ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಶಿಶು ಜನನವನ್ನು ಉತ್ತೇಜಿಸುವ, ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ‘ಭಾಗ್ಯಲಕ್ಷ್ಮಿ ಯೋಜನೆ’ಯನ್ನು ರಾಜ್ಯ ಸರ್ಕಾರವು 2006ರಲ್ಲಿ ಆರಂಭಿಸಿತು. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪುರುಷ ಹಾಗೂ ಮಹಿಳೆಯರ ಸಂಖ್ಯೆಯಲ್ಲಿನ ಅನುಪಾತದಲ್ಲಿ ಬಹಳ ವ್ಯತ್ಯಾಸ ಕಂಡುಬಂದಿದೆ. ಅಂದರೆ, ಪ್ರತಿ 1,000 ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ 964 ಮಾತ್ರ. ರಾಷ್ಟ್ರ ಮಟ್ಟದಲ್ಲಿನ ಪುರುಷ–ಮಹಿಳೆ ಅನುಪಾತಕ್ಕೆ ಹೋಲಿಸಿದರೆ ರಾಜ್ಯದಲ್ಲಿನ ಅನುಪಾತ ಉತ್ತಮವಾಗಿದೆಯಾದರೂ, ಸಮಾಜವು ಗಂಡು ಶಿಶುವನ್ನೇ ಹೆಚ್ಚು ಬಯಸುತ್ತಿದೆ ಎಂಬುದನ್ನು ಇದು ಹೇಳುತ್ತಿದೆ. ಸಮಾಜದ ಈ ಧೋರಣೆಯು ಹೆಣ್ಣುಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ. ಅಂದರೆ, ಪೌಷ್ಟಿಕ ಆಹಾರ ಲಭ್ಯತೆ, ಶಿಕ್ಷಣ, ಆರೋಗ್ಯಸೇವೆ ಮತ್ತು ಹೆಣ್ಣುಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆಗಳಿಗೆ ಉತ್ತರವಾಗಿ, ಹೆಣ್ಣು ಶಿಶುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು, ಕುಟುಂಬದಲ್ಲಿ ಆಕೆಯ ಸ್ಥಾನವನ್ನು ಉತ್ತಮಪಡಿಸಲು, ಆಕೆಯ ಶಿಕ್ಷಣಕ್ಕೆ ಉತ್ತೇಜನ ನೀಡಲು, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಯಂತಹ ಪಿಡುಗುಗಳನ್ನು ನಿವಾರಿಸಲು ರಾಜ್ಯ ಸರ್ಕಾರವು ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ ನೀಡಿತು.
ಆದರೆ, ಈ ಯೋಜನೆಯ ಪ್ರಮುಖ ಭಾಗವಾಗಿರುವ ಹಣಕಾಸಿನ ನೆರವು ಅಧಿಕಾರಿಶಾಹಿ ವ್ಯವಸ್ಥೆಯ ನಿಧಾನಗತಿಗೆ ಸಿಲುಕಿ, ಹಲವು ಅರ್ಹ ಫಲಾನುಭವಿಗಳ ಪಾಲಿಗೆ ಗಗನಕುಸುಮವಾಗಿ ಉಳಿದಿದೆ. ಈ ಯೋಜನೆಯ ಭಾಗವಾಗಿ, ದಂಪತಿಗೆ ಮೊದಲ ಹೆಣ್ಣುಮಗು ಜನಿಸಿದಾಗ ಆಕೆಯ ಹೆಸರಿನಲ್ಲಿ ₹10 ಸಾವಿರವನ್ನು ಠೇವಣಿಯಾಗಿ ಇರಿಸಲಾಗುತ್ತದೆ. ಆ ಹೆಣ್ಣುಮಗುವಿಗೆ 18 ವರ್ಷ ತುಂಬಿದಾಗ ಈ ಮೊತ್ತವು ₹34,571ಕ್ಕೆ ಏರಿಕೆ ಆಗಿರುತ್ತದೆ, ಈ ಮೊತ್ತವನ್ನು ಆಗ ಆಕೆಗೆ ನೀಡಲಾಗುತ್ತದೆ. ದಂಪತಿಯ ಎರಡನೆಯ ಹೆಣ್ಣುಮಗುವಿಗೆ ಸಿಗುವ ಮೊತ್ತ ₹40,619. ಇದನ್ನು 2008ರ ನಂತರದಲ್ಲಿ ₹1 ಲಕ್ಷಕ್ಕಿಂತ ಹೆಚ್ಚು ಮಾಡಲಾಗಿದೆ. ಈ ಮೊತ್ತವನ್ನು ಪಡೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಒಂಬತ್ತು ದಾಖಲೆ ಸಲ್ಲಿಸುವುದನ್ನು ಕಡ್ಡಾಯ ಮಾಡಿದೆ. ಇವುಗಳಲ್ಲಿ ಲಸಿಕೆ ನೀಡಿರುವ ಪ್ರಮಾಣಪತ್ರ ಕೂಡ ಒಂದು. ಆದರೆ, ಬಿಪಿಎಲ್ ವರ್ಗಕ್ಕೆ ಸೇರಿದ ಹಲವು ಕುಟುಂಬಗಳಿಗೆ ಅನಕ್ಷರತೆ ಮತ್ತು ಯೋಜನೆಯ ಕುರಿತ ಅಗತ್ಯ ಮಾಹಿತಿ ಇಲ್ಲದಿರುವುದು ದೊಡ್ಡ ಅಡ್ಡಿಯಾಗಿ ನಿಂತಿವೆ. ಹಲವಾರು ತಂದೆ–ತಾಯಿಗಳು ಬಹಳ ಸವಾಲಿನ ಬದುಕು ಸಾಗಿಸುತ್ತಿರುತ್ತಾರೆ.
ಅಗತ್ಯ ದಾಖಲೆಗಳನ್ನು ಜೋಪಾನವಾಗಿ ಇರಿಸಿಕೊಳ್ಳಲಾಗದಂತಹ ಸ್ಥಿತಿಯಲ್ಲಿ ಅವರ ಜೀವನ ಇರುತ್ತದೆ. ಅಷ್ಟೇ ಏಕೆ, ಅವರು ಅಗತ್ಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಳ್ಳದೆಯೂ ಇರಬಹುದು. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳ ಕಷ್ಟದಲ್ಲಿ ಇರುವ ಕುಟುಂಬಗಳಿಗೆ, ಅರ್ಹ ಫಲವನ್ನು ಪಡೆದುಕೊಳ್ಳಲು ಬಹಳ ಕಠಿಣವಾದ ಷರತ್ತುಗಳನ್ನು ನಿಗದಿ ಮಾಡುವುದು ಅನ್ಯಾಯದ ನಡೆಯಾಗುತ್ತದೆ. ಅಧಿಕಾರಿಶಾಹಿ ಸೃಷ್ಟಿಸುವ ಇಂತಹ ಅಡ್ಡಿಗಳನ್ನು ನಿವಾರಿಸಲು ಒಗ್ಗಟ್ಟಿನ ಪ್ರಯತ್ನವೊಂದು ಆಗದೇ ಇದ್ದರೆ, ಈ ಯೋಜನೆಯ ಪ್ರಯೋಜನಗಳು ಅರ್ಹರಿಗೆ ಸಿಗುವುದೇ ಇಲ್ಲ.
ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಹಭಾಗಿತ್ವದಲ್ಲಿ ಸರ್ಕಾರವು ಮಗುವಿನ ಮೇಲೆ ನಿಗಾ ಇರಿಸುವ ವ್ಯವಸ್ಥೆಯೊಂದನ್ನು ರೂಪಿಸಿದೆ. ಈ ವ್ಯವಸ್ಥೆಯನ್ನು ಮಗುವಿನ ಆರೋಗ್ಯ, ಶಿಕ್ಷಣ ಮತ್ತು ಒಟ್ಟಾರೆ ಕ್ಷೇಮದ ಮೇಲೆ ಕಣ್ಣಿಡುವ ‘ಹೆಜ್ಜೆ ಗುರುತು’ ಯೋಜನೆಯೊಂದಿಗೆ ಜೋಡಿಸಲಾಗಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡರೆ, ಅರ್ಹ ಫಲಾನುಭವಿಗಳನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಯೋಜನೆಯ ಅರ್ಹ ಫಲಾನುಭವಿಗಳು ತಾವು ಎಂಬುದನ್ನು ಸಾಬೀತು ಮಾಡಬೇಕಾದ ಹೊಣೆಯು ಆಗ ಬಡ ಕುಟುಂಬಗಳ ಮೇಲೆ ಇರುವುದಿಲ್ಲ. ದಾಖಲೆಗಳ ಅಗತ್ಯವನ್ನು ಕಡಿಮೆ ಮಾಡಿ, ಯೋಜನೆಯ ಫಲವನ್ನು ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸವನ್ನು ಸರ್ಕಾರವು ತಕ್ಷಣ ಮಾಡಬೇಕು. ಈಗಿರುವ ಅಡ್ಡಿಗಳು ಈ ಯೋಜನೆಯ ಮೂಲ ಉದ್ದೇಶವನ್ನೇ ಹಾಳುಮಾಡುವಂತೆ ಇವೆ. ಕುಟುಂಬಗಳಿಗೆ ನೆರವಾಗುವ ಬದಲು, ಈ ಅಡ್ಡಿಗಳು ಆ ಕುಟುಂಬಗಳ ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸುವಂತೆ, ಕುಟುಂಬಗಳನ್ನು ಇನ್ನಷ್ಟು ಹತಾಶೆಗೆ ನೂಕುವಂತೆ ಇವೆ. ಯೋಜನೆಯು ಯಾವ ಭರವಸೆಯನ್ನು ಈ ಕುಟುಂಬಗಳಿಗೆ ನೀಡಿದೆಯೋ, ಅದನ್ನು ಈಡೇರಿಸಬೇಕಿರುವುದು ಸರ್ಕಾರದ ಕರ್ತವ್ಯ. ಆಗ ಹೆಣ್ಣುಮಗುವಿಗೆ ಹಾಗೂ ಆಕೆಯ ಕುಟುಂಬಕ್ಕೆ ನೆರವನ್ನು ನಿಜ ಅರ್ಥದಲ್ಲಿ ನೀಡಿದಂತೆ ಆಗುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿಗೆ ಗೌರವ ಹೆಚ್ಚಿಸುವ ಉದ್ದೇಶವೂ ಸಾಕಾರಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.