ADVERTISEMENT

ಭಾರತದ ಮಹಿಳಾ ಬಾಕ್ಸಿಂಗ್‌ ಹೊಸ ಹುರುಪಿಗೆ ಪ್ರೇರಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 20:00 IST
Last Updated 26 ನವೆಂಬರ್ 2018, 20:00 IST
   

‘ಮ್ಯಾಗ್ನಿಫಿಸೆಂಟ್ ಮೇರಿ’ ಎಂಬ ಈ ಎರಡು ಪದಗಳೇ ಸಾಕು ಭಾರತದ ಬಾಕ್ಸಿಂಗ್ ಲೋಕದ ಹಿರಿಮೆಯನ್ನು ಜಗಕೆ ಸಾರಲು. ಶೂನ್ಯದಿಂದ ಸಾಧನೆಯ ಶಿಖರವೇರಿ ನಿಂತ ಮೇರಿ ಕೋಮ್ ಅವರಿಗೆ ಅಭಿಮಾನಿಗಳು ಕರೆಯುವ ಹೆಸರು ಇದು. ಮಣಿಪುರದ ಗ್ರಾಮ ಕಾಂಗ್ಟಿಯಲ್ಲಿ ಜನಿಸಿದ ಮೇರಿ ಕೋಮ್ ಇವತ್ತು ವಿಶ್ವ ಬಾಕ್ಸಿಂಗ್‌ ಕ್ರೀಡೆಯ ಅನಭಿಷಿಕ್ತ ರಾಣಿಯಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆರು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಮಹಿಳಾ ಬಾಕ್ಸರ್ ಆಗಿದ್ದಾರೆ.

ಕ್ಯೂಬಾದ ಫೆಲಿಕ್ಸ್‌ ಸೇವನ್ ಅವರು ಪುರುಷರ ವಿಭಾಗದಲ್ಲಿ ಮಾಡಿರುವ ಸಾಧನೆಯನ್ನೂ ಸರಿಗಟ್ಟಿದ್ದಾರೆ. ನವೆಂಬರ್ 24ರಂದು ನವದೆಹಲಿಯ ಕೆ.ಡಿ. ಜಾಧವ್ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್‌ನ ಫ್ಲೈವೇಟ್ (48 ಕೆ.ಜಿ.) ವಿಭಾಗದಲ್ಲಿ ಉಕ್ರೇನ್‌ನ ಹನಾ ಒಖೋಟಾ ಅವರನ್ನು 5–0ಯಿಂದ ಮಣಿಸಿದ ಮೇರಿ ಆರನೇ ಚಿನ್ನ ಗಳಿಸಿದರು. ಅವರು 2001ರಲ್ಲಿ ಬೆಳ್ಳಿ ಪದಕ ಗೆದ್ದಾಗ ಹದಿನೆಂಟು ವರ್ಷದವರಾಗಿದ್ದರು.ಈಗ ಅವರಿಗೆ 35 ವರ್ಷ. ಮೂವರು ಗಂಡುಮಕ್ಕಳ ತಾಯಿಯೂ ಹೌದು. ಆದರೆ 2002ರಲ್ಲಿ ಅವರು ಮೊದಲ ಬಾರಿಗೆ ಚಿನ್ನ ಜಯಿಸಿದಾಗ ಇದ್ದ ಹುರುಪು ಈಗಲೂ ಮಾಸಿಲ್ಲ. 16 ವರ್ಷಗಳ ಅವಧಿಯಲ್ಲಿ ಅವರ ಆಟ ಮತ್ತಷ್ಟು ಪರಿಪಕ್ವಗೊಂಡಿದೆ. ಬಹಳಷ್ಟು ಮಹಿಳಾ ಕ್ರೀಡಾಪಟುಗಳು ತಮ್ಮ ಮದುವೆಯ ನಂತರ ಕ್ರೀಡಾಂಗಣದಿಂದ ವಿಮುಖರಾಗುವುದೇ ಹೆಚ್ಚು. ಆದರೆ, ಮೇರಿ ಇದಕ್ಕೆ ಅಪವಾದ. ಅವರು 2007ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರ ನಂತರ ಅವರು ವಿಶ್ವ ಟೂರ್ನಿಗಳಲ್ಲಿ ಮೂರು ಚಿನ್ನ, 2012ರಲ್ಲಿ ಒಲಿಂಪಿಕ್ಸ್‌ ಕಂಚು ಸೇರಿದಂತೆ ಹಲವು ಪದಕಗಳನ್ನು ಗೆದ್ದಿದ್ದಾರೆ. ನಿರ್ದಿಷ್ಟ ದೇಹತೂಕ ಮತ್ತು ಫಿಟ್‌ನೆಸ್‌ ಕಾಪಾಡಿಕೊಂಡು ನಿರಂತರ ಸಾಧನೆ ಮಾಡುವುದು ಸುಲಭವಲ್ಲ. ಈಗಲೂ ಅವರ ಪಂಚ್‌ಗಳ ವೇಗ ಹುಲಿಯ ಪಂಜಾಪ್ರಹಾರ
ದಷ್ಟೇ ಚುರುಕು. ತಮ್ಮ ರಾಜ್ಯದಲ್ಲಿ ಬಾಕ್ಸಿಂಗ್ ತರಬೇತಿ ಅಕಾಡೆಮಿಯನ್ನೂ ನಡೆಸುತ್ತಿರುವ ಮೇರಿ, ಯುವ ಬಾಕ್ಸರ್‌ಗಳಿಗೆ ಪ್ರೇರಣೆಯಾಗಿದ್ದಾರೆ.

ಮನೆಯಲ್ಲಿ ಬಡತನ ಮತ್ತು ಆರಂಭಿಕ ಹಂತದಲ್ಲಿ ಬಾಕ್ಸಿಂಗ್ ಕಲಿಯಲು ಅಪ್ಪ ಮಾಂಗ್ಟೆ ತೋಣಪಾ ಕೋಮ್ ಅವರ ವಿರೋಧವಿದ್ದರೂ ಛಲದಿಂದ ಸಾಧನೆ ಮಾಡಿದವರು ಮೇರಿ. ಪತಿ ಕರಂಗ್ ಒನ್ಲೆ ಅವರ ಬೆಂಬಲವೂ ಮೇರಿ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರ ಸಾಧನೆಯು ಭಾರತದ ಮಹಿಳಾ ಬಾಕ್ಸಿಂಗ್‌ಗೆ ಹೊಸ ಚೈತನ್ಯ ತುಂಬಿದೆ. ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ ದಾಖಲೆಗಳನ್ನು ನೋಡಿದರೆ ಅದು ಸಾಬೀತಾಗುತ್ತದೆ. ಒಟ್ಟು ಹತ್ತು ಬಾಕ್ಸರ್‌ಗಳು ತಂಡದಲ್ಲಿದ್ದರು. ಅದರಲ್ಲಿ ಮೇರಿ ಮತ್ತು ಸರಿತಾದೇವಿ ಅವರೇ ಹೆಚ್ಚು ಅನುಭವಿಗಳು. ಬೆಳ್ಳಿ ಗೆದ್ದ ಸೋನಿಯಾ ಚಾಹಲ್ (57 ಕೆ.ಜಿ.), ಕಂಚಿನ ಪದಕಗಳನ್ನು ಗೆದ್ದ ಸಿಮ್ರನ್‌ ಜೀತ್ ಕೌರ್ (64 ಕೆ.ಜಿ.), ಲವ್ಲೀನಾ ಬೋರ್ಗೇನ್ (69 ಕೆ.ಜಿ.) ಭವಿಷ್ಯದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ. ಇವರಲ್ಲದೇ ಸವಿತಿ ಬೂರಾ, ಸೀಮಾ ಪೂನಿಯಾ, ಸೋನಿಯಾ, ಮನೀಷಾ ಮೋನ್ ಅವರು ಭರವಸೆಯ ಬಾಕ್ಸರ್‌ಗಳಾಗಿದ್ದಾರೆ. 2020ರಲ್ಲಿ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸವನ್ನೂ ಈ ಪ್ರತಿಭೆಗಳು ಹೆಚ್ಚಿಸಿವೆ. ಈ ಅವಕಾಶವನ್ನು ಭಾರತ ಬಾಕ್ಸಿಂಗ್ ಫೆಡರೇಷನ್ ಸದುಪಯೋಗಪಡಿಸಿಕೊಳ್ಳಬೇಕು. ಕರ್ನಾಟಕ ಬಾಕ್ಸಿಂಗ್ ಸಂಸ್ಥೆಯೂ ಕಾರ್ಯೋನ್ಮುಖವಾಗಲು ಸೂಕ್ತ ಕಾಲ ಇದು. ಮೇರಿ ಸಾಧನೆ ಇಲ್ಲಿಯ ಮಕ್ಕಳಿಗೂ ಸ್ಫೂರ್ತಿಯ ಸೆಲೆಯಾಗಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.