ADVERTISEMENT

ಸಂಪಾದಕೀಯ | ಹೊನಲು–ಬೆಳಕಿನ ಕ್ರಿಕೆಟ್‌: ಭರವಸೆ ಮೂಡಿಸಿದ ಬೆಂಗಳೂರು ಟೆಸ್ಟ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 18:45 IST
Last Updated 15 ಮಾರ್ಚ್ 2022, 18:45 IST
ಜಸ್‌ಪ್ರೀತ್ ಬೂಮ್ರಾ ಮತ್ತು ರೋಹಿತ್ ಶರ್ಮಾ
ಜಸ್‌ಪ್ರೀತ್ ಬೂಮ್ರಾ ಮತ್ತು ರೋಹಿತ್ ಶರ್ಮಾ   

ಶ್ರೀಮಂತ ಕ್ರಿಕೆಟ್ ಪರಂಪರೆ ಇರುವ ಕರ್ನಾಟಕಕ್ಕೆ ಮೊದಲ ಬಾರಿ ಹೊನಲು–ಬೆಳಕಿನ ಟೆಸ್ಟ್‌ ಪಂದ್ಯ ಆಯೋಜಿಸುವ ಅವಕಾಶ ದೊರೆಯುವ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಕ್ರಿಕೆಟ್ ಇತಿಹಾಸದ ಪುಸ್ತಕಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಯಿತು. ಶ್ರೀಲಂಕಾ ಎದುರಿನ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯವು ಕ್ರಿಕೆಟ್ ಪ್ರೇಮಿಗಳನ್ನು ಕ್ರೀಡಾಂಗಣದತ್ತ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಮೂರು ದಿನಗಳಲ್ಲಿ ಮುಕ್ತಾಯವಾದ ಈ ಹಣಾಹಣಿಯನ್ನು 57 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದರು.

ತವರು ನೆಲದಲ್ಲಿ ಸತತ 15ನೇ ಸರಣಿ ಗೆಲ್ಲುವಲ್ಲಿ ಆತಿಥೇಯ ತಂಡ ಯಶಸ್ವಿಯಾಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಎರಡನೇ ಆವೃತ್ತಿಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ರೋಹಿತ್ ಶರ್ಮಾ ನಾಯಕತ್ವ ವಹಿಸಿದ ಮೊದಲ ಸರಣಿಯೂ ಇದಾಗಿತ್ತು. ಕೆಲವು ಹೊಸ ದಾಖಲೆಗಳು ಸೃಷ್ಟಿಯಾದವು. ವಿಶ್ವ ಕ್ರಿಕೆಟ್‌ನಲ್ಲಿ ಈಗ ದುರ್ಬಲ ತಂಡಗಳಲ್ಲಿ ಒಂದಾಗಿರುವ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವುದು ಭಾರತಕ್ಕೆ ಕಠಿಣವೇನೂ ಆಗಿರಲಿಲ್ಲ. ಭಾರತ ತಂಡದ ಜಯ ನಿರೀಕ್ಷಿತವೇ ಆಗಿತ್ತು. ಆದರೂ ಈ ಸರಣಿಯಲ್ಲಿ ಆತಿಥೇಯ ತಂಡದ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ಎದ್ದುಕಂಡಿತು. ಅನುಭವಿಗಳಾದ ರೋಹಿತ್, ವಿರಾಟ್ ಕೊಹ್ಲಿ, ಮಯಂಕ್ ಅಗರವಾಲ್ ಅವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ರನ್‌ ಸರಾಸರಿಯು ಈ ಬಾರಿ ಕುಸಿಯಿತು. ಮೂರೂ ಮಾದರಿಗಳಲ್ಲಿ 50ಕ್ಕಿಂತ ಹೆಚ್ಚಿನ ರನ್‌ ಗಳಿಕೆ ಸರಾಸರಿ ಹೊಂದಿರುವ ಬ್ಯಾಟರ್‌ ಅವರಾಗಿದ್ದರು.

ಇದೀಗ ಆ ಪಟ್ಟದಿಂದ ಕೆಳಗೆ ಜಾರಿದ್ದಾರೆ. ಆದರೆ ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಆಟ ಗಮನ ಸೆಳೆಯಿತು. ಕಪಿಲ್‌ ದೇವ್ ಮತ್ತು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಅವರ ವಿಕೆಟ್‌ ಗಳಿಕೆಯ ದಾಖಲೆಯನ್ನು ಅಶ್ವಿನ್ ಮುರಿದರು. ಲಂಕಾ ತಂಡಕ್ಕೆ ಒಂದು ಪಂದ್ಯದಲ್ಲಿಯೂ ಗೆಲುವು ಲಭಿಸಲಿಲ್ಲ. ಆದರೆ, ಬಲಿಷ್ಠ ತಂಡದ ಎದುರು ಆಡುವ ಅನುಭವ ದೊರೆಯಿತು. ತಂಡದ ನಾಯಕ ದಿಮುತ್‌ ಕರುಣರತ್ನೆ ಅವರು ಬೆಂಗಳೂರಿನಲ್ಲಿ ಹೊಡೆದ ಶತಕ ಗಮನ ಸೆಳೆಯಿತು. ಪುನರುತ್ಥಾನದ ಹಾದಿಯಲ್ಲಿರುವ ಈ ತಂಡಕ್ಕೆ ಇದು ಸ್ಫೂರ್ತಿಯಾಗಬಲ್ಲದು. ಇದೇ ಸಂದರ್ಭದಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುರಂಗಾ ಲಕ್ಮಲ್ ಅವರಿಗೆ ಭಾರತದ ಆಟಗಾರರು ನೀಡಿದ ಬೆಚ್ಚನೆಯ ಬೀಳ್ಕೊಡುಗೆ ಕ್ರೀಡಾಸ್ಫೂರ್ತಿಯ ಪ್ರತೀಕವಾಗಿ ದಾಖಲಾಯಿತು.

ADVERTISEMENT

ಇವೆಲ್ಲದರಾಚೆ ಇನ್ನೂ ಕೆಲವು ಚರ್ಚೆಗಳಿಗೂ ಈ ಸರಣಿ ಗ್ರಾಸವಾಯಿತು. ಟೆಸ್ಟ್ ಪಂದ್ಯವೊಂದು ಮೂರೇ ದಿನಗಳಲ್ಲಿ ಮುಕ್ತಾಯವಾಗುವುದರ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಪಿಚ್‌ ಸಿದ್ಧಗೊಳಿಸುತ್ತಿರುವ ಬಗೆಯೇ ಇದಕ್ಕೆ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ. ಪಿಂಕ್ ಬಾಲ್‌ ಟೆಸ್ಟ್‌ಗಳು ಭಾರತದಲ್ಲಿ ಈವರೆಗೆ ಮೂರು ನಡೆದಿವೆ. ಈ ಮೂರೂ ಟೆಸ್ಟ್‌ಗಳು ಮೂರೇ ದಿನಗಳಲ್ಲಿ ಮುಕ್ತಾಯಗೊಂಡಿವೆ.

ವಿಶ್ವದ ಯಾವುದೇ ಪಿಚ್‌ನಲ್ಲಿಯೂ ವಿಕೆಟ್ ಗಳಿಸುವ ಸಮರ್ಥ ಬೌಲಿಂಗ್ ಪಡೆ ಭಾರತ ತಂಡದಲ್ಲಿದೆ. ಅದರಲ್ಲೂ ಬೂಮ್ರಾ ಅವರಂತಹ ಬೌಲರ್ ಇರುವುದು ತಂಡದ ಸಾಮರ್ಥ್ಯ ಹೆಚ್ಚಿಸಿದೆ. ಆದರೆ, ಬ್ಯಾಟರ್‌ಗಳು ರನ್‌ ಹೊಳೆ ಹರಿಸದಿದ್ದರೆ ಕ್ರಿಕೆಟ್‌ ಅಭಿಮಾನಿಗಳಿಗೆ ಮನರಂಜನೆ ಸಿಗುವುದಿಲ್ಲ. ಅದರಲ್ಲೂ ಟಿ20 ಕ್ರಿಕೆಟ್ ಭರಾಟೆಯಲ್ಲಿ ಮಿಂದೇಳುವ ಇಂದಿನ ಯುವಸಮೂಹವನ್ನು ಟೆಸ್ಟ್‌ನತ್ತ ಸೆಳೆಯಬೇಕಾದರೆ ಬ್ಯಾಟರ್ ಮತ್ತು ಬೌಲರ್‌ಗಳ ಸಾಮರ್ಥ್ಯ ಪ್ರದರ್ಶನಕ್ಕೆ ಸಮಾನ ಅವಕಾಶ ಕಲ್ಪಿಸಬೇಕು.

ಬೆಂಗಳೂರು ಪಂದ್ಯದಲ್ಲಿ ಮೊದಲ ದಿನವೇ ಪಿಚ್‌ನಲ್ಲಿ ದೂಳು ಹಾರಿತು ಮತ್ತು ಒಂದೇ ದಿನ 16 ವಿಕೆಟ್‌ಗಳು ಪತನವಾದವು. ಈ ಪಂದ್ಯದ ಎರಡನೇ ದಿನದಾಟದಲ್ಲಿ ನಾಲ್ವರು ಅಭಿಮಾನಿಗಳು ಮೈದಾನದೊಳಕ್ಕೆ ನುಗ್ಗಿದ್ದು ದೊಡ್ಡ ಸುದ್ದಿಯಾಯಿತು. ಇದು ಭದ್ರತಾ ಲೋಪ ಎಂಬುದರಲ್ಲಿ ಎರಡು ಮಾತಿಲ್ಲ. ಮೈದಾನದೊಳಕ್ಕೆ ನುಗ್ಗಿದ್ದವರಲ್ಲಿ ಒಬ್ಬ ವ್ಯಕ್ತಿ ವಿರಾಟ್ ಕೊಹ್ಲಿ ಅವರೊಂದಿಗೆ ಪಿಚ್ ಸಮೀಪವೇ ನಿಂತು ಸೆಲ್ಫಿ ತೆಗೆದುಕೊಂಡ ನಂತರವಷ್ಟೇ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆಯಿತು. ಕ್ರಿಕೆಟ್‌ ಆಟವನ್ನು ಧರ್ಮದಂತೆ ಆರಾಧಿಸುವ ಇಲ್ಲಿಯ ಅಭಿಮಾನಿಗಳಿಂದ ಹಿಂದೆಯೂ ಇಂತಹ ಅತಿರೇಕಗಳು ಆಗಿದ್ದವು. ಆದರೆ ಈ ಬಾರಿಯ ಪಂದ್ಯವು ಬಯೊಬಬಲ್ ವ್ಯವಸ್ಥೆಯಲ್ಲಿ ನಡೆದಿದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಆಟಗಾರರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಲೋಪಕ್ಕೆ ಭದ್ರತಾ ವೈಫಲ್ಯವೇ ಕಾರಣ. ಆಟಗಾರರ ಸುರಕ್ಷತೆಯ ವಿಷಯದಲ್ಲಿ ರಾಜಿ ಸಲ್ಲದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.