ADVERTISEMENT

ಸಂಪಾದಕೀಯ | ಬೆಂಗಳೂರಿನ ಪಿ.ಜಿ.ಗಳಲ್ಲಿ ಸುರಕ್ಷತೆ; ಸಮಗ್ರ ನಿಯಮಗಳ ತುರ್ತು ಅಗತ್ಯ

ಕಾನೂನಿಗಿಂತ ಮಿಗಿಲಾಗಿ ವರ್ತಿಸುತ್ತಿರುವ ಪಿ.ಜಿ. ಮಾಲೀಕರಿಗೆ ಲಗಾಮು ಹಾಕುವ ಕೆಲಸ ಆಗಬೇಕು

ಸಂಪಾದಕೀಯ
Published 30 ಜುಲೈ 2024, 0:30 IST
Last Updated 30 ಜುಲೈ 2024, 0:30 IST
   

ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಇರುವ ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಕಟ್ಟಡವೊಂದರಲ್ಲಿ ವಾಸವಾಗಿದ್ದ ಯುವತಿಯೊಬ್ಬಳನ್ನು ಅದೇ ಕಟ್ಟಡದಲ್ಲಿ ಹತ್ಯೆ ಮಾಡಿರುವ ಪ್ರಕರಣವು ಪಿ.ಜಿ. ಕಟ್ಟಡಗಳಲ್ಲಿನ ಸುರಕ್ಷತೆಯ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಅಲ್ಲದೆ, ಪಿ.ಜಿ.ಗಳ ಮೇಲೆ ನಿಗಾ ಇರಿಸಲು ಸೂಕ್ತವಾದ ಕಾನೂನಿನ ಅಗತ್ಯ ಇದೆ ಎಂಬುದನ್ನೂ ಈ ಹತ್ಯೆಯು ತೋರಿಸಿಕೊಟ್ಟಿದೆ.

ಮಹಿಳೆಯರ ಈ ಪಿ.ಜಿ.ಯನ್ನು ಹಂತಕನು ಯಾವ ಅಡ್ಡಿಯೂ ಇಲ್ಲದೆ ಪ್ರವೇಶಿಸಿದ್ದು ಹಾಗೂ ಮೂರನೆಯ ಮಹಡಿಯಲ್ಲಿ ಇರುವ ಕೊಠಡಿಗೆ ತೆರಳಿದ್ದು, ಇಂತಹ ಕಟ್ಟಡಗಳು ಮಹಿಳೆಯರಿಗೆ ಪಾಲಿಗೆ ಎಷ್ಟು ಅಸುರಕ್ಷಿತವಾಗಿವೆ ಎಂಬುದನ್ನು ಹೇಳುತ್ತಿದೆ. ಬೆಂಗಳೂರಿನಲ್ಲಿ ಸರಿಸುಮಾರು 20 ಸಾವಿರ ಪಿ.ಜಿ.ಗಳು ಇವೆ ಎಂದು ಅಂದಾಜಿಸಲಾಗಿದೆ. ಆದರೆ ಈ ಪೈಕಿ ನಾಲ್ಕರಲ್ಲಿ ಒಂದರಷ್ಟು ಪಿ.ಜಿ.ಗಳು ಕೂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಕಡ್ಡಾಯವಾಗಿ ಪಡೆಯಬೇಕಿದ್ದ ವಹಿವಾಟು ಪರವಾನಗಿಯನ್ನು ಪಡೆದಿಲ್ಲ.

ಬೆಂಗಳೂರು ಪೊಲೀಸರು ಈಚೆಗೆ ಪಿ.ಜಿ.ಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಹೊರಡಿಸಿದ್ದರು. ಪರವಾನಗಿ ಪಡೆಯದೆ ಪಿ.ಜಿ. ನಡೆಸುವಂತೆ ಇಲ್ಲ ಎಂದು ಅದರಲ್ಲಿ ಹೇಳಲಾಗಿತ್ತು. ಪಿ.ಜಿ. ನಡೆಸುವವರು ಅಲ್ಲಿ ವಾಸಿಸುವವರ ಭಾವಚಿತ್ರ ಹಾಗೂ ಗುರುತಿನ ಚೀಟಿ ಪಡೆದುಕೊಳ್ಳಬೇಕು, ಅವರ ರಕ್ತಸಂಬಂಧಿಗಳ ವಿವರ ಮತ್ತು ಮೊಬೈಲ್‌ ಸಂಖ್ಯೆ ಪಡೆದುಕೊಳ್ಳಬೇಕು ಎಂದು ಕೂಡ ನಿಯಮಾವಳಿಗಳು ಹೇಳುತ್ತವೆ. ಕಟ್ಟಡದಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾ ಅಳವಡಿಸಬೇಕು, ಅಗ್ನಿ ಅವಘಡ ಸಂಭವಿಸಿದರೆ ಅದನ್ನು ನಿಯಂತ್ರಿಸಲು ಅಗತ್ಯ ಸಲಕರಣೆಗಳು ಇರಬೇಕು, ‘ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ–2017’ ಅನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಪೊಲೀಸ್‌ ಪರಿಶೀಲನೆಯ ನಂತರವೇ ಅಡುಗೆಯವರನ್ನು, ಪಿ.ಜಿ.ಗೆ ಇತರ ಸಿಬ್ಬಂದಿಯನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಿಯಮ ಹೇಳುತ್ತದೆ. ಪಿ.ಜಿ. ನಡೆಸುವವರು ತಮ್ಮ ಕಟ್ಟಡದಲ್ಲಿ ಮಾದಕ ವಸ್ತುಗಳ ಸಂಗ್ರಹ ಹಾಗೂ ಅವುಗಳ ಸೇವನೆಯಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು, ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ದೊಡ್ಡದಾಗಿ ಪ್ರದರ್ಶಿಸಬೇಕು, ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಪರಿಕರಗಳು ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆದರೆ ಈ ಎಲ್ಲ ನಿಯಮಗಳು ಸಾಮಾನ್ಯವಾಗಿ ಕಾಗದದ ಮೇಲೆ ಮಾತ್ರವೇ ಉಳಿದುಕೊಂಡಿರುತ್ತವೆ. ಸೂಕ್ತವಾದ ಮಾರ್ಗಸೂಚಿಗಳು ಇಲ್ಲದ ಕಾರಣ ಪಿ.ಜಿ.ಗಳು ನಗರದ ಮೂಲಸೌಕರ್ಯದ ಪಾಲಿಗೆ ಒಂದು ಹೊರೆಯಂತೆ ಆಗಿವೆ.

ಪಿ.ಜಿ.ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಇರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಪೂರೈಕೆ ಹಾಗೂ ಕಸ ಸಂಗ್ರಹ ಸಹಜವಾಗಿಯೇ ಕಷ್ಟವಾಗುತ್ತದೆ. ಬಹುತೇಕ ಪಿ.ಜಿ.ಗಳು ವ್ಯಾಪಾರ ವಹಿವಾಟು ಪರವಾನಗಿಯನ್ನು ಪಡೆದಿಲ್ಲವಾದ ಕಾರಣ, ಅವು ಕುಡಿಯುವ ನೀರಿನ ಸಂಪರ್ಕಕ್ಕೆ ಮನೆ ಬಳಕೆಗೆ ವಿಧಿಸುವ ಪ್ರಮಾಣದಲ್ಲಷ್ಟೇ ಶುಲ್ಕ ಪಾವತಿಸುತ್ತವೆ, ವಾಣಿಜ್ಯ ಚಟುವಟಿಕೆಗಳಿಗೆ ವಿಧಿಸುವ ಪ್ರಮಾಣಕ್ಕೆ ಅನುಗುಣವಾಗಿ ಅವು ಶುಲ್ಕ ಪಾವತಿಸುತ್ತಿಲ್ಲ. ಅಲ್ಲದೆ, ಹಲವು ಪಿ.ಜಿ.ಗಳು ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳಲ್ಲಿ ನಡೆಯುತ್ತಿವೆ.

ಪಿ.ಜಿ. ಕಟ್ಟಡಗಳು ವಿದ್ಯಾರ್ಥಿಗಳ, ಯುವ ಉದ್ಯೋಗಿಗಳ ಪಾಲಿಗೆ ವರದಾನ ಎಂಬುದರಲ್ಲಿ ಅನುಮಾನ ಇಲ್ಲ. ಇವರಿಗೆ ಬೆಂಗಳೂರಿನ ದುಬಾರಿ ಬಾಡಿಗೆಯ ಕೊಠಡಿಗಳನ್ನು ಅಥವಾ ಮನೆಗಳನ್ನು ಪಡೆಯುವುದು ಆಗದ ಕೆಲಸ. ಆದರೆ, ವಿಸ್ತೃತ ಮಾರ್ಗಸೂಚಿಗಳನ್ನು ರೂಪಿಸಿ ಈ ಪಿ.ಜಿ.ಗಳನ್ನು ಕಾನೂನಿನ ನಿಯಂತ್ರಣಕ್ಕೆ ಒಳಪಡಿಸುವ ಅಗತ್ಯವೂ ಇದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಒದಗಿಸುವ ಸೇವೆಗಳಿಗೆ ಪಿ.ಜಿ.ಗಳು ವಾಣಿಜ್ಯ ದರದಲ್ಲಿ ಶುಲ್ಕ ಪಾವತಿಸುವಂತೆ ಮಾಡುವುದರ ಜೊತೆಗೆ, ಅವು ತಮ್ಮಲ್ಲಿ ನೆಲೆ ಕಂಡುಕೊಳ್ಳುವವರಿಗೆ ಅಗತ್ಯ ಭದ್ರತೆ ಕಲ್ಪಿಸುವಂತೆಯೂ ಆಗಬೇಕು.

ಪರವಾನಗಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಪರವಾನಗಿ ಪಡೆದಿದ್ದರೂ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲದ ಪಿ.ಜಿ.ಗಳನ್ನು ಗುರುತಿಸಿ ಅವುಗಳ ವಿರುದ್ಧ ಕ್ರಮ ಜರುಗಿಸುವ ಕೆಲಸವು ಬಿಬಿಎಂಪಿ ಕಡೆಯಿಂದ ಆಗಬೇಕು. ಹಲವು ಕಡೆ ಪಿ.ಜಿ. ಮಾಲೀಕರು ಕಾನೂನಿಗಿಂತ ಮಿಗಿಲಾಗಿ ವರ್ತಿಸುತ್ತಿದ್ದಾರೆ, ಇಂಥವರಿಗೆ ಲಗಾಮು ಹಾಕುವ ಕೆಲಸ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.