ADVERTISEMENT

ಸಂಪಾದಕೀಯ: ಬಿಲ್ಕಿಸ್‌ ಪ್ರಕರಣ: ಪ್ರಮಾದ ಸರಿಪಡಿಸಿದ ಸುಪ್ರೀಂ ಕೋರ್ಟ್‌

ಸಂಪಾದಕೀಯ
Published 8 ಜನವರಿ 2024, 19:23 IST
Last Updated 8 ಜನವರಿ 2024, 19:23 IST
   

ಬಿಲ್ಕಿಸ್‌ ಬಾನು ಅವರ ಮೇಲೆ 2002ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣದ 11 ಅಪರಾಧಿಗಳ ಶಿಕ್ಷೆಯನ್ನು ಕಡಿತಗೊಳಿಸಿದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಈ ಅಪರಾಧಿಗಳನ್ನು ಬಿಡುಗಡೆ ಮಾಡಲು ಆದೇಶಿಸಿದ್ದ ಗುಜರಾತ್‌ ಸರ್ಕಾರದ ಕ್ರಮವು ಲೋಪದಿಂದ ಕೂಡಿದೆ ಎಂದು ಕೋರ್ಟ್‌ ಹೇಳಿದೆ. ಅತ್ಯಂತ ಕಪಟ ಮತ್ತು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದ ಕಾರಣಗಳನ್ನು ಕೊಟ್ಟು ಈ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ನಿರ್ಧಾರವನ್ನು ಆಡಳಿತ ಪಕ್ಷದ ಹಲವು ಮುಖಂಡರು ಯಾವುದೇ ಎಗ್ಗಿಲ್ಲದೆ ಸಮರ್ಥಿಸಿಕೊಂಡಿದ್ದರು. ಈಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಈ ಮುಖಂಡರ ಬಣ್ಣವನ್ನೂ ಬಯಲು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವೇ ತಲೆ ತಗ್ಗಿಸುವಂತೆ ಆಗಿದ್ದ ಪ್ರಮಾದವೊಂದನ್ನು ಈಗಿನ ತೀರ್ಪು ಸರಿಪಡಿಸಿದೆ. ಈ ಅತ್ಯಾಚಾರ ಪ್ರಕರಣವು ದೇಶದ ಆತ್ಮಸಾಕ್ಷಿಯನ್ನು ಕಲಕಿತ್ತು. ಅತ್ಯಾಚಾರ ಎಸಗಿದ್ದ ದುರುಳರನ್ನು ಬಿಡುಗಡೆ ಮಾಡಿದ್ದು ಕೂಡ ದೇಶದ ಆತ್ಮಸಾಕ್ಷಿಯನ್ನು ತಲ್ಲಣಗೊಳಿಸಿತ್ತು. ಸುದೀರ್ಘ ನ್ಯಾಯಾಂಗ ಹೋರಾಟದ ಬಳಿಕ, ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶದಿಂದಾಗಿ ಬಿಲ್ಕಿಸ್‌ ಅವರಿಗೆ ನ್ಯಾಯ ದೊರಕಿತ್ತು. ಅಪರಾಧಿಗಳ ಬಿಡುಗಡೆಯ ಪ್ರಕರಣ ದಲ್ಲಿಯೂ ಮತ್ತದೇ ನ್ಯಾಯಾಲಯವು ಅವರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ನ್ಯಾಯ ದೊರಕುವ ಹಾದಿಯು ಸದಾ ಸುಗಮವೇನೂ ಆಗಿರುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ನ್ಯಾಯಕ್ಕೆ ಜಯ ಸಂದಿದೆ. ಕಾನೂನು ಸದಾ ನ್ಯಾಯದ ಮಾರ್ಗದರ್ಶನ
ದಲ್ಲಿಯೇ ಇರಬೇಕು ಎಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್‌ ಭುಯಿಯಾಂ ಹೇಳಿದ್ದಾರೆ. 

ಶಿಕ್ಷೆ ಕಡಿತದ ಆದೇಶವನ್ನು ಕಾನೂನು ಮತ್ತು ತಾಂತ್ರಿಕ ಎರಡು ನೆಲೆಯಲ್ಲಿಯೂ ಕೋರ್ಟ್‌ ರದ್ದುಪಡಿಸಿದೆ. ಅಪರಾಧ ಕೃತ್ಯವು ಗುಜರಾತ್‌ನಲ್ಲಿ ನಡೆದಿತ್ತು. ಆದರೆ, ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ವಿಚಾರಣೆಯು ಮಹಾರಾಷ್ಟ್ರದಲ್ಲಿ ನಡೆದಿತ್ತು. ಹೀಗಾಗಿ, ಶಿಕ್ಷೆ ಕಡಿತಗೊಳಿಸುವ ಅಧಿಕಾರವು ಗುಜರಾತ್‌ ಸರ್ಕಾರಕ್ಕೆ ಇಲ್ಲ ಎಂಬ ತಾಂತ್ರಿಕ ಕಾರಣವನ್ನು ಮುಂದಿಟ್ಟು ಶಿಕ್ಷೆ ಕಡಿತದ ನಿರ್ಧಾರವನ್ನು ರದ್ದುಪಡಿಸಲಾಗಿದೆ. ತಪ್ಪಿತಸ್ಥರನ್ನು 2022ರ ಆಗಸ್ಟ್‌ 15ರಂದು ಸೆರೆಮನೆಯಿಂದ ಬಿಡುಗಡೆ ಮಾಡಲಾಗಿದೆ. 1992ರಲ್ಲಿ ರೂಪಿಸಲಾದ ಶಿಕ್ಷೆ ಕಡಿತದ ಮಾರ್ಗಸೂಚಿಗೆ ಅನುಗುಣವಾಗಿ ಈ
ಪ್ರಕರಣದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು 2022ರ ಮೇ 13ರಂದು ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ಸತ್ಯವನ್ನು ಮುಚ್ಚಿಟ್ಟು ವಂಚನೆಯ ಮೂಲಕ ಈ ನಿರ್ದೇಶನವನ್ನು ಪಡೆದುಕೊಳ್ಳಲಾಗಿದೆ ಎಂದೂ ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಗುಜರಾತ್‌ ಸರ್ಕಾರವು ಬೇರೆ ರಾಜ್ಯದ ಅಧಿಕಾರವನ್ನು ಅತಿಕ್ರಮಿಸುವ ಮೂಲಕ ನಿರ್ಧಾರ ಕೈಗೊಂಡಿದೆ. ಇದು ಅಧಿಕಾರದ ದುರುಪಯೋಗವೂ ಹೌದು ಮತ್ತು ವಿವೇಚನೆಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಯಾವೆಲ್ಲ ಕಾನೂನುಗಳನ್ನು ಉಲ್ಲಂಘಿಸಿ ಶಿಕ್ಷೆ ಕಡಿತದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬುದನ್ನು ನ್ಯಾಯಾಲಯ ಗುರುತಿಸಿದೆ. ಗುಜರಾತ್‌ ಸರ್ಕಾರದ ನಿರ್ಧಾರವು ಯಾವ ರೀತಿಯಲ್ಲಿ ತಪ್ಪಾಗಿದೆ ಮತ್ತು ಅನೈತಿಕವಾಗಿದೆ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಇದೊಂದು ರಾಜಕೀಯ ನಿರ್ಧಾರವಾಗಿದ್ದು ಗುಜರಾತ್‌ ಸರ್ಕಾರದ ನೀತಿಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 2002ರ ಗಲಭೆ ಪ್ರಕರಣಗಳ ಆರೋಪಿಗಳನ್ನು ರಕ್ಷಿಸುವ ಮತ್ತು ಅವರನ್ನು ಬೆಂಬಲಿಸುವ ಕೆಲಸವನ್ನು ಗುಜರಾತ್‌ ಸರ್ಕಾರ ಮಾಡಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಹ ಹಲವು ನಿದರ್ಶನಗಳಿವೆ. ಮಹಿಳೆಯರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಹಲವು ಘೋಷಣೆಗಳಿಗೆ ಬೆಂಬಲ ನೀಡಿದ ಸಂದರ್ಭದಲ್ಲಿಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬುದು ಕೂಡ ಗಮನಿಸಬೇಕಾದ ಅಂಶ. ನ್ಯಾಯಾಲಯವು ಹೇಳಿದ ಅಂಶಗಳನ್ನು ಉಲ್ಲೇಖಿಸುವುದು ಇಲ್ಲಿ ಸಮಂಜಸ: ‘ಮಹಿಳೆಯು ಗೌರವವನ್ನು ಪಡೆಯಲು ಅರ್ಹಳಾಗಿ ದ್ದಾಳೆ. ಮಹಿಳೆಯರ ಮೇಲೆ ಹೀನ ಅಪರಾಧ ಎಸಗಿದವರ ಶಿಕ್ಷೆಯನ್ನು ಕಡಿತ ಮಾಡಲು ಅವಕಾಶ ನೀಡಬಹುದೇ? ಇಂತಹ ಪ್ರಶ್ನೆಗಳು ಮೂಡುತ್ತವೆ’. ಜೈಲಿನಿಂದ ಬಿಡುಗಡೆಯಾಗಿರುವ ಅಪರಾಧಿಗಳು ಎರಡು ವಾರಗಳಲ್ಲಿ ಮತ್ತೆ ಸೆರೆಮನೆ ಸೇರಬೇಕು ಎಂದು ನ್ಯಾಯಾಲಯ ಆದೇಶ ಕೊಟ್ಟಿದೆ. ಈಗ, ಈ 11 ಅಪರಾಧಿಗಳು ಮಹಾರಾಷ್ಟ್ರ ಸರ್ಕಾರಕ್ಕೆ ಶಿಕ್ಷೆ ಕಡಿತ ಕೋರಿ ಅರ್ಜಿ ಸಲ್ಲಿಸಬಹುದು. ಬಹುಶಃ, ಇದು ಬಿಲ್ಕಿಸ್‌ ಬಾನು ಪ್ರಕರಣದ ಅಂತಿಮ ನ್ಯಾಯ ಪರೀಕ್ಷೆ ಆಗಿರಬಹುದು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.