ADVERTISEMENT

ಫ್ಲೆಕ್ಸ್‌ ಹಾವಳಿ ನಿರ್ಬಂಧಿಸಿ, ಜಾಹೀರಾತು ನೀತಿ ರೂಪಿಸಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 19:30 IST
Last Updated 7 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರಿನಲ್ಲಿ ಮಿತಿಮೀರಿರುವ ದೃಶ್ಯ ಮಾಲಿನ್ಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುವಂತಹ ಎರಡು ಮಹತ್ವದ ಬೆಳವಣಿಗೆಗಳು ಕಳೆದ ನಾಲ್ಕೈದು ದಿನಗಳಲ್ಲಿ ನಡೆದಿವೆ. ಒಂದು, ಫ್ಲೆಕ್ಸ್‌ ಹಾವಳಿಯ ವಿರುದ್ಧ ಸ್ವತಃ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಚಾಟಿ ಬೀಸಿದ್ದರಿಂದ ಅರ್ಧ ದಿನದಲ್ಲೇ ನಗರ ಸ್ವಚ್ಛವಾಗಿದ್ದು; ಮತ್ತೊಂದು, ಎಲ್ಲ ರೀತಿಯ ಅನಧಿಕೃತ ಜಾಹೀರಾತು ಫಲಕಗಳ ಮೇಲೆ ಒಂದು ವರ್ಷದವರೆಗೆ ಬಿಬಿಎಂಪಿ ನಿಷೇಧ ವಿಧಿಸಿದ್ದು. ಜನ್ಮದಿನಕ್ಕೊಂದು, ತಿಥಿಗೊಂದು, ವಿಜಯೋತ್ಸವಕ್ಕೊಂದು, ಹಬ್ಬದ ಶುಭಾಶಯ ಕೋರಲೊಂದು... ಹೀಗೆ ವರ್ಷದುದ್ದಕ್ಕೂ ಎಲ್ಲಿ ನೋಡಿದಲ್ಲೆಲ್ಲ ಫ್ಲೆಕ್ಸ್‌ಗಳದ್ದೇ ಹಾವಳಿ. ರಾಜಕೀಯ ನೇತಾರರ ಜನ್ಮದಿನ ಇದ್ದರಂತೂ ಮುಗಿದೇ ಹೋಯಿತು; ಅವರ ಮೇಲಿನ ನಿಷ್ಠೆಯ ಪರಾಕಾಷ್ಠೆಯನ್ನು ತೋರಿಸಿಕೊಳ್ಳಲು ಬೆಂಬಲಿಗರೆಲ್ಲ ಹಾದಿ–ಬೀದಿಗಳಲ್ಲಿ ಫ್ಲೆಕ್ಸ್‌ ಹಾಕಬೇಕು. ಬ್ಯಾನರ್‌ಗಳನ್ನೂ ಕಟ್ಟಬೇಕು. ಜಾಹೀರಾತು ಫಲಕದ ಬಹುತೇಕ ಸಾಮಗ್ರಿಗಳು ಪ್ಲಾಸ್ಟಿಕ್‌ನಿಂದ ತಯಾರು ಆಗಿರುವಂಥವು. ಮುರಿದ ಫಲಕಗಳು ಹಾಗೂ ಅದರ ಅವಶೇಷಗಳು ಚರಂಡಿ ಸೇರಿ ಆಗುವಂತಹ ಅನಾಹುತ ಸಣ್ಣದಲ್ಲ. ಸಣ್ಣ ಮಳೆಯಾದರೂ ಸಾಕು, ರಸ್ತೆಯಲ್ಲಿ ಉಂಟಾಗುವ ದೊಡ್ಡ ಪ್ರವಾಹದ ಮೂಲಕ ಆ ಬಿಸಿ ಸಾರ್ವಜನಿಕರಿಗೆ ತೀವ್ರವಾಗಿಯೇ ತಟ್ಟುತ್ತಿದೆ. ಪರಿಸರಕ್ಕೆ ಮಾರಕ ಎನ್ನುವುದು ಗೊತ್ತಿದ್ದರೂ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಬಹುತೇಕರಿಗೆ ಫ್ಲೆಕ್ಸ್‌ಗಳ ಕುರಿತು ಅದೇನೋ ಹಪಹಪಿ. ಬಡಾವಣೆಗಳೆಲ್ಲ ಅಂದಗೆಟ್ಟು, ಅಸಹ್ಯಕರವಾಗಿ ಕಂಡರೂ ಅವರಿಗೆ ಚಿಂತೆಯಿಲ್ಲ. ಇದೇ ಚಾಳಿ ನಾಗರಿಕರಲ್ಲೂ ಹರಡಿದೆ. ಮನೆಯಲ್ಲಿ ಯಾರಾದರೂ ಅಸುನೀಗಿದ ಅರ್ಧ ಗಂಟೆಯಲ್ಲೇ ಫ್ಲೆಕ್ಸ್‌ಗಳು ಸುತ್ತಲಿನ ಬೀದಿಗಳ ತುಂಬಾ ರಾರಾಜಿಸುತ್ತವೆ. ಇದು ಯಾವುದೋ ಒಂದು ಪ್ರದೇಶದ ಸಮಸ್ಯೆ ಅಲ್ಲ; ನಗರವನ್ನು ಪೂರ್ಣವಾಗಿ ವ್ಯಾಪಿಸಿದ ಸಾಂಕ್ರಾಮಿಕ ವ್ಯಾಧಿ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲು ನಿರ್ಣಯ ಕೈಗೊಂಡಿದ್ದು ಇದೇ ಮೊದಲೇನಲ್ಲ. 2008ರ ಜುಲೈ 25ರಂದು ಇಂತಹದ್ದೇ ತೀರ್ಮಾನ ಮಾಡಲಾಗಿತ್ತು. ಹತ್ತು
ವರ್ಷಗಳ ಅವಧಿಯಲ್ಲಿ ಆ ನಿರ್ಣಯಕ್ಕೆ ಮೂರ್ನಾಲ್ಕು ಸಲವಾದರೂ ಮರು ಅನುಮೋದನೆಯನ್ನು ನೀಡುತ್ತಾ ಬರಲಾಗಿದೆ. ‘ನಾಳೆಯಿಂದಲೇ ಕಟ್ಟುನಿಟ್ಟಿನ ಕ್ರಮ’ ಎಂದು ಅಬ್ಬರಿಸುವ ಬಿಬಿಎಂಪಿ, ಅಷ್ಟೇ ವೇಗದಲ್ಲಿ ಮೌನಕ್ಕೆ ಜಾರುವುದು ಗುಟ್ಟಿನ ಸಂಗತಿಯಾಗಿ ಉಳಿದಿಲ್ಲ. ಹೈಕೋರ್ಟ್‌ ಏನಾದರೂ ಮಧ್ಯ ಪ್ರವೇಶ ಮಾಡಿರದಿದ್ದರೆ ಜಾಹೀರಾತು ಪ್ರದರ್ಶನ ನಿಷೇಧದ ಈ ನಿರ್ಣಯ ಕೂಡ ಒಂದು ಕಣ್ಣೊರೆಸುವ ತಂತ್ರವಾಗುತ್ತಿತ್ತು. ‘ಅಕ್ರಮ ಜಾಹೀರಾತಿನ ಮೇಲೆ ಒಂದು ವರ್ಷದ ನಿಷೇಧ’ ಎಂಬ ಬಿಬಿಎಂಪಿಯ ಈಗಿನ ನಿರ್ಣಯ ವಿಚಿತ್ರವಾಗಿದೆ. ಅಕ್ರಮ ಎಂದಮೇಲೆ ಶಾಶ್ವತವಾಗಿ ನಿಷೇಧ ಹೇರಲು ಅಡ್ಡಿಯೇನು? ಜಾಹೀರಾತು ನಿಯಮಾವಳಿ ಅಷ್ಟರಲ್ಲಿ ಸಿದ್ಧವಾಗಲಿದೆ ಎಂಬ ಸಬೂಬನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ. ವಾಸ್ತವವಾಗಿ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಮೇಲೆ ನಿರ್ಬಂಧ ಹೇರಿ, ಹೋರ್ಡಿಂಗ್‌ಗಳಿಗೆ ನಿಯಂತ್ರಿತ ಅನುಮತಿ ನೀಡುವುದೇ ಜಾಣ ನಡೆ. ಪಾಲಿಕೆ ಮೇಲೆ ಜಾಹೀರಾತು ಮಾಫಿಯಾ ಹೊಂದಿರುವ ಹಿಡಿತ ಮತ್ತು ಆ ವಿಭಾಗದಲ್ಲಿ ನಡೆದಿರುವ ಅಕ್ರಮಗಳ ಕುರಿತು ಹಿಂದಿನ ಸಹಾಯಕ ಆಯುಕ್ತ ಕೆ.ಮಥಾಯಿ, ರಾಜ್ಯ ಸರ್ಕಾರಕ್ಕೆ ಹಲವು ವರದಿಗಳನ್ನು ನೀಡಿದ್ದರು. ಅನಧಿಕೃತ ಜಾಹೀರಾತು ಫಲಕಗಳನ್ನು ದಂಡ ವಸೂಲಿ ಮಾಡದೆ ತೆರವು ಮಾಡಿದ್ದರಿಂದ ₹ 2,000 ಕೋಟಿಯಷ್ಟು ವರಮಾನ ಸೋರಿಕೆಯಾಗಿದ್ದನ್ನು ಎತ್ತಿ ತೋರಿದ್ದರು. ಹಿರಿಯ ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲು ಆಗಿರುವುದನ್ನೂ ಪ್ರಸ್ತಾಪಿಸಿದ್ದರು. ಎಂಟೂ ವಲಯಗಳ ಜಾಹೀರಾತು ಫಲಕಗಳ ವಿವರವನ್ನು ದಾಖಲೀಕರಣ ಮಾಡಿ ಸರಿಯಾಗಿ ಶುಲ್ಕ ಆಕರಿಸಿದರೆ ವಾರ್ಷಿಕ ₹ 300 ಕೋಟಿಯಷ್ಟು ವರಮಾನ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಶಾಂತಲಾ ವಾರ್ಡ್‌ನಲ್ಲಿ ಪ್ರಾಯೋಗಿಕ ಪ್ರಯತ್ನ ನಡೆಸಿದಾಗ ₹ 15 ಲಕ್ಷದಷ್ಟಿದ್ದ ಜಾಹೀರಾತು ವರಮಾನ ಕಟ್ಟುನಿಟ್ಟಿನ ನಿಯಮ ಜಾರಿಯಿಂದ ₹ 3.96 ಕೋಟಿಗೆ ಏರಿಕೆಯಾಗಿತ್ತು. ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸಬೇಕು. ರಾಜಧಾನಿಯಲ್ಲಿ ಆಗಿರುವಂತೆ ರಾಜ್ಯದ ಇತರ ನಗರಗಳಲ್ಲೂ ಫ್ಲೆಕ್ಸ್‌ ಹಾವಳಿಗೆ ಮಂಗಳ ಹಾಡಬೇಕು. ಆದೇಶದ ಚಾಟಿ ಬೀಸುವ ಮೂಲಕ ದಶಕಗಳ ಸಮಸ್ಯೆಗೆ ತಕ್ಷಣ ಪರಿಹಾರೋಪಾಯದ ದಾರಿತೋರಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜನರ ಅಭಿನಂದನೆ ಸಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT