ಛತ್ತೀಸಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ನಂತರ, ಅಲ್ಲಿನ ಹೊಸ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಎದ್ದು ಕಾಣುತ್ತಿರುವುದು ಪಕ್ಷದ ವರಿಷ್ಠರ ತೀರ್ಮಾನದ ಛಾಪು. ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧಿಕಾರದ ಹಾಗೂ ತಾಕತ್ತಿನ ಪ್ರಭಾವ ಅಲ್ಲಿ ಕಾಣುತ್ತಿದೆ. ಈ ಮೂರೂ ರಾಜ್ಯಗಳಲ್ಲಿ ಜನಪ್ರಿಯತೆ ಪಡೆದಿದ್ದ ಹಾಗೂ ಪ್ರಬಲರಾಗಿದ್ದ ನಾಯಕರನ್ನು ಪಕ್ಕಕ್ಕೆ ಸರಿಸಲಾಗಿದೆ. ಪಕ್ಷವು ಹೊಸ ಮುಖಗಳನ್ನು ಆಯ್ಕೆ ಮಾಡಿ, ಸರ್ಕಾರವನ್ನು ಮುನ್ನಡೆಸುವ ಹೊಣೆಯನ್ನು ಅವರಿಗೆ ನೀಡಿದೆ. ಛತ್ತೀಸಗಢದ ನೂತನ ಮುಖ್ಯಮಂತ್ರಿಯನ್ನಾಗಿ ಬುಡಕಟ್ಟು ಸಮುದಾಯದ ನಾಯಕ ವಿಷ್ಣುದೇವ್ ಸಾಯ್ ಅವರನ್ನು ಆಯ್ಕೆ ಮಾಡಲಾಗಿದೆ. ಇದಾದ ನಂತರದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಒಬಿಸಿ ಸಮುದಾಯದ ನಾಯಕ ಮೋಹನ್ ಯಾದವ್ ಅವರ ಹೆಸರನ್ನು ಹಾಗೂ ರಾಜಸ್ಥಾನ ಮುಖ್ಯಮಂತ್ರಿಯಾಗಿ, ಮೊದಲ ಬಾರಿಗೆ ಶಾಸಕ ಆಗಿರುವ ಭಜನ್ ಲಾಲ್ ಶರ್ಮಾ ಅವರ ಹೆಸರನ್ನು ಘೋಷಿಸಲಾಯಿತು. ಈ ಮೂರೂ ಹೆಸರುಗಳ ಘೋಷಣೆಯು ಆಶ್ಚರ್ಯ ಮೂಡಿಸುವಂಥದ್ದೇ ಆದರೂ ಈ ಹೆಸರುಗಳನ್ನು ಅಂತಿಮಗೊಳಿಸುವಲ್ಲಿ ಪಕ್ಷವು ದೀರ್ಘಾವಧಿಯ ಆಲೋಚನೆಗಳನ್ನು ಹೊಂದಿದೆ ಎಂಬುದು ಸ್ಪಷ್ಟ.
ವಿಷ್ಣುದೇವ್ ಅವರಿಗೆ ಸಚಿವ ಆಗಿ ಕೆಲಸ ಮಾಡಿದ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಂಡ ಅನುಭವ ಇದೆ. ಅವರನ್ನು ಆಯ್ಕೆ ಮಾಡಿರುವುದು ಪಕ್ಷವು ಬುಡಕಟ್ಟು ಸಮುದಾಯಗಳಿಗೆ ನೀಡುವ ಆದ್ಯತೆಯ ಸೂಚಕ ಎಂದು ಹೇಳಲಾಗುತ್ತಿದೆ. ಬುಡಕಟ್ಟು ಸಮುದಾಯವು ಛತ್ತೀಸಗಢದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 30ರಷ್ಟು ಪಾಲು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಇವರ ಪಾಲು ಒಟ್ಟು ಜನಸಂಖ್ಯೆಯಲ್ಲಿ ಶೇ 9ರಷ್ಟು. ಬುಡಕಟ್ಟು ಸಮುದಾಯಕ್ಕೆ ಸೇರಿರುವ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಲಾಯಿತು. ಅದರ ಮುಂದುವರಿದ ಹಂತವಾಗಿ ವಿಷ್ಣುದೇವ್ ಅವರ ಆಯ್ಕೆ ಎನ್ನಲಾಗುತ್ತಿದೆ ಕೂಡ. ಮಧ್ಯಪ್ರದೇಶದ ಮೋಹನ್ ಯಾದವ್ ಅವರು ಪ್ರಬಲ ಒಬಿಸಿ (ಇತರೆ ಹಿಂದುಳಿದ ಸಮುದಾಯ) ವರ್ಗಕ್ಕೆ ಸೇರಿದವರು. ಅವರ ಆಯ್ಕೆಯು ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಕೂಡ ಪಕ್ಷದ ಪರವಾಗಿ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಇದೆ. ಯಾದವ್ ಅವರ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು (ರಾಜೇಂದ್ರ ಶುಕ್ಲಾ ಮತ್ತು ಜಗದೀಶ್ ದೇವ್ಡಾ) ಇದ್ದಾರೆ. ಶುಕ್ಲಾ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ದೇವ್ಡಾ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಇದು ಮಧ್ಯಪ್ರದೇಶದ ಸಚಿವ ಸಂಪುಟದಲ್ಲಿ ಜಾತಿಗಳ ಪ್ರಾತಿನಿಧ್ಯದ ವಿಚಾರದಲ್ಲಿ ಸಮತೋಲನವೊಂದನ್ನು ತರುವ ಸಾಧ್ಯತೆ ಇದೆ. ರಾಜಸ್ಥಾನದಲ್ಲಿ ಮುಂದುವರಿದ ಜಾತಿಗಳು ರಾಜಕೀಯವಾಗಿ ಪ್ರಾಮುಖ್ಯ ಪಡೆದಿವೆ. ಅಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಭಜನ್ ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ, ರಜಪೂತ ಸಮುದಾಯದ ದಿಯಾ ಕುಮಾರಿ ಅವರನ್ನು ಮತ್ತು ದಲಿತ ಸಮುದಾಯಕ್ಕೆ ಸೇರಿದ ಪ್ರೇಮಚಂದ್ ಬೈರ್ವಾ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲಾಗಿದೆ. ಜಾತಿ ಪ್ರಾತಿನಿಧ್ಯ ಮಾತ್ರವೇ ಅಲ್ಲದೆ ಪ್ರಾದೇಶಿಕ ಪ್ರಾತಿನಿಧ್ಯ ಕೂಡ ಇಲ್ಲಿ ಕೆಲಸ ಮಾಡಿದೆ.
ಹೊಸ ಮುಖ್ಯಮಂತ್ರಿಗಳ ಆಯ್ಕೆಯು ಪಕ್ಷದ ಪಾಲಿಗೆ ತಲೆಮಾರಿನ ಬದಲಾವಣೆಯನ್ನು ಹೇಳುತ್ತಿದೆ. ವಾಜಪೇಯಿ–ಅಡ್ವಾಣಿ ಯುಗದ ನಾಯಕರಾದ ರಮಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ ಅವರು ಹೊಸಬರಿಗೆ ದಾರಿ ಬಿಟ್ಟುಕೊಡಬೇಕಾಗಿದೆ. ಇದು ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಕಂಡುಬಂದಿತ್ತು. ಈ ನಾಯಕರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದು ಘೋಷಿಸಿರಲಿಲ್ಲ. ಹೊಸ ಮುಖ್ಯಮಂತ್ರಿಗಳು ಪಕ್ಷದ ಸಿದ್ಧಾಂತದ ಜೊತೆ ಗಾಢವಾದ ನಂಟು ಹೊಂದಿರುವವರೂ ಹೌದು. ಇವರು ಎಬಿವಿಪಿ ಹಾಗೂ ಆರ್‌ಎಸ್‌ಎಸ್ ಜೊತೆ ನಿಕಟ ನಂಟು ಹೊಂದಿದ್ದಾರೆ. ಈ ಆಯ್ಕೆಗಳು 2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ನಿರ್ದಿಷ್ಟ ಮಹತ್ವವನ್ನೇನೂ ಹೊಂದಿಲ್ಲ. ಪಕ್ಷವು ನೆಚ್ಚಿಕೊಳ್ಳುವುದು ಪ್ರಧಾನಿ ಮೋದಿ ಅವರ ಚರಿಷ್ಮಾ, ಅಯೋಧ್ಯೆಯಲ್ಲಿ ಮುಂದಿನ ತಿಂಗಳು ಉದ್ಘಾಟನೆ ಕಾಣಲಿರುವ ಶ್ರೀರಾಮ ಮಂದಿರ, ಸಂವಿಧಾನದ 370ನೇ ವಿಧಿ, ಜಾತಿ ಸಮೀಕರಣ ಹಾಗೂ ಸಾಮಾಜಿಕ ಸಮೀಕರಣವನ್ನು. ಇಲ್ಲಿರುವ ಇನ್ನೊಂದು ಸಂಗತಿಯೆಂದರೆ, ಬಿಜೆಪಿ ಕೂಡ ಸಂಪೂರ್ಣವಾಗಿ ವರಿಷ್ಠರ ತೀರ್ಮಾನವನ್ನು ನೆಚ್ಚಿಕೊಂಡಿರುವ ಪಕ್ಷ. ಅಲ್ಲಿ ಎಲ್ಲ ಪ್ರಮುಖ ನಿರ್ಣಯಗಳು ಆಗುವುದು ಮೇಲಿನ ಹಂತದಲ್ಲಿ ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.