ADVERTISEMENT

ಸಂಪಾದಕೀಯ | ಹಲವು ಪಾಠಗಳನ್ನು ಕಲಿಸಿದ ದುಬೈ ಮಹಾಮಳೆ ದುರಂತ

ಸಂಪಾದಕೀಯ
Published 23 ಏಪ್ರಿಲ್ 2024, 22:06 IST
Last Updated 23 ಏಪ್ರಿಲ್ 2024, 22:06 IST
   

ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ದುಬೈ ನಗರದಲ್ಲಿ ಹಿಂದೆಂದೂ ಕಂಡರಿಯದಂತಹ ಮಹಾಮಳೆ ಸುರಿದು ಅಪಾರ ಹಾನಿ ಉಂಟುಮಾಡಿದೆ. ಇದು ಹವಾಮಾನ ವೈಪರೀತ್ಯದ ಪರಿಣಾಮ ಎನ್ನುವುದಕ್ಕಿಂತ ಮನುಷ್ಯನ ಕೆಲಸಗಳಿಂದ ಆಗಿರುವ ಪ್ರಮಾದ. ದುಬೈಯಲ್ಲಿ ಒಂದೇ ದಿನ 254 ಮಿ.ಮೀ. ಮಳೆಯಾಗಿದೆ. ಇದು ಆ ಪ್ರದೇಶದಲ್ಲಿ 18 ತಿಂಗಳಲ್ಲಿ ಬೀಳುವ ಮಳೆಗೆ ಸಮಾನ. 1949ರಲ್ಲಿ ಹವಾಮಾನ ದಾಖಲಾತಿ ಆರಂಭವಾದಾಗಿನಿಂದಲೂ ಇದು ಗರಿಷ್ಠ ಪ್ರಮಾಣದ ಮಳೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ತಲೆದೋರಿತು. ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣವು ಜಲಾವೃತಗೊಂಡಿತು. ವಿಮಾನ ಹಾರಾಟ ವ್ಯತ್ಯಯಗೊಂಡಿತು; ಶಾಲೆಗಳನ್ನು ಮುಚ್ಚಬೇಕಾಯಿತು ಮತ್ತು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಕಾರುಗಳು ಪ್ರವಾಹದಲ್ಲಿ ತೇಲಿಹೋದವು, ವಿದ್ಯುತ್‌ ಸಂಪರ್ಕ ಕಡಿತಗೊಂಡಿತು ಮತ್ತು ಜನರು ಕೆಲಸದ ಸ್ಥಳ ಅಥವಾ ರಸ್ತೆಗಳಲ್ಲಿಯೇ ಸಿಲುಕಿಕೊಂಡರು. ನಷ್ಟದ ಮೊತ್ತವು ಕೋಟ್ಯಂತರ ಡಾಲರ್‌. ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿತು. ಮರಳುಗಾಡಿನಲ್ಲಿ ಈ ಪ್ರಮಾಣದ ಮಳೆ ಬಿದ್ದಿರುವುದು ಹಲವು ಪ್ರಶ್ನೆಗಳನ್ನು ಎತ್ತಿತು. ಹಲವು ವಿಚಾರಗಳು ಚರ್ಚೆಗೊಳಗಾದವು. ನಿಸರ್ಗದ ಮೇಲೆ ಮನುಷ್ಯನ ದಾಳಿ ಮತ್ತು ಅದರ ಪರಿಣಾಮವೇ ಈಗಿನ ಸ್ಥಿತಿಗೆ ಕಾರಣ ಎಂಬುದೇ ಈ ಚರ್ಚೆಗಳಲ್ಲಿ ಪ್ರಸ್ತಾಪವಾದ ಮುಖ್ಯ ವಿಚಾರಗಳಾಗಿದ್ದವು. 

ಜಗತ್ತಿನ ಅತ್ಯಂತ ಬೆರಗಿನ ನಗರವಾಗಬೇಕು ಎಂಬುದು ದುಬೈಯ ಇಚ್ಛೆಯಾಗಿತ್ತು. ಅದಕ್ಕಾಗಿ ನಿರ್ಮಾಣ ಚಟುವಟಿಕೆ ನಿರಂತರವಾಗಿ ನಡೆಯಿತು. ಗಗನಚುಂಬಿ ಕಟ್ಟಡಗಳು, ರಸ್ತೆ, ವಿಮಾನ ನಿಲ್ದಾಣಗಳ ನಿರ್ಮಾಣದ ಮೂಲಕ ವಾಸ್ತುಶಿಲ್ಪದ ಅದ್ಭುತಗಳನ್ನು ರೂಪಿಸಲಾಯಿತು. ಇವೆಲ್ಲವೂ ಕೆಲವೇ ವರ್ಷಗಳಲ್ಲಿ ನಡೆದುಹೋದವು. ಬಹಳಷ್ಟನ್ನು ಅಲ್ಪಾವಧಿಯಲ್ಲಿ ಮಾಡಲಾಯಿತು. ಈ ತರಾತುರಿಯಿಂದಾಗಿ ಎಲ್ಲ ಅಂಶಗಳ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗಲಿಲ್ಲ. ಮಳೆನೀರು ಹರಿದುಹೋಗಲು ಸಮರ್ಪಕವಾದ ಚರಂಡಿ ವ್ಯವಸ್ಥೆಯನ್ನು ನಿರ್ಮಿಸುವ ಕಡೆಗೆ ಗಮನವನ್ನೇ ಕೊಡಲಿಲ್ಲ.

ADVERTISEMENT

ಮಳೆಯೇ ಇಲ್ಲದ ಮರಳುಗಾಡಿನಲ್ಲಿ ಮಳೆನೀರು ಚರಂಡಿ ಏಕೆ ಎಂಬ ಅಸಡ್ಡೆ ಇದಕ್ಕೆ ಕಾರಣ. ಹಲವು ಪ್ರದೇಶಗಳಲ್ಲಿ ಮಳೆನೀರು ಹರಿಯಲು ಅಥವಾ ಭೂಮಿಯೊಳಕ್ಕೆ ಇಂಗಲು ವ್ಯವಸ್ಥೆಯೇ ಇಲ್ಲ. ಮಳೆಯೇ ಇಲ್ಲದ ಈ ಪ್ರದೇಶದಲ್ಲಿ ಮೋಡ ಬಿತ್ತನೆಯ ಮೂಲಕ ಮಳೆ ಬರಿಸುವ ವಿಧಾನವನ್ನು ಬಹಳ ವರ್ಷಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಮಹಾಮಳೆಗೆ ಮೋಡಬಿತ್ತನೆಯೂ ಒಂದು ಕಾರಣ ಎಂದೂ ಹೇಳಲಾಗುತ್ತಿದೆ. ಮಹಾಮಳೆಗೂ ಮುನ್ನ ಮೋಡಬಿತ್ತನೆ ಮಾಡಿರಲಿಲ್ಲ ಎಂದು ಯುಎಇ ಹೇಳಿದೆ. ಈಗ ಬಿದ್ದಿರುವ ಮಳೆ ಮತ್ತು ಮೋಡಬಿತ್ತನೆ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಪರಿಣತರೂ ಹೇಳಿದ್ದಾರೆ. ಎಲ್‌ ನಿನೊ ವಿದ್ಯಮಾನವೇ ಭಾರಿ ಮಳೆಗೆ ಕಾರಣ ಎಂದೂ ಹೇಳಲಾಗುತ್ತಿದೆ. ಹವಾಮಾನ ಬದಲಾವಣೆಯಿಂದಾಗಿ ಉಂಟಾದ ವಿಶಿಷ್ಟವಾದ ವಾತಾವರಣ ಸ್ಥಿತಿಯೇ ಮಹಾಮಳೆ ಮತ್ತು ಪ್ರವಾಹಕ್ಕೆ ಕಾರಣ ಎಂಬುದು ಪರಿಣತರ ಒಂದು ವರ್ಗದ ಅಭಿಪ್ರಾಯ. 

ಜಗತ್ತಿನ ವಿವಿಧ ಭಾಗಗಳಲ್ಲಿ ಕಂಡುಬರುತ್ತಿರುವ ಹವಾಮಾನದ ಅತಿರೇಕಗಳಿಗೆ ಹವಾಮಾನ ಬದಲಾವಣೆಯೇ ಕಾರಣ ಎಂದು ಹೇಳಲಾಗುತ್ತಿದೆ. ಮರಳುಗಾಡಿನಲ್ಲಿ ಮಳೆ, ಮಳೆ ಪ್ರದೇಶದಲ್ಲಿ ಬರಗಾಲದಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿ ಜಗತ್ತಿನ ಹಲವು ಭಾಗಗಳಲ್ಲಿ ತಲೆದೋರಿದೆ. ರಾಜಸ್ಥಾನದ ಮರುಭೂಮಿಯು ಚಂಡಮಾರುತದಿಂದಾದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಮುಂಗಾರು ಮಳೆಯು ಸಮೃದ್ಧವಾಗಿ ಸುರಿಯುವ ಪ್ರದೇಶಗಳು ಮಳೆ ಕೊರತೆಯಿಂದ ಕಂಗೆಟ್ಟಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಳೆಯು ಭಾರಿ ಪ್ರಮಾಣದಲ್ಲಿ ಸುರಿಯುತ್ತದೆ ಎಂದು ಹಲವು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಬದಲಾವಣೆಯನ್ನು ತಡೆಯುವ ದಿಸೆಯಲ್ಲಿ ಮಾಡಬೇಕಾದ ಕೆಲಸಗಳನ್ನು ಬಹಳ ಬೇಗನೆ ಮಾಡಬೇಕಿದೆ ಎಂಬುದಕ್ಕೆ ದುಬೈ ದುರಂತವು ಒಂದು ಎಚ್ಚರಿಕೆ ಗಂಟೆಯಾಗಿದೆ. ಜಗತ್ತಿನ ಹೆಚ್ಚಿನ ನಗರಗಳು ಹೊಂದಿಲ್ಲದ ಹಣ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಬೆಂಬಲ ದುಬೈಗೆ ಇದೆ. ಆದರೆ, ಎಲ್ಲವೂ ಇರುವ ಈ ನಗರವನ್ನೇ ನಿಸರ್ಗವು ಥರಗುಟ್ಟುವಂತೆ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.