ADVERTISEMENT

ಸಿಬಿಐ: ಸರ್ಕಾರದ ಸೋಲು ವಿಶ್ವಾಸಾರ್ಹತೆ ಮಣ್ಣುಪಾಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 20:00 IST
Last Updated 26 ಅಕ್ಟೋಬರ್ 2018, 20:00 IST
   

ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸೋತಿರುವುದಕ್ಕೆ ಸಾಕ್ಷಿಯಾಗುವಂತೆ ಸುಪ್ರೀಂ ಕೋರ್ಟ್‌ನ ಮಧ್ಯಂತರ ಆಜ್ಞೆ ಹೊರಬಿದ್ದಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಪರಸ್ಪರರ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿಕೊಂಡ ನಂತರ ಸರ್ಕಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಅನಿರ್ದಿಷ್ಟಾವಧಿ ರಜೆಯ ಮೇಲೆ ಕಳುಹಿಸಿ ಹಂಗಾಮಿ ನಿರ್ದೇಶಕರೊಬ್ಬರನ್ನು ನೇಮಿಸಿತ್ತು. ಕೇಂದ್ರದ ಈ ಕ್ರಮವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವೊಂದನ್ನು ನೀಡಿದೆ. ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ಜಾಗೃತ ಆಯುಕ್ತರು (ಸಿವಿಸಿ) ಅಲೋಕ್ ವರ್ಮಾ ಅವರ ಮೇಲಿನ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಬೇಕು. ಹಂಗಾಮಿ ನಿರ್ದೇಶಕರು ಸಂಸ್ಥೆಯ ದೈನಂದಿನ ಕಾರ್ಯ ನಿರ್ವಹಣೆಯ ಆಚೆಗಿನ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ ಮತ್ತು ಅಲೋಕ್ ವರ್ಮಾ ಅವರನ್ನು ಬದಲಾಯಿಸಿದ ಕ್ಷಣದಿಂದ ಮಧ್ಯಂತರ ಆದೇಶ ಹೊರಬೀಳುವ ತನಕ ಕೈಗೊಂಡ ಎಲ್ಲಾ ನಿರ್ಧಾರಗಳನ್ನೂ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಆದೇಶಿಸಿದೆ. ದೀಪಾವಳಿಯ ರಜೆಯ ನಂತರ ಮತ್ತೆ ವಿಚಾರಣೆಯನ್ನು ಮುಂದುವರಿಸಲಿರುವ ನ್ಯಾಯಾಲಯವು ಸಿಬಿಐ ನಿರ್ದೇಶಕರನ್ನು ರಜೆಯ ಮೇಲೆ ಕಳುಹಿಸಲು ಅನುಸರಿಸಿದ ವಿಧಾನದ ಸಮರ್ಪಕತೆಯೂ ಸೇರಿದಂತೆ ಇತರ ವಿಚಾರಗಳನ್ನು ಪರಿಶೀಲಿಸಲಿದೆ. ಮಧ್ಯಂತರ ಆದೇಶದ ಧ್ವನಿಯನ್ನು ಗ್ರಹಿಸುವುದಾದರೆ ಸರ್ಕಾರ ಇಡೀ ಪ್ರಕರಣವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ನ್ಯಾಯಾಲಯಕ್ಕೂ ಮನದಟ್ಟಾಗಿರುವಂತೆ ಕಾಣಿಸುತ್ತದೆ. ಸಿವಿಸಿ ನಡೆಸುವ ತನಿಖೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಿರುವುದೇ ಇದಕ್ಕೆ ಸಾಕ್ಷಿ.

ಈಗಿನ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರುವ ಮೊದಲು ಸಿಬಿಐಯನ್ನು ‘ಪಂಜರದ ಪಕ್ಷಿ’ ಎಂದು ಹಲವು ಬಾರಿ ಹೇಳಿದ್ದರು. ಅಧಿಕಾರಕ್ಕೆ ಬಂದಮೇಲೆ ಪಂಜರದ ಪಕ್ಷಿಯನ್ನು ಸ್ವತಂತ್ರಗೊಳಿಸುವ ಬದಲಿಗೆ ತಮಗೆ ಬೇಕಿರುವ ಮಾತುಗಳನ್ನಾಡುವ ಪಕ್ಷಿಯನ್ನಾಗಿ ಮಾರ್ಪಡಿಸುವುದಕ್ಕೆ ಅವರು ಆಸಕ್ತಿ ವಹಿಸಿದ್ದೇ ಹೆಚ್ಚು. ರಾಕೇಶ್ ಅಸ್ತಾನಾ ಎಂಬ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯನ್ನು ಸಿಬಿಐಗೆ ತರುವ ಕ್ರಿಯೆಯಲ್ಲೇ ಇದು ಸ್ಪಷ್ಟವಾಗಿದೆ. ಮೊದಲಿಗೆ ಇವರನ್ನೇ ಸಿಬಿಐ ನಿರ್ದೇಶಕರನ್ನಾಗಿಸುವ ಉದ್ದೇಶ ಸರ್ಕಾರಕ್ಕಿತ್ತು. ಆದರೆ ನ್ಯಾಯಾಲಯದ ಮಧ್ಯಪ್ರವೇಶದಿಂದ ಸಾಧ್ಯವಾಗಲಿಲ್ಲ. ಅಲೋಕ್ ವರ್ಮಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿ ರಾಕೇಶ್ ಅವರನ್ನು ವಿಶೇಷ ನಿರ್ದೇಶಕ ಹುದ್ದೆಯಲ್ಲಿ ಕುಳ್ಳಿರಿಸಿತು. ರಾಕೇಶ್ ಮೇಲಿದ್ದ ಭ್ರಷ್ಟಾಚಾರದ ಆರೋಪಗಳನ್ನು ತೋರಿಸಿ ಈ ನೇಮಕಾತಿಯನ್ನು ಅಲೋಕ್ ವರ್ಮಾ ವಿರೋಧಿಸಿದ್ದರು. ಆದರೆ ಇದನ್ನು ಸರ್ಕಾರ ಪರಿಗಣಿಸಿರಲಿಲ್ಲ. ಅಷ್ಟೇ ಅಲ್ಲ, ರಾಕೇಶ್‌ಗೆ ವಿರೋಧ ಪಕ್ಷದ ಹಲವು ರಾಜಕಾರಣಿಗಳ ಮೇಲಿನ ಪ್ರಕರಣ, ವಿಜಯ್ ಮಲ್ಯ ಪ್ರಕರಣ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಒಬ್ಬ ಆರೋಪಿಯಾಗಿರುವ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ಹೊಣೆಯನ್ನು ನೀಡಲಾಗಿತ್ತು. ಭ್ರಷ್ಟಾಚಾರ ಆರೋಪಗಳ ದಾಖಲೆಗಳನ್ನು ಪರಿಗಣಿಸದೆ ನೇಮಕಾತಿ ಮಾಡಿಕೊಂಡು ಆಡಳಿತಾರೂಢರಿಗೆ ವಿಶೇಷ ಆಸಕ್ತಿ ಇರುವ ಪ್ರಕರಣಗಳ ಹೊಣೆ ನೀಡುವುದು ಎಂಥವರಲ್ಲಿಯೂ ಸಂಶಯ ಹುಟ್ಟಿಸುತ್ತದೆ. ಇಷ್ಟರ ಮೇಲೆ ಅಲೋಕ್ ಮತ್ತು ರಾಕೇಶ್ ನಡುವಣ ಜಗಳ ಅವರ ನೇಮಕಾತಿಯಷ್ಟೇ ಹಳೆಯದ್ದು. ಇದು ಪ್ರಧಾನ ಮಂತ್ರಿಯವರಿಗೆ ಗೊತ್ತಿರಲಿಲ್ಲ ಎನ್ನಲು ಸಾಧ್ಯವೇ ಇಲ್ಲ. ತನ್ನ ಕೈ ಕೆಳಗಿನ ಅಧಿಕಾರಿಯ ಮೇಲೆ ಭ್ರಷ್ಟಾಚಾರದ ದೂರೊಂದು ಬಂದಾಗ ಅದನ್ನು ನಿರ್ವಹಿಸಬೇಕಾಗಿರುವುದು ಮೇಲಧಿಕಾರಿಯ ಕರ್ತವ್ಯ. ರಾಕೇಶ್ ಮೇಲಿನ ದೂರುಗಳ ತನಿಖೆಗೆ ಅಲೋಕ್ ವರ್ಮಾ ಮುಂದಾದದ್ದು ಸಹಜವಾದ ಪ್ರಕ್ರಿಯೆ. ಸರ್ಕಾರ ಇಂಥದ್ದೊಂದು ಅನಿವಾರ್ಯ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳಬೇಕಿತ್ತು. ಆದರೆ ‘ತನ್ನ ವ್ಯಕ್ತಿ’ಯನ್ನು ಸಿಬಿಐನಲ್ಲಿ ಉಳಿಸುವುದೇ ಪ್ರಧಾನ ಮಂತ್ರಿಗಳಿಗೆ ಮುಖ್ಯವಾಗಿಬಿಟ್ಟಿತೇ ಎಂಬ ಪ್ರಶ್ನೆಯೂ ಇಲ್ಲಿದೆ. ಸಿಬಿಐನ ಸಾಂಸ್ಥಿಕ ವಿಶ್ವಾಸಾರ್ಹತೆ ಮಣ್ಣುಪಾಲಾಗಿದೆ. ಜೊತೆಗೆ ಸಿಬಿಐ ಒಳಗೆ ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ಸರ್ಕಾರ ಕೈಯಾಡಿಸುವುದೂ ಸ್ಪಷ್ಟವಾಗಿದೆ. ಇನ್ನುಳಿದಿರುವುದು ನ್ಯಾಯಾಲಯದ ವಿಚಾರಣೆಯಿಂದ ಹೊರಬರಬಹುದಾದ ಫಲಿತಾಂಶ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT