ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಕೆಲವರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ಇತ್ತೀಚೆಗೆ ಶೋಧ ನಡೆಸಿದ್ದು, ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದೆ. ಸಿಬಿಐ ತನಿಖೆಯ ಬಳಿಕ ಜಾರಿ ನಿರ್ದೇಶನಾಲಯವೂ (ಇ.ಡಿ.) ತನಿಖೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ್ದ ಸಿಬಿಐ, ಕೋಲ್ಕತ್ತದಿಂದ ಕೋಟ್ಯಂತರ ರೂಪಾಯಿಗಳನ್ನು ಇತ್ತೀಚೆಗೆ ವಶಕ್ಕೆ ಪಡೆದಿತ್ತು. ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವನ್ನು ಪಾರ್ಥ ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಹೊಸ ಅಬಕಾರಿ ನೀತಿ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪವನ್ನು ಸಿಸೋಡಿಯಾ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ, ಸಿಸೋಡಿಯಾ ಮತ್ತು ಇತರರಿಂದ ಹಣ ವಶಕ್ಕೆ ಪಡೆಯಲಾಗಿಲ್ಲ. ಆದರೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ವಿರುದ್ಧ ಬಹುದೊಡ್ಡ ಅಭಿಯಾನವೇ ಆರಂಭವಾಗಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಎಎಪಿ ನಡುವೆ ಲಂಗು ಲಗಾಮಿಲ್ಲದ ರೀತಿಯಲ್ಲಿ ಆರೋಪ–ಪ್ರತ್ಯಾರೋಪ ನಡೆದಿದೆ ಮತ್ತು ಈಗಲೂ ಅದು ಮುಂದುವರಿದಿದೆ. ದಿನದಿಂದ ದಿನಕ್ಕೆ ಹೆಚ್ಚಿನ ತೀವ್ರತೆ ಪಡೆದುಕೊಳ್ಳುತ್ತಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಕಳೆದ ವರ್ಷ ಜಾರಿಗೆ ತಂದು, ಈ ವರ್ಷ ಹಿಂದಕ್ಕೆ ಪಡೆದ ಅಬಕಾರಿ ನೀತಿಯು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿ ಆಪಾದಿಸಿದೆ. ಆದರೆ, ಕೇಂದ್ರದ ಏಜೆಂಟ್ ರೂಪದಲ್ಲಿ ಇರುವ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಈ ನೀತಿಯ ಜಾರಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದ್ದರಿಂದಾಗಿ ಅದನ್ನು ಸರಿಯಾಗಿ ಜಾರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಎಎಪಿ ಹೇಳಿದೆ.
ಸಿಸೋಡಿಯಾ ತಪ್ಪು ಮಾಡಿದ್ದಾರೆಯೇ ಇಲ್ಲವೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಲಿದೆ. ಆದರೆ, ಕೇಂದ್ರದ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಕೆಲಸ ಮಾಡುತ್ತಿವೆ ಎಂಬುದು ಬಹಳ ಸ್ಪಷ್ಟ. ಈ ಸಂಸ್ಥೆಗಳು ನಡೆಸುವ ಶೋಧ ಕಾರ್ಯಾಚರಣೆಗಳಿಗೆ ವ್ಯಾಪಕ ಪ್ರಚಾರ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಹೀಗೆ ಶೋಧಕ್ಕೆ ಒಳಗಾಗುವ ವ್ಯಕ್ತಿಗಳು ಭ್ರಷ್ಟರು, ಅಪರಾಧಿಗಳು ಎಂದು ಬಿಂಬಿಸುವ ವ್ಯವಸ್ಥಿತ ಕಾರ್ಯಾಚರಣೆಯೂ ನಡೆಯುತ್ತಿದೆ. ಚುನಾಯಿತ ಸರ್ಕಾರವು ತನಗೆ ಸರಿ ಎನಿಸಿದ ನೀತಿಯನ್ನು ಅನುಸರಿಸುವ ಹಕ್ಕನ್ನು ಹೊಂದಿದೆ. ಸರ್ಕಾರದ ನೀತಿಯೊಂದನ್ನು ರಾಜಕೀಯವಾಗಿ ವಿರೋಧಿಸಬಹುದು. ಆದರೆ, ನೀತಿಯನ್ನೇ ಅಪರಾಧ ಎಂದು ಪರಿಗಣಿಸಿ ತನಿಖೆಗೆ ಒಳಪಡಿಸುವ ಮೂಲಕ ತೊಂದರೆ ಕೊಡುವುದು ರಾಜಕೀಯ ದ್ವೇಷ ಸಾಧನೆ ಎನಿಸಿಕೊಳ್ಳುತ್ತದೆ. ಅತ್ಯುತ್ತಮ ನೀತಿಯ ಅನುಷ್ಠಾನದಲ್ಲಿ ಕೂಡ ಭ್ರಷ್ಟಾಚಾರ ನಡೆಯಬಹುದು. ಹಾಗಾಗಿ, ಎಲ್ಲ ತನಿಖೆಗಳೂ ತಪ್ಪು ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈವರೆಗೆ ನಡೆದುಕೊಂಡ ರೀತಿ ಮತ್ತು ತನಿಖೆಗಳ ಹಿನ್ನೆಲೆಯು ತನಿಖೆಯ ಉದ್ದೇಶದ ಬಗ್ಗೆಯೇ ಸಂದೇಹ ಮೂಡಿಸುತ್ತವೆ.
ವಿರೋಧ ಪಕ್ಷಗಳಲ್ಲಿರುವ ರಾಜಕಾರಣಿಗಳು ಮತ್ತು ಸರ್ಕಾರದ ಟೀಕಾಕಾರರ ವಿರುದ್ಧ ಸಿಬಿಐ, ಇ.ಡಿ. ಮೂಲಕ ತನಿಖೆ ಮಾಡಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಮಾದಕ ಪದಾರ್ಥ ನಿಯಂತ್ರಣ ಘಟಕವನ್ನೂ ಈ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ತನಿಖಾ ಸಂಸ್ಥೆಗಳ ದುರ್ಬಳಕೆ ಅತ್ಯಂತ ಸಾಮಾನ್ಯವೂ ನಿರ್ಲಜ್ಜ ರೀತಿಯದ್ದೂ ಆಗಿದೆ. ಸಮತೋಲನ ಕಾಯ್ದುಕೊಳ್ಳುವ ವ್ಯವಸ್ಥೆಗಳು ದುರ್ಬಲವಾದರೆ, ಸರ್ಕಾರದ ಇಂತಹ ಆಕ್ರಮಣಕಾರಿ ಕ್ರಮಗಳಿಂದಾಗುವ ಹಾನಿ ಹೆಚ್ಚುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸ್ ಬಲದಿಂದ ರಾಜಕಾರಣ ನಡೆಸಬಾರದು. ಸಿಸೋಡಿಯಾ ಮತ್ತು ಇತರರು ಪ್ರಾಮಾಣಿಕರೇ ಅಥವಾ ತಪ್ಪಿತಸ್ಥರೇ ಎಂಬುದನ್ನು ಬದಿಗಿಟ್ಟೇ ಮಾತನಾಡಿದರೂ ಸರ್ಕಾರ ಕೈಗೊಂಡಿರುವ ಕ್ರಮವು ಸೇಡಿನ ಕ್ರಮದಂತೆ ಕಾಣಿಸುತ್ತಿದೆಯೇ ಹೊರತು ತಪ್ಪಿನ ವಿರುದ್ಧ ವಿಶ್ವಾಸಾರ್ಹವಾದ ಕ್ರಮ ಎಂದು ಅನಿಸುವುದಿಲ್ಲ. ಎಎಪಿ ಒಡೆದು ಬಂದರೆ ಪ್ರಕರಣವನ್ನು ಕೈಬಿಡಲಾಗುವುದು ಎಂಬ ಸಂದೇಶ ಬಿಜೆಪಿಯಿಂದ ಬಂದಿದೆ ಎಂದು ಸಿಸೋಡಿಯಾ ಆರೋಪ ಮಾಡಿದ್ದಾರೆ. ಪಕ್ಷ ತೊರೆದರೆಎಎಪಿ ಶಾಸಕರಿಗೆ ತಲಾ ₹5 ಕೋಟಿ ನೀಡುವ ಆಮಿಷವನ್ನು ಬಿಜೆಪಿ ಒಡ್ಡಿದೆ ಎಂದು ಎಎಪಿ ಆರೋಪಿಸಿದೆ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಲಾಗದು. ಏಕೆಂದರೆ, ಸಿಬಿಐ ಮತ್ತು ಇ.ಡಿ. ತನಿಖೆಗೆ ಒಳಗಾದ ವಿವಿಧ ಪಕ್ಷಗಳ ಮುಖಂಡರು ತಮ್ಮ ಮೂಲ ಪಕ್ಷವನ್ನು ಬಿಟ್ಟು ಬಿಜೆಪಿಗೆ ಹೋದ ಉದಾಹರಣೆಗಳು ನಮ್ಮ ಮುಂದೆ ಬಹಳಷ್ಟಿವೆ. ಎಎಪಿ ಹೇಳುತ್ತಿರುವ ಇನ್ನೊಂದು ವಿಚಾರವನ್ನೂ ತಳ್ಳಿಹಾಕುವಂತಿಲ್ಲ. ಗುಜರಾತ್‌ನಲ್ಲಿ ಎಎಪಿ ನೆಲೆ ವಿಸ್ತರಿಸಿಕೊಂಡಿದ್ದು, ಈ ವರ್ಷದ ಕೊನೆಗೆ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಸೋಲುವ ಭೀತಿ ಬಿಜೆಪಿಗೆ ಎದುರಾಗಿದೆ ಎಂದು ಎಎಪಿ ಹೇಳುತ್ತಿದೆ. ಎಎಪಿಯ ವಿರುದ್ಧ ಬಿಜೆಪಿ ಮುಖಂಡರು ಮಾಡುತ್ತಿರುವ ವಾಗ್ದಾಳಿ ಗಮನಿಸಿದರೆ ಇದು ಕೂಡ ತಳ್ಳಿಹಾಕುವಂತಹ ವಿಚಾರ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.