ADVERTISEMENT

ಸಂಪಾದಕೀಯ | ರಾಜ್ಯಗಳ ಜೊತೆ ಸಮಾಲೋಚಿಸಿ ಪರೀಕ್ಷಾ ವ್ಯವಸ್ಥೆ ಸರಿಪಡಿಸಿ

ಉತ್ತಮವಾದ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕಿರುವುದು ವಿದ್ಯಾರ್ಥಿಗಳು ಮತ್ತು ದೇಶದ ಹಿತದೃಷ್ಟಿಯಿಂದ ಬಹಳ ಮುಖ್ಯವಾದುದು

ಸಂಪಾದಕೀಯ
Published 29 ಜುಲೈ 2024, 0:30 IST
Last Updated 29 ಜುಲೈ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನೀಟ್‌–ಯುಜಿ ಮರುಪರೀಕ್ಷೆಯ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಹೀಗಾಗಿ, ವಿವಾದಕ್ಕೆ ಒಳಗಾಗಿದ್ದ ನೀಟ್‌–ಯುಜಿ ಕುರಿತಂತೆ ಎರಡು ತಿಂಗಳಿನಿಂದ ಇದ್ದ ಅನಿಶ್ಚಿತ ಸ್ಥಿತಿ ಮರೆಯಾಗಿದೆ. ಸುದೀರ್ಘ ವಿಳಂಬದ ಬಳಿಕ ಕೌನ್ಸೆಲಿಂಗ್‌ ಮತ್ತು ಪ್ರವೇಶ ಪ್ರಕ್ರಿಯೆ ಆರಂಭಿಸಬಹುದಾಗಿದೆ. ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆ ಆಗುವ ರೀತಿಯಲ್ಲಿ ‘ವ್ಯವಸ್ಥಿತ ಅಕ್ರಮ’ ನಡೆದಿರುವುದಕ್ಕೆ ದಾಖಲೆಗಳೇನೂ ಇಲ್ಲ ಎಂಬ ಕಾರಣ ನೀಡಿ ಮರುಪರೀಕ್ಷೆಯ ಬೇಡಿಕೆಯನ್ನು ನ್ಯಾಯಾಲಯವು ತಳ್ಳಿಹಾಕಿದೆ.

ಮರುಪರೀಕ್ಷೆ ನಡೆಸಿದರೆ ಅದರ ಪರಿಣಾಮಗಳು ಏನಾಗಬಹುದು ಎಂಬುದನ್ನೂ ನ್ಯಾಯಾಲಯವು ಪರಿಶೀಲನೆಗೆ ಒಳಪಡಿಸಿದೆ. ಮರುಪರೀಕ್ಷೆ ನಡೆಸಿದರೆ ಈಗಾಗಲೇ ಪರೀಕ್ಷೆ ಬರೆದಿರುವ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ; ಕೋರ್ಸ್‌ ಪ್ರವೇಶದ ವೇಳಾಪಟ್ಟಿ ಏರುಪೇರಾಗುತ್ತದೆ ಮತ್ತು ಇದು ಮುಂದಿನ ಎಲ್ಲ ಪ್ರಕ್ರಿಯೆಗಳ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪರೀಕ್ಷೆ ನಡೆಸಿದ ರೀತಿಯಲ್ಲಿ ಗಂಭೀರ ಲೋಪಗಳು ಉಂಟಾಗಿವೆ. ಪಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ದೃಢಪಟ್ಟಿದೆ. ಹಲವು ರೀತಿಯ ಅಕ್ರಮಗಳು ಮತ್ತು ನಿಯಮಗಳ ಉಲ್ಲಂಘನೆಯನ್ನು ತನಿಖಾ ತಂಡವು ಪತ್ತೆ ಮಾಡಿದೆ.

ADVERTISEMENT

ನೂರಕ್ಕೆ ನೂರು ಅಂಕ ಪಡೆದಿದ್ದ 44 ಅಭ್ಯರ್ಥಿಗಳೂ ಸೇರಿ ಒಟ್ಟು ನಾಲ್ಕು ಲಕ್ಷ ಅಭ್ಯರ್ಥಿಗಳಿಗೆ ನೀಡಿದ್ದ ಅಂಕಗಳನ್ನು ಸರಿಪಡಿಸುವಂತೆಯೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ಕೋರ್ಟ್ ನಿರ್ದೇಶನ ನೀಡಿದೆ. ಭೌತವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಇದ್ದ ಒಂದು ಪ್ರಶ್ನೆಗೆ ತಪ್ಪಾಗಿ ನೀಡಿರುವ ಅಂಕವನ್ನು ಸರಿಪಡಿಸುವಂತೆಯೂ ಸೂಚಿಸಲಾಗಿದೆ. 

ಪರೀಕ್ಷೆ ನಡೆಸಿದ ರೀತಿಯಲ್ಲಿ ಹಲವು ಲೋಪಗಳು ಇದ್ದವು ಎಂಬುದನ್ನು ಇವೆಲ್ಲವೂ ತೋರಿಸುತ್ತವೆ. ಹಾಗಾಗಿ, ಮರುಪರೀಕ್ಷೆಗೆ ನ್ಯಾಯಾಲಯ ಒಪ್ಪದೇ ಇರುವುದರಿಂದ ತನ್ನ ನಿಲುವನ್ನು ದೃಢಪಡಿಸಿ
ದಂತಾಗಿದೆ ಎಂದು ಸರ್ಕಾರ ಹೇಳುವುದು ಸರಿಯಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ‘ಸತ್ಯಕ್ಕೆ ಜಯವಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ, ಪರೀಕ್ಷಾ ವ್ಯವಸ್ಥೆಯು ಅಕ್ರಮಗಳಿಗೆ ಅವಕಾಶ ಇರುವ ರೀತಿಯಲ್ಲಿ ದುರ್ಬಲವಾಗಿದೆ ಮತ್ತು ಯಾವುದೇ ರೀತಿಯ ದಾಳಿಗೂ ಒಳಗಾಗುವ ರೀತಿಯಲ್ಲಿ ಶಿಥಿಲವಾಗಿದೆ ಎಂಬುದೇ ಸತ್ಯ. ಪರೀಕ್ಷಾ ಮಾಫಿಯಾವೇ ಇದೆ, ಹಲವು ಜನರನ್ನು ಬಂಧಿಸಲಾಗಿದೆ ಮತ್ತು ಹಲವು ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುವು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ಎನ್‌ಟಿಎ ತೆಗೆದುಕೊಂಡ ವಿವಿಧ ಕ್ರಮಗಳ ಕುರಿತು ‍ಪ್ರಶ್ನೆಗಳು ಎದ್ದಿವೆ. ಜೂನ್‌ನಲ್ಲಿ ನಡೆದ ಯುಜಿಸಿ–ಎನ್‌ಇಟಿ ಪರೀಕ್ಷೆಯನ್ನು ಯಾವುದೇ ನಿರ್ದಿಷ್ಟ ಕಾರಣ ಕೊಡದೆಯೇ ಸರ್ಕಾರ ರದ್ದು ಮಾಡಿದೆ. ಎನ್‌ಟಿಎ ಮುಖ್ಯಸ್ಥರನ್ನು ಸೇವೆಯಿಂದ ವಜಾ ಮಾಡಲಾಗಿದೆ; ಸಂಸ್ಥೆಯ ಅವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದೆ; ಎನ್‌ಟಿಎ ಸುಧಾರಣೆಗೆ ಸಲಹೆ ನೀಡುವಂತೆ ಸೂಚಿಸಲಾಗಿದೆ. ಈ ಮೂಲಕ ಪರೀಕ್ಷಾ ವ್ಯವಸ್ಥೆಯು ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ.  

ಈಗಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಪಡಿಸಿ, ಪಾರದರ್ಶಕ, ವಿಶ್ವಾಸಾರ್ಹ, ದಕ್ಷ ಮತ್ತು ಉತ್ತರದಾಯಿಯಾಗಿ ರೂಪಿಸಬೇಕಿದೆ. ವೈವಿಧ್ಯಮಯವಾದ ಶೈಕ್ಷಣಿಕ, ಸಾಮಾಜಿಕ ಸನ್ನಿವೇಶ ಮತ್ತು ಅಗತ್ಯಗಳನ್ನು ಹೊಂದಿರುವ ಭಾರತದಂತಹ ದೇಶಕ್ಕೆ ‘ಒಂದು ದೇಶ, ಒಂದು ಪರೀಕ್ಷೆ’ ಎಂಬ ಪರಿಕಲ್ಪನೆಯೇ ಹೊಂದುವುದಿಲ್ಲ ಎಂಬುದು ಮೌಲಿಕವಾದ ವಾದವಾಗಿದೆ. ಕೆಲವೇ ಸ್ಥಳಗಳಲ್ಲಿ ಆಗುವ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮವು ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆಯೇ ಕರಿಛಾಯೆ ಬೀರುತ್ತದೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಒತ್ತಡಕ್ಕೆ ತಳ್ಳುತ್ತದೆ.

ನೀಟ್‌–ಯುಜಿ ಪರೀಕ್ಷಾ ವ್ಯವಸ್ಥೆಯು ನಗರದ ಶ್ರೀಮಂತರ ಪರವಾಗಿದೆ, ಕೋಚಿಂಗ್‌ ಪಡೆದುಕೊಳ್ಳಲು ಸಾಧ್ಯವಿರುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಎಂಬ ಟೀಕೆಯೂ ಇದೆ. ಕರ್ನಾಟಕ ಸೇರಿ ಕೆಲವು ರಾಜ್ಯಗಳು ನೀಟ್‌ ವ್ಯವಸ್ಥೆಯಿಂದ ಹೊರ ಹೋಗಲು ಬಯಸಿವೆ. ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಸಂಬಂಧಪಟ್ಟ ಇತರರ ಜೊತೆಗೆ ಸಮಾಲೋಚನೆ ನಡೆಸಿ ಉತ್ತಮವಾದ ಪರೀಕ್ಷಾ ವ್ಯವಸ್ಥೆ ರೂಪಿಸಬೇಕಿದೆ. ವಿದ್ಯಾರ್ಥಿಗಳು ಮತ್ತು ದೇಶದ ಹಿತದೃಷ್ಟಿಯಿಂದ ಇದು ಬಹಳ ಮುಖ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.