ADVERTISEMENT

ಸಂಪಾದಕೀಯ | ಕವಿತಾಗೆ ಜಾಮೀನು: ಕಾರ್ಯಾಂಗದ ಅತಿಗೆ ಕೋರ್ಟ್‌ ಮಿತಿ

ಸಂಪಾದಕೀಯ
Published 29 ಆಗಸ್ಟ್ 2024, 22:30 IST
Last Updated 29 ಆಗಸ್ಟ್ 2024, 22:30 IST
.
.   

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ನಾಯಕಿ ಕೆ. ಕವಿತಾ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿರುವುದು ಹಾಗೂ ಜಾಮೀನು ನೀಡುವ ಸಂದರ್ಭದಲ್ಲಿ ಆಡಿರುವ ಮಾತುಗಳು ಬಹಳ ಮಹತ್ವ ಪಡೆದುಕೊಳ್ಳುತ್ತವೆ. ನಾಗರಿಕರ ಹಕ್ಕುಗಳ ವಿಚಾರವಾಗಿ ಕೋರ್ಟ್ ಈಚೆಗೆ ಆಡಿರುವ ಮಾತುಗಳಿಗೆ ಅನುಗುಣವಾಗಿ ಈ ಮಾತುಗಳು ಕೂಡ ಇವೆ. ಘನತೆಯಿಂದ ಜೀವಿಸುವ ಹಕ್ಕು ಮೂಲಭೂತ ಹಕ್ಕುಗಳ ಪೈಕಿ ಅತ್ಯಂತ ಪ್ರಮುಖವಾದುದು ಎಂಬುದನ್ನು ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಹೇಳಿದೆ. ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾರ್ಯಾಂಗವು ತರ್ಕರಹಿತವಾಗಿ, ತನ್ನಿಚ್ಛೆಯಂತೆ ಕಿತ್ತುಕೊಳ್ಳಲು ಅವಕಾಶ ಇಲ್ಲ ಎಂದು ಕೂಡ ಕೋರ್ಟ್‌ ಹಲವು ಬಾರಿ ಸ್ಪಷ್ಟಪಡಿಸಿದೆ. ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕವಿತಾ ಅವರನ್ನು ಮಾರ್ಚ್ 15ರಂದು ಬಂಧಿಸಲಾಗಿತ್ತು. ಆ ದಿನದಿಂದ ಅವರು ಜೈಲಿನಲ್ಲಿದ್ದರು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಕವಿತಾ ಅವರ ವಿರುದ್ಧ ಹೊರಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆಯೂ ಸುಪ್ರೀಂ ಕೋರ್ಟ್‌ ಕೆಲವು ಮಾತುಗಳನ್ನು ಆಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ವಿರುದ್ಧವೂ ಈ ತನಿಖಾ ಸಂಸ್ಥೆಗಳು ಆರೋಪಗಳನ್ನು ಹೊರಿಸಿವೆ. ಸಿಸೋಡಿಯಾ ಅವರಿಗೆ ಕೋರ್ಟ್‌ ಈಚೆಗೆ ಜಾಮೀನು ನೀಡಿದೆ. ಕೋರ್ಟ್ ಮಾತುಗಳು ಈ ತನಿಖಾ ಸಂಸ್ಥೆಗಳ ಕಾರ್ಯಗಳ ಬಗ್ಗೆ, ಅವು ಅನುಸರಿಸುತ್ತಿರುವ ತನಿಖಾ ಪದ್ಧತಿಯ ಬಗ್ಗೆ ಹಾಗೂ ಅವು ಸಂಗ್ರಹಿಸುವ ಸಾಕ್ಷ್ಯಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. 

ತನಿಖಾ ಸಂಸ್ಥೆಗಳು ಎಷ್ಟು ನಿಷ್ಪಕ್ಷಪಾತಿ ಎಂಬುದರ ಬಗ್ಗೆ ಕೋರ್ಟ್ ಕೆಲವು ಪ್ರಶ್ನೆಗಳನ್ನು ಎತ್ತಿದೆ. ದೆಹಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಇತರ ಕೆಲವು ಪ್ರಕರಣಗಳಲ್ಲಿಯೂ ಕಂಡುಬಂದಿರುವ, ಮಾಫಿ ಸಾಕ್ಷಿದಾರರ ಹೇಳಿಕೆಗಳನ್ನೇ ಪ್ರಮುಖ ಸಾಕ್ಷ್ಯವಾಗಿ ಬಳಸಿಕೊಳ್ಳುವ ಪ್ರವೃತ್ತಿಯ ಬಗ್ಗೆ ಕೋರ್ಟ್ ಪ್ರಶ್ನೆ ಎತ್ತಿದೆ. ಆರೋಪಿಯೊಬ್ಬ ಇನ್ನೊಬ್ಬ ಆರೋಪಿಯ ಬಗ್ಗೆ ನೀಡುವ ಹೇಳಿಕೆಗಳನ್ನು ಆಧಾರ, ಪುರಾವೆಯಾಗಿ ಎಷ್ಟರಮಟ್ಟಿಗೆ ಬಳಸಿಕೊಳ್ಳಬಹುದು ಎಂಬ ಪ್ರಶ್ನೆಯನ್ನೂ ಕೇಳಿದೆ. ನ್ಯಾಯಸಮ್ಮತ ವಿಚಾರಣೆ ಎಂಬುದು ನಾಗರಿಕರ ಹಕ್ಕು. ಕೋರ್ಟ್ ಎತ್ತಿರುವ ಪ್ರಶ್ನೆಗಳು ನ್ಯಾಯಸಮ್ಮತ ವಿಚಾರಣೆಗೆ ಸಂಬಂಧಿಸಿದಂತೆ ಬಹಳ ಮಹತ್ವದವು. ಕವಿತಾ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ 493 ಸಾಕ್ಷಿಗಳು ಇದ್ದಾರೆ, 57 ಮಂದಿ ಆರೋಪಿಗಳು ಇದ್ದಾರೆ. ಹೀಗಾಗಿ, ಪ್ರಕರಣದ ವಿಚಾರಣೆಯು ಬೇಗ ನಡೆಯುವ ಸಾಧ್ಯತೆ ಕಡಿಮೆ ಎಂಬ ವಿಷಯವನ್ನೂ ಕೋರ್ಟ್ ಪ್ರಸ್ತಾಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ನ್ಯಾಯಾಲಯವು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿರುವಂತೆ, ವಿಚಾರಣಾ ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಆಗ ಆರೋಪಿಗೆ ನ್ಯಾಯವೆಂಬುದು ಮರೀಚಿಕೆಯಾಗುತ್ತದೆ. ಪ್ರಕರಣದಲ್ಲಿ ತನಿಖೆಯು ಪೂರ್ಣಗೊಂಡಿದೆ, ಕವಿತಾ ಅವರು ತಪ್ಪಿಸಿಕೊಂಡು ಹೋಗುವ ಅಪಾಯ ಇಲ್ಲ ಎಂದು ಕೋರ್ಟ್ ಹೇಳಿದೆ. ಕವಿತಾ ಅವರ ಪ್ರಕರಣದಲ್ಲಿಯೂ ಜಾಮೀನು ನೀಡುವಾಗ ಸಹಜವಾಗಿ ಅನ್ವಯವಾಗುವ ತತ್ವಗಳೇ ಅನ್ವಯವಾಗುತ್ತವೆ, ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕೆ ಕಾರಣಗಳೇ ಇಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.

ಈಚಿನ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ತಾಳಿರುವ ನಿಲುವಿನ ಪುನರುಚ್ಚಾರದಂತೆ ಇವೆ ಈ ಎಲ್ಲ ಮಾತುಗಳು. ವ್ಯಕ್ತಿಯೊಬ್ಬನ ಸ್ವಾತಂತ್ರ್ಯದ ಪ್ರಶ್ನೆ ಇರುವ ಪ್ರಕರಣಗಳ ವಿಚಾರಣೆ ನಡೆಸುವ ಸಂದರ್ಭಗಳಲ್ಲಿ ಈ ಮಾತುಗಳನ್ನು, ನಿಯಮಗಳನ್ನು ಪಾಲಿಸಬೇಕು ಎಂದು ಅಧೀನ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಬಂಧನ ಹಾಗೂ ರಿಮಾಂಡ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಕಾನೂನನ್ನು, ಸರಿಯಾದ ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕು ಎಂದು ಕೂಡ ಇತರ ಕೆಲವು ಪ್ರಕರಣ
ಗಳಲ್ಲಿ ಕೋರ್ಟ್ ಸ್ಪಷ್ಟಪಡಿಸಿದೆ. ಇವೆಲ್ಲವೂ ವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳುತ್ತವೆ. ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಕಾರ್ಯಾಂಗವು ತನ್ನ ಅಧಿಕಾರವನ್ನು ಮಿತಿ ಮೀರಿ ಬಳಸಿಕೊಳ್ಳುವ ಚಾಳಿಯನ್ನು ಹದ್ದುಬಸ್ತಿನಲ್ಲಿ ಇರಿಸಲು ಇವೆಲ್ಲವೂ ಮಾರ್ಗಸೂಚಿಯಂತೆ ಕೆಲಸ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.