ADVERTISEMENT

ಆರ್‌ಬಿಐ ಸ್ವಾಯತ್ತತೆ ಪರ ನಿಲುವು ಗೌರವಿಸಬೇಕಾದುದು ಅಗತ್ಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:47 IST
Last Updated 29 ನವೆಂಬರ್ 2018, 20:47 IST
   

ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು, ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಪರವಾಗಿ ಸಮರ್ಥ ವಾದ ಮಂಡಿಸಿದ್ದಾರೆ.

ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದಾಗಿ ಆರ್‌ಬಿಐ ಸ್ವಾತಂತ್ರ್ಯಕ್ಕೆ ಎರವಾಗುತ್ತಿದೆ ಎನ್ನುವ ಶಂಕೆವ್ಯಕ್ತವಾಗುತ್ತಿರುವಾಗಲೇ ಈ ಬೆಳವಣಿಗೆ ಆಶಾದಾಯಕ. ಸದ್ಯಕ್ಕೆ ಆರ್‌ಬಿಐ ಬಳಿ ಇರುವ ಮೀಸಲು ನಿಧಿಯ ಮಟ್ಟವನ್ನು ಕಾಯ್ದುಕೊಂಡು ಹೋಗುವ ಅನಿವಾರ್ಯತೆ ಇರುವುದನ್ನೂ ಸಮಿತಿಗೆ ಮನದಟ್ಟು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಜಾಗತಿಕ ವಿದ್ಯಮಾನಗಳಲ್ಲಿನ ಏರಿಳಿತ ಮತ್ತು ಸಾಲ ಮರುಪಾವತಿಯ ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಈ ಪ್ರಮಾಣ ಕಾಯ್ದುಕೊಳ್ಳುವುದು ಅಗತ್ಯ ಎಂದೂ ಹೇಳಿದ್ದಾರೆ. ಮೀಸಲು ನಿಧಿಯು ಸರ್ಕಾರದ ದಿನನಿತ್ಯದ ಹಣಕಾಸು ಅಗತ್ಯ ಈಡೇರಿಸಲು ಇರುವಂಥದ್ದಲ್ಲ ಎನ್ನುವ ಕಟು ವಾಸ್ತವವನ್ನು ಸರ್ಕಾರಕ್ಕೆ ನೆನಪಿಸಿದ್ದಾರೆ. ಹಾಗೆಯೇ ಆರ್ಥಿಕತೆಯ ಬಗ್ಗೆ ಹಿತಕರವಾದ ಚಿತ್ರಣವನ್ನೇ ಮಂಡಿಸಿದ್ದಾರೆ.

ADVERTISEMENT

ಗರಿಷ್ಠ ಮುಖಬೆಲೆಯ ನೋಟು ರದ್ದತಿಯ ಸಂಕಟಗಳು ಮರೆಯಾಗಿವೆ. ಹಣದುಬ್ಬರ ನಿಯಂತ್ರಣದಲ್ಲಿ ಇದೆ. ಕಚ್ಚಾ ತೈಲ ಬೆಲೆ ಇಳಿಯುತ್ತಿರುವುದರಿಂದ ದೇಶಿ ಆರ್ಥಿಕತೆಗೆ ಅಗತ್ಯವಾಗಿರುವ ಉತ್ತೇಜನ ದೊರೆಯುತ್ತಿದೆ ಎಂದೂ ಪ್ರತಿಪಾದಿಸಿದ್ದಾರೆ. ಆರ್ಥಿಕ ಸಂಕಷ್ಟಗಳಿಂದ ಎದುರಾಗಬಹುದಾದ ಆಘಾತವನ್ನು ಸಮರ್ಥವಾಗಿ ಎದುರಿಸಲು, ಬ್ಯಾಂಕಿಂಗ್‌ ವಲಯದ ಹಣಕಾಸು ಸಾಮರ್ಥ್ಯ ಸುಧಾರಣೆಗೆ ಅಂತರರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾದ ‘ಬಾಸೆಲ್‌ –3’ ನಿಯಮ ಪಾಲಿಸುವುದಾಗಿ ‘ಜಿ–20’ ಸಂಘಟನೆಗೆ ಭಾರತ ವಾಗ್ದಾನ ನೀಡಿರುವುದನ್ನು ಉಲ್ಲೇಖಿಸಿದ್ದಾರೆ.

ತಮ್ಮ ವಾದಕ್ಕೆ ಪೂರಕವಾಗಿ ಹಲವಾರು ಸಕಾರಣಗಳನ್ನು ನೀಡಿರುವುದೂ ಸಮರ್ಪಕವಾದದ್ದು. ಠೇವಣಿದಾರರ ಹಿತಾಸಕ್ತಿ ರಕ್ಷಣೆಗೆ ಸಂಬಂಧಿಸಿದ ಸ್ವಾಯತ್ತತೆಯು ಚೌಕಾಸಿಗೆ ಒಳಪಡುವ ವಿಷಯವಲ್ಲ. ಹಣಕಾಸು ನೀತಿ ನಿರೂಪಣೆ ವಿಷಯದಲ್ಲಿ ಆರ್‌ಬಿಐನ ಮಾತೇ ಅಂತಿಮ. ದೇಶಿ ಅರ್ಥ ವ್ಯವಸ್ಥೆಯ ಸಾಲ ಮರುಪಾವತಿ ಸಾಮರ್ಥ್ಯದ ‘ಎಎಎ’ ಮಾನದಂಡ ಕಾಯ್ದುಕೊಳ್ಳಲು ಮೀಸಲು ನಿಧಿಯನ್ನು ನಿರ್ದಿಷ್ಟ ಮಟ್ಟದಲ್ಲಿ ಕಾಯ್ದುಕೊಳ್ಳುವ ಅಗತ್ಯ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಮತ್ತು ಅವುಗಳ ಹಿಂದಿರುವ ಉದ್ದೇಶವನ್ನು ಸ್ವತಂತ್ರ ಮತ್ತು ವಸ್ತುನಿಷ್ಠವಾಗಿ ಆರ್‌ಬಿಐ ಪರಾಮರ್ಶಿಸುವುದು ಸರಿಯಾದುದೇ. ಆದರೆ ಇದೇ ನೆಪದಲ್ಲಿ ಅದರ ಸ್ವಾಯತ್ತತೆಗೆ ಧಕ್ಕೆ ತರುವ ರೀತಿಯಲ್ಲಿ ಕೇಂದ್ರ ಸರ್ಕಾರವು ಒಡಕಿನ ದನಿ ಎತ್ತಿರುವುದು ಸಮರ್ಥನೀಯವಲ್ಲ.

ಮೀಸಲು ನಿಧಿಯ ಹೊಸ ನಿಯಮ ರೂಪಿಸಲು ಪರಿಣತರ ಸಮಿತಿ ರಚಿಸುವ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತದಾರರಿಗೆ ಆಕರ್ಷಕ ಕೊಡುಗೆ ಪ್ರಕಟಿಸಲು ಈ ಹಣದ ಮೇಲೆ ಸರ್ಕಾರ ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ. ಈ ಉದ್ದೇಶ ಸಾಧಿಸಲು ದೇಶಿ ಆರ್ಥಿಕತೆಯ ಸ್ಥಿರತೆಯ ಹಿತ ಬಲಿಗೊಡುವುದು ವಿವೇಕಯುತ ನಿರ್ಧಾರವಲ್ಲ.

ಡಿಸೆಂಬರ್‌ 14ರಂದು ನಡೆಯಲಿರುವ ಆರ್‌ಬಿಐನ ನಿರ್ದೇಶಕ ಮಂಡಳಿ ಸಭೆಯಲ್ಲಿ, ತನ್ನ ಕಾರ್ಯವೈಖರಿ ಬದಲಾಯಿಸಿಕೊಳ್ಳಲು ಕೇಂದ್ರೀಯ ಬ್ಯಾಂಕ್‌ ಮೇಲೆ ಸರ್ಕಾರ ಮತ್ತೆ ಒತ್ತಡ ಹೇರುವ ನಿರೀಕ್ಷೆ ಇದೆ. ನಿರ್ದೇಶಕ ಮಂಡಳಿಯ ಮಾತೇ ಅಂತಿಮ ಎನ್ನುವ ಸಂದೇಶ ನೀಡಲು ಕೇಂದ್ರ ಉದ್ದೇಶಿಸಿದೆ ಎನ್ನಲಾಗಿದೆ.

ಇದು ಸಂಘರ್ಷ ತೀವ್ರಗೊಳ್ಳಲು ಅವಕಾಶ ಮಾಡಿಕೊಡಬಾರದಷ್ಟೆ. ಆರ್ಥಿಕತೆಗೆ ಚೇತರಿಕೆ ನೀಡಲು ಉದ್ದೇಶಿಸಿರುವ ಸರ್ಕಾರದ ಧೋರಣೆಯಲ್ಲಿ ಅಸಹಜತೆ ಏನೂ ಇಲ್ಲ. ಆದರೆ, ಬ್ಯಾಂಕ್‌ಗಳನ್ನು ನಿಯಂತ್ರಿಸುವ ಆರ್‌ಬಿಐನ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದು ಸರಿಯಲ್ಲ. ಇಂತಹ ಪ್ರಯತ್ನಗಳು ಅನಾಹುತಕ್ಕೆ ಎಡೆಮಾಡಿಕೊಡಲಿವೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

ಆರ್‌ಬಿಐನ ಸ್ವಾಯತ್ತತೆ ಬಗೆಗಿನ ವಿವಾದವನ್ನು ಅಷ್ಟು ಸುಲಭವಾಗಿ ಬಗೆಹರಿಸಲು ಸಾಧ್ಯವಿಲ್ಲ. ಎರಡೂ ಬಣಗಳು ತಮ್ಮ ಕಾರ್ಯವ್ಯಾಪ್ತಿಯ ಮಿತಿಯೊಳಗೆ ಇದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಷ್ಟೆ. ಈಗಿನ ಸಂಘರ್ಷವು ಅವುಗಳ ಹೊಣೆಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆಯೂ ನೋಡಿಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.