ADVERTISEMENT

ಸಂಪಾದಕೀಯ | ದಟ್ಟಣೆಯ ವ್ಯೂಹದಲ್ಲಿ ಬೆಂಗಳೂರು: ರಾಜ್ಯ ಸರ್ಕಾರ ಮಾಡಿದ್ದೇನು?

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:30 IST
Last Updated 30 ಜನವರಿ 2020, 20:30 IST
ಬೆಂಗಳೂರು ಟ್ರಾಫಿಕ್
ಬೆಂಗಳೂರು ಟ್ರಾಫಿಕ್   

ಬೆಂಗಳೂರು ಈಗ ಪ್ರಪಂಚದ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಂಡಿದೆ. ನಗರದಲ್ಲಿ ಪ್ರತಿದಿನ ಓಡಾಡುವಾಗ ನರಕಯಾತನೆ ಅನುಭವಿಸುವ ಜನರ ಪಾಲಿಗೆ ‘ಟಾಮ್‌ ಟಾಮ್‌’ ಬಿಡುಗಡೆ ಮಾಡಿರುವ ವಿಶ್ವ ಸಂಚಾರ ಸೂಚ್ಯಂಕ–2019ರ ಈ ಮಾಹಿತಿ ಯಾವುದೇ ಆಶ್ಚರ್ಯವನ್ನು ಉಂಟು ಮಾಡಿರಲಿಕ್ಕಿಲ್ಲ.

ಏಕೆಂದರೆ, ತಾವು ಬದುಕುತ್ತಿರುವುದು ಅತ್ಯಂತ ನಿಧಾನಗತಿ ಸಂಚಾರ ಸೌಲಭ್ಯದ ನಗರದಲ್ಲಿ ಎನ್ನುವುದನ್ನು ಅವರು ಬಲ್ಲರು. ಅಡಿ ಅಡಿಗೂ ತೆವಳುವ ಇಲ್ಲಿನ ಸಂಚಾರ ವ್ಯವಸ್ಥೆಯಲ್ಲಿ ಪ್ರತೀ ವರ್ಷ, ಪ್ರತಿಯೊಬ್ಬ ಪ್ರಯಾಣಿಕ, ಸರಾಸರಿ ಪ್ರಯಾಣದ ವೇಳೆಗಿಂತ 243 ಗಂಟೆಗಳಷ್ಟು (ಹತ್ತು ದಿನ) ಅಧಿಕ ಸಮಯವನ್ನು ರಸ್ತೆ
ಗಳಲ್ಲೇ ಕಳೆಯಬೇಕಿದೆ ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ. ರಾಜ್ಯದ ರಾಜಧಾನಿಯಲ್ಲೇಕೆ ಇಷ್ಟೊಂದು ಸಂಚಾರ ದಟ್ಟಣೆಯ ಸಮಸ್ಯೆ ಎಂಬ ಪ್ರಶ್ನೆ ಕಾಡುವುದು ಸಹಜ. ರಸ್ತೆಗಳ ಜಾಲ, ದಶಕಗಳ ಹಿಂದೆ ಎಷ್ಟಿತ್ತೋ ಈಗಲೂ ಅಷ್ಟೇ ಇದ್ದು, ಜನಸಂಖ್ಯೆ ದುಪ್ಪಟ್ಟಾಗಿರುವುದು, ಧಾರಣಾ ಸಾಮರ್ಥ್ಯವನ್ನೂ ಮೀರಿ ವಾಹನಗಳು ರಸ್ತೆಗಳಿಗೆ ಇಳಿದಿರುವುದು, ಸಂಚಾರಕ್ಕಷ್ಟೇ ಸೀಮಿತವಾಗಿರಬೇಕಿದ್ದ ರಸ್ತೆಗಳು ಪಾರ್ಕಿಂಗ್‌ ತಾಣಗಳೂ ಆಗಿರುವುದು, ಸೂಕ್ತ ಪಥಸೂಚಕಗಳು ಇಲ್ಲದಿರುವುದು, ಸಂಚಾರ ನಿಯಮಗಳ ಪಾಲನೆಯಲ್ಲಿ ಉದಾಸೀನ ಮನೋಭಾವ ತೋರುತ್ತಿರುವುದು– ಇಂತಹ ಹತ್ತಾರು ಕಾರಣಗಳು ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಇಂದಿನ ಸ್ಥಿತಿಗೆ ತಂದು ನಿಲ್ಲಿಸಿವೆ. 2001ರ ಜನಗಣತಿ ಪ್ರಕಾರ, ಈ ನಗರದ ಜನಸಂಖ್ಯೆ 51 ಲಕ್ಷದಷ್ಟಿತ್ತು.

ಅದೀಗ 1.20 ಕೋಟಿಗೆ ತಲುಪಿದ ಅಂದಾಜಿದೆ. ಆಗಿನ ಮೂಲಸೌಕರ್ಯಗಳನ್ನೇ ಈಗಲೂ ಇಟ್ಟು
ಕೊಂಡು ಇಷ್ಟೊಂದು ದೊಡ್ಡ ಜನಸಂಖ್ಯೆಗೆ ಸಂಚಾರ ಸೌಲಭ್ಯ ಒದಗಿಸುವುದು ಹೇಗೆ ಸಾಧ್ಯ? ದಟ್ಟಣೆಯ ಸಮಸ್ಯೆ ದೈತ್ಯಾಕಾರವಾಗಿ ಬೆಳೆಯುತ್ತಿದ್ದರೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕ್ರಮಗಳಿಗೆ ಮುಂದಾಗದೇ ಕಣ್ಮುಚ್ಚಿಕೊಂಡು ಕುಳಿತಿದ್ದು ಕೂಡ ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸಲು ಮುಖ್ಯ ಕಾರಣ.

ADVERTISEMENT

ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾದಂತೆ ಅಲ್ಲೊಂದು, ಇಲ್ಲೊಂದು ಮೇಲ್ಸೇತುವೆ ನಿರ್ಮಿಸುತ್ತಾ ಹೋಗುವುದೇ ಸರ್ಕಾರಕ್ಕೆ ಆದ್ಯತೆ ಎನಿಸಿತು. ಖಾಸಗಿ ವಾಹನಗಳೇ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಳಿಗೆ ಇಳಿಯುವಂತೆ ಉತ್ತೇಜನ ನೀಡುವ ಇಂತಹ ಯೋಜನೆಗಳು ಬಲು ದುಬಾರಿಯಾಗಿ ಪರಿಣಮಿಸಿದವು. ಒಂದೆಡೆ ಮೇಲ್ಸೇತುವೆಗಳ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವ್ಯಯವಾದರೆ, ಇನ್ನೊಂದೆಡೆ ಹಲವು ವರ್ಷಗಳವರೆಗೆ ಮುಗಿಯದ ಕಾಮಗಾರಿಗಳು ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಿದವು. ಬೆಂಗಳೂರಿನಲ್ಲಿ ನೀವು ಈಗ ಯಾವುದೇ ದಿಕ್ಕಿನಲ್ಲಿ ಹೋಗಿ, ಅಡೆತಡೆ ಇಲ್ಲದೆ ಸುಗಮ ಸಂಚಾರ ಕಲ್ಪಿಸುವಂತಹ ಒಂದೂ ರಸ್ತೆ ಸಿಗುವುದಿಲ್ಲ. ಯಾವುದೋ ಒಂದು ರಸ್ತೆಯನ್ನು ಜಲಮಂಡಳಿ ಅಗೆದರೆ, ಬೆಸ್ಕಾಂ ಮತ್ತೊಂದು ರಸ್ತೆಗೆ ಜೆಸಿಬಿ ಯಂತ್ರವನ್ನು ತಂದು ನಿಲ್ಲಿಸಿರುತ್ತದೆ. ಇನ್ನೊಂದೆಡೆ, ಮೆಟ್ರೊ ಮಾರ್ಗವೋ ಉಕ್ಕಿನ ಸೇತುವೆಯೋ ಒಟ್ಟಿನಲ್ಲಿ ನಿರ್ಮಾಣ ಕಾಮಗಾರಿಗಳ ಅಬ್ಬರ. ಮೇಲ್ಸೇತುವೆಗಳ ನಿರ್ಮಾಣದಿಂದಲೂ ದಟ್ಟಣೆ ಸಮಸ್ಯೆ
ಬಗೆಹರಿಯಲಿಲ್ಲ.

ಹೆಬ್ಬಾಳ ಮೇಲ್ಸೇತುವೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಸೇತುವೆ ಮೇಲೆ ವಾಹನಗಳು ಭಾರಿ ದಟ್ಟಣೆಯಲ್ಲಿ ತೆವಳಬೇಕಿದೆ. ಖಾಸಗಿ ವಾಹನಗಳ ಸಂಚಾರಕ್ಕಾಗಿ ಸೌಕರ್ಯ ರೂಪಿಸುವುದಕ್ಕಿಂತ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಸರ್ಕಾರದ ಆದ್ಯತೆ ಆಗಬೇಕಿದೆ. ಮೆಟ್ರೊ ರೈಲು ಸೌಲಭ್ಯವನ್ನು ಕ್ಷಿಪ್ರಗತಿಯಲ್ಲಿ ವಿಸ್ತರಿಸುವುದು, ನಗರದೊಳಗೆ ಲಭ್ಯವಿರುವ ರೈಲ್ವೆ ಜಾಲವನ್ನು ಬಳಸಿಕೊಂಡು ಕಮ್ಯೂಟರ್‌ ರೈಲು ಸೌಲಭ್ಯವನ್ನು ಕಲ್ಪಿಸುವುದು, ನಗರದ ಬಹುಪಾಲು ಜನರಿಗೆ ಸಂಚಾರ ಸೌಲಭ್ಯ ಒದಗಿಸುತ್ತಿರುವ ಬಿಎಂಟಿಸಿಯನ್ನು ಇನ್ನಷ್ಟು ಬಲಪಡಿಸುವುದು, ರಸ್ತೆಗಳು ಪದೇ ಪದೇ ಹಾಳಾಗದಂತೆ ನಿರ್ವಹಣೆಗೆ ಒತ್ತು ಕೊಡುವುದು ಪ್ರಮುಖವಾಗಿ ಆಗಬೇಕಿರುವ ಕೆಲಸಗಳು. ಕೊನೆಯ ಹಂತದ ಸಂಪರ್ಕ (ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ) ಇಲ್ಲದಿರುವ ಕಾರಣ ಲಕ್ಷಾಂತರ ಜನರಿಗೆ ಮೆಟ್ರೊ, ಬಿಎಂಟಿಸಿಯಂತಹ ಸಮೂಹ ಸಾರಿಗೆಯನ್ನು ಬಳಕೆ ಮಾಡಲು ಆಗುತ್ತಿಲ್ಲ. ಕೊನೆಯ ಹಂತದ ಸಂಪರ್ಕಕ್ಕಾಗಿ ಈ ಎರಡೂ ಮುಖ್ಯ ಸೌಲಭ್ಯಗಳಿಗೆ ಪೂರಕ ಸಾರಿಗೆ ಸೌಲಭ್ಯವನ್ನೂ ಅಭಿವೃದ್ಧಿಪಡಿಸಬೇಕು. ಅಂದರಷ್ಟೇ ದಟ್ಟಣೆ ಜಾಲದಿಂದ ಬೆಂಗಳೂರು ಹೊರಬರಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.