ದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ 2020–25ರ ಅವಧಿಯಲ್ಲಿ ₹111 ಲಕ್ಷ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಸಾಂಪ್ರದಾಯಿಕ ಮೂಲಗಳಿಂದ ಶೇ 85ರವರೆಗಿನ ಮೊತ್ತವನ್ನು ಮಾತ್ರ ಹೊಂದಿಸಲು ಸಾಧ್ಯ. ಉಳಿದ ಮೊತ್ತವನ್ನು ಸಂಗ್ರಹಿಸಲು ವಿನೂತನವಾದ ದಾರಿಯನ್ನು ಹುಡುಕಿಕೊಳ್ಳಬೇಕು ಎಂಬುದು ಸರ್ಕಾರದ ಚಿಂತನೆ. ರಾಷ್ಟ್ರೀಯ ನಗದೀಕರಣ ಯೋಜನೆಯು (ಎನ್‌ಎಂಪಿ) ಇಂತಹ ವಿನೂತನ ಕಾರ್ಯತಂತ್ರದ ಭಾಗ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರ ಭಾಗವಾಗಿ 2021–25ರ ನಾಲ್ಕು ವರ್ಷಗಳ ಅವಧಿಯಲ್ಲಿ ₹ 6 ಲಕ್ಷ ಕೋಟಿ ಸಂಗ್ರಹಿಸುವ ಯೋಜನೆಯನ್ನು ನಿರ್ಮಲಾ ಘೋಷಿಸಿದ್ದಾರೆ.
ಸರ್ಕಾರದ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ಮೂಲಕ ನೀಡಿ ಹಣ ಸಂಗ್ರಹಿಸುವುದು ಈ ಯೋಜನೆಯ ಹಿಂದಿನ ಕಾರ್ಯತಂತ್ರ. ರಸ್ತೆ, ರೈಲ್ವೆ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಮುಂತಾದ 12 ಸಚಿವಾಲಯಗಳ ವ್ಯಾಪ್ತಿಯಲ್ಲಿ ಬರುವ 20 ಆಸ್ತಿ ವರ್ಗಗಳನ್ನು ನಗದೀಕರಣ ಯೋಜನೆಗಾಗಿ ಗುರುತಿಸಲಾಗಿದೆ. ಇದು, ಸರ್ಕಾರದ ಪಾಲು ಮಾರಾಟ ಅಥವಾ ಖಾಸಗೀಕರಣ ಅಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಹೇಳಿದೆ. ಯೋಜನೆಯು ನಾಲ್ಕು ವರ್ಷಗಳ ಅವಧಿಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ. ಗುತ್ತಿಗೆ ನೀಡಿದ ಆಸ್ತಿಯ ಮಾಲೀಕತ್ವವು ಸರ್ಕಾರದ ವಶದಲ್ಲಿಯೇ ಇರುತ್ತದೆ. ಉತ್ಪಾದಕ ಉದ್ದೇಶಕ್ಕಾಗಿ ಮಾತ್ರ ಆಸ್ತಿಯನ್ನು ಖಾಸಗಿ ಸಂಸ್ಥೆಗಳ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಯೋಜನೆಯು ಹೇಗೆ ಅನುಷ್ಠಾನಗೊಳ್ಳಲಿದೆ, ಇದರಿಂದ ಸಿಕ್ಕ ವರಮಾನವು ಯಾವ ರೀತಿಯಲ್ಲಿ ವಿನಿಯೋಗ ಆಗಲಿದೆ ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇವೆ. ಯೋಜನೆಯು ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಡಲಿಕ್ಕಿಲ್ಲವೇ ಎಂಬ ಪ್ರಶ್ನೆಯೂ ಇದೆ. ಪ್ರಮುಖವಾದ ಕೆಲವು ಆಸ್ತಿಗಳು ಅಧಿಕಾರದಲ್ಲಿ ಇರುವವರ ನೆಚ್ಚಿನ ಖಾಸಗಿ ಕಂಪನಿಗಳ ಪಾಲಾಗಬಹುದು, ಪರಿಣಾಮವಾಗಿ ಅದು ಏಕ ಸ್ವಾಮ್ಯ ಹಾಗೂ ಸಂಬಂಧಿಸಿದ ಸಮಸ್ಯೆಗಳಿಗೆ ಮೂಲ ವಾಗಬಹುದು ಎಂಬ ಅನುಮಾನಗಳಿಗೆ ಸ್ಪಷ್ಟವಾದ ಉತ್ತರಗಳನ್ನು ಸರ್ಕಾರ ನೀಡಿಲ್ಲ.
ಈ ಯೋಜನೆಯ ಅನುಷ್ಠಾನವು ಅತ್ಯಂತ ಪಾರದರ್ಶಕವಾಗಿ ಇರಲಿದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ, ಸರ್ಕಾರದ ವ್ಯವಸ್ಥೆಯು ಅಪಾರದರ್ಶಕವಾಗಿ ಇರುವುದಕ್ಕೇ ಕುಖ್ಯಾತವಾಗಿದೆ ಎಂಬುದನ್ನು ಮರೆಯಲಾಗದು. ವರಮಾನ ಸಂಗ್ರಹವಷ್ಟೇ ಈ ಯೋಜನೆಯ ಉದ್ದೇಶ ಅಲ್ಲ; ಸಾರ್ವಜನಿಕ ಸೊತ್ತುಗಳ ದಕ್ಷ ನಿರ್ವಹಣೆಯ ಗುರಿಯೂ ಈ ಯೋಜನೆ ರೂಪಿಸುವಿಕೆಯ ಹಿಂದೆ ಇದೆ. ಹಾಗೆಯೇ, ಈ ಯೋಜನೆಯಿಂದ ದೊರೆತ ಮೊತ್ತವು ಮೂಲಸೌಕರ್ಯ ನಿರ್ಮಾಣಕ್ಕೆ ಬಳಕೆ ಆಗಲಿದೆ ಎಂದು ಹೇಳಲಾಗಿದೆ. ಆದರೆ, ಈ ಮೊತ್ತವನ್ನು ವರಮಾನ ಎಂದು ಸರ್ಕಾರವು ಪರಿಗಣಿಸುವುದರಿಂದ ಯಾವುದೇ ಉದ್ದೇಶಕ್ಕೂ ಅದು ಬಳಕೆ ಆಗಬಹುದಾಗಿದೆ.
ಮೂಲಸೌಕರ್ಯಕ್ಕೆ ಮಾತ್ರ ಹಣ ವಿನಿಯೋಗ ಆಗುವ ರೀತಿಯಲ್ಲಿ ನೋಡಿಕೊಳ್ಳುವುದು ಹೇಗೆ?
ಇಂತಹ ಹಲವು ಪ್ರಶ್ನೆಗಳಿಗೆ ಯೋಜನೆಯ ಅನುಷ್ಠಾನದಲ್ಲಿ ಉತ್ತರ ಸಿಗಲಿದೆ. ಆಸ್ಟ್ರೇಲಿಯಾ, ಸಿಂಗಪುರದಂತಹ ದೇಶಗಳು ಸಾರ್ವಜನಿಕ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಕಾರ್ಯತಂತ್ರವನ್ನು ಅನುಸರಿಸಿವೆ. ಆದರೆ, ಅಲ್ಲಿನ ಅನುಭವವು ಅತ್ಯಂತ ಉತ್ತೇಜಕವಾಗಿಯೇನೂ ಇಲ್ಲ ಎಂಬುದು ನಮ್ಮ ದೇಶದಲ್ಲಿ ಇಂತಹ ಯೋಜನೆ ಅನುಷ್ಠಾನಕ್ಕೆ ಎಚ್ಚರಿಕೆಯಾಗಿ ಪರಿಣಮಿಸಬೇಕು. ನಮ್ಮ ವ್ಯವಸ್ಥೆಯು ದಕ್ಷವಾಗಿ ಕಾರ್ಯನಿರ್ವಹಿಸಿದ ನಿದರ್ಶನಗಳು ಬಹಳ ಕಡಿಮೆ. ಯೋಜನೆಗಳ ಜಾರಿಯಲ್ಲಿ ಭ್ರಷ್ಟಾಚಾರಕ್ಕೆ ಯಥೇಚ್ಛ ಅವಕಾಶಗಳೂ ಇವೆ. ಆಸ್ತಿಗಳ ಮೌಲ್ಯವನ್ನು ಕಡಿಮೆ ಅಂದಾಜು ಮಾಡುವ ಮೂಲಕ ಭ್ರಷ್ಟಾಚಾರ ನಡೆಸಬಹುದು. ಅದಕ್ಷತೆಯ ಕಾರಣಕ್ಕೆ ಸೊತ್ತಿನ ಮೌಲ್ಯವನ್ನು ಹೆಚ್ಚಾಗಿ ಅಂದಾಜು ಮಾಡಿದರೆ ಯೋಜನೆಯೇ ವಿಫಲವಾಗಬಹುದು. ಈ ಎರಡೂ ಅಪಾಯಗಳನ್ನು ಮೀರುವ ರೀತಿಯಲ್ಲಿ ಸರ್ಕಾರವು ಕಾರ್ಯನಿರ್ವಹಿಸಬಹುದೇ ಎಂಬುದು ಪ್ರಶ್ನಾರ್ಹ.
ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿದ್ದ ಸರ್ಕಾರದ ಪಾಲು ಮಾರಾಟವು ದಕ್ಷವಾಗಿ, ಭ್ರಷ್ಟಾಚಾರರಹಿತವಾಗಿ ನಡೆದ ಉದಾಹರಣೆಯೇ ಇಲ್ಲ. ಆಸ್ತಿ ನಗದೀಕರಣವು ಖಾಸಗೀಕರಣದ ರೀತಿಯದ್ದೇ ಯೋಜನೆ ಆಗಿರುವುದರಿಂದ ಈ ಪ್ರಶ್ನೆಯು ಮಹತ್ವದ್ದೇ ಆಗಿದೆ. ‘ಇದು ಹಿಂಬಾಗಿಲಿನ ಖಾಸಗೀಕರಣ, ಸ್ವಜನಪಕ್ಷಪಾತಕ್ಕಾಗಿಯೇ ಈ ಯೋಜನೆ ರೂಪಿಸಲಾಗಿದೆ ಮತ್ತು ಇದು ವಿವೇಚನೆರಹಿತ ಯೋಜನೆ’ ಎಂಬ ಗಂಭೀರ ಆರೋಪಗಳನ್ನು ವಿರೋಧ ಪಕ್ಷಗಳು ಮಾಡಿವೆ. ₹ 6 ಲಕ್ಷ ಕೋಟಿ ಸಂಗ್ರಹಿಸುವ ಉದ್ದೇಶದ ಬೃಹತ್ ಯೋಜನೆಯನ್ನು ರೂಪಿಸುವಾಗ ಇಂತಹ ಆರೋಪಗಳು ಬಾರದಂತೆ ಸರ್ಕಾರ ಎಚ್ಚರ ವಹಿಸಬೇಕಾಗಿತ್ತು. ಸರ್ಕಾರವು ಈ ಪ್ರಶ್ನೆಗಳಿಗೆ ಈಗಲಾದರೂ ಮನವರಿಕೆ ಆಗುವ ರೀತಿಯ ಉತ್ತರವನ್ನು ಜನರಿಗೆ ನೀಡುವುದು ಅಗತ್ಯ. ಯಾಕೆಂದರೆ, ಈ ಎಲ್ಲ ಆಸ್ತಿಗಳು ಜನರ ತೆರಿಗೆ ಹಣದಿಂದಲೇ ನಿರ್ಮಾಣ ಆಗಿವೆ.
ಯೋಜನೆಯ ಕಾರ್ಯಸಾಧುತ್ವದ ಬಗ್ಗೆಯೂ ಹಲವು ಪ್ರಶ್ನೆಗಳು ಇವೆ. ಲಾಭದಾಯಕ ಅಲ್ಲದ ಸೊತ್ತುಗಳನ್ನು ಯಾವ ಖಾಸಗಿ ಕಂಪನಿಯೂ ವಹಿಸಿಕೊಳ್ಳುವುದಿಲ್ಲ. ಅಲ್ಲಿಗೆ ಸಾರ್ವಜನಿಕ ಸೊತ್ತಿನ ದಕ್ಷ ನಿರ್ವಹಣೆಯ ಉದ್ದೇಶವೇ ವಿಫಲವಾಗಬಹುದು. ಈ ವರ್ಷ ₹ 88 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಮಾರುಕಟ್ಟೆಯಿಂದ ಹಣ ಸಂಗ್ರಹಿಸುವ ಉದ್ದೇಶದ ಹಲವು ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿ ಇವೆ. ಹಾಗಾಗಿ, ಈ ಗುರಿಯನ್ನು ಸಾಧಿಸುವ ದಿಸೆಯಲ್ಲಿ ಖಾಸಗಿ ಕಂಪನಿಗಳು ಕೈಜೋಡಿಸುವುದು ಸಾಧ್ಯವೇ? ಜಾಗತಿಕ ಮಟ್ಟದಲ್ಲಿ ಈಗ ಇರುವ ನಗದು ಹರಿವು ದೀರ್ಘಕಾಲ ಉಳಿಯದು. ಹಾಗಾಗಿ, ಯೋಜನೆ ಘೋಷಣೆಯ ಸಮಯವು ಸೂಕ್ತವೇ ಆಗಿದೆ.
ಮುಂಬೈ–ಪುಣೆ ಹೆದ್ದಾರಿಯನ್ನು ಖಾಸಗಿಯವರಿಗೆ ವಹಿಸಿದ ಯಶಸ್ಸಿನ ಕತೆಯೂ ಸರ್ಕಾರದ ಬಳಿ ಇದೆ. ಹಾಗಾಗಿ, ಯೋಜನೆಯು ಯಶಸ್ವಿ ಆಗುವುದೇ ಇಲ್ಲ ಎಂಬ ನಕಾರಾತ್ಮಕ ಯೋಚನೆಯೂ ಅನಗತ್ಯ. ಸಾರ್ವಜನಿಕ ಸೊತ್ತುಗಳು ಖಾಸಗಿಯವರ ನಿರ್ವಹಣೆಗೆ ಹೋದರೆ, ಅದರ ಬಳಕೆಗೆ ಜನರು ನಿರ್ದಿಷ್ಟ ಶುಲ್ಕವನ್ನು ಪಾವತಿಸುವುದು ಅನಿವಾರ್ಯ. ಕೋವಿಡ್ ಕಾಲವು ಜನರ ಆರ್ಥಿಕ ಸಾಮರ್ಥ್ಯವನ್ನು ಉಡುಗಿಸಿದೆ. ತೈಲ ಬೆಲೆಯೇ ಜನರ ಬೆನ್ನೆಲುಬು ಮುರಿದಿದೆ. ಇಂತಹ ಸಂದರ್ಭದಲ್ಲಿ ವಿಧಿಸಬಹುದಾದ ಹೊಸ ಶುಲ್ಕವು ಜನಜೀವನವನ್ನು ಇನ್ನಷ್ಟು ದುಸ್ತರ ಮಾಡುವುದನ್ನು ತಡೆಯುವ ದಿಸೆಯಲ್ಲಿಯೂ ಸರ್ಕಾರವು ಮುತುವರ್ಜಿ ವಹಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.