ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಂಡು ನಡೆಸುವ ಗೂಂಡಾಗಿರಿಯ ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗಿವೆ. ಈ ಪ್ರಕರಣಗಳು, ಮತೀಯ ಶಕ್ತಿಗಳು ರಾಜ್ಯದಲ್ಲಿ ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಿದರ್ಶನದಂತಿವೆ. ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಗೆ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆ ಇತ್ತೀಚೆಗೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು ಬೇರೆ ಧರ್ಮದ ಸಂಗಾತಿಯೊಂದಿಗೆ ಹೋಟೆಲ್‌ನಲ್ಲಿದ್ದಾಗ ಗುಂಪೊಂದು ದಾಳಿ ಮಾಡಿ ಹಲ್ಲೆ ನಡೆಸಿದೆ; ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದೆ. ಹಾವೇರಿಯಲ್ಲಿ ನಡೆದ ಈ ಪ್ರಕರಣದಲ್ಲಿ, ಹಲ್ಲೆಯ ಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತ್ರಸ್ತರನ್ನು ಅವಮಾನಿಸುವ ಹಾಗೂ ಸಮಾಜದಲ್ಲಿ ಭೀತಿ ಹುಟ್ಟಿಸುವ
ಪ್ರಯತ್ನವನ್ನೂ ಹಲ್ಲೆಕೋರರು ಮಾಡಿದ್ದಾರೆ. ಪರಿಚಯದ ಯುವತಿಯನ್ನು ಮನೆಗೆ ತಲುಪಿಸಲು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಪ್ರಕರಣ ತುಮಕೂರಿನಲ್ಲಿ ಜರುಗಿದೆ. ಬೆಳಗಾವಿ ಜಿಲ್ಲೆಯ ಜಿನರಾಳ ಗ್ರಾಮದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಮನೆಯೊಂದನ್ನು ಧ್ವಂಸ ಮಾಡಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ಧರ್ಮ–ಜಾತಿಯ ಹೆಸರಿನಲ್ಲಿ, ನೈತಿಕತೆಯ ಹೆಸರಿನಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಕಾನೂನು ಸುವ್ಯವಸ್ಥೆಗೆ ಕಿಡಿಗೇಡಿಗಳಿಂದ ಎದುರಾಗುವ ಇಂಥ ಸವಾಲುಗಳನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ನಿಭಾಯಿಸ ದಿರುವುದಕ್ಕೆ ಉದಾಹರಣೆಯ ರೂಪದಲ್ಲೂ ಈ ಪ್ರಕರಣಗಳನ್ನು ನೋಡಬಹುದು. ಕಾರಣ ಏನೇ ಆಗಿದ್ದರೂ ಒಬ್ಬರು ಮತ್ತೊಬ್ಬರ ಮೇಲೆ ಹಲ್ಲೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ವೈಯಕ್ತಿಕ ನಿಲುವುಗಳನ್ನು ಮತ್ತೊಬ್ಬರ ಮೇಲೆ ಹೇರುವುದಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಅನ್ನಿಸಿದಾಗ, ಅವುಗಳನ್ನು ಸಂವಿಧಾನಾತ್ಮಕ ಮಾರ್ಗದ ಮೂಲಕ ಎದುರಿಸಬೇಕೇ ಹೊರತು, ಸ್ವತಃ ಪೊಲೀಸರಂತೆ ಇಲ್ಲವೇ ನ್ಯಾಯಾಧೀಶರಂತೆ ವರ್ತಿಸುವ ಹಕ್ಕು ಯಾರಿಗೂ ಇಲ್ಲ.
ನೈತಿಕತೆಯ ಹೆಸರಿನಲ್ಲಿ ನಡೆಯುವ ಬಹುತೇಕ ಗೂಂಡಾಗಿರಿ ಪ್ರಕರಣಗಳು, ಧಾರ್ಮಿಕ ಅಸಹಿಷ್ಣುತೆ ಹಾಗೂ ಕೋಮುವಾದಿ ಮನೋಭಾವದ ಉಪ ಉತ್ಪನ್ನಗಳೇ ಆಗಿವೆ. ಭಿನ್ನ ಸಮುದಾಯಗಳ ಹುಡುಗ ಹುಡುಗಿಯರ ಸ್ನೇಹ ಅಥವಾ ಸಲಿಗೆಯನ್ನು ಸಹಿಸಲಾರದಷ್ಟು ಮಟ್ಟಿಗೆ ಸಾಮಾಜಿಕ ಅಸಹನೆ ರೂಪುಗೊಂಡಿದೆ. ಈ ಅಸಹನೆಯನ್ನು ಬೆಳೆಯಲು ಬಿಡುವುದರ ಮೂಲಕ, ತೀವ್ರ ಸ್ವರೂಪದ ಸಾಮಾಜಿಕ ವ್ಯಾಧಿ ರೂಪುಗೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಸ್ನೇಹ ಮತ್ತು ಪ್ರೇಮದ ನಡುವೆ ಧರ್ಮವನ್ನು ಹುಡುಕುವುದು ಹಾಗೂ ಅಸಹನೆ ವ್ಯಕ್ತಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಡವಳಿಕೆ ಆಗಿರುವಂತೆಯೇ, ಸಾಮಾಜಿಕ ಸೌಹಾರ್ದ ಮತ್ತು ಕಾನೂನು ವ್ಯವಸ್ಥೆಗೆ ಒಡ್ಡಿರುವ ಆತಂಕವೂ ಆಗಿದೆ. ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವಿದೆ ಎನ್ನುವ ಭಾವನೆ ಬೆಳೆಯುವುದು ಸಮಾಜದಲ್ಲಿ ಭಯವನ್ನು ಉಂಟು
ಮಾಡುವಂತಹದ್ದು ಹಾಗೂ ದೇಶದ ಬಹುತ್ವದ ಪರಿಕಲ್ಪನೆಗೆ ಮಾರಕವಾದುದು. ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯವನ್ನು ಸರ್ಕಾರ ಲಘುವಾಗಿ ಪರಿಗಣಿಸದೆ, ಗಂಭೀರ ಕ್ರಮ ಕೈಗೊಳ್ಳಬೇಕು. ಕೋಮುಸೌಹಾರ್ದವನ್ನು ರಕ್ಷಿಸುವ ಬದ್ಧತೆ ಬಾಯಿಮಾತಿಗೆ ಸೀಮಿತಗೊಳ್ಳಬಾರದು. ಅದು ಕಾರ್ಯರೂಪಕ್ಕೆ ಬಾರದೇ ಹೋದರೆ, ನೈತಿಕತೆಯ ಹೆಸರಿನ ಗೂಂಡಾಗಿರಿ ಪ್ರಕರಣಗಳ ಪ್ರಯೋಗಶಾಲೆಯಾಗಿ ಕರ್ನಾಟಕ ರೂಪುಗೊಳ್ಳುವುದಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ರಾಜ್ಯದ ವರ್ಚಸ್ಸನ್ನು ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಳುಮಾಡುವ ಮತೀಯ ಗೂಂಡಾಗಿರಿ
ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ದುಷ್ಕೃತ್ಯಗಳಿಗೆ ಧರ್ಮವನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುವ ಗೂಂಡಾಗಳಿಗೆ ತಕ್ಕ ಶಾಸ್ತಿಯಾಗದೇ ಹೋದರೆ, ಈ ಪ್ರಕರಣಗಳಲ್ಲಿ ಸರ್ಕಾರವೂ ಪರೋಕ್ಷವಾಗಿ ಭಾಗಿಯಾದಂತಾಗುತ್ತದೆ. ಮತೀಯ ಗೂಂಡಾಗಿರಿಗೆ ಸಂಬಂಧಿಸಿದಂತೆ ಕ್ರಿಯೆ ಮತ್ತು ಪ್ರತಿಕ್ರಿಯೆ ಸಹಜ ಎಂದು ಹೇಳುವ ಮೂಲಕ, ಕಾನೂನುಬಾಹಿರ ದುಂಡಾವರ್ತನೆಗಳಿಗೆ ನೈತಿಕತೆಯ ಆಯಾಮ ಕಲ್ಪಿಸುವ ಪ್ರಯತ್ನವನ್ನು ನಿಕಟಪೂರ್ವ ಮುಖ್ಯಮಂತ್ರಿ ಮಾಡಿದ್ದರು. ಇಂತಹ ಪ್ರಮಾದ ಅಕ್ಷಮ್ಯ. ಈ ಬಗೆಯ ವರ್ತನೆಗಳಿಗೆ ಸಂಬಂಧಿಸಿದಂತೆ ಮೌನ ಅಥವಾ ನಿರ್ಲಕ್ಷ್ಯ ಮುಂದುವರಿದಂತೆಲ್ಲ ನಾಡಿನ ಸೌಹಾರ್ದ ಪರಂಪರೆ ಗಾಸಿಗೊಳ್ಳುತ್ತಲೇ ಇರುತ್ತದೆ ಹಾಗೂ ರಾಜ್ಯದ ವರ್ಚಸ್ಸು ಮುಕ್ಕಾಗುತ್ತಲೇ ಇರುತ್ತದೆ. ಗೂಂಡಾಗಿರಿ ಪ್ರಕರಣಗಳಲ್ಲಿ ನೈತಿಕತೆ ಹುಡುಕುವ ಹಾಗೂ ಮತೀಯ ಶಕ್ತಿಗಳ ದುಷ್ಕೃತ್ಯ
ಗಳಿಗೆ ಕುಮ್ಮಕ್ಕು ನೀಡುವ ಜನಪ್ರತಿನಿಧಿಗಳು ಯಾವ ಪಕ್ಷಕ್ಕೆ ಸೇರಿದ್ದರೂ ಅವರ ಮೇಲೆಯೂ ಕ್ರಮ ಜರುಗವಂತಾಗಬೇಕು. ಸಮಾಜದಲ್ಲಿ ಭಯ ಹುಟ್ಟಿಸುವ ಚಟುವಟಿಕೆಗಳನ್ನು ಪೊಲೀಸ್‌ಗಿರಿ ಹಾಗೂ ನೈತಿಕತೆ ಎಂದು ಬಿಂಬಿಸುವವರನ್ನೂ ಕಾನೂನುಕ್ರಮಕ್ಕೆ ಗುರಿಪಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.