ಚುನಾವಣೆಗಳು ಹತ್ತಿರ ಬರುತ್ತಿರುವಂತೆಯೇ ಕೇಂದ್ರದ ಆಡಳಿತಾರೂಢರು ಹೆಚ್ಚು ಹೆಚ್ಚು ಭಾವನಾತ್ಮಕ ವಿಷಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಿನಿಕ ರಾಜಕಾರಣವೊಂದನ್ನು ಆರಂಭಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ ಈ ಪಟ್ಟಿಯಲ್ಲಿ ಇತ್ತೀಚಿನದ್ದು. ದೂರದೃಷ್ಟಿಯಿಲ್ಲದ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಾಖಲೆಯನ್ನೇ ನಿರ್ಮಿಸಿಬಿಟ್ಟಿದೆ. ನೋಟು ರದ್ದತಿಯ ನಿರ್ಧಾರದ ಹಿಂದೆ ಆರ್ಥಿಕತೆಯ ಸೂಕ್ಷ್ಮಗಳನ್ನೇ ಅರಿಯದ ಸಿದ್ಧಾಂತಿಗಳ ಹುಂಬ ಅನಿಸಿಕೆಗಳಷ್ಟೇ ಇದ್ದವು.
ಜಿಎಸ್‌ಟಿಯನ್ನು ಜಾರಿಗೆ ತಂದ ಹೆಗ್ಗಳಿಕೆ ತನ್ನದಾಗಬೇಕು ಎಂಬ ಆತುರ ಕೇಂದ್ರ ಸರ್ಕಾರಕ್ಕಿತ್ತೇ ಹೊರತು ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಕಾಳಜಿ ಇರಲಿಲ್ಲ. ಸಕಲ ಸೇವೆಗಳಿಗೂ ಆಧಾರ್ ಸಂಪರ್ಕ ಕಲ್ಪಿಸುವ ನಿರ್ಧಾರವೂ ಇಂಥದ್ದೇ ಆಗಿತ್ತು. ಖಾಸಗಿ ಮಾಹಿತಿಯ ಸಂರಕ್ಷಣೆಯ ಬಗ್ಗೆ ಚಿಂತನೆಯನ್ನೇ ನಡೆಸದೆ ‘ತಂತ್ರಜ್ಞಾನ ವಿಧಿವಾದ’ವನ್ನು ಸರ್ಕಾರ ನಿರಂತರವಾಗಿ ಪ್ರತಿಪಾದಿಸುತ್ತಲೇ ಇದೆ. ಈ ಪಟ್ಟಿಗೆ ಈಗಿನ ಹೊಸ ಸೇರ್ಪಡೆ ಪೌರತ್ವ ತಿದ್ದುಪಡಿ ಮಸೂದೆ–2019. ‘ಬಾಂಗ್ಲಾದೇಶ, ಅಫ್ಗಾನಿಸ್ತಾನ, ಪಾಕಿಸ್ತಾನ ಮುಂತಾದ ದೇಶಗಳಿಂದ ಬಂದಿರುವ ಹಿಂದೂ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ಕೊಡುತ್ತೇವೆ’ ಎಂದು 2014ರ ಚುನಾವಣಾ ಪ್ರಣಾಳಿಕೆಯಲ್ಲೇ ಬಿಜೆಪಿ ಹೇಳಿತ್ತು.
ಆ ದೃಷ್ಟಿಯಲ್ಲಿ ನೋಡಿದರೆ ಈ ಮಸೂದೆಯನ್ನು ಅದು ಲೋಕಸಭೆಯಲ್ಲಿ ಮಂಡಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಇದು ಬಿಜೆಪಿ ಕೋಮು ವಿಭಜನೆಯ ರಾಜಕಾರಣದ ಒಂದು ಭಾಗ. ಪ್ರಸ್ತುತ ಮಂಡಿಸಲಾಗಿರುವ ಮಸೂದೆಯಲ್ಲಿ ‘ಹಿಂದೂ ಅಕ್ರಮ ವಲಸಿಗರು’ ಎಂದು ಹೇಳಿಲ್ಲ. ಆದರೆ 2014ಕ್ಕೆ ಮೊದಲು ಭಾರತ ಪ್ರವೇಶಿಸಿರುವ, ಇಸ್ಲಾಂ ಹೊರತುಪಡಿಸಿ ಉಳಿದೆಲ್ಲಾ ಧರ್ಮೀಯರಿಗೂ ಭಾರತೀಯ ಪೌರತ್ವ ನೀಡುವ ಪ್ರಸ್ತಾವ ಇದೆ. ಈಶಾನ್ಯ ರಾಜ್ಯಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತದೆ ಎಂಬುದು ಬಿಜೆಪಿಗೆ ತಿಳಿಯದ ವಿಚಾರವೇನೂ ಅಲ್ಲ. ಅಸ್ಸಾಂನಲ್ಲಿ ಸರ್ಕಾರ ರಚಿಸುವುದಕ್ಕೆ ಬಿಜೆಪಿಯ ಜೊತೆ ಸೇರಿದ್ದ ಅಸ್ಸಾಂ ಗಣ ಪರಿಷತ್ ಕೂಡಾ ಇದನ್ನು ವಿರೋಧಿಸಿದೆ. ಇಷ್ಟಾಗಿಯೂ ಈ ಮಸೂದೆಯನ್ನು ಮಂಡಿಸಿರುವುದು ಬಿಜೆಪಿ ಕೋಮುವಾದಿ ರಾಜಕಾರಣದ ಮುಂದುವರಿಕೆ ಮಾತ್ರ.
ಅಕ್ರಮ ವಲಸಿಗರನ್ನು ಧರ್ಮಾಧಾರಿತವಾಗಿ ವಿಂಗಡಿಸಿ ಕಾಣುವುದೇ ಮೊದಲ ತಪ್ಪು. ಒಂದು ಸಾರ್ವಭೌಮ ರಾಷ್ಟ್ರವಾಗಿ ಭಾರತ ವರ್ತಿಸಬೇಕಾದ ವಿಧಾನ ಇದಂತೂ ಅಲ್ಲ. ಕಳೆದ ಮೂರು ದಶಕಗಳಿಂದ ಅಕ್ರಮ ವಲಸೆಯ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದ ಬಿಜೆಪಿ ಈಗ ಮಾತನಾಡುತ್ತಿರುವ ಧ್ವನಿಯೇ ಅದರ ರಾಜಕಾರಣದ ಮಟ್ಟ ಮತ್ತು ಸ್ವರೂಪವನ್ನು ವಿವರಿಸುತ್ತಿದೆ. ಬಿಜೆಪಿ ವಕ್ತಾರರು ಈಗ ಹೇಳುತ್ತಿರುವಂತೆ ಕಳೆದ ಹತ್ತು ವರ್ಷಗಳಲ್ಲಿ ಅಕ್ರಮ ವಲಸಿಗರಾರೂ ಬಂದಿಲ್ಲ. ತಿದ್ದುಪಡಿ ಮಸೂದೆಯಿಂದಾಗಿ ಯಾವುದೇ ಪ್ರದೇಶದ ಜನಸಂಖ್ಯಾ ಸ್ವರೂಪ ಬದಲಾಗುವುದಿಲ್ಲ. ರಾಜೇಂದ್ರ ಅಗರವಾಲ್ ನೇತೃತ್ವದ ಸಂಸದೀಯ ಸಮಿತಿಯ ವರದಿ ಈ ವಿಷಯದಲ್ಲಿ ಹೇಳಿರುವ ಅಂಶವೇ ಬೇರೆ.
ಅಸ್ಸಾಂ ಸರ್ಕಾರವು ವಲಸಿಗರಿಗೆ ಅಷ್ಟಾಗಿ ಜನವಸತಿಯಿಲ್ಲದ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಿದರೆ ಜನಸಂಖ್ಯಾ ಸ್ವರೂಪ ಬದಲಾಗುವುದಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸಿದ್ಧತೆಯನ್ನು ನಡೆಸಿದಾಗಲೇ ಬಿಜೆಪಿಯ ಮೈತ್ರಿ ಪಕ್ಷವಾದ ಅಸ್ಸಾಂ ಗಣ ಪರಿಷತ್ ವಿರೋಧಿಸಿತ್ತು. ಈಗಂತೂ ಅದು ಬೀದಿಗೆ ಇಳಿದಿದೆ. ಸದ್ಯ ಮಸೂದೆ ಲೋಕಸಭೆಯ ಅಂಗೀಕಾರವನ್ನಷ್ಟೇ ಪಡೆದಿದೆ. ರಾಜ್ಯಸಭೆಯ ಅಂಗೀಕಾರ ದೊರೆತ ಮೇಲಷ್ಟೇ ಇದು ಅನುಷ್ಠಾನಕ್ಕೆ ಬರಲು ಸಾಧ್ಯ. ಆದರೆ ಬಿಜೆಪಿಯ ಹಿಂದೂ ಮತಬ್ಯಾಂಕ್ ರಾಜಕಾರಣಕ್ಕಂತೂ ಈವರೆಗಿನ ಬೆಳವಣಿಗೆಗಳು ಸಾಕಷ್ಟು ಕಾಣಿಕೆ ನೀಡುತ್ತವೆ. ಮಸೂದೆ ಮಂಡನೆಯ ಹಿಂದಿನ ಉದ್ದೇಶ ಇದೇ ಆಗಿರುವುದೂ ಹೆಚ್ಚು ಕಡಿಮೆ ಸ್ಪಷ್ಟವೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.