ADVERTISEMENT

ಸಂಪಾದಕೀಯ: ಹೊರಳುದಾರಿಯಲ್ಲಿ ಬಿಎಸ್‌ಪಿ– ದುರ್ಬಲಗೊಳ್ಳುತ್ತಿರುವ ದಲಿತ ರಾಜಕಾರಣ

ಸಂಪಾದಕೀಯ

ಸಂಪಾದಕೀಯ
Published 25 ಜೂನ್ 2024, 19:24 IST
Last Updated 25 ಜೂನ್ 2024, 19:24 IST
<div class="paragraphs"><p>ಸಂಪಾದಕೀಯ: ಹೊರಳುದಾರಿಯಲ್ಲಿ ಬಿಎಸ್‌ಪಿ </p><p>ದುರ್ಬಲಗೊಳ್ಳುತ್ತಿರುವ ದಲಿತ ರಾಜಕಾರಣ</p></div>

ಸಂಪಾದಕೀಯ: ಹೊರಳುದಾರಿಯಲ್ಲಿ ಬಿಎಸ್‌ಪಿ

ದುರ್ಬಲಗೊಳ್ಳುತ್ತಿರುವ ದಲಿತ ರಾಜಕಾರಣ

   

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜಕಾರಣ ಹಾಗೂ ಆ ಪಕ್ಷದ ನಾಯಕತ್ವವು ಈಚಿನ ವರ್ಷಗಳಲ್ಲಿ ಹಲವು ಬದಲಾವಣೆಗಳನ್ನು ಹಾದುಬಂದಿವೆ. ಈಗ, ಪಕ್ಷದ ನಾಯಕಿ ಮಾಯಾವತಿ ಅವರು ತಮ್ಮ ಸೋದರ ಸಂಬಂಧಿ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕರನ್ನಾಗಿ ಮರುನೇಮಕ ಮಾಡಿದ್ದಾರೆ.

ADVERTISEMENT

ಅಲ್ಲದೆ ಆಕಾಶ್ ಅವರೇ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂಬುದನ್ನು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಕೆಲವೇ ವಾರಗಳ ಹಿಂದೆ ಆಕಾಶ್‌ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿದ್ದ ಮಾಯಾವತಿ, ಈಗ ಮತ್ತೆ ಅವರಿಗೆ ಬಹಳ ಪ್ರಮುಖವಾದ ಹೊಣೆಗಾರಿಕೆ ನೀಡಿದ್ದಾರೆ. ಇಲ್ಲಿ ಮಾಯಾವತಿ ಅವರು ತೀರಾ ಗೊಂದಲಕ್ಕೆ ಒಳಗಾಗಿರುವುದು ಹಾಗೂ ಮನಸೋಇಚ್ಛೆ ತೀರ್ಮಾನಗಳನ್ನು ಕೈಗೊಳ್ಳುತ್ತಿರುವುದು ಎದ್ದುಕಾಣುವಂಥದ್ದು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಯಾವತಿ ಅವರು ಆಕಾಶ್ ಅವರನ್ನು ಜವಾಬ್ದಾರಿಗಳಿಂದ
ಮುಕ್ತಗೊಳಿಸಿದ್ದರು. ಆಗಲೂ ಅವರ ತೀರ್ಮಾನವು ಹಲವರ ಹುಬ್ಬೇರುವಂತೆ ಮಾಡಿತ್ತು, ಹಲವು ಪ್ರಶ್ನೆಗಳು ಮೂಡುವಂತೆ ಮಾಡಿತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಎಸ್‌ಪಿ, ‘ಇಂಡಿಯಾ’
ಮೈತ್ರಿಕೂಟವನ್ನು ಸೇರಲು ಒಲ್ಲೆ ಎಂದಿತ್ತು.

ಬಿಎಸ್‌ಪಿಯು ಎನ್‌ಡಿಎ ಮೈತ್ರಿಕೂಟದ ಭಾಗವಾಗಿಲ್ಲದೆ ಇದ್ದರೂ, ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ನಿರ್ದಿಷ್ಟ ಅಭ್ಯರ್ಥಿಗಳು ಕಣಕ್ಕೆ ಇಳಿಯುವಂತೆ ಮಾಡುವ ಮೂಲಕ ಎನ್‌ಡಿಎ ಮೈತ್ರಿಕೂಟಕ್ಕೆ ನೆರವು ಒದಗಿಸಿದೆ ಎಂಬ ಮಾತು ಇದೆ. ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಆಡಳಿತ ಚುಕ್ಕಾಣಿಯನ್ನು ಹಿಂದೆ ಒಂದು ಸಂದರ್ಭದಲ್ಲಿ ಹಿಡಿದಿದ್ದ, ದೇಶದ ಎಲ್ಲೆಡೆ ಅಸ್ತಿತ್ವ ಹೊಂದಿದ್ದ ಬಿಎಸ್‌ಪಿ ಈಚಿನ ಕೆಲವು ವರ್ಷಗಳಲ್ಲಿ ಬಹಳ ದುರ್ಬಲಗೊಂಡಿದೆ.

ಹಿಂದಿನ ಲೋಕಸಭೆಯಲ್ಲಿ ಬಿಎಸ್‌ಪಿ 10 ಸ್ಥಾನಗಳನ್ನು ಹೊಂದಿತ್ತು. ಆದರೆ ಈ ಬಾರಿ ಈ ಪಕ್ಷಕ್ಕೆ ಒಂದು ಸ್ಥಾನವನ್ನು ಗೆಲ್ಲಲೂ ಸಾಧ್ಯವಾಗಿಲ್ಲ. ದಲಿತರ ಅಸ್ಮಿತೆಯನ್ನು ಆಧರಿಸಿ, ಇನ್ನೊಂದು ಪಕ್ಷವಾದ, ಚಂದ್ರಶೇಖರ ಆಜಾದ್ ನೇತೃತ್ವದ ಆಜಾದ್ ಸಮಾಜ ಪಕ್ಷವು (ಕಾನ್ಶಿರಾಮ್), ಉತ್ತರಪ್ರದೇಶದಲ್ಲಿ ದಲಿತರ ನಾಯಕತ್ವದ ವಿಚಾರದಲ್ಲಿ ಮಾಯಾವತಿ ಅವರ ಬಿಎಸ್‌ಪಿಗೆ ಸವಾಲು ಒಡ್ಡಿದೆ. ಆಜಾದ್ ಅವರು
ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಇರುವ ನಾಗಿನಾ ಕ್ಷೇತ್ರದಲ್ಲಿ 1.5 ಲಕ್ಷ ಮತಗಳಿಗೂ ಹೆಚ್ಚು ಅಂತರದಿಂದ ಜಯ ಸಾಧಿಸಿದ್ದಾರೆ.

ದಲಿತ ಸಮುದಾಯದ ಒಂದು ವರ್ಗವು ಬಿಎಸ್‌ಪಿಯಿಂದ ಅದಾಗಲೇ ದೂರ ಸಾಗಿತ್ತು. ಈಗ ಉಳಿದಿರುವ ಬೆಂಬಲಿಗರು ಕೂಡ ಪಕ್ಷದ ತೆಕ್ಕೆಯಿಂದ ಜಾರುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು
ಆಜಾದ್ ಅವರ ಜಯವು ರವಾನಿಸಿದೆ. ಆಜಾದ್ ಅವರು ತಳಮಟ್ಟದಿಂದ ಮೇಲೆ ಬಂದವರು, ಅವರು ಬಹಳ ಕಷ್ಟಪಟ್ಟು ಪಕ್ಷವನ್ನು ಕಟ್ಟಿದ್ದಾರೆ.

ಕಾನ್ಶಿರಾಮ್ ಅವರು ಬಿಎಸ್‌ಪಿಯನ್ನು ಹೇಗೆ ಕಷ್ಟಪಟ್ಟು ಕಟ್ಟಿದ್ದರೋ ಅದೇ ರೀತಿಯಲ್ಲಿ. ಆ ಕಾರಣದಿಂದಾಗಿಯೇ ಕಾನ್ಶಿರಾಮ್ ಅವರ ರಾಜಕೀಯ ಉತ್ತರಾಧಿಕಾರಿ ತಾವು ಎಂಬ ಮಾತನ್ನು ಆಜಾದ್ ಅವರು ಬಹಳ ಚೆನ್ನಾಗಿ ಹಕ್ಕೊತ್ತಾಯದ ರೀತಿಯಲ್ಲಿ ದಲಿತ ಸಮುದಾಯದ ಮುಂದೆ ಇರಿಸಿದ್ದಾರೆ. ಆಕಾಶ್ ಆನಂದ್ ಅವರು ಮಾಯಾವತಿ ಅವರ ನೆರಳಿನಲ್ಲಿ ಈಚೆಗೆ ರಾಜಕಾರಣ ಮಾಡಿಕೊಂಡು ಬಂದವರು. ಅಲ್ಲದೆ, ಅವರು ಅಧಿಕಾರ ಪಡೆದುಕೊಂಡಿರುವುದು ಕೂಡ ಮಾಯಾವತಿ ಅವರಿಂದಲೇ. ಅಂದರೆ, ಮಾಯಾವತಿ ಅವರು ಇಲ್ಲದೆ ಆಕಾಶ್ ಅವರಿಗೆ ಪಕ್ಷದಲ್ಲಿ ಯಾವುದೇ ಪಾತ್ರ ಇಲ್ಲ.

ಪಕ್ಷದ ಬೆಂಬಲಿಗ ವರ್ಗವು ದೂರ ಸರಿದಿದ್ದು ಹಾಗೂ ಪಕ್ಷವು ವ್ಯಕ್ತಿಕೇಂದ್ರಿತ ರಾಜಕಾರಣವನ್ನು
ನೆಚ್ಚಿಕೊಂಡಿದ್ದು ಬಿಎಸ್‌ಪಿಯು ದುರ್ಬಲವಾಗುವುದಕ್ಕೆ ಕಾರಣವಾಯಿತು. ಮಾಯಾವತಿ ಅವರ ನಾಯಕತ್ವ ದುರ್ಬಲಗೊಳ್ಳಲು ಕೂಡ ಇದೇ ಕಾರಣ. ಸರ್ವಾಧಿಕಾರಿ ಧೋರಣೆಯಿಂದ ತೀರ್ಮಾನಗಳನ್ನು ಕೈಗೊಂಡಿದ್ದು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳು ಕೂಡ ಅವರ ನಾಯಕತ್ವಕ್ಕೆ ಪೆಟ್ಟು ಕೊಟ್ಟಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಬಹಳ ವರ್ಷಗಳವರೆಗೆ ದಲಿತ ಸಮುದಾಯದ ಆಶೋತ್ತರಗಳನ್ನು ಪ್ರತಿನಿಧಿಸುವ ಒಂದು ಪಕ್ಷ ಅಥವಾ ನಾಯಕತ್ವ ಇರಲಿಲ್ಲ. ಬಿಎಸ್‌ಪಿ ಮಾತ್ರ ದೇಶದ ಉದ್ದಗಲಕ್ಕೂ ಅಸ್ತಿತ್ವವನ್ನು ಕೆಲವು ಕಾಲದವರೆಗೆ ಹೊಂದಿತ್ತು. ಆದರೆ ಅದು ಈಗ ದುರ್ಬಲಗೊಳ್ಳುತ್ತಿದೆ. ತಮಿಳುನಾಡಿನ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ), ಲೋಕ ಜನಶಕ್ತಿ ಪಕ್ಷ (ರಾಮ್‌ ವಿಲಾಸ್) ಮತ್ತು ಹಿಂದೂಸ್ತಾನಿ ಆವಾಮ್ ಮೋರ್ಚಾ ಪಕ್ಷಗಳು ಸಂಸತ್ತಿನಲ್ಲಿ ಸಣ್ಣ ಪ್ರಾತಿನಿಧ್ಯ ಹೊಂದಿವೆ, ಅವು ಒಂದಲ್ಲ ಒಂದು ಮೈತ್ರಿಕೂಟದ ಭಾಗಗಳಾಗಿವೆ. ದೇಶದ ಬೇರೆ ಬೇರೆ ಕಡೆ ಸಣ್ಣ ಪಕ್ಷಗಳು ಇವೆಯಾದರೂ ಅವು ಶಾಸನಸಭೆಗಳಲ್ಲಿ ಪ್ರಾತಿನಿಧ್ಯ ಹೊಂದಿಲ್ಲ. ದಲಿತ ರಾಜಕಾರಣವು ದೇಶದ ಎಲ್ಲೆಡೆ ದುರ್ಬಲಗೊಂಡಿದೆ, ಒಡೆದುಹೋಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.