ಹಣಕಾಸಿನ ಅವ್ಯವಹಾರ ಮತ್ತು ಪಿತೂರಿ ನಡೆಸಿದ್ದಾರೆ ಎಂದು ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯವೊಂದರಲ್ಲಿ ಆರೋಪ ಹೊರಿಸಿರುವುದು, ಈ ಹಿಂದೆ ಅಮೆರಿಕದ ಶಾರ್ಟ್‌ಸೆಲ್ಲರ್ ‘ಹಿಂಡನ್‌ಬರ್ಗ್ ರಿಸರ್ಚ್’ ಸಂಸ್ಥೆಯು ಅದಾನಿ ಸಮೂಹವನ್ನು ಗುರಿಯಾಗಿಸಿ ಮಾಡಿದ್ದ ಆರೋಪಗಳಿಗಿಂತ ಗಂಭೀರವಾದುದು. ಈಗ ಅದಾನಿ ಅವರ ವಿರುದ್ಧ ಆರೋಪಗಳನ್ನು ಹೊರಿಸಿರುವುದು ಅಮೆರಿಕದ ಷೇರುಪೇಟೆ ನಿಯಂತ್ರಣ ಸಂಸ್ಥೆ ಎಸ್‌ಇಸಿ. ಇದು ಖಾಸಗಿ ಸಂಸ್ಥೆ ಅಲ್ಲ. ಅದಾನಿ ಗ್ರೀನ್ ಎನರ್ಜಿ ಕಂಪನಿಯು ವಿದ್ಯುತ್ ಪೂರೈಕೆ ಒಪ್ಪಂದವನ್ನು ಪಡೆದುಕೊಳ್ಳಲು ಭಾರತದ ಕೆಲವು ರಾಜ್ಯಗಳ ಅಧಿಕಾರಿಗಳಿಗೆ ಅಂದಾಜು ₹2,100 ಕೋಟಿಯಷ್ಟು ಲಂಚವನ್ನು ನೀಡಿದೆ ಎಂಬುದು ಆರೋಪದಲ್ಲಿರುವ ಅಂಶ. ಈ ಗುತ್ತಿಗೆಗಳಿಂದ 20 ವರ್ಷಗಳ ಅವಧಿಯಲ್ಲಿ ಅಂದಾಜು ₹16 ಸಾವಿರ ಕೋಟಿ ಲಾಭ ಆಗುತ್ತದೆ ಎನ್ನಲಾಗಿದೆ.
ಅಮೆರಿಕದ ನ್ಯೂಯಾರ್ಕ್‌ನ ನ್ಯಾಯಾಲಯವೊಂದು ಅದಾನಿ ಹಾಗೂ ಅವರ ಕೆಲವು ಜೊತೆಗಾರರ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಲಂಚದ ವಿಚಾರವನ್ನು ಮುಚ್ಚಿಟ್ಟು ಕಂಪನಿಯು ಸಾಲದಾತರು ಹಾಗೂ ಹೂಡಿಕೆದಾರರಿಂದ ಅಂದಾಜು ₹25 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದೆ ಎಂದು ಆರೋಪಿಸಲಾಗಿದೆ. ಆರೋಪದ ಸಂಗತಿ ಬಹಿರಂಗವಾದ ನಂತರದಲ್ಲಿ ಅದಾನಿ ಸಮೂಹದ ಹಲವು ಕಂಪನಿಗಳ ಷೇರುಮೌಲ್ಯ ಕುಸಿದಿದೆ. ಆರೋಪಗಳಿಗೆ ಆಧಾರವಾಗಿ ಮಾತುಕತೆಗಳಿಗೆ ಸಂಬಂಧಿಸಿದ ದಾಖಲೆಪತ್ರಗಳನ್ನು ಇರಿಸಲಾಗಿದೆ.ಅಮೆರಿಕದಲ್ಲಿ ಸಂಗ್ರಹಿಸಲಾದ ಹಣವನ್ನು ಭಾರತದಲ್ಲಿ ಲಂಚ ಕೊಡಲು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಲಂಚ ನೀಡುವ ಯೋಜನೆಯ ಭಾಗವಾಗಿ ಅಧಿಕಾರಿಯೊಬ್ಬರನ್ನು ಅದಾನಿ ಅವರು ಖುದ್ದಾಗಿ ಭೇಟಿ ಮಾಡಿದ್ದರು ಎಂದು ಅಮೆರಿಕದ ನ್ಯಾಯಾಲಯದಲ್ಲಿನ ಆರೋಪವು ಹೇಳುತ್ತದೆ. ಯೋಜನೆಯನ್ನು ಕಾರ್ಯಗತ ಮಾಡುವ ಬಗೆ ಹೇಗೆ ಎಂಬುದರ ಕುರಿತು ಆರೋಪಿಗಳು ಚರ್ಚೆ ನಡೆಸಿದ್ದರು, ಅವರು ಈ ಸಂಬಂಧವಾಗಿ ವಿದ್ಯುನ್ಮಾನ ಆ್ಯಪ್ ಒಂದನ್ನು ಬಳಸಿದ್ದರು ಎಂದೂ ವಿವರಿಸಲಾಗಿದೆ. ಆರೋಪಿಗಳು ತಮ್ಮ ಯೋಜನೆಯನ್ನು ಹಾಗೂ ಲಂಚದ ನಿರ್ದಿಷ್ಟ ವಿವರಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದಾಖಲು ಮಾಡಿಕೊಂಡಿದ್ದರು ಎಂದು ಆರೋಪದಲ್ಲಿ ಹೇಳಲಾಗಿದೆ. ಈ ಆರೋಪಗಳಿಗೆ ಹೋಲಿಸಿದರೆ ಹಿಂಡನ್‌ಬರ್ಗ್ ರಿಸರ್ಚ್ ಮಾಡಿದ ಆರೋಪಗಳು ಇಷ್ಟು ಗಂಭೀರವಾಗಿರಲಿಲ್ಲ. ಆ ಆರೋಪಗಳು ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರುವುದರ ಕುರಿತಾಗಿದ್ದವು. ಆದರೆ ಆ ಆರೋಪಗಳನ್ನು ಕೂಡ ಭಾರತದ ಸಂಸ್ಥೆಗಳು ಹಾಗೂ ಸರ್ಕಾರ ಸರಿಯಾಗಿ, ಆಳವಾಗಿ ತನಿಖೆಗೆ ಒಳಪಡಿಸಲಿಲ್ಲ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅದಾನಿ ವಿರುದ್ಧದ ಆರೋಪಗಳ ವಿಚಾರವಾಗಿ ಸರಿಯಾದ ಕ್ರಮ ತೆಗೆದುಕೊಂಡಂತೆ ಕಾಣಲಿಲ್ಲ. ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರೂ ಕೆಲವು ಪ್ರಶ್ನೆಗಳಿಗೆ ಗುರಿಯಾಗಬೇಕಾಯಿತು. ಅದಾನಿ ಸಮೂಹವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಆಡಳಿತಾರೂಢ ಬಿಜೆಪಿಗೆ ನಿಕಟವಾಗಿದೆ ಎಂದು ಪರಿಗಣಿತ
ವಾಗಿದೆ. ಆದರೆ ತಪ್ಪು ಮಾಡಿರುವ ಆರೋಪ ಎದುರಾದಾಗ ಇದು ಗುರಾಣಿಯಂತೆ ಬಳಕೆಯಾಗಬಾರದು. ಆರೋಪಗಳೆಲ್ಲವೂ ಸುಳ್ಳು ಎಂದು ಅದಾನಿ ಸಮೂಹ ಹೇಳಿದೆಯಾದರೂ ಒಂದೇ ಮಾತಿಗೆ ಎಲ್ಲವನ್ನೂ ನಿರಾಕರಿಸುವುದು ವಿಶ್ವಾಸಾರ್ಹ ಪ್ರತಿಕ್ರಿಯೆ ಆಗುವುದಿಲ್ಲ. ಅದಾನಿ ಸಮೂಹದ ವಿರುದ್ಧ ಆರೋಪಗಳು ಬಂದಾಗಲೆಲ್ಲ ಬಿಜೆಪಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆ ಸಮೂಹವನ್ನು ಸಮರ್ಥಿಸಲು ಮುಂದಾಗುವಂತೆ ಕಾಣುತ್ತದೆ. ಈಗ ಪಕ್ಷವು ಕಾನೂನಿಗೆ ಅನುಗುಣವಾಗಿ ಕ್ರಮ ಆಗುತ್ತದೆ ಎಂದು ಹೇಳಿದೆ. ಆದರೆ ಸರ್ಕಾರವು ಆ ರೀತಿ ಆಗುವಂತೆ ನೋಡಿಕೊಳ್ಳಬೇಕಿದೆ. ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಈಗಿನ ಆರೋಪದಲ್ಲಿ ಬೊಫೋರ್ಸ್ ಹಗರಣದಲ್ಲಿ ಇದ್ದಂತಹ ಎಲ್ಲ ಅಂಶಗಳೂ ಕಾಣುತ್ತಿವೆ– ಅಂದರೆ, ವಿದೇಶದಿಂದ ಆರೋಪ ಬಂದಿರುವುದು, ಗುತ್ತಿಗೆಗೆ ಲಂಚ ನೀಡಿರುವುದು, ಪಾವತಿಯ ಬಗ್ಗೆ ದಾಖಲೆ ಇಟ್ಟುಕೊಂಡಿರುವುದು, ಸಂಕೇತನಾಮಗಳನ್ನು ಬಳಕೆ ಮಾಡಿರುವುದು. ಈ ಆರೋಪದಲ್ಲಿನ ಸತ್ಯಾಸತ್ಯತೆಯನ್ನು ಹೊರಗೆ ಎಳೆಯುವಲ್ಲಿ ಅಮೆರಿಕಕ್ಕಿಂತ ಭಾರತವೇ ಹೆಚ್ಚು ಆಸಕ್ತಿ ತೋರಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.