ADVERTISEMENT

ಬಿಲ್ಕಿಸ್ ಬಾನೊಗೆ ಪರಿಹಾರ ಸರ್ಕಾರಕ್ಕೊಂದು ದಾರಿದೀಪ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 3:15 IST
Last Updated 27 ಏಪ್ರಿಲ್ 2019, 3:15 IST

ಕುತುಬುದ್ದೀನ್ ಅನ್ಸಾರಿ ಅವರು ದೈನ್ಯದಿಂದ ಬೇಡಿಕೊಳ್ಳುತ್ತಿದ್ದ ದೃಶ್ಯವು 2002ರ ಗುಜರಾತ್ ಕೋಮು ಗಲಭೆಯಲ್ಲಿ ಸಂತ್ರಸ್ತರಾದವರ ನೋವು, ಆತಂಕಕ್ಕೆ ರೂಪಕವಾಗಿತ್ತು.ಅದೇ ರೀತಿ, ಆ ಕೋಮು ಗಲಭೆಯ ಕ್ರೌರ್ಯವನ್ನು ತೋರಿಸಿಕೊಟ್ಟಿದ್ದು ಬಿಲ್ಕಿಸ್ ಬಾನೊ ಅವರ ಕಥೆ. ಮೊದಲನೆ ಯದು, ಅಕ್ಷರಗಳ ವಿವರಣೆಯ ಅಗತ್ಯವಿರದಿದ್ದ ಚಿತ್ರವಾಗಿತ್ತು. ಎರಡನೆಯದು, ಅಕ್ಷರಗಳಿಂದ ವಿವರಿಸಲು ಸಾಧ್ಯವಾಗದ ಕಥೆ. ಅನ್ಸಾರಿ ಅವರ ದೈನ್ಯ ನೋಟ ಹಾಗೂ ಬಿಲ್ಕಿಸ್‌ ಅವರ ಭೀಕರ ಕಥೆ ರಾಷ್ಟ್ರದ ಪ್ರಜ್ಞೆಯನ್ನು ಇಂದಿಗೂ ಕಾಡುತ್ತಿವೆ. ಪ್ರಶ್ನೆಗಳನ್ನೂ ಎತ್ತುತ್ತಿವೆ. ನ್ಯಾಯ ಕೊಡುವುದು ಕಷ್ಟದ ಕೆಲಸ. ನ್ಯಾಯ ಎನ್ನುವುದು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನ. ತಪ್ಪಿತಸ್ಥರಿಗೆ ವಿಧಿಸಿದ ಶಿಕ್ಷೆ ಹಾಗೂ ನೋವುಂಡವರಿಗೆ ಕೊಟ್ಟ ಪರಿಹಾರವನ್ನಷ್ಟೇ ಪರಿಗಣಿಸಿ ನ್ಯಾಯವನ್ನು ಅಳೆಯಲಾಗದು. 2002ರ ಗಲಭೆಯಲ್ಲಿ ಬಿಲ್ಕಿಸ್ ಅವರು ತಮ್ಮ ಕುಟುಂಬವನ್ನೇ ಕಳೆದುಕೊಂಡರು. ಅವರ ಮೂರು ವರ್ಷ ವಯಸ್ಸಿನ ಹಸುಗೂಸಿನ ತಲೆಯನ್ನು ಅವರ ಕಣ್ಣೆದುರೇ ಕಲ್ಲಿಗೆ ಬಡಿಯಲಾಯಿತು. ಆ ಹೊತ್ತಿನಲ್ಲಿ ಬಿಲ್ಕಿಸ್‌ ಅವರು ಗರ್ಭಿಣಿ ಕೂಡ ಆಗಿದ್ದರು. ಆದರೂ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಅವರ ಮೇಲೆ ದಾಳಿ ನಡೆಸಿದವರಿಗೆ, ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಕೊನೆಗೂ ಶಿಕ್ಷೆಯಾಯಿತು. ಈಗ, ಬಿಲ್ಕಿಸ್‌ ಅವರಿಗೆ ₹ 50 ಲಕ್ಷ ಪರಿಹಾರವನ್ನು ಗುಜರಾತ್‌ ಸರ್ಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅಲ್ಲದೆ, ಅವರಿಗೆ ಉದ್ಯೋಗ ಮತ್ತು ಮನೆ ನೀಡಬೇಕು ಎಂದೂ ತಾಕೀತು ಮಾಡಿದೆ. ಗುಜರಾತ್‌ ಕೋಮು ಗಲಭೆಗೆ ಸಂಬಂಧಿಸಿದಂತೆ ಕಾನೂನಿನ ಅಡಿ ಸುಪ್ರೀಂ ಕೋರ್ಟ್‌ ನ್ಯಾಯದಾನ ಮಾಡಿದೆ. ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸದಾಗಿ ತನಿಖೆ ಮಾಡುವಂತೆ ಸೂಚಿಸಿತ್ತು, ಇನ್ನು ಕೆಲವು ಪ್ರಕರಣಗಳ ವಿಚಾರಣೆಯನ್ನು ಗುಜರಾತ್‌ನಿಂದ ಹೊರಗೆ ನಡೆಸುವಂತೆ ನಿರ್ದೇಶಿಸಿತ್ತು. ಆದರೆ, ಹಲವು ಪ್ರಕರಣಗಳಲ್ಲಿ ನ್ಯಾಯವೆಂಬುದು ಇನ್ನೂ ಮರೀಚಿಕೆಯಾಗಿ ಉಳಿದಿದೆ. ಕೆಲವು ಪ್ರಕರಣಗಳನ್ನು ಇನ್ನಷ್ಟೇ ತೀರ್ಮಾನಿಸಬೇಕಿದೆ. ಅನಕ್ಷರಸ್ಥೆ ಬಿಲ್ಕಿಸ್ ಬಾನೊ ಅವರು ನ್ಯಾಯ ಪಡೆಯಲು ಪೊಲೀಸ್ ಠಾಣೆಯ ಹಂತದಿಂದಲೂ ಹೋರಾಟ ನಡೆಸಬೇಕಾಯಿತು. ಗುಜರಾತ್ ಆಡಳಿತ ವ್ಯವಸ್ಥೆಯು ಅವರಿಗೆ ವಿರುದ್ಧವಾಗಿತ್ತು ಕೂಡ. ಅವರ ಮೇಲೆ ದಾಳಿ ನಡೆಸಿದವರ ಪರವಾಗಿಯೂ ಇತ್ತು. ಮೊದಲು ರಾಜ್ಯ ಸರ್ಕಾರವು ಬಿಲ್ಕಿಸ್‌ ಅವರಿಗೆ ₹ 5 ಲಕ್ಷದ ಪರಿಹಾರ ಪ್ರಕಟಿಸಿತ್ತು. ಅದನ್ನು ಅವರು ತಿರಸ್ಕರಿಸಿದ್ದರು.

ಸಾಮಾಜಿಕ ಹಾಗೂ ರಾಜಕೀಯ ಕ್ರೌರ್ಯಕ್ಕೆ ತುತ್ತಾದವರಿಗೆ ಪರಿಹಾರ ನೀಡಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲೆ ಇರುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಆದೇಶ ನೆನಪಿಸುವಂತಿದೆ. ಹಾಗೆಯೇ, ಇಂತಹ ಕ್ರೌರ್ಯಗಳನ್ನು ತಡೆಯಬೇಕು ಎಂಬ ಎಚ್ಚರಿಕೆಯಾಗಿಯೂ ಈ ಆದೇಶವನ್ನು ಸರ್ಕಾರ ಸ್ವೀಕರಿಸಬೇಕು. ಮಹಿಳೆಯೊಬ್ಬರ ಧೈರ್ಯವನ್ನು, ಛಲ ಬಿಡದ ಹೋರಾಟ ಮನೋಭಾವವನ್ನು, ಸರ್ಕಾರದ ಹೊಣೆಗೇಡಿತನವನ್ನು ಹಾಗೂ ನ್ಯಾಯಾಂಗವು ಸಂತ್ರಸ್ತೆಯ ನೆರವಿಗೆ ಬಂದಿದ್ದನ್ನು ಬಿಲ್ಕಿಸ್ ಬಾನೊ ಪ್ರಕರಣವು ಹೇಳುತ್ತದೆ. ಹಾಗೆಯೇ, ದ್ವೇಷ ತುಂಬಿಕೊಂಡ ಮನುಷ್ಯ, ಇನ್ನೊಬ್ಬ ಮನುಷ್ಯನ ವಿಚಾರದಲ್ಲಿ ಅದೆಷ್ಟು ಕ್ರೂರವಾಗಿ ನಡೆದುಕೊಳ್ಳಬಹುದು ಎಂಬುದಕ್ಕೂ ಈ ಪ್ರಕರಣ ಒಂದು ನಿದರ್ಶನ. ತನ್ನಂತೆ ನೋವುಂಡ ಇತರರಿಗೆ ಸಹಾಯ ಮಾಡಲು, ತಮ್ಮ ಮಗಳ ಹೆಸರಿನಲ್ಲಿ ನಿಧಿಯೊಂದನ್ನು ಸ್ಥಾಪಿಸುವುದಾಗಿ ಬಿಲ್ಕಿಸ್‌ ಅವರು ಹೇಳಿದ್ದಾರೆ. ಕೋಮು ಗಲಭೆಗಳು ಸಂಪೂರ್ಣವಾಗಿ ಇಲ್ಲವಾದಾಗ, ಕೊಲೆಗಡುಕರನ್ನು ಹಾಗೂ ಅತ್ಯಾಚಾರಿಗಳನ್ನು ಬೆಂಬಲಿಸು ವುದನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದಾಗ ಬಿಲ್ಕಿಸ್‌ ಮತ್ತು ಅವರಂತಹ ಇತರರಿಗೆ ಪರಿಪೂರ್ಣ ನ್ಯಾಯ ಸಿಕ್ಕಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT