೆ. ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ವಿರೋಧ ಪಕ್ಷಗಳಿಗೆ ‘ಎಲ್ಲವೂ ಮುಗಿದಿಲ್ಲ’ ಎಂಬ ಕಿವಿಮಾತನ್ನು ಮತದಾರನೇ ಹೇಳಿದ್ದಾನೆ.
ಪ್ರಜಾಪ್ರಭುತ್ವದ ಹಿತಕ್ಕೆ ಪ್ರಬಲ ಹಾಗೂ ರಚನಾತ್ಮಕ ವಿರೋಧ ಪಕ್ಷಗಳು ಬೇಕು ಎಂಬುದನ್ನೂ ಮತದಾರ ಸ್ಪಷ್ಟಪಡಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.