ADVERTISEMENT

ಸಂಪಾದಕೀಯ: ಡೆಂಗಿ ಉಲ್ಬಣ ಕಳವಳಕಾರಿ– ನಿಯಂತ್ರಣಕ್ಕೆ ಕ್ರಮ ಅಗತ್ಯ

ಸಂಪಾದಕೀಯ: ಡೆಂಗಿ ಉಲ್ಬಣ ಕಳವಳಕಾರಿ– ನಿಯಂತ್ರಣಕ್ಕೆ ಕ್ರಮ ಅಗತ್ಯ

ಸಂಪಾದಕೀಯ
Published 26 ಜೂನ್ 2024, 18:49 IST
Last Updated 26 ಜೂನ್ 2024, 18:49 IST
<div class="paragraphs"><p>ಸಂಪಾದಕೀಯ: ಡೆಂಗಿ ಉಲ್ಬಣ ಕಳವಳಕಾರಿ– ನಿಯಂತ್ರಣಕ್ಕೆ ಕ್ರಮ ಅಗತ್ಯ</p></div>

ಸಂಪಾದಕೀಯ: ಡೆಂಗಿ ಉಲ್ಬಣ ಕಳವಳಕಾರಿ– ನಿಯಂತ್ರಣಕ್ಕೆ ಕ್ರಮ ಅಗತ್ಯ

   

ರಾಜ್ಯದಾದ್ಯಂತ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಕಳವಳಕಾರಿ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರೂ ಡೆಂಗಿಯಿಂದ ಬಳಲುತ್ತಿರುವುದು ನಗರದಲ್ಲಿ ಈ ಜ್ವರದ ತೀವ್ರತೆ ಎಷ್ಟಿದೆ ಎಂಬುದರ ದ್ಯೋತಕ. ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ 1,200ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದ ಇತರ ತೀವ್ರ ಬಾಧಿತ ಪ್ರದೇಶಗಳಾಗಿವೆ. ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಈ ಸಲ ಬಿಬಿಎಂಪಿ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಬಿಬಿಎಂಪಿ ಆಡಳಿತವು ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ಇದರಿಂದ ವೇದ್ಯ. ಚಿಕಿತ್ಸೆಗಿಂತಲೂ ರೋಗವನ್ನು ನಿಯಂತ್ರಿಸುವುದೇ ಹೆಚ್ಚು ಪರಿಣಾಮಕಾರಿ ಎನ್ನುವ ಪಾಠವನ್ನು ಅಧಿಕಾರಿಗಳು ಪದೇ ಪದೇ ಮರೆಯುತ್ತಿರುವುದೂ ಸ್ಪಷ್ಟ. ಮಳೆಗಾಲದ ಈ ಸಂದರ್ಭದಲ್ಲಿ ಅಲ್ಲಲ್ಲಿ ನೀರು ಸಂಗ್ರಹವಾಗಿ, ಅಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿರುವುದೇ ಡೆಂಗಿ ಉಲ್ಬಣಕ್ಕೆ ಕಾರಣ. ಸೊಳ್ಳೆಗಳು ಕಚ್ಚುವುದರಿಂದ ಆಂತರಿಕ ರಕ್ತಸ್ರಾವ, ರಕ್ತದೊತ್ತಡದಲ್ಲಿ ದಿಢೀರ್‌ ಇಳಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಬಾಧೆಗೆ ಒಳಗಾದವರ ಸಾವೂ ಸಂಭವಿಸಬಹುದು ಎಂದು ತಜ್ಞವೈದ್ಯರು ಹೇಳುತ್ತಾರೆ. ಜ್ವರ, ವಸಡು ಹಾಗೂ ಮೂಗಿನಿಂದ ಆಗುವ ರಕ್ತಸ್ರಾವ, ವಾಂತಿ, ಉಸಿರಾಟದಲ್ಲಿ ಉಂಟಾಗುವ ಸಮಸ್ಯೆ, ಆಯಾಸದಂತಹ ರೋಗದ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಎಂಬುದು ಅವರು ಕೊಡುವ ಸಲಹೆ. ಜನ, ಈ ಸಲಹೆಯನ್ನು ಚಾಚೂತಪ್ಪದೆ ಪಾಲಿಸಬೇಕು.

ಡೆಂಗಿ ಜ್ವರ ಪತ್ತೆಗೆ ನಿಗಾ ವ್ಯವಸ್ಥೆ ಹೆಚ್ಚಿಸಿದ್ದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ; ಹೀಗಾಗಿ ಜನ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಏನೋ ಸಮಾಧಾನದ ಮಾತು ಹೇಳಿದೆ. ಆದರೆ, ತಾನು ಮಾಡಬೇಕಾದ ಹಲವು ಕೆಲಸಗಳನ್ನು ಅದು ಮರೆತು ಕುಳಿತಿದೆ. ಮಳೆನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳ ಸಂತತಿ ಉಲ್ಬಣಗೊಂಡು ಡೆಂಗಿ ವ್ಯಾಪಕವಾಗುತ್ತಿದೆ ಎಂಬ ಅರಿವಿದ್ದರೂ ರಸ್ತೆಗಳಲ್ಲಿ ಮಳೆನೀರು ನಿಲ್ಲದಂತೆ ನೋಡಿಕೊಳ್ಳುವಲ್ಲಿ ಅದು ವಿಫಲವಾಗಿದೆ. ಸರಾಗವಾಗಿ ನೀರು ಹರಿಯುವಂತೆ ಚರಂಡಿ ಹಾಗೂ ಮೋರಿಗಳನ್ನು ಸುಸ್ಥಿತಿಯಲ್ಲಿಡಲು ಸಹ ಬಿಬಿಎಂಪಿಯಿಂದ ಸಾಧ್ಯವಾಗಿಲ್ಲ. ಡೆಂಗಿ ಪ್ರಕರಣಗಳ ಸಂಖ್ಯೆಯನ್ನು ಕಲೆ ಹಾಕುವುದಷ್ಟೇ ತಮ್ಮ ಕೆಲಸ ಎಂದು ಅಧಿಕಾರಿಗಳು ಭಾವಿಸಿದಂತಿದೆ. ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿರುವ ಕ್ರಮ ಸ್ವಾಗತಾರ್ಹವಾದರೂ ಚಿಕಿತ್ಸೆಗೆ ಸಮರ್ಪಕ ವ್ಯವಸ್ಥೆ ಮಾಡುವುದು ಹಾಗೂ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಕೂಡ ಅಷ್ಟೇ ಮುಖ್ಯ. ಡೆಂಗಿಯಿಂದ ಬಾಧೆಗೊಳಗಾದವರ ಚಿಕಿತ್ಸೆಗೆ ಕೆಲವು ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿವೆ ಎಂದೂ ವರದಿಯಾಗಿದೆ. ಮಾನವೀಯತೆ ಮರೆತು ಹಣ ಮಾಡುವ ದಂಧೆಯಲ್ಲಿ ಮುಳುಗಿದ ಅಂತಹ ಆಸ್ಪತ್ರೆಗಳ ಮೇಲೆ ಅಂಕುಶ ವಿಧಿಸುವುದು ಕೂಡ ಬಿಬಿಎಂಪಿ ಆಡಳಿತದ ಹೊಣೆಯಾಗಿದೆ.

ADVERTISEMENT

ರಾಜ್ಯದಲ್ಲಿ ಸೋಮವಾರದವರೆಗೆ ಒಟ್ಟು 5,374 ಡೆಂಗಿ ಪ್ರಕರಣಗಳು ವರದಿಯಾಗಿವೆ. ಐವರ ಸಾವು ಸಂಭವಿಸಿದೆ. ಮರಣ ಪ್ರಮಾಣ ಶೇ 0.09ರಷ್ಟಿದೆ. ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಂಗಿ ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಗತ್ಯ ಪ್ರಮಾಣದ ಚುಚ್ಚುಮದ್ದು ಮತ್ತು ಪ್ಲೇಟ್‌ಲೆಟ್‌ಗಳ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ. ಇಷ್ಟೇ ಸಿದ್ಧತೆ ಸಾಲದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ, ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸಬೇಕು. ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ಹಾಗೂ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು, ಸ್ವಯಂಸೇವಕರ ನೆರವಿನೊಂದಿಗೆ ಮನೆ ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಬೇಕು. ಒಮ್ಮೆ ಸಭೆ ನಡೆಸಿದ ಶಾಸ್ತ್ರ ಮಾಡಿ ಕೈತೊಳೆದುಕೊಂಡರೆ ಆರೋಗ್ಯ ಇಲಾಖೆಯು ತನ್ನ ಹೊಣೆ ನಿಭಾಯಿಸಿದಂತೆ ಆಗುವುದಿಲ್ಲ. ನಿರಂತರವಾಗಿ ನಿಗಾ ವಹಿಸಿ, ಅಧಿಕಾರಿಗಳು ಮೈಮರೆಯದಂತೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡಬೇಕು. ಸೊಳ್ಳೆಗಳ ನಿಯಂತ್ರಣ ಸೇರಿದಂತೆ ಪರಿಸರವನ್ನು ಚೊಕ್ಕಟವಾಗಿಡುವ ಅಗತ್ಯದ ಕುರಿತು ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಆಂದೋಲನದ ರೂಪದಲ್ಲಿ ನಡೆಸಬೇಕು. ಜನರೂ ಅಷ್ಟೆ; ತಮ್ಮ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ಆಡಳಿತದ ಜತೆ ಕೈಜೋಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.