ADVERTISEMENT

ಸಂಪಾದಕೀಯ: ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ– ಅನ್ಯ ಉದ್ದೇಶಕ್ಕೆ ಬಳಸುವುದು ಬೇಡ

ಸಂಪಾದಕೀಯ

ಸಂಪಾದಕೀಯ
Published 11 ಡಿಸೆಂಬರ್ 2023, 19:23 IST
Last Updated 11 ಡಿಸೆಂಬರ್ 2023, 19:23 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಅಭಿವೃದ್ಧಿಗೆ ಸರ್ಕಾರ ಮೀಸಲಿಡುತ್ತಿರುವ ಅನುದಾನವು ಸಮರ್ಪಕವಾಗಿ ಈ ಸಮುದಾಯಗಳ ಜನರನ್ನು ತಲುಪುತ್ತಿಲ್ಲ ಎಂದು ವಿಧಾನಮಂಡಲದ ಎಸ್‌.ಸಿ ಮತ್ತು ಎಸ್‌.ಟಿ ಕಲ್ಯಾಣ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ. ಪರಿಶಿಷ್ಟರ ಅಭ್ಯುದಯಕ್ಕಾಗಿ ಮೀಸಲಿಡುವ ಅನುದಾನವು ಅದೇ ಉದ್ದೇಶಕ್ಕೆ ಸದ್ಬಳಕೆ ಆಗುವುದನ್ನು ಖಾತರಿಪಡಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ವಿಧಾನಮಂಡಲದಲ್ಲಿ ಈ ತಿಂಗಳ 6ರಂದು ಮಂಡಿಸಿರುವ ವರದಿಯಲ್ಲಿ ಸಮಿತಿ ಶಿಫಾರಸು ಮಾಡಿದೆ.

ಸಮಿತಿಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಎಸ್‌.ಸಿ ಮತ್ತು ಎಸ್.ಟಿ ಜನರ ಒಟ್ಟು ಸಂಖ್ಯೆ 1.8 ಕೋಟಿಯಷ್ಟಿದೆ. 2013ರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ) ಕಾಯ್ದೆ ಜಾರಿಯಾಯಿತು. ಅಂದಿನಿಂದ ಈವರೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ₹ 2.5 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಈ ಮೊತ್ತದಲ್ಲಿ ದೊಡ್ಡ ಪಾಲು, ನಿರ್ದಿಷ್ಟಪಡಿಸಿದ ಫಲಾನುಭವಿಗಳನ್ನು ತಲುಪಿಲ್ಲ ಎಂದು ಸಮಿತಿಯು ವರದಿಯಲ್ಲಿ ಹೇಳಿದೆ.

ADVERTISEMENT

ಜನಸಂಖ್ಯೆಗೆ ಅನುಗುಣವಾಗಿ ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಕಾಯ್ದೆಯನ್ನು ವಿಧಾನಮಂಡಲವು 2013ರಲ್ಲಿ ಅಂಗೀಕರಿಸಿತು.

ಈ ಉಪಯೋಜನೆಗಳ ಅಡಿಯಲ್ಲಿ ಮೀಸಲಿಡುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸುವಂತಿಲ್ಲ, ಪರಿಶಿಷ್ಟ ಸಮುದಾಯದ ಜನರಿಗೆ ನೇರವಾಗಿ ಅನುಕೂಲವಾಗು ವಂತಹ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂಬ ನಿರ್ಬಂಧ ಕಾಯ್ದೆಯಲ್ಲಿದೆ. ಈ ಅನುದಾನವನ್ನು ಬೇರೆ ಯೋಜನೆಗಳಿಗೆ ವಿಭಜಿಸಿ, ವರ್ಗಾಯಿಸುವುದಕ್ಕೂ ಅವಕಾಶವಿಲ್ಲ.

ಆದರೆ, ಇದಕ್ಕೆ ತದ್ವಿರುದ್ಧ ಎಂಬಂತಹ ಅಂಶವೊಂದನ್ನು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7–ಡಿ ಒಳಗೊಂಡಿದೆ. ‘ಮೂಲಸೌಕರ್ಯ ಯೋಜನೆಗಳಲ್ಲಿ ಬಳಕೆ ಮಾಡುವ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿ ಉದ್ದೇಶಕ್ಕಾಗಿಯೇ ಬಳಸಲಾಗಿದೆ ಎಂದು ಪರಿಭಾವಿಸಬಹುದು’ (ಡೀಮ್ಡ್‌ ಎಕ್ಸ್‌ಪೆಂಡಿಚರ್‌) ಎಂದು ಸೆಕ್ಷನ್ 7–ಡಿ ಹೇಳುತ್ತದೆ. ರಸ್ತೆಗಳು, ಸೇತುವೆಗಳಂತಹ ಮೂಲಸೌಕರ್ಯಗಳನ್ನು ಪರಿಶಿಷ್ಟರೂ ಬಳಸುತ್ತಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಅನುದಾನವನ್ನು ಈ ಕಾಮಗಾರಿಗಳಿಗೆ ವಿನಿಯೋಗಿಸಲು ಸೆಕ್ಷನ್‌ 7–ಡಿ ಅವಕಾಶ ಕಲ್ಪಿಸಿದೆ.

ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾವಣೆ ಮಾಡುವುದನ್ನು ನಿರ್ಬಂಧಿಸುವುದು ಕಾಯ್ದೆಯ ಪ್ರಮುಖ ಧ್ಯೇಯಗಳಲ್ಲಿ ಒಂದು. ಆದರೆ, ಈ ಕಾಯ್ದೆಯ ಸೆಕ್ಷನ್‌ 7–ಡಿ ದುರ್ಬಳಕೆ ಪದೇಪದೇ ಆಗುತ್ತಲೇ ಇದೆ. ಅದರ ಪರಿಣಾಮವಾಗಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಒದಗಿಸಿದ್ದ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಅನುದಾನವು ಅನ್ಯ ಕಾರ್ಯಕ್ರಮಗಳಿಗಾಗಿ ವರ್ಗಾವಣೆಯಾಗಿದೆ. ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವ ಕಾಯ್ದೆಯ ಮೂಲ ಉದ್ದೇಶವೇ ಸೆಕ್ಷನ್‌–7ಡಿ ಕಾರಣದಿಂದ ವಿಫಲಗೊಳ್ಳುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಈಗಿನ ಸರ್ಕಾರವು 2023–24ರ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ಪರಿಶಿಷ್ಟರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ₹ 34,294 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಈ ಪೈಕಿ ₹ 11,000 ಕೋಟಿಯಷ್ಟು ಅನುದಾನವನ್ನು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ವರ್ಗಾಯಿಸುವ ನಿರ್ಧಾರವನ್ನು ಕೈಗೊಂಡಿದೆ. ದಲಿತ ಸಂಘಟನೆಗಳ ಪ್ರಬಲ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರವು ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7–ಡಿ ಅನ್ನು ರದ್ದುಗೊಳಿಸಲು ಮುಂದಾಗಿದೆ. ಇದಕ್ಕಾಗಿ ತಿದ್ದುಪಡಿ ಮಸೂದೆಯನ್ನು ವಿಧಾನ ಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ. ಆದರೆ, ಗ್ಯಾರಂಟಿಗಳ ಅನುಷ್ಠಾನಕ್ಕೆ ₹ 11,000 ಕೋಟಿಯಷ್ಟು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ವರ್ಗಾಯಿಸುವ ನಿರ್ಧಾರವನ್ನು ಹಿಂಪಡೆಯಲಾಗುತ್ತದೆಯೇ ಎಂಬುದರ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ಈವರೆಗೆ ಮಾಡಿರುವ ವೆಚ್ಚ ಹಾಗೂ ಈ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಶ್ವೇತಪತ್ರವೊಂದನ್ನು ಪ್ರಕಟಿಸಬೇಕು.

ಆ ಮೂಲಕ, ಪರಿಶಿಷ್ಟರ ಅಭಿವೃದ್ಧಿಗಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟು, ಬಳಕೆ ಮಾಡಬೇಕೆಂಬ ಕಾಯ್ದೆಯ ಅನುಷ್ಠಾನದಲ್ಲಿನ ಗೊಂದಲಗಳಿಗೆ ತೆರೆ ಎಳೆಯಬೇಕು. ಈ ಯೋಜನೆಗಳ ಅಡಿಯಲ್ಲಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸಲು ಅವಕಾಶ ನೀಡುವುದರಿಂದ ಶೋಷಿತ ಸಮುದಾಯಗಳ ಜನರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ಒದಗಿಸಿದ ಅನುದಾನವನ್ನು ಸಂಪೂರ್ಣವಾಗಿ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಪರಿಶಿಷ್ಟರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳಿಗೆ ಮಾತ್ರವೇ ಈ ಅನುದಾನ ಬಳಕೆಯಾಗಬೇಕು. ‘ಪರಿಭಾವಿತ ವೆಚ್ಚ’ ಎಂಬ ಪರಿಕಲ್ಪನೆಗೆ ಸರ್ಕಾರ ವಿದಾಯ ಹೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.