ADVERTISEMENT

ಸಂಪಾದಕೀಯ | ಪ್ರಸಾರ ಮಸೂದೆ ಕರಡು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ

ಸಂಪಾದಕೀಯ
Published 7 ಆಗಸ್ಟ್ 2024, 23:30 IST
Last Updated 7 ಆಗಸ್ಟ್ 2024, 23:30 IST
   
ಕರಡು ಮಸೂದೆಯಲ್ಲಿ ಇರುವ ಕೆಲವು ವಿವಾದಾತ್ಮಕ ಅಂಶಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ

ಕೇಂದ್ರ ಸರ್ಕಾರ ರೂಪಿಸಿರುವ ‘ಪ್ರಸಾರ ಮಸೂದೆ’ಯ ಕರಡು ಯಥಾರೂಪದಲ್ಲಿ ಕಾನೂನಾಗಿ ಜಾರಿಗೆ ಬಂದರೆ, ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಅವುಗಳನ್ನು ಪ್ರಸಾರ ಮಾಡುವುದು ಬಹಳ ಕಷ್ಟಕರವಾಗಲಿವೆ. ಅದರ ಪರಿಣಾಮವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಿಂದೆಂದೂ ಕಾಣದ ಬಗೆಯಲ್ಲಿ ತೊಂದರೆಗಳು ಎದುರಾಗಲಿವೆ. ಕೇಬಲ್ ಟಿ.ವಿ. ನಿಯಮಗಳ ಬದಲಿಗೆ ಜಾರಿಗೆ ತರಲು ಉದ್ದೇಶಿಸಿದ ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಮೊದಲ ಕರಡನ್ನು ಕೇಂದ್ರ ಸರ್ಕಾರವು ಸಾರ್ವಜನಿಕ ಚರ್ಚೆಗೆ ಕಳೆದ ವರ್ಷ ಬಿಡುಗಡೆ ಮಾಡಿತ್ತು. ನಂತರದ ಕೆಲವು ಕರಡುಗಳನ್ನು ಪ್ರಸಾರ ಮತ್ತು ಮನರಂಜನಾ ಉದ್ಯಮ ಸೇರಿದಂತೆ ಕೆಲವು ಆಯ್ದ ಭಾಗೀದಾರರಿಗೆ ನೀಡಲಾಗಿದೆ. ಆದರೆ, ಕರಡಿನಲ್ಲಿ ಏನಿದೆ ಎಂಬುದನ್ನು ಬಹಿರಂಗವಾಗಿ ಚರ್ಚಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಇದು ತಪ್ಪು. ಏಕೆಂದರೆ, ಸಂವಿಧಾನ ನೀಡಿರುವ ಮೂಲಭೂತ ಹಕ್ಕೊಂದರ ಮೇಲೆ ಪರಿಣಾಮ ಬೀರುವ ಹಾಗೂ ಪ್ರತಿ ನಾಗರಿಕನ ಮೇಲೆಯೂ ಪರಿಣಾಮ ಉಂಟುಮಾಡುವ ಮಸೂದೆಯೊಂದಕ್ಕೆ ಸಂಬಂಧಿಸಿದ ಚರ್ಚೆಗಳ ವಿಚಾರವಾಗಿ ಯಾವ ಗೋಪ್ಯತೆಯೂ ಇರಬಾರದು. ಗೋಪ್ಯತೆಯ ಕಾರಣಕ್ಕಾಗಿ ಮಾತ್ರವೇ ಅಲ್ಲದೆ ಮಸೂದೆಯಲ್ಲಿ ಇರುವ ಕೆಲವು ವಿವಾದಾತ್ಮಕ ಅಂಶಗಳ ಕಾರಣದಿಂದಾಗಿಯೂ ಅದರ ಬಗ್ಗೆ ಟೀಕೆಗಳು ಬಂದಿವೆ. ಕರಡು ಮಸೂದೆಯಲ್ಲಿ ಇರುವ ಅಂಶಗಳ ಬಗ್ಗೆ ಗೋಪ್ಯತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದರೂ ಈ ವಿವಾದಾತ್ಮಕ ಅಂಶಗಳು ವ್ಯಾಪಕವಾಗಿ ವರದಿಯಾಗಿವೆ, ಗಂಭೀರ ಕಳವಳಕ್ಕೆ ಕಾರಣವಾಗಿವೆ.

ಜಗತ್ತಿನ ಯಾವುದೇ ಭಾಗದಿಂದ ಆನ್‌ಲೈನ್‌ ವೇದಿಕೆಗಳಿಗಾಗಿ ವಿಡಿಯೊಗಳನ್ನು ಸಿದ್ಧಪಡಿಸುವವರು, ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಖಾತೆ ಹೊಂದಿರುವವರು ಮತ್ತು ಆನ್‌ಲೈನ್‌ ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುವ ವೇದಿಕೆಗಳು ಪ್ರಸ್ತಾವಿತ ಕಾನೂನಿನ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಬಹುಮಾಧ್ಯಮ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಅಪ್ಲೋಡ್ ಮಾಡುವವರು ಅದರಿಂದ ಆದಾಯ ಗಳಿಸಿದರೆ ಅವರನ್ನು ಡಿಜಿಟಲ್ ಸುದ್ದಿ ಪ್ರಸಾರಕರು ಎಂದು ಪರಿಗಣಿಸಲಾಗುತ್ತದೆ. ಯೂಟ್ಯೂಬ್‌ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಸಾಮಾಜಿಕವಾಗಿ ಪ್ರಭಾವ ಬೀರುವ ವ್ಯಕ್ತಿಗಳನ್ನು ಹಾಗೂ ಸ್ವತಂತ್ರವಾದ ಸುದ್ದಿಸಂಸ್ಥೆಗಳನ್ನು ಒಂದು ಮಿತಿಯನ್ನು ಮೀರಿ ನಿಯಂತ್ರಿಸಿದಲ್ಲಿ, ಈಗಿನ ಅತ್ಯಂತ ಜನಪ್ರಿಯ ಅಭಿವ್ಯಕ್ತಿ ಮಾಧ್ಯಮಗಳಿಗೆ ಅಂಕುಶ ಹಾಕಿದಂತಾಗುತ್ತದೆ. ಇವರೆ‌ಲ್ಲ ತಮ್ಮನ್ನು ನಿಯಂತ್ರಣ ವ್ಯವಸ್ಥೆಯೊಂದರಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಕಾರ್ಯಕ್ರಮಗಳನ್ನು ಪರಿಶೀಲಿಸುವ ಸಮಿತಿಯೊಂದು ಇವರು ಸಿದ್ಧಪಡಿಸುವ ವಿಡಿಯೊಗಳನ್ನು, ಡಿಜಿಟಲ್ ವಸ್ತು–ವಿಷಯಗಳನ್ನು ಪರಿಶೀಲಿಸುತ್ತದೆ ಎಂದು ಕರಡು ಮಸೂದೆ ಹೇಳುತ್ತದೆ.

ತಮ್ಮ ಬಳಕೆದಾರರ ಬಗ್ಗೆ ಸರ್ಕಾರಕ್ಕೆ ಮಾಹಿತಿ ಒದಗಿಸದೆ ಇರುವ ಸಾಮಾಜಿಕ ಜಾಲತಾಣ ಕಂಪನಿಗಳು ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ. ಸರ್ಕಾರವು ಕೇಳಿದಾಗಲೆಲ್ಲ ಕಂಪನಿಗಳು ತಮ್ಮ ಬಳಕೆದಾರರ ಬಗ್ಗೆ ಮಾಹಿತಿ ಒದಗಿಸಬೇಕಾಗುತ್ತದೆ. ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿರುವ ದಂಡದ ಮೊತ್ತವು ಭಾರಿ ಮಟ್ಟದಲ್ಲಿದೆ. ಜಾಹೀರಾತು ಜಾಲವನ್ನು ಕೂಡ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಕರಡು ಮಸೂದೆಯಲ್ಲಿ ವಿವಾದಾತ್ಮಕವಾಗಿ ಇನ್ನೂ ಹಲವು ಅಂಶಗಳು ಇವೆ. ಇದು ಕಾನೂನಾಗಿ ಜಾರಿಗೆ ಬಂದರೆ, ಕಾನೂನಿನ ಕೆಲವು ಅಂಶಗಳನ್ನು ಮಾತ್ರವೇ ಬಳಕೆ ಮಾಡಿಕೊಳ್ಳುವ ಅವಕಾಶ ಕೂಡ ಸರ್ಕಾರಕ್ಕೆ ಇರಲಿದೆ. ಸರ್ಕಾರವು ಕೆಲವನ್ನು ಅಥವಾ ಒಂದು ಗುಂಪನ್ನು ಕೈಬಿಡಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ. ಅಂದರೆ, ಸರ್ಕಾರವು ಕೆಲವರ ವಿರುದ್ಧ ಕಾನೂನು ಕ್ರಮ ಜರುಗಿಸದೆ, ತಾನು ಬಯಸಿದವರ ವಿರುದ್ಧ ಮಾತ್ರ ಕಾನೂನಿನ ಕ್ರಮಕ್ಕೆ ಮುಂದಾಗಬಹುದು. ಕರಡು ಮಸೂದೆಯಲ್ಲಿ ಅಸ್ಪಷ್ಟವಾದ ಹಲವು ಅಂಶಗಳಿವೆ. ‘ನಿರ್ದಿಷ್ಟಪಡಿಸಬಹುದಾದ ಬಗೆಯಲ್ಲಿ’ ಎಂಬ ಮಾತು ಕರಡು ಮಸೂದೆಯಲ್ಲಿ 42 ಕಡೆ ಉಲ್ಲೇಖವಾಗಿದೆ ಎಂಬುದು ಗಮನಾರ್ಹ. ಇದರ ಪರಿಣಾಮವಾಗಿ, ಸರ್ಕಾರಕ್ಕೆ ಬಹಳ ಹೆಚ್ಚು ಎನ್ನಬಹುದಾದ ವಿವೇಚನಾಧಿಕಾರ ಸಿಗುತ್ತದೆ. ಇದರ ಪರಿಣಾಮಗಳನ್ನು ಯಾರಾದರೂ ಊಹಿಸಬಹುದು. ಈ ವಿಚಾರಗಳನ್ನು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರಸ್ತಾಪಿಸಿವೆ. ಸತ್ಯವನ್ನು ಹತ್ತಿಕ್ಕಿ, ಅಪ್ರಜಾಸತ್ತಾತ್ಮಕವಾದ ಹಾಗೂ ಕರಾಳವಾದ ಕಾನೂನೊಂದನ್ನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಅವು ಆರೋಪಿಸಿವೆ. ಕರಡು ಮಸೂದೆಯು ಕಾನೂನಿನ ರೂಪ ಪಡೆದು ಅನುಷ್ಠಾನಕ್ಕೆ ಬಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಲಿಗೆ, ಸರ್ಕಾರವು ಈ ಹಿಂದೆ ಕೈಗೊಂಡಿದ್ದ ಇತರ ಯಾವುದೇ ಕ್ರಮಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಬಹುದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.