ADVERTISEMENT

ಸಂಪಾದಕೀಯ: ನ್ಯೂಸ್‌ ಕ್ಲಿಕ್‌ ಮೇಲೆ ದಾಳಿ ಮಾಧ್ಯಮ ಸ್ವಾತಂತ್ರ್ಯದ ದಮನ

ಪ್ರಜಾವಾಣಿ ವಿಶೇಷ
Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಸುದ್ದಿ ಪೋರ್ಟಲ್‌ ‘ನ್ಯೂಸ್‌ ಕ್ಲಿಕ್‌’ಗೆ ಸಂಬಂಧಿಸಿದ ಹಲವು ಸ್ಥಳಗಳಲ್ಲಿ ಮಂಗಳವಾರ ಬೆಳಗಿನ ಜಾವ ಶೋಧ ನಡೆಸಲಾಗಿದೆ; ನ್ಯೂಸ್‌ ಕ್ಲಿಕ್‌ನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರನ್ನು ಬಂಧಿಸಲಾಗಿದೆ; ಪತ್ರಕರ್ತರೂ ಸೇರಿದಂತೆ ನ್ಯೂಸ್‌ ಕ್ಲಿಕ್‌ನ ಹಲವು ಸಿಬ್ಬಂದಿಯನ್ನು ಸುದೀರ್ಘ ಹೊತ್ತು ವಶದಲ್ಲಿ ಇರಿಸಿಕೊಂಡು ತನಿಖೆ ನಡೆಸಲಾಗಿದೆ. ಮಾಧ್ಯಮ ಸಂಸ್ಥೆಗಳ ಮೇಲೆ ಮುಗಿಬೀಳುವ ಪ್ರವೃತ್ತಿಗೆ ಇತ್ತೀಚಿನ ಸೇರ್ಪಡೆ ಇದು. ಅತ್ಯಂತ ಯೋಜಿತವಾಗಿ ಈ ಕಾರ್ಯಾಚರಣೆ ನಡೆದಿದೆ. ಪೋರ್ಟಲ್‌ನ ಪತ್ರಕರ್ತರು, ಸಿಬ್ಬಂದಿ ಮಾತ್ರವಲ್ಲದೆ ಈ ಸಂಸ್ಥೆಯ ಜೊತೆ ಸಣ್ಣ ಮಟ್ಟದ ಸಂಪರ್ಕ ಇರುವವರನ್ನೂ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಗುರಿಯಾಗಿಸಲಾಗಿದೆ. ವಿದ್ಯುನ್ಮಾನ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿರುವುದಕ್ಕೆ ಯಾವುದೇ ಮೆಮೊ ನೀಡಲಾಗಿಲ್ಲ ಮತ್ತು ಉಪಕರಣಗಳ ಮೌಲ್ಯ ಎಷ್ಟು ಎಂಬುದನ್ನೂ ನಮೂದಿಸಿಲ್ಲ ಎಂದು ಹೇಳಲಾಗಿದೆ. ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ನ್ಯೂಸ್‌ ಕ್ಲಿಕ್‌ ಸಂಸ್ಥೆಗೆ ಸೇರಿದ ಸ್ಥಳಗಳಲ್ಲಿ 2021ರಲ್ಲಿ ಕೂಡ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದರು. ಚೀನಾದಿಂದ ಹಣಕಾಸು ನೆರವು ಪಡೆದುಕೊಂಡು ‘ಭಾರತ ವಿರೋಧಿ ಅಭಿಯಾನ’ ನಡೆಸುತ್ತಿದೆ ಎಂಬ ಆರೋಪದ ಕುರಿತು ಈ ಸಂಸ್ಥೆಗಳು ತನಿಖೆ ನಡೆಸಿದ್ದವು. 

ಮಾಧ್ಯಮ ಸಂಸ್ಥೆಯೊಂದರ ಮೇಲೆ ಯುಎಪಿಎಯಂತಹ ಕಠಿಣ ಕಾನೂನನ್ನು ಇದೇ ಮೊದಲು ಬಳಸಲಾಗಿದೆ. ಸಂಪಾದಕರನ್ನು ಉಗ್ರಗಾಮಿ ಎಂದು ಆರೋಪಿಸಿ ಬಂಧಿಸಲಾಗಿದೆ. ಜಾರಿ ನಿರ್ದೇಶನಾಲಯದ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಪೊಲೀಸ್‌ ಇಲಾಖೆಯು ಪೋರ್ಟಲ್‌ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿವೆ. ಅಮೆರಿಕದ ಕಂಪನಿಯೊಂದರಿಂದ ಕಾನೂನು ಉಲ್ಲಂಘಿಸಿ ವಿದೇಶಿ ನೇರ ಹೂಡಿಕೆ ಪಡೆದುಕೊಂಡ ಪ್ರಕರಣದಲ್ಲಿ 2021ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಿರ್ದಿಷ್ಟ ಆರೋಪಗಳು ಏನು ಮತ್ತು ತನಿಖೆಯಲ್ಲಿ ಏನು ತಿಳಿದುಬಂದಿದೆ ಎಂಬ ಮಾಹಿತಿ ಈಗಲೂ ಹೊರಗೆ ಬಂದಿಲ್ಲ. ಇಂತಹ ತನಿಖೆಗಳು ನಡೆಯುತ್ತಲೇ ಇರುತ್ತವೆ ಮತ್ತು ಮಾಧ್ಯಮ ಹಾಗೂ ಪತ್ರಕರ್ತ ಸಮುದಾಯವೂ ಸೇರಿದಂತೆ ಸರ್ಕಾರದ ಟೀಕಾಕಾರರಿಗೆ ಕಿರುಕುಳ ನೀಡುವುದಕ್ಕಾಗಿ ಇಂತಹ ತನಿಖೆಗಳನ್ನು ಬಳಸಿಕೊಳ್ಳಲಾಗುತ್ತಿದೆ. 2021ರಲ್ಲಿ ನಡೆದ ರೈತರ ಪ್ರತಿಭಟನೆ, ದೆಹಲಿ ಗಲಭೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸುದ್ದಿಗಳ ಪ್ರಕಟಣೆಗೆ ಸಂಬಂಧಿಸಿ ಪೋರ್ಟಲ್‌ನ ಹಲವು
ಪತ್ರಕರ್ತರನ್ನು ಪ್ರಶ್ನಿಸಲಾಗಿದೆ. ಈ ಪತ್ರಕರ್ತರ ಹಿನ್ನೆಲೆ, ಕುಟುಂಬದ ವಿವರಗಳು, ಉದ್ಯೋಗದ ವಿವರಗಳು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನೂ ಪಡೆದುಕೊಳ್ಳಲಾಗಿದೆ. 

ADVERTISEMENT

ಸಮರ್ಪಕ ಪ್ರಕ್ರಿಯೆ ಅನುಸರಿಸಿ ತನಿಖೆ ನಡೆಸಲಾಗಿಲ್ಲ. ಆರೋಪಗಳೆಲ್ಲವೂ ಪೊಲೀಸರು ಹೇಳಿದ ‘ಅಂತೆ–ಕಂತೆ’ಗಳೇ ಆಗಿವೆ. ಅಕ್ರಮಗಳು ನಡೆದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕು. ಆದರೆ, ಅದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಬಹಿರಂಗಗೊಳ್ಳಬೇಕು. ಏಕೆಂದರೆ, ಮಾಧ್ಯಮ ಸಂಸ್ಥೆಗಳು ಎಂದರೆ ಅವು ಸಾರ್ವಜನಿಕ ಸಂಸ್ಥೆಗಳೇ ಆಗಿವೆ. ಇಲ್ಲದೇಹೋದರೆ, ಸರ್ಕಾರವನ್ನು ನ್ಯೂಸ್‌ ಕ್ಲಿಕ್‌ ಪೋರ್ಟಲ್‌ ಟೀಕಿಸಿತ್ತು, ಇದಕ್ಕಾಗಿ ಸರ್ಕಾರವು ದ್ವೇಷ ಸಾಧಿಸುತ್ತಿದೆ ಎಂದೇ ಭಾವಿಸಬೇಕಾಗುತ್ತದೆ.
ಇಂತಹ ಕ್ರಮಗಳನ್ನು ಸರ್ಕಾರ ನಿರಂತರವಾಗಿ ಕೈಗೊಂಡಿದೆ. ಮಾಧ್ಯಮವನ್ನು ದಮನ ಮಾಡಲು, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು, ಭಿನ್ನಾಭಿಪ್ರಾಯವನ್ನು ಹಣಿಯಲು ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಕುರಿತಾದ ಸತ್ಯಗಳನ್ನು ಬಹಿರಂಗವಾಗಿ ಹೇಳಿದವರ ಮೇಲೆಯೂ ಇವೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಧ್ಯಮ ಸ್ವಾತಂತ್ರ್ಯದ ತಳಹದಿಯಾಗಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಿರುಳು ಕೂಡ ಹೌದು. ಸರ್ಕಾರದ ಮಾತಿನಂತೆ ನಡೆದುಕೊಳ್ಳಬೇಕು ಮತ್ತು ಸರ್ಕಾರವನ್ನು ಬೆಂಬಲಿಸಬೇಕು ಎಂದು ಮಾಧ್ಯಮವೂ ಸೇರಿದಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ನಿರಂತರ ಒತ್ತಡ ಹೇರಿದರೆ, ಟೀಕಾಕಾರರಿಗೆ ಕಿರುಕುಳ ನೀಡಿದರೆ ಭಾರತವು
ಪ್ರಜಾಪ್ರಭುತ್ವದ ತಾಯಿ ಎಂದು ನಾವು ಕರೆದುಕೊಳ್ಳುವುದು ಅರ್ಥಹೀನ ಮತ್ತು ವಿರೋಧಾಭಾಸಕರ ಎನಿಸಿಕೊಳ್ಳುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.