ADVERTISEMENT

ಸಂಪಾದಕೀಯ | ಸಿಇಟಿ: ವಿಳಂಬವಿಲ್ಲದೆ ಪರಿಹಾರ ಸೂತ್ರ ಪ್ರಕಟಿಸಿ

ಸಂಪಾದಕೀಯ
Published 22 ಏಪ್ರಿಲ್ 2024, 19:08 IST
Last Updated 22 ಏಪ್ರಿಲ್ 2024, 19:08 IST
ಸಂಪಾದಕೀಯ
ಸಂಪಾದಕೀಯ   

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪ್ರಶ್ನೆಪತ್ರಿಕೆಗಳು ಉಂಟು ಮಾಡಿರುವ ಗೊಂದಲದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯದ ನಡುವೆ ಸಂವಹನದ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಏಪ್ರಿಲ್‌ 18 ಮತ್ತು 19ರಂದು ನಡೆದ ಸಿಇಟಿ ಪ್ರಶ್ನೆಪತ್ರಿಕೆಗಳಲ್ಲಿ 59 ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿದ್ದುದು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಹಜವಾಗಿಯೇ ಆತಂಕಕ್ಕೆ ದೂಡಿದೆ. ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳು ಪರೀಕ್ಷಾರ್ಥಿಗಳನ್ನು ಗಾಬರಿ ಮತ್ತು ಗೊಂದಲಕ್ಕೀಡು ಮಾಡಿದ್ದು, ಆ ಪ್ರಶ್ನೆಗಳನ್ನು ಬಿಡಿಸುವ ಪ್ರಯತ್ನದಲ್ಲಿ ಸಮಯ ವ್ಯರ್ಥವಾಗಿದೆ.

ಈ ಮೊದಲು ಕೂಡ ಸಿಇಟಿಯಲ್ಲಿ ಒಂದೆರಡು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಗೊಂದಲಗಳು ತಲೆದೋರಿರುವುದಿದೆ. ಅಂಥ ಸಂದರ್ಭಗಳಲ್ಲಿ ಕೃಪಾಂಕಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿಯ ಸಿಇಟಿಯಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಪ್ರಶ್ನೆಗಳು ಪಠ್ಯಕ್ರಮಕ್ಕೆ ಹೊರತಾಗಿದ್ದು, ಇಷ್ಟೊಂದು ಪ್ರಶ್ನೆಗಳಿಗೆ ಕೃಪಾಂಕ ನೀಡುವುದು ಪರೀಕ್ಷಾ ಪ್ರಕ್ರಿಯೆಯನ್ನೇ ಅಣಕಿಸಿದಂತಾಗುತ್ತದೆ. ಸದ್ಯದ ಸಂದರ್ಭದಲ್ಲಿ ಮರುಪರೀಕ್ಷೆ ನಡೆಸುವುದು ಕೂಡ ವಿದ್ಯಾರ್ಥಿಗಳ ಮನಃಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು. 2022–24ರ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮಗಳನ್ನು ಪರಿಷ್ಕರಿಸಲಾಗಿದ್ದು, ಬದಲಾದ ಪಠ್ಯಕ್ಕೆ ಅನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. 

ವಿವಾದಾಸ್ಪದ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದಂತೆ ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಡುವೆ ತಾಳಮೇಳ ಸರಿಯಿಲ್ಲದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 2023ರ ಜೂನ್‌ನಲ್ಲೇ ಪಠ್ಯ ಪರಿಷ್ಕರಣೆ ಕುರಿತಂತೆ ಉಭಯ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯ ನಡೆದಿದೆ; ಕೆಇಎ ಗಮನಕ್ಕೆ ತಂದ ನಂತರವೇ ಪರಿಷ್ಕೃತ ಪಠ್ಯಕ್ರಮದಂತೆ ಮಕ್ಕಳಿಗೆ ಸಿಇಟಿ ಮಾರ್ಗದರ್ಶನ ನೀಡುವಂತೆ ಪಿಯು ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಪ್ರಕ್ರಿಯೆಗಳ ನಂತರವೂ ಹಳೆಯ ಪಠ್ಯಕ್ರಮದಂತೆ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿರುವ ಪರೀಕ್ಷಾ ಪ್ರಾಧಿಕಾರದ ನಡವಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದ ಈ ನಿರ್ಲಕ್ಷ್ಯ ಗಂಭೀರವಾದುದು. ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಲ್ಲಿ ಉಂಟಾಗಿರುವ ಲೋಪದ ಹೊಣೆ ಪರೀಕ್ಷಾ ಪ್ರಾಧಿಕಾರದ್ದೇ ಆದರೂ ವಿದ್ಯಾರ್ಥಿಗಳಿಗೆ ಆಗಿರುವ ಅನನುಕೂಲದ ಹೊಣೆಯನ್ನು ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯವೂ ಹೊರಬೇಕಾಗುತ್ತದೆ. ರಾಜ್ಯದ ಹಂತದಲ್ಲಿ ಆಗಿರುವ ಪಠ್ಯ ಪರಿಷ್ಕರಣೆಯ ಕಾರಣದಿಂದಾಗಿ, ರಾಜ್ಯಕ್ಕೆ ಸೀಮಿತವಾದ ಸಿಇಟಿ ಬರೆಯುವ ಮಕ್ಕಳಿಗೆ ಕಡಿತಗೊಂಡ ಪಠ್ಯ ಹಾಗೂ ರಾಷ್ಟ್ರೀಯ ಮಟ್ಟದ ‘ನೀಟ್‌’ ಬರೆಯುವ ವಿದ್ಯಾರ್ಥಿಗಳಿಗೆ ಕಡಿತಗೊಳ್ಳದ ಪೂರ್ಣಪ್ರಮಾಣದ ಪಠ್ಯ ಎನ್ನುವಂತಾಗಿದೆ. ಇದರಿಂದಾಗಿ, ಒಂದೇ ತರಗತಿಯಲ್ಲಿ ಎರಡು ಪಠ್ಯಕ್ರಮಗಳನ್ನು ಬೋಧಿಸುವ ಒತ್ತಡ ಹಾಗೂ ಗೊಂದಲ ಉಪನ್ಯಾಸಕರದ್ದಾಗಿದೆ.

ADVERTISEMENT

ಇವೆಲ್ಲ ಗೊಂದಲಗಳು ಪ್ರಸಕ್ತ ಸಿಇಟಿ ಪರೀಕ್ಷೆಗಳಲ್ಲಿನ ಎಡವಟ್ಟುಗಳಿಗೆ ಕಾರಣವಾದಂತಿವೆ. ಸಿಇಟಿ ಪ್ರಶ್ನೆಗಳಿಗೆ ಸಂಬಂಧಿಸಿದ ಆಕ್ಷೇಪಗಳ ಪರಿಶೀಲನೆಗೆ ವಿಷಯವಾರು ತಜ್ಞರ ನಾಲ್ಕು ಸಮಿತಿಗಳನ್ನು ಉನ್ನತ ಶಿಕ್ಷಣ ಇಲಾಖೆಯು ನೇಮಿಸಿದೆ. ಸಿಇಟಿ ಬರೆದಿರುವ ಮೂರು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆತಂಕವನ್ನು ಪರಿಹರಿಸುವ ದಿಸೆಯಲ್ಲಿ ವಿಳಂಬವಿಲ್ಲದೆ ಸೂಕ್ತ ಪರಿಹಾರವನ್ನು ಈ ಸಮಿತಿಗಳು ಶಿಫಾರಸು ಮಾಡಬೇಕು. ಸಮಿತಿಗಳ ಶಿಫಾರಸುಗಳ ಆಧಾರದಲ್ಲಿ ಸರ್ಕಾರವು ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಹಾಗೆಯೇ ಇಷ್ಟೆಲ್ಲ ಗೊಂದಲಕ್ಕೆ ಕಾರಣರಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದೂ ಅಗತ್ಯ. ಇಂತಹ ಪ್ರಮಾದಗಳು ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳದೇ ಹೋದರೆ ಸಿಇಟಿ ಪ್ರಕ್ರಿಯೆಯೇ ನಗೆಪಾಟಲಿಗೀಡಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.