‘ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯನ್ನು (ಎಬಿ– ಪಿಎಂಜೆಎವೈ) 70 ವರ್ಷ ದಾಟಿದ ಎಲ್ಲ ಪ್ರಜೆಗಳಿಗೂ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಈ ಕ್ರಮವು ಈಗ ಇರುವುದಕ್ಕಿಂತ ಹೆಚ್ಚಿನ ಜನರಿಗೆ ಆರೋಗ್ಯ ಸೇವೆ ಪಡೆಯುವ ಹಕ್ಕು ನಿಜಾರ್ಥದಲ್ಲಿ ಕಾರ್ಯರೂಪಕ್ಕೆ ಬರುವಂತೆ ಮಾಡಲಿದೆ. ಯಾವುದೇ ಆದಾಯ ಮಿತಿ ಇಲ್ಲದೆ, 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಈ ಯೋಜನೆಯ ಸೌಲಭ್ಯ ಈಗ ಲಭ್ಯವಾಗಲಿದೆ. ಯೋಜನೆಯು ವಾರ್ಷಿಕ ₹5 ಲಕ್ಷದವರೆಗೆ ವಿಮಾ ಸೌಲಭ್ಯ ಕಲ್ಪಿಸಲಿದೆ. 4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ಜನರು, ಅಂದರೆ ಜನಸಂಖ್ಯೆಯ
ಶೇ 5ರಷ್ಟು ಮಂದಿ ಹೊಸದಾಗಿ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. 2050ರ ವೇಳೆಗೆ ಜನಸಂಖ್ಯೆಯ ಶೇ 20ರಷ್ಟು ಮಂದಿ 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿರುತ್ತಾರೆ. ಇವರಲ್ಲಿ ಹಲವರಿಗೆ ಆರೋಗ್ಯ ಸೌಲಭ್ಯ ಸೇರಿದಂತೆ ಕಲ್ಯಾಣ ಯೋಜನೆಗಳ ಬೆಂಬಲದ ಅಗತ್ಯ ಇರುತ್ತದೆ. ಪ್ರಸ್ತುತ ಹಿರಿಯ ನಾಗರಿಕರಲ್ಲಿ ಶೇ 20ಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಜನರಷ್ಟೇ ವಿವಿಧ ಬಗೆಯ ಆರೋಗ್ಯ ಸುರಕ್ಷಾ ಕಾರ್ಯಕ್ರಮಗಳ ಪರಿಧಿಗೆ ಒಳಪಟ್ಟಿದ್ದಾರೆ. ಯೋಜನೆ ವಿಸ್ತರಣೆಯ ಜೊತೆಗೆ ಉದ್ಭವವಾಗಬಹುದಾದ ಕೆಲವು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯವಾಗುತ್ತದೆ.
ಪ್ರಸಕ್ತ ಯೋಜನೆಯಡಿ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು ಸೌಲಭ್ಯಗಳನ್ನು ಶಕ್ತಿಮೀರಿ ಒದಗಿಸುತ್ತಿವೆ. ಉದ್ದೇಶಿತ ವಿಸ್ತರಣೆಯು ಅವುಗಳ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ. 13,582 ಖಾಸಗಿ ಸಂಸ್ಥೆಗಳೂ ಸೇರಿದಂತೆ 30 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡುವ ಪಟ್ಟಿಯಲ್ಲಿ ಸೇರಿವೆ. ಹಲವು ರಾಜ್ಯಗಳಲ್ಲಿ ಪ್ರತಿ 1 ಲಕ್ಷ ಜನರಿಗೆ ಎರಡರಿಂದ ಹತ್ತು ಆಸ್ಪತ್ರೆಗಳಲ್ಲಷ್ಟೇ ಈ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ. ಇದು ಅತ್ಯಂತ ಅಸಮರ್ಪಕ. ಹೀಗಾಗಿ, ಈಗ ಹೊಸ ಬೇಡಿಕೆಗೆ ತಕ್ಕಂತೆ ಸರ್ಕಾರವು ಆರೋಗ್ಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ. ಯೋಜನೆಯು ಉಚಿತ ಆರೋಗ್ಯಸೇವೆ ನೀಡುವುದರ ಹೊರತಾಗಿಯೂ ಕೈಯಿಂದ ಮಾಡಬೇಕಾದ ಖರ್ಚಿನ ಸಮಸ್ಯೆಯು ಬಗೆಹರಿಯುವುದಿಲ್ಲ. ರೋಗಿಗಳು ಮತ್ತು ಅವರ ಕುಟುಂಬದವರು ಭರಿಸಬೇಕಾದ ಇಂತಹ ಖರ್ಚು ಅವರ ಮೇಲೆ ಬೀಳುವ ಒಂದು ಗಂಭೀರವಾದ ಹೊರೆಯೇ ಹೌದು. ಭಾರತದಲ್ಲಿನ ಈ ಖರ್ಚುವೆಚ್ಚವು ವಿಶ್ವದಲ್ಲಿ ಮಾಡುವ ಈ ಬಗೆಯ ಖರ್ಚಿನ ಸರಾಸರಿಗಿಂತ ಎರಡು ಪಟ್ಟಿಗೂ ಹೆಚ್ಚು. ಯೋಜನೆಯ ಅನುಷ್ಠಾನದಲ್ಲೂ ಕೆಲವು ಲೋಪಗಳು ಕಂಡುಬಂದಿವೆ. ಚಿಕಿತ್ಸೆಗಾಗಿ ನಿಗದಿಪಡಿಸಿರುವ ದರ ಕಡಿಮೆ ಮತ್ತು ಈ ಸಂಬಂಧದ ಹಣ ಬಿಡುಗಡೆಯೂ ವಿಳಂಬವಾಗುತ್ತಿದೆ ಎಂದು ಹಲವು ಆಸ್ಪತ್ರೆಗಳು ದೂರಿವೆ. ಪಾಲಿಸಬೇಕಾದ ಔಪಚಾರಿಕ ಕ್ರಮಗಳು ಹಾಗೂ ಹೆಚ್ಚುವರಿ ಕೆಲಸಗಳ ಕಾರಣದಿಂದ, ಈ ಯೋಜನೆಯಡಿ ಚಿಕಿತ್ಸೆ ಪಡೆಯುವುದನ್ನು ವೈದ್ಯರು ಸೇರಿದಂತೆ ಆಸ್ಪತ್ರೆಯ ಆಡಳಿತ ಮಂಡಳಿಯವರು ರೋಗಿಗಳು ಮತ್ತು ಅವರ ಕುಟುಂಬದವರನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ವರದಿಗಳೂ ಇವೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು, ಅಗತ್ಯವಿರುವ ಎಲ್ಲರಿಗೂ ಅದರ ಸೌಲಭ್ಯ ದೊರಕುವಂತೆ ಮಾಡಬೇಕಾದ ಹೊಣೆ ಸರ್ಕಾರದ ಮೇಲಿದೆ.
ಯೋಜನೆ ಜಾರಿಯ ವಿಷಯದಲ್ಲಿ ರಾಜಕೀಯದ ನೆರಳು ಇಣುಕಿರುವುದು ದುರದೃಷ್ಟಕರ. ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ನೇತೃತ್ವದ ಸರ್ಕಾರ ಇರುವ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ದೆಹಲಿಯು ಈ ಯೋಜನೆಯಿಂದ ಹೊರಗುಳಿಯಲು ನಿರ್ಧರಿಸಿವೆ. ರಾಜಕೀಯ ಹಿತಾಸಕ್ತಿಯ ಕಾರಣದಿಂದ ಅವು ಇಂತಹ ನಿರ್ಧಾರಕ್ಕೆ ಬಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಾವು ತಮ್ಮ ನಾಗರಿಕರಿಗೆ ಉತ್ತಮ ಆರೋಗ್ಯ ಸೇವಾ ಯೋಜನೆಗಳನ್ನು ಒದಗಿಸುತ್ತಿರುವುದಾಗಿ ಈ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಅದರಲ್ಲೂ ದೆಹಲಿಯಲ್ಲಿನ ಆರೋಗ್ಯ ಸೇವೆಯು ಮಾದರಿ ಎನಿಸಿಕೊಂಡಿದ್ದು, ಅಂತರರಾಷ್ಟ್ರೀಯವಾಗಿ ಪ್ರಶಂಸೆಗೂ ಒಳಗಾಗಿದೆ. ಆದರೆ, ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಕೇರಳ ಮತ್ತು ತಮಿಳುನಾಡು– ತಮ್ಮ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿರುವುದರ ನಡುವೆಯೂ– ತಮ್ಮ ರಾಜ್ಯಗಳಲ್ಲಿ ಎಬಿ– ಪಿಎಂಜೆಎವೈ ಯೋಜನೆಯ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.