ADVERTISEMENT

ಸಂಪಾದಕೀಯ:ಮರ್ಯಾದೆ ಹೆಸರಲ್ಲಿ ಮರ್ಯಾದೆಗೇಡು ಕೃತ್ಯ- ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ಸಂಪಾದಕೀಯ
Published 15 ಜನವರಿ 2024, 20:43 IST
Last Updated 15 ಜನವರಿ 2024, 20:43 IST
.
.   

ಮಹಿಳೆಯೊಬ್ಬರ ಮೇಲೆ ಹಾವೇರಿಯಲ್ಲಿ ಒಂದು ಗುಂಪು ನಡೆಸಿದ ದಾಳಿಯು ಅನೈತಿಕ ಪೊಲೀಸ್‌ಗಿರಿ, ಲೈಂಗಿಕ ದೌರ್ಜನ್ಯ ಮತ್ತು ಕೋಮು ಅಸಹಿಷ್ಣುತೆ ಎಲ್ಲವೂ ಸೇರಿಕೊಂಡಿರುವ ಕ್ರೌರ್ಯ. ಏಳು ಮಂದಿಯ ಗುಂಪು ಹೋಟೆಲ್‌ ಒಂದಕ್ಕೆ ನುಗ್ಗಿ ಮಹಿಳೆ ಮತ್ತು ಅವರ ಪುರುಷ ಸಂಗಾತಿಯ ಮೇಲೆ ಹಲ್ಲೆ ನಡೆಸಿದೆ. ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಗುಂಪು ಒಯ್ದಿದೆ. ಅಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಮಹಿಳೆಗೆ ಮದುವೆಯಾಗಿದೆ, ಅವರು ಹಾಗೂ ಅವರ ಜೊತೆಗೆ ಹೋಟೆಲ್‌ನಲ್ಲಿ ಇದ್ದ ಸಂಗಾತಿಯು ಭಿನ್ನ ಧರ್ಮಕ್ಕೆ ಸೇರಿದವರು ಎಂಬ ಅಂಶವು ಅವರ ಮೇಲೆ ದಾಳಿ ನಡೆಸುವ ಹಕ್ಕನ್ನು ಯಾರಿಗೂ ಕೊಡುವುದಿಲ್ಲ. ಸಂತ್ರಸ್ತರನ್ನು ಅಪಮಾನಿಸಲು ಮತ್ತು ಇತರರಲ್ಲಿ ಭೀತಿ ಹುಟ್ಟಿಸಲು ಹಲ್ಲೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಹಂಚಿಕೊಂಡಿದ್ದಾರೆ. ವ್ಯಕ್ತಿಗಳು ಮತ್ತು ಅವರ ಸಂಬಂಧಗಳ ಮೇಲೆ ನಿಗಾ ಇರಿಸಲಾಗಿದೆ ಮತ್ತು ಸಾಮಾಜಿಕ ಅಥವಾ ಕೋಮು ಮಾನದಂಡವನ್ನು ಮೀರಿದವರಿಗೆ ಶಿಕ್ಷೆ ವಿಧಿಸಲಾಗುವುದು ಎಂಬ ಸಂದೇಶ ಸಾರುವುದು ಆರೋಪಿಗಳ ಉದ್ದೇಶವಾಗಿದೆ. ಇದು ಖಂಡನಾರ್ಹ ಮತ್ತು ಅಕ್ಷಮ್ಯ.

ತಮ್ಮ ಜೀವನದಲ್ಲಿ ಏನು ಮಾಡಬೇಕು ಮತ್ತು ವೈಯಕ್ತಿಕ ಸಂಬಂಧಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಹಲ್ಲೆಗೊಳಗಾದ ಜೋಡಿಗೆ ಇದೆ. ಯಾವುದೇ ಕಾನೂನನ್ನು ಉಲ್ಲಂಘಿಸದೆ, ತಮ್ಮಿಷ್ಟದಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ. ಒಂದು ವೇಳೆ ಅವರು ಕಾನೂನನ್ನು ಉಲ್ಲಂಘಿಸಿದರೂ ನೈತಿಕತೆಯ ಹೆಸರಿನಲ್ಲಿ ಅನೈತಿಕತೆಯ ದಂಡವನ್ನು ಕೈಗೆ ತೆಗೆದುಕೊಂಡು ಶಿಕ್ಷೆ ಕೊಡುವ ಅಧಿಕಾರ ಯಾವುದೇ ವ್ಯಕ್ತಿಗೆ ಇಲ್ಲ. ‘ನೈತಿಕತೆಯ ಕಾವಲುಗಾರರು’ ಎಂದು ಸ್ವಯಂಘೋಷಿಸಿಕೊಂಡವರು ದೌರ್ಜನ್ಯ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೆಲವು ದಿನಗಳ ಹಿಂದೆ, ಭಿನ್ನ ಧರ್ಮಗಳಿಗೆ ಸೇರಿದ ಸೋದರ ಸಂಬಂಧಿಗಳಾದ ಯುವಕ ಮತ್ತು ಯುವತಿಯ ಮೇಲೆ ಬೆಳಗಾವಿಯಲ್ಲಿ ಹಲ್ಲೆ ನಡೆಸಲಾಗಿತ್ತು. ಈ ಇಬ್ಬರನ್ನು ಪ್ರೇಮಿಗಳು ಎಂದು ಭಾವಿಸಿ ಥಳಿಸಲಾಗಿತ್ತು. ಈ ರೀತಿಯ ದೌರ್ಜನ್ಯಗಳಿಗೆ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮುದಾಯಿಕ ಗೌರವದ ವಿವಿಧ ಆಯಾಮಗಳನ್ನು ಕಾರಣಗಳಾಗಿ ನೀಡಲಾಗುತ್ತಿದೆ. ಮರ್ಯಾದೆಗೆ ಧಕ್ಕೆಯಾಯಿತು ಎಂಬ ಪ್ರತಿಷ್ಠೆಯಿಂದ ನಡೆಸುವ ಈ ಬಗೆಯ ದಾಳಿಗಳು ಸದಾ ಹಿಂಸಾತ್ಮಕ
ಆಗಿಯೇ ಇರುತ್ತವೆ. ಕೆಲವೊಮ್ಮೆ ಹತ್ಯೆ ಮತ್ತು ಅತ್ಯಾಚಾರದಂತಹ ಕ್ರೌರ್ಯವನ್ನೂ ಒಳಗೊಂಡಿರುತ್ತವೆ. 

ರಾಜಕೀಯ ಪಕ್ಷಗಳು ಇಂತಹ ಘಟನೆಗಳಿಗೆ ನೀಡುವ ಪ್ರತಿಕ್ರಿಯೆಗಳು ನಿಷ್ಪಕ್ಷಪಾತವಾಗಿ ಇರುವುದಿಲ್ಲ. ಸಂತ್ರಸ್ತರು ಯಾವ ಧರ್ಮಕ್ಕೆ ಸೇರಿದವರು ಮತ್ತು ಘಟನೆಯು ಎಲ್ಲಿ ನಡೆದಿದೆ ಎಂಬುದರ ಮೇಲೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ನಿರ್ಧಾರವಾಗುತ್ತದೆ. ಕೋಮು ಭಾವನೆಯನ್ನು ಕೆರಳಿಸಲು ಮತ್ತು ಸಾಮಾಜಿಕ ವಿಭಜನೆಗಳನ್ನು ಇನ್ನಷ್ಟು ಗಾಢವಾಗಿಸಲು ರಾಜಕಾರಣಿಗಳು ಇಂತಹ ಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಸಾಮಾಜಿಕ ಸಂಘಟನೆಗಳು ಸಾಮಾನ್ಯವಾಗಿ ಇಂತಹ ಸಮಾಜಘಾತುಕ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತವೆ. ಈ ಬಗೆಯ ಕೃತ್ಯ ಎಸಗಿದವರನ್ನು ರಕ್ಷಿಸುವ ಕೆಲಸವನ್ನೂ ಮಾಡುತ್ತವೆ. ಸಮಾಜದ ಕಟ್ಟಲೆಗಳನ್ನು ಮೀರಿ ನಡೆದ ಸಮುದಾಯದ ಸದಸ್ಯರಿಗೆ ಶಿಕ್ಷೆ ವಿಧಿಸುವುದನ್ನು ಕಡ್ಡಾಯ ಮಾಡಿರುವ ಸಮುದಾಯಗಳೂ ಇವೆ. ಭಿನ್ನ ಧರ್ಮಗಳಿಗೆ ಸೇರಿದ ಜೋಡಿಗಳ ಮೇಲೆ ಕಣ್ಣಿಟ್ಟು ಅವರ ಮೇಲೆ ದೌರ್ಜನ್ಯ ಎಸಗುವುದಕ್ಕೆ ನೆರವಾಗಲು ವಾಟ್ಸ್‌ಆ್ಯಪ್‌ ಗುಂಪುಗಳೂ ಇವೆ. ಅನೈತಿಕ ಪೊಲೀಸ್‌ಗಿರಿಯು ಸಮಾಜದ ಪುರುಷ‍ಪ್ರಧಾನ ಸ್ವರೂಪದ ಪ್ರತಿಫಲನವಾಗಿದೆ. ಇಂತಹ ಅನೈತಿಕ ಪೊಲೀಸ್‌ಗಿರಿಯು ಹೆಚ್ಚಾಗಿ ಮಹಿಳೆಯರ ಮೇಲೆಯೇ  ನಡೆಯುತ್ತದೆ. ವಿಶೇಷವಾಗಿ, ಒಂದು ಸಮುದಾಯದ ಮಹಿಳೆಯು ಬೇರೊಂದು ಸಮುದಾಯದ ಪುರುಷನ ಜೊತೆಗೆ ಹೋದಾಗ ಅಥವಾ ಮದುವೆಯಾದಾಗ, ಅದನ್ನು ಸಮುದಾಯವು ಅಪಮಾನ ಎಂದು ಭಾವಿಸುತ್ತದೆ. ಆದರೆ, ಒಂದು ಸಮುದಾಯದ ಪುರುಷ ಬೇರೊಂದು ಸಮುದಾಯದ ಮಹಿಳೆಯ ಜೊತೆಗೆ ಹೋದಾಗ ಪುರುಷನ ಸಮುದಾಯವು ಅದು ಅಷ್ಟೊಂದು ದೊಡ್ಡ ಅವಮಾನ ಎಂದು ಭಾವಿಸುವುದಿಲ್ಲ. ಹಾಗಾಗಿ, ಅನೈತಿಕ ಪೊಲೀಸ್‌ಗಿರಿಯಲ್ಲಿ ಹೆಚ್ಚು ತೊಂದರೆಗೆ ಒಳಗಾಗುವುದು ಮಹಿಳೆಯರು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಂತಹ ಕೃತ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದುದು ಸಮಾಜ ಮತ್ತು ಸರ್ಕಾರದ ಕರ್ತವ್ಯ. ಅನೈತಿಕ ಪೊಲೀಸ್‌ಗಿರಿ ಎಸಗುವವರಿಗೆ ಕಾನೂನು ಪ್ರಕಾರ ತಕ್ಕ ಶಿಕ್ಷೆ ಆಗಬೇಕು. ಸಮಾಜವು ತನ್ನ ನೈತಿಕತೆಯ ಮಾನದಂಡವನ್ನು ಮರುರೂಪಿಸಬೇಕಾದ ಅಗತ್ಯವೂ ಇದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.