ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯ ಜತೆಗೆ ಸಂಯೋಜಿಸುವುದಕ್ಕಾಗಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ– 2021ಕ್ಕೆ ಸಂಸತ್ತು ಅನುಮೋದನೆ ನೀಡಿದೆ. ಕಾಂಗ್ರೆಸ್, ಡಿಎಂಕೆ ಮತ್ತು ಟಿಎಂಸಿ ಸದಸ್ಯರು ಲೋಕಸಭೆಯಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ನಿಂತು ವಿವಿಧ ವಿಷಯಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾಗ, ಯಾವುದೇ ಚರ್ಚೆ ನಡೆಸದೆ ಮಸೂದೆಗೆ ಒಪ್ಪಿಗೆ ಕೊಡಲಾಗಿದೆ. ಇಂತಹ ಕಾಯ್ದೆ ಬೇಕು ಎಂಬ ಬೇಡಿಕೆಯನ್ನು ಚುನಾವಣಾ ಆಯೋಗವು 2015ರಲ್ಲಿಯೇ ಸರ್ಕಾರದ ಮುಂದೆ ಇರಿಸಿತ್ತು. ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವವರನ್ನು ಗುರುತಿಸಿ, ಹೆಚ್ಚುವರಿ ಚೀಟಿ ಗಳನ್ನು ರದ್ದು ಮಾಡುವುದು ಮತ್ತು ನಕಲಿ ಮತದಾನವನ್ನು ತಡೆಯುವುದಕ್ಕೆ ಇದು ಅಗತ್ಯ ಎಂದು ಆಯೋಗವು ಪ್ರತಿಪಾದಿಸಿತ್ತು. ಈಗ, ಈ ತಿದ್ದುಪಡಿಯನ್ನು ತರುವುದಕ್ಕೆ ಸರ್ಕಾರ ಕೂಡ ಇದೇ ಕಾರಣ ಗಳನ್ನು ಮುಂದಿಟ್ಟಿದೆ.
ಎಷ್ಟು ಅನುಕೂಲ ಇದೆ ಮತ್ತು ಎಷ್ಟು ಅನನುಕೂಲ ಇದೆ ಎಂಬುದನ್ನು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲೇ ಸಮಗ್ರವಾಗಿ ಚಿಂತಿಸಬೇಕು. ಅನುಕೂಲವು ಗರಿಷ್ಠ ಪ್ರಮಾಣದಲ್ಲಿಯೂ ಅನನು ಕೂಲವು ಕನಿಷ್ಠ ಪ್ರಮಾಣದಲ್ಲಿಯೂ ಇದ್ದರೆ ಮಾತ್ರ ಅಂತಹ ನಿರ್ಧಾರವು ಜನಪರ ಎನಿಸಿಕೊಳ್ಳ ಬಹುದು. ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಮಸೂದೆಗಳ ವಿಚಾರದಲ್ಲಿ ಅನನುಕೂಲ ಕನಿಷ್ಠ ಪ್ರಮಾಣದಲ್ಲಷ್ಟೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ಮತದಾರರ ಚೀಟಿಯ ಜತೆಗೆ ಆಧಾರ್ ಸಂಖ್ಯೆ ಸಂಯೋಜನೆಯ ವಿಚಾರದಲ್ಲಿ ಈ ರೀತಿ ಆಗಿಲ್ಲ ಎಂದು ಹೇಳಬೇಕಾಗುತ್ತದೆ. ಇಂತಹ ತಿದ್ದುಪಡಿಯನ್ನು ಸದನ ಸಮಿತಿಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಆಗ್ರಹವು ಸಕಾರಣದ್ದೇ ಆಗಿದೆ. ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮ ಎಂಬ ಯೋಜನೆಯ ಮೂಲಕ ಮತದಾರರ ಗುರುತು ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಸಂಯೋಜಿಸುವ ಕೆಲಸವನ್ನು ಚುನಾವಣಾ ಆಯೋಗವು 2015ರಲ್ಲಿ ಆರಂಭಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಕಾರ್ಯಕ್ರಮಕ್ಕೆ 2015ರಲ್ಲಿಯೇ ತಡೆ ಕೊಟ್ಟಿತ್ತು. ಈಗ ತಿದ್ದುಪಡಿ ಮಸೂದೆ ಮೂಲಕ ಸುಪ್ರೀಂ ಕೋರ್ಟ್‌ನ ತಡೆಯನ್ನು ಮೀರುವ ಯತ್ನವನ್ನು ಸರ್ಕಾರ ಮಾಡಿದಂತಿದೆ.
ಮತದಾರರ ಚೀಟಿಗೆ ಆಧಾರ್ ಸಂಖ್ಯೆ ಸಂಯೋಜನೆಯ ವಿಚಾರದಲ್ಲಿ ಇರುವ ಹಲವು ಗೊಂದಲಗಳನ್ನು ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಮೊದಲನೆಯದಾಗಿ, ಆಧಾರ್ ಕಾಯ್ದೆಯು ಸೌಲಭ್ಯಗಳು ಮತ್ತು ಸಹಾಯಧನವನ್ನು ಅರ್ಹ
ಫಲಾನುಭವಿಗಳಿಗೆ ನೀಡುವುದಕ್ಕಾಗಿ ಇರುವ ವ್ಯವಸ್ಥೆ. ಕಾಯ್ದೆಯ ಹೆಸರೇ ಹೀಗಿದೆ: ಆಧಾರ್ (ಹಣಕಾಸು ಮತ್ತು ಇತರ ಸಹಾಯಧನಗಳು, ಪ್ರಯೋಜನಗಳು ಮತ್ತು ಸೌಲಭ್ಯಗಳನ್ನು ಗುರಿಕೇಂದ್ರಿತವಾಗಿ ಒದಗಿಸುವಿಕೆ) ಕಾಯ್ದೆ– 2016. ಈ ಕಾಯ್ದೆಯ ವ್ಯಾಪ್ತಿ ಇಷ್ಟು ಮಾತ್ರ. ಪ್ರಜಾಪ್ರಭುತ್ವದ ತಳಹದಿಯಾದ ಮತದಾನದಂತಹ ವಿಚಾರಕ್ಕೆ ಆಧಾರ್ ವ್ಯವಸ್ಥೆಯನ್ನು ಬಳಸಿಕೊಳ್ಳಲು ಆಧಾರ್ ಕಾಯ್ದೆಯು ಅವಕಾಶ ಕೊಡುವುದಿಲ್ಲ. ಆಧಾರ್ ಕಾಯ್ದೆಯಲ್ಲಿಯೇ ಹೇಳುವಂತೆ, ಭಾರತದಲ್ಲಿ ನೆಲೆಸಿರುವ ಯಾರು ಬೇಕಿದ್ದರೂ ಆಧಾರ್ ನೋಂದಣಿ ಮಾಡಿಸಿಕೊಳ್ಳಬಹುದು. ಅವರು ಈ ದೇಶದ ಪ್ರಜೆ ಆಗಿರಬೇಕು ಎಂದಿಲ್ಲ. ಆದರೆ, ಮತದಾನದ ಹಕ್ಕು ಇರುವುದು ಈ ದೇಶದ ಪೌರರಿಗೆ ಮಾತ್ರ. ಹಾಗಾಗಿ, ಮತದಾರರ ಚೀಟಿಯ ಜತೆಗೆ ಆಧಾರ್ ಸಂಯೋಜನೆಯು ವಿರೋಧಾಭಾಸಕರ ಎನಿಸುತ್ತದೆ.
ಮತದಾರರ ಗುರುತು ಚೀಟಿಯ ಮಾಹಿತಿಯು ಚುನಾವಣಾ ಆಯೋಗದ ಸುಪರ್ದಿಯಲ್ಲಿಯೂ ಆಧಾರ್ ದತ್ತಾಂಶವು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಬಳಿಯೂ ಇರುತ್ತದೆ. ಆಧಾರ್ ದತ್ತಾಂಶವನ್ನು ಆಯೋಗವು ಬಳಸಿಕೊಳ್ಳುವುದಕ್ಕೆ ಕಾನೂನಾತ್ಮಕವಾಗಿ ಯಾವ ವ್ಯವಸ್ಥೆಯನ್ನೂ ಸರ್ಕಾರ ಮಾಡಿಕೊಂಡಿಲ್ಲ ಎನಿಸುತ್ತದೆ. ಏಕೆಂದರೆ ಈ ವಿಚಾರ ಸಂಬಂಧ ಆಧಾರ್ ಕಾಯ್ದೆಗೆ ಯಾವ ತಿದ್ದುಪಡಿಯನ್ನೂ ತಂದಿಲ್ಲ. ಹಾಗಾಗಿ, ಆಧಾರ್ ದತ್ತಾಂಶವನ್ನು ಆಯೋಗವು ಬಳಸಿಕೊಳ್ಳುವುದು ಕಾನೂನುಬಾಹಿರ ಎನಿಸಿಕೊಳ್ಳುವುದಿಲ್ಲವೇ? ಆಧಾರ್ ದತ್ತಾಂಶವು ಸೋರಿಕೆಯಾಗಿ, ರಾಜಕೀಯ ಪಕ್ಷಗಳು ಅದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಉಂಟಾಗಬಹುದು. ಉದ್ದೇಶಪೂರ್ವಕವಾಗಿ ಯಾವುದೇ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಗಗಳ, ಗುಂಪುಗಳ ಹೆಸರುಗಳನ್ನು ಮತದಾರರ ಚೀಟಿಯಿಂದ ಅಳಿಸಿಹಾಕಲು ಕೂಡ ಆಧಾರ್ ಸಂಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ದಲ್ಲಿ ಗಣ್ಯರೂ ಸೇರಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿತ್ತು. ರಹಸ್ಯ ಮತದಾನದ ಪಾವಿತ್ರ್ಯವನ್ನೇ ಇದು ಕೆಡಿಸಬಹುದು ಎಂದು ರಾಜಕೀಯ ಪಕ್ಷಗಳ ಕೆಲವು ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆ ಎಂಬುದನ್ನು ಕಂಡುಕೊಳ್ಳಲು ಆಧಾರ್ ಸಂಯೋಜನೆ ಬಳಕೆಯಾದರೆ ಅಚ್ಚರಿ ಏನಿಲ್ಲ. ಆಧಾರ್ ಸಂಖ್ಯೆಯನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸಂಯೋಜನೆಯು ಕಡ್ಡಾಯವಲ್ಲ ಎಂದು ಸರ್ಕಾರವು ಹೇಳುತ್ತಿದೆ, ಕಡ್ಡಾಯ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಆದರೆ, ಕಡ್ಡಾಯವಲ್ಲ ಎಂಬ ಉಲ್ಲೇಖ ತಿದ್ದುಪಡಿ ಮಸೂದೆಯಲ್ಲಿ ಇಲ್ಲವೇ ಇಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲವೂ ಆಧಾರ್ ಜೋಡಣೆ ಮಾಡಿಸಬೇಕು ಎಂಬುದು ಈಗಿನ ಸರ್ಕಾರದ ಧೋರಣೆಯಾಗಿದೆ. ಮತ ಚಲಾವಣೆಯಂತಹ ಮಹತ್ವದ ವಿಚಾರದಲ್ಲಿ ದೂರಗಾಮಿ ಪರಿಣಾಮ ಬೀರುವ ಬದಲಾವಣೆ ತರುವಾಗಲೂ ಚರ್ಚೆಯನ್ನೇ ನಡೆಸಲಾಗಿಲ್ಲ. ಹಲವು ಲೋಪಗಳಿರುವ ತಿದ್ದುಪಡಿಯು ಸರಿಯಾದ ಕ್ರಮ ಅಲ್ಲ. ಸರ್ಕಾರವು ಈ ಬಗ್ಗೆ ಮರುಚಿಂತನೆ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.