ಅಮೆರಿಕದ ಅಧ್ಯಕ್ಷ ಸ್ಥಾನದ ಚುನಾವಣೆ ಸನಿಹದಲ್ಲಿರುವ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪೆನ್ಸಿಲ್ವೇನಿಯಾದ ಬಟ್ಲರ್ ಎಂಬಲ್ಲಿ ಗುಂಡಿನ ದಾಳಿ ನಡೆದಿರುವುದು ಆಘಾತಕರ ಮತ್ತು ಖಂಡನೀಯ. ಹತ್ಯೆ ಪ್ರಯತ್ನ ನಡೆಸಿದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂಬ 20 ವರ್ಷದ ಯುವಕನನ್ನು ಸೀಕ್ರೆಟ್ ಸರ್ವಿಸ್‌ನ ಭದ್ರತಾ ಸಿಬ್ಬಂದಿಯು ಸ್ಥಳದಲ್ಲಿಯೇ ಹತ್ಯೆ ಮಾಡಿದ್ದಾರೆ. ಟ್ರಂಪ್ ಮೇಲೆ ದಾಳಿ ನಡೆಸಲು ಕ್ರೂಕ್ಸ್ ಅವರಿಗೆ ಇದ್ದ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಇದು ಸಂಘಟಿತ ಕೃತ್ಯವೇನೂ ಅಲ್ಲ, ಬದಲಿಗೆ ಕ್ರೂಕ್ಸ್ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್‌ನ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷರು ಅಥವಾ ಪ್ರಮುಖ ನಾಯಕರ ಹತ್ಯೆ ಮತ್ತು ಹತ್ಯೆ ಯತ್ನ ಈ ಹಿಂದೆಯೂ ನಡೆದಿತ್ತು. ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರನ್ನು 1865ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಬಳಿಕವೂ ಅಧ್ಯಕ್ಷರಾಗಿದ್ದ ಜೇಮ್ಸ್ ಗಾರ್‌ಫೀಲ್ಡ್, ವಿಲಿಯಂ ಮೆಕಿನ್ಲೆ ಮತ್ತು ಜಾನ್ ಎಫ್. ಕೆನಡಿ ಅವರನ್ನು ಹತ್ಯೆ ಮಾಡಲಾಗಿದೆ. ಅಧ್ಯಕ್ಷರಾಗಿದ್ದ ಹಲವು ಮಂದಿಯನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ. ಥಿಯೊಡೋರ್ ರೂಸ್‌ವೆಲ್ಟ್, ರೊನಾಲ್ಡ್ ರೇಗನ್ ಅವರು ಹತ್ಯೆ ಪ್ರಯತ್ನದಲ್ಲಿ ಗಾಯಗೊಂಡಿದ್ದಾರೆ. ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರ ಮೇಲೆಯೂ 1933ರಲ್ಲಿ ದಾಳಿ ನಡೆದಿತ್ತು. ಆದರೆ, ಅವರು ಪಾರಾಗಿದ್ದರು. ಯದ್ವಾತದ್ವಾ ಗುಂಡು ಹಾರಿಸಿ ಅಮಾಯಕ ಜನರ ಹತ್ಯೆ ಮಾಡುವ ಪ್ರಕರಣಗಳು ಕೂಡ ಅಮೆರಿಕದಲ್ಲಿ ಕಡಿಮೆ ಏನಲ್ಲ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್‌ನ ಮಾಹಿತಿಯ ಪ್ರಕಾರ 2021ರಲ್ಲಿ ಬಂದೂಕಿನಿಂದ ಹತ್ಯೆಯಾದವರ ಸಂಖ್ಯೆ 48,830. ಇಂತಹ ದುರಂತಗಳಿಗೆ ಮುಖ್ಯವಾದ ಕಾರಣ ಅಲ್ಲಿನ ಬಂದೂಕು ನೀತಿ. ಅತ್ಯಂತ ಸುಲಭವಾಗಿ ಬಂದೂಕು ಖರೀದಿಸಲು ಅಲ್ಲಿ ಸಾಧ್ಯ. ಟ್ರಂಪ್ ಮೇಲೆ ಗುಂಡು ಹಾರಿಸಲು ಬಳಸಿದ್ದು ಎಆರ್–15 ಮಾದರಿಯ ಅರೆಸ್ವಯಂಚಾಲಿತ ಬಂದೂಕು. ಇದನ್ನು ಕ್ರೂಕ್ಸ್ ಅವರ ತಂದೆ ಕಾನೂನುಬದ್ಧವಾಗಿಯೇ ಖರೀದಿ ಮಾಡಿದ್ದಾರೆ. ಬಂದೂಕು ನೀತಿಯನ್ನು ಬದಲಾಯಿಸಿ, ಬಂದೂಕು ಖರೀದಿಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವ ಅಗತ್ಯ ಇದೆ ಎಂಬುದನ್ನು ಟ್ರಂಪ್ ಮೇಲಿನ ದಾಳಿಯು ತೋರಿಸುತ್ತದೆ.
ಅಮೆರಿಕವನ್ನು ಪ್ರಬುದ್ಧ ಪ್ರಜಾಪ್ರಭುತ್ವ ಎಂದೇ ಪರಿಗಣಿಸಲಾಗುತ್ತಿದೆ. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜಕೀಯವಾಗಿ ಅತ್ಯಂತ ದ್ವೇಷಮಯ ವಾತಾವರಣ ಅಲ್ಲಿ ಇದೆ. ರಿಪಬ್ಲಿಕನ್ನರು ಮತ್ತು ಡೆಮಾಕ್ರಟರ ನಡುವೆ ಅತ್ಯಂತ ಗಾಢವಾದ ಧ್ರುವೀಕರಣ ಉಂಟಾಗಿದೆ. ಟ್ರಂಪ್ ಮೇಲೆ ದಾಳಿ ನಡೆದ ನಂತರ ಈ ಬಿರುಕು ಇನ್ನಷ್ಟು ದಟ್ಟವಾದಂತೆ ಕಾಣಿಸುತ್ತಿದೆ. ಅಧ್ಯಕ್ಷ ಜೋ ಬೈಡನ್ ಅವರೇ ಈ ದಾಳಿಗೆ ಕಾರಣ ಎಂದು ರಿಪಬ್ಲಿಕನ್ನರು ಆರೋಪಿಸಿದ್ದಾರೆ. ಟ್ರಂಪ್ ವಿರುದ್ಧ ಜನರನ್ನು ಎತ್ತಿಕಟ್ಟುವ ರೀತಿಯಲ್ಲಿ ಬೈಡನ್ ಆಡಿರುವ ಮಾತುಗಳು, ಟ್ರಂಪ್ ಗೆದ್ದರೆ ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸಲಿದ್ದಾರೆ ಎಂಬ ಆರೋಪ ಈ ದಾಳಿಗೆ ಕಾರಣ ಎಂದು ರಿಪಬ್ಲಿಕನ್ನರು ಹೇಳಿದ್ದಾರೆ. ಟ್ರಂಪ್ ಅವರ ಸಲಹೆಗಾರರೊಬ್ಬರು ‘ಟ್ರಂಪ್ ಅವರನ್ನು ಚುನಾವಣೆಯಿಂದ ಹೊರಗಿಡಲು ಅವರು (ರಿಪಬ್ಲಿಕನ್ನರು) ಬಯಸಿದ್ದಾರೆ, ಅವರನ್ನು ಜೈಲಿಗೆ ತಳ್ಳಲು ಯತ್ನಿಸಲಾಯಿತು, ಈಗ ಹೀಗಾಗಿದೆ ನೋಡಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಬಳಿಕ ಅದನ್ನು ಅಳಿಸಲಾಯಿತು. ಆದರೆ, ವಾತಾವರಣ ಎಷ್ಟೊಂದು ದ್ವೇಷದಿಂದ ಕೂಡಿದೆ ಎಂಬುದನ್ನು ಇದು ಸೂಚಿಸುತ್ತದೆ. ಟ್ರಂಪ್ ಅವರೇ ತಮ್ಮ ಮೇಲೆ ದಾಳಿ ಮಾಡಿಸಿಕೊಂಡಿದ್ದಾರೆ ಎಂಬ ಸಂಕಥನವನ್ನೂ ಕಟ್ಟಲಾಗಿದೆ. ತಾವು ಸಂತ್ರಸ್ತ ಎಂದು ಬಿಂಬಿಸಿಕೊಳ್ಳಲು ಟ್ರಂಪ್ ಅವರು ಕೆಲವು ತಿಂಗಳುಗಳಿಂದ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವೂ ಜನರ ಸಹಾನುಭೂತಿ ಪಡೆದುಕೊಂಡು ಚುನಾವಣೆ ಗೆಲ್ಲುವ ಕಾರ್ಯತಂತ್ರ ಎಂಬುದು ಮೇಲ್ನೊಟಕ್ಕೇ ಕಾಣಿಸುತ್ತದೆ. ಜನರ ಅಭಿವೃದ್ಧಿ, ಜಾಗತಿಕ ಶಾಂತಿ ಮತ್ತು ಸಮತೋಲನ ಹಾಗೂ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ ಎಂದು ಭರವಸೆ ಕೊಟ್ಟು ಚುನಾವಣೆ ಎದುರಿಸಬೇಕು. ಅದರ ಬದಲಿಗೆ ಧ್ರುವೀಕರಣ, ದ್ವೇಷ ಹರಡುವುದರ ಮೂಲಕ ಚುನಾವಣೆ ಎದುರಿಸುತ್ತೇವೆ ಎಂಬ ಮನಃಸ್ಥಿತಿ ಅಮೆರಿಕದಂತಹ ಪ್ರಬುದ್ಧ ಪ್ರಜಾಪ್ರಭುತ್ವ ವ್ಯವಸ್ಥೆಗೆ ತಕ್ಕುದಲ್ಲ. ರಿಪಬ್ಲಿಕನ್ನರು ಮತ್ತು ಡೆಮಾಕ್ರಟರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆ ಅರ್ಥಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅಮೆರಿಕದಲ್ಲಿನ ಬೆಳವಣಿಗೆಗಳು ಇಡೀ ಜಗತ್ತಿನ ಶಾಂತಿ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಅರಿವು ಕೂಡ ಅಲ್ಲಿನ ನಾಯಕರಿಗೆ ಇರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.