2019ರಲ್ಲಿ ಭಾರತದ ಕ್ರೀಡಾಸಾಧನೆಗಳ ಕಿರೀಟಕ್ಕೆ ಮತ್ತೊಂದು ಚಿನ್ನದ ಗರಿ ಸೇರಿಕೊಂಡಿದೆ. ಮಾಸ್ಕೊದಲ್ಲಿ ಶನಿವಾರ ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೆರುಹಂಪಿ ಅವರು ಜಯಿಸಿದ ಚಿನ್ನದ ಪದಕದಿಂದ ಈ ಗರಿ ಮೂಡಿದೆ.
ಈ ಸಾಧನೆ ಮಾಡಿದ ದೇಶದ ಮೊದಲ ಮಹಿಳಾ ಚೆಸ್ ಪಟು ಅವರು. ಗ್ರ್ಯಾಂಡ್‌ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಎರಡು ವರ್ಷಗಳ ಹಿಂದೆ ಈ ಮಾದರಿಯಲ್ಲಿ ಚಾಂಪಿಯನ್ ಆಗಿದ್ದರು. ಅವರ ನಂತರ ಈ ಸಾಧನೆ ಮಾಡಿದ ಭಾರತೀಯ ಆಟಗಾರ್ತಿ ಹಂಪಿ.
ಆಂಧ್ರಪ್ರದೇಶದವರಾದ ಹಂಪಿ ಅವರ ಹೆಸರಿನಲ್ಲಿ ಈಗಾಗಲೇ ಹಲವು ಪ್ರಥಮಗಳು ಇವೆ. ಅವರು ಗ್ರ್ಯಾಂಡ್‌ಮಾಸ್ಟರ್ ಪಟ್ಟ ಪಡೆದ ಭಾರತದ ಮೊದಲ ಆಟಗಾರ್ತಿ. ಮಾಸ್ಕೊದ ಈ ವಿಜಯ ಅವರಿಗೆ ವಿಶೇಷವಾದದ್ದು. 2016ರಲ್ಲಿ ತಾಯಿಯಾದ ಅವರು ಮಗುವಿನ ಆರೈಕೆಗಾಗಿ ಹೆಚ್ಚು ಸಮಯವನ್ನು ವಿನಿಯೋಗಿಸಿದ್ದರು. 2018ರ ಅಂತ್ಯದಲ್ಲಿ ಸ್ಪರ್ಧಾತ್ಮಕ ಚೆಸ್‌ಗೆ ಮರಳಿದರು. ನಂತರದ ಈ ಅಲ್ಪಾವಧಿಯಲ್ಲೇ ಈ ಸಾಧನೆ ಮಾಡಿದ್ದಾರೆ.
ಟೈಬ್ರೇಕರ್‌ನಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿರುವುದು ಸಣ್ಣ ಸಾಧನೆಯಲ್ಲ. 12 ಸುತ್ತುಗಳಲ್ಲಿ 9 ಅಂಕ ಗಳಿಸಿದ್ದ ಮೂವರಲ್ಲಿ ಹಂಪಿ ಒಬ್ಬರಾಗಿದ್ದರು. ಆದ್ದರಿಂದ ಅವರು ಟೈಬ್ರೇಕರ್‌ನಲ್ಲಿ ಆಡಬೇಕಾಯಿತು. ಇದರ ಆರಂಭಿಕ ಸುತ್ತಿನಲ್ಲಿ ಸೋತರೂ ನಂತರದ ಸುತ್ತುಗಳಲ್ಲಿ ಪುಟಿದೆದ್ದ ರೀತಿ ಅನನ್ಯ.
ಸಾಂಪ್ರದಾಯಿಕ ಶೈಲಿಯ ಚೆಸ್‌ಗಿಂತಲೂ ರ‍್ಯಾಪಿಡ್ ಮಾದರಿಯು ಭಿನ್ನ. ಇದು ವೇಗದ ಆಟ. ಗರಿಷ್ಠ 30 ನಿಮಿಷಗಳಲ್ಲಿ ಪಂದ್ಯ ಮುಗಿಯುತ್ತದೆ. ಕ್ಲಾಸಿಕಲ್ ಮಾದರಿಯ ಬುದ್ಧಿಮತ್ತೆಯ ಜೊತೆಗೆ ಹೆಚ್ಚು ಚುರುಕುತನ ಅಗತ್ಯ. ಹೆಚ್ಚು ಕರಾರುವಾಕ್ ಆಗಿ ಆಡುವವರೇ ವಿಜೇತರಾಗುವ ಸಾಧ್ಯತೆ ಹೆಚ್ಚು. 2014ರಲ್ಲಿ ಈ ಮಾದರಿ ಆರಂಭವಾದಾಗ ಕೆಲವರಿಂದ ಟೀಕೆಗಳೂ ಕೇಳಿಬಂದಿದ್ದವು. ಇದು ಮನರಂಜನೆಗಷ್ಟೇ ಸೀಮಿತ ಎಂದು ಹೇಳಿದ್ದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಕೂಡ ಹಂಪಿ ಆಡಿದ್ದ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು.
ಕ್ರಿಕೆಟ್‌ನಲ್ಲಿ ಟ್ವೆಂಟಿ–20 ಮಾದರಿಯ ರೀತಿಯಲ್ಲಿಯೇ ರ‍್ಯಾಪಿಡ್ ಮತ್ತು ಬ್ಲಿಟ್ಜ್ (ಗರಿಷ್ಠ 5 ನಿಮಿಷದ ಅವಧಿ) ಹೆಚ್ಚು ಜನಪ್ರಿಯವಾಗುತ್ತಿವೆ. ಭಾರತದ ಆಟಗಾರರೂ ಈ ಮಾದರಿಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆದರೆ,ಮೂಲ ಮಾದರಿಯಲ್ಲಿ ಪರಿಣತರಾದವರೇ ಇಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಆನಂದ್ ಮತ್ತು ಹಂಪಿ ಅವರ ಸಾಧನೆಯೇ ಇದಕ್ಕೆ ನಿದರ್ಶನ. ಅದರಲ್ಲೂ ಹಂಪಿಯವರದು ದೇಶದ ಸ್ತ್ರೀಕುಲದ ಆತ್ಮಸ್ಥೈರ್ಯ ಹೆಚ್ಚಿಸುವ ಸಾಧನೆಯಾಗಿದೆ.
ಹಂಪಿಯವರು 15ನೇ ವಯಸ್ಸಿನಲ್ಲಿಯೇ ಗ್ರ್ಯಾಂಡ್‌ಮಾಸ್ಟರ್ ಆಗಿದ್ದವರು. ಈ ಪಟ್ಟಕ್ಕೇರಿದ ಅತಿ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. ಆಗ ಅವರು ಹಂಗೆರಿಯ ಜುಡಿತ್ ಪೋಲ್ಗಾರ್ ಅವರನ್ನು ಸೋಲಿಸಿದ್ದರು. ದೇಶದ ಮಹಿಳಾ ಚೆಸ್ ಕ್ಷೇತ್ರದ ಮಟ್ಟಿಗೆ ತಾರೆಯಾಗಿ ಬೆಳೆದರು. ಅವರ ಸಮಕಾಲೀನರಾದ ವಿಜಯಲಕ್ಷ್ಮಿ ಸುಬ್ಬರಾಮನ್,ಮೀನಾಕ್ಷಿ ಸುಬ್ಬರಾಮನ್,ಆರತಿ ರಾಮಸ್ವಾಮಿ ಅವರು ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ಗಳಾದರು. ಹಂಪಿ ತಮ್ಮ ಸಮಕಾಲೀನರ ಪೈಪೋಟಿಯನ್ನೂ ಎದುರಿಸಿ,ಏಷ್ಯಾ ಮತ್ತು ವಿಶ್ವ ಮಟ್ಟದಲ್ಲಿ ಸಾಧನೆ ಮೆರೆದರು. ಇದೀಗ ಅವರ ಎರಡನೇ ಇನಿಂಗ್ಸ್ ಶುರುವಾಗಿದೆ.
ಅವರಿಂದ ಇನ್ನಷ್ಟು ಸಾಧನೆ ಹೊರಹೊಮ್ಮುವ ವಿಶ್ವಾಸ ಮೂಡಿದೆ. ವೇಗದ ಚೆಸ್ ಮಾದರಿಗಳಿಗೆ ಅಖಿಲ ಭಾರತ ಚೆಸ್ ಫೆಡರೇಷನ್ ಪ್ರೋತ್ಸಾಹ ನೀಡಬೇಕು. ಚೆಸ್ ಕ್ರೀಡೆಗೆ ಭಾರತವೇ ತಾಯ್ನೆಲ. ಆರನೇ ಶತಮಾನದಲ್ಲಿ ಇಲ್ಲಿ ಈ ಕ್ರೀಡೆ ಆರಂಭವಾಯಿತು ಎಂದು ದಾಖಲೆಗಳು ಹೇಳುತ್ತವೆ. ಆದರೆ ದೇಶಕ್ಕೆ ಮೊದಲ ಗ್ರ್ಯಾಂಡ್‌ಮಾಸ್ಟರ್ ಲಭಿಸಿದ್ದು 1988ರಲ್ಲಿ. ಅದೂ ವಿಶ್ವನಾಥನ್ ಆನಂದ್ ಅವರ ರೂಪದಲ್ಲಿ. ಆದರೆ ರಷ್ಯಾ,ಚೀನಾ,ಅಮೆರಿಕ ಮತ್ತು ನಾರ್ವೆ ಈ ಕ್ರೀಡೆಗೆ ಬಹಳಷ್ಟು ತಾರೆಗಳನ್ನು ನೀಡಿವೆ.
ಕ್ರೀಡೆಯು ಜನಪ್ರಿಯವಾಗಬೇಕಾದರೆ ಮತ್ತು ಮಕ್ಕಳು ಅದರತ್ತ ಆಕರ್ಷಿತರಾಗಬೇಕಾದರೆ ಆನಂದ್ ಮತ್ತು ಹಂಪಿ ಅವರಂತಹ ತಾರೆಗಳ ಸಂಖ್ಯೆ ಹೆಚ್ಚಬೇಕು. ತಮಿಳುನಾಡು,ಕರ್ನಾಟಕ,ಬಂಗಾಳ ಮತ್ತು ಆಂಧ್ರದ ಮಾದರಿಯು ದೇಶದ ಎಲ್ಲ ರಾಜ್ಯಗಳಿಗೂ ಹಬ್ಬಿದರೆ ಮತ್ತಷ್ಟು ಚಾಂಪಿಯನ್ ಆಟಗಾರರು ಹೊರಹೊಮ್ಮಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.