ADVERTISEMENT

ಸಂಪಾದಕೀಯ: ಉಪನಗರ ರೈಲು ಕಾಮಗಾರಿ ವಿಳಂಬ ಧೋರಣೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 20:52 IST
Last Updated 9 ಮಾರ್ಚ್ 2022, 20:52 IST
ಸಂಪಾದಕೀಯ
ಸಂಪಾದಕೀಯ   

ಬಸ್‌ ಹಾಗೂ ಮೆಟ್ರೊ ಸೌಕರ್ಯಗಳಿಗೆ ಹೋಲಿಸಿದರೆ, ಅತ್ಯಂತ ಕಡಿಮೆ ಖರ್ಚಿನಲ್ಲಿ ಸಂಪರ್ಕದ ಕೊಂಡಿಯಾಗಬಲ್ಲ ಪರಿಸರಸ್ನೇಹಿ ಹಾಗೂ ಸುಸ್ಥಿರ ಸಾರಿಗೆ ವ್ಯವಸ್ಥೆಯೆಂದರೆ ಅದು ಉಪನಗರ ರೈಲು. ಬೆಂಗಳೂರಿನ ಆಂತರಿಕ ಸಂಚಾರ ವ್ಯವಸ್ಥೆ ಮೇಲಿನ ಒತ್ತಡ ತಗ್ಗಿಸುವುದಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಭಾಗಗಳನ್ನು ಸಂಪರ್ಕಿಸುವುದಕ್ಕೆ ನಗರದಲ್ಲಿ ಈಗಿರುವ ರೈಲು ಸೌಕರ್ಯ ಏನೇನೂ ಸಾಲದು.

ಒಟ್ಟು ಸಾರ್ವಜನಿಕ ಸಂಚಾರದಲ್ಲಿ ಶೇಕಡ 2ರಷ್ಟು ಹೊರೆಯನ್ನು ಮಾತ್ರ ಈ ಸೌಕರ್ಯ ನಿಭಾಯಿಸುತ್ತಿದೆ. ನಗರಕ್ಕೆ ಪ್ರತ್ಯೇಕ ಉಪನಗರ ರೈಲು ಯೋಜನೆ ಬೇಕು ಎಂಬುದು ನಾಲ್ಕು ದಶಕಗಳ ಕನಸು. 1983ರಿಂದಲೂ ಈ ಬಗ್ಗೆ ಚರ್ಚೆಯಾಗುತ್ತಲೇ ಇದೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ನಗರದ ಜನರ ಬೇಡಿಕೆಗೆ ಮಣಿದ ಕೇಂದ್ರ ಸರ್ಕಾರವು 2019ರ ಬಜೆಟ್‌ನಲ್ಲಿ ಉಪನಗರ ರೈಲು ಯೋಜನೆ ಅನುಷ್ಠಾನದ ಭರವಸೆ ನೀಡಿತು. ₹ 15,767 ಕೋಟಿ ಅಂದಾಜುವೆಚ್ಚದ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು 2020ರ ಅಕ್ಟೋಬರ್‌ನಲ್ಲೇ ಅನುಮೋದನೆ ನೀಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರವು ಮೊದಲ ಕಂತಿನಲ್ಲಿ ₹ 850 ಕೋಟಿ ಅನುದಾನವನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಒದಗಿಸಿದೆ.

ADVERTISEMENT

ಯೋಜನೆ ಅನುಷ್ಠಾನದ ಹೊಣೆಯನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆ–ರೈಡ್) ವಹಿಸಲಾಗಿದೆ. ನಾಲ್ಕು ಪ್ರಮುಖ ಕಾರಿಡಾರ್‌ಗಳನ್ನು ಒಳಗೊಂಡ ಒಟ್ಟು 148.17 ಕಿ.ಮೀ. ಉದ್ದದ ರೈಲು ಹಳಿ ಜಾಲ ನಿರ್ಮಿಸುವ ಈ ಯೋಜನೆಯ ಅನುಷ್ಠಾನಕ್ಕೆ ಆರು ವರ್ಷಗಳ ಕಾಲಮಿತಿ ನಿಗದಿ ಮಾಡಲಾಗಿತ್ತು. ಈ ಯೋಜನೆಗೆ ಎದುರಾಗಿದ್ದ ಪ್ರಮುಖ ಆಡಳಿತಾತ್ಮಕ ಅಡೆತಡೆಗಳು ನಿವಾರಣೆಯಾಗಿ ಒಂದೂವರೆ ವರ್ಷ ಕಳೆದಿದೆ. ಆದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ‘ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಕಾರಿಡಾರ್‌ನ ಸಿವಿಲ್ ಕಾಮಗಾರಿಯ ಟೆಂಡರ್‌ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳು ಕಾಮಗಾರಿ ಆರಂಭಿಸುತ್ತೇವೆ’ ಎಂದು ಕೆ–ರೈಡ್‌ ತಿಳಿಸಿದೆ.

ಈ ಯೋಜನೆ ವಿಳಂಬವಾದಷ್ಟೂ ಸಮಸ್ಯೆ ಎದುರಿಸುವುದು ನಗರದ ನಿವಾಸಿಗಳು.

ಜಗತ್ತಿನ ಪ್ರಮುಖ ನಗರಗಳ ಸಂಚಾರ ವ್ಯವಸ್ಥೆ ಕುರಿತು ನೆದರ್‌ಲೆಂಡ್ಸ್‌ನ ಸಂಸ್ಥೆಯೊಂದು ಅಧ್ಯಯನ ನಡೆಸಿತ್ತು. ಆ ಅಧ್ಯಯನದ ಪ್ರಕಾರ, ಬೆಂಗಳೂರು ಅತ್ಯಂತ ಕೆಟ್ಟ ಸಂಚಾರ ವ್ಯವಸ್ಥೆ ಇರುವ ನಗರಗಳ ಪಟ್ಟಿಯಲ್ಲಿ ಸೇರಿದೆ.

ಇಲ್ಲಿನ ನಿವಾಸಿಗಳು ವಾಹನ ದಟ್ಟಣೆ ಸಮಸ್ಯೆಯಿಂದಾಗಿ ಪ್ರತಿವರ್ಷ ಅಗತ್ಯಕ್ಕಿಂತ ಸರಾಸರಿ 243 ಗಂಟೆಗಳನ್ನು ಹೆಚ್ಚುವರಿಯಾಗಿ ರಸ್ತೆಗಳಲ್ಲಿ ಕಳೆಯುತ್ತಾರೆ ಎಂದು ಅಧ್ಯಯನವು ವಿಶ್ಲೇಷಿಸಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ್ದ ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ–2020’ರಲ್ಲಿ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನ ಪಡೆದಿತ್ತು.

ಆದರೆ, ಸುರಕ್ಷಿತ ಸಾರ್ವಜನಿಕ ಸಾರಿಗೆ ಕುರಿತ ಸೂಚ್ಯಂಕದಲ್ಲಿ ತೀರಾ ಹಿಂದುಳಿದಿತ್ತು. ಈ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ಚೆನ್ನೈ 79.80 ಅಂಕ ಗಳಿಸಿದ್ದರೆ, ಬೆಂಗಳೂರಿಗೆ ಕೇವಲ 48.40 ಅಂಕಗಳು ಬಂದಿದ್ದವು. ಇದು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂತಹ ಶೋಚನೀಯ ಸ್ಥಿತಿಯಲ್ಲಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ.

ನಗರದಲ್ಲಿ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ. ಕಳೆದ ಮೂರು ವರ್ಷಗಳಲ್ಲಿ 20 ಲಕ್ಷಕ್ಕೂ ಅಧಿಕ ವಾಹನಗಳು ನೋಂದಣಿಯಾಗಿವೆ. ಇದರಿಂದ ಸಂಚಾರ ದಟ್ಟಣೆ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿಯಾಗಿರುವುದು ಒಂದೆಡೆಯಾದರೆ ಪರಿಸರ ಮಾಲಿನ್ಯ ಹೆಚ್ಚಳಕ್ಕೂ ಇದು ಕಾರಣವಾಗುತ್ತಿದೆ.

ಸಾರ್ವಜನಿಕ ಸಾರಿಗೆ ಬಲಪಡಿಸದೇ ಇರುವ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದೊಂದೇ ಮಾರ್ಗ. ನಗರದಲ್ಲಿರುವ ವಾಹನಗಳಲ್ಲಿ ಶೇ 60ರಷ್ಟು ದ್ವಿಚಕ್ರವಾಹನಗಳು. ಬಡವರು ಹಾಗೂ ಮಧ್ಯಮ ವರ್ಗದ ಜನರೇ ದ್ವಿಚಕ್ರ ವಾಹನವನ್ನು ಹೆಚ್ಚಾಗಿ ನೆಚ್ಚಿಕೊಂಡಿರುತ್ತಾರೆ.

ಜನರಿಗೆ ಕೈಗೆಟಕುವ ಬೆಲೆಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವಂತಹ ಸಾರಿಗೆ ವ್ಯವಸ್ಥೆಯನ್ನು ನಗರದಲ್ಲಿ ರೂಪಿಸಬೇಕಾಗಿದೆ. ಈ ಉದ್ದೇಶ ಈಡೇರಿಸುವುದಕ್ಕೆ ಉಪನಗರ ರೈಲು ವ್ಯವಸ್ಥೆಯಷ್ಟು ಸೂಕ್ತವಾದ ಸೌಕರ್ಯ ಬೇರೊಂದಿಲ್ಲ. ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗಿರುವ ನಗರ ನಿವಾಸಿಗಳ ಬದುಕನ್ನು ಇದು ತಕ್ಕಮಟ್ಟಿಗೆ ಸಹನೀಯಗೊಳಿಸಬಲ್ಲುದು. ಕೆ–ರೈಡ್‌ ಸಂಸ್ಥೆಯು ಇನ್ನಾದರೂ ಎಚ್ಚೆತ್ತು ಉಪನಗರ ರೈಲು ಯೋಜನೆಯ ಕಾಮಗಾರಿಗಳು ಗಡುವಿನೊಳಗೆ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರವೂ ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ನೆರವನ್ನು ಒದಗಿಸುವುದರ ಜೊತೆಗೆ ಕಾಮಗಾರಿ ಚುರುಕುಗೊಳಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.