ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ರಾಜಧಾನಿಯಲ್ಲಿ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉತ್ಸಾಹದಲ್ಲಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು’ ಎಂಬ ಪರಿಕಲ್ಪನೆಯ ಅಡಿಯಲ್ಲಿ ಸುರಂಗ ಮಾರ್ಗಗಳು, ಇನ್ನಷ್ಟು ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಸ್ಕೈಡೆಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇಂತಹ ಬೃಹತ್ ಯೋಜನೆಗಳಿಗೆ ₹59,000 ಕೋಟಿಯಷ್ಟು ವೆಚ್ಚ ಮಾಡುವ ಪ್ರಸ್ತಾವ ಬಿಬಿಎಂಪಿ ಮುಂದಿದೆ. ಅದರಲ್ಲಿ ₹39,000 ಕೋಟಿಯಷ್ಟು ಬೃಹತ್ ಮೊತ್ತವನ್ನು ದೇಶಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ಕೋರಿ ರಾಜ್ಯ ಸರ್ಕಾರಕ್ಕೆ ಪಾಲಿಕೆಯ ಮುಖ್ಯ ಆಯುಕ್ತರು ಪತ್ರ ಬರೆದಿದ್ದಾರೆ.
ಬಿಬಿಎಂಪಿಯ 2024–25ರ ಬಜೆಟ್ ಗಾತ್ರವೇ ₹12,371 ಕೋಟಿ. ಬಜೆಟ್ ಗಾತ್ರದ ಐದಾರು ಪಟ್ಟು ಮೊತ್ತವನ್ನು ವ್ಯಯಿಸಬೇಕಾ ದಂತಹ ಯೋಜನೆಗಳನ್ನು ಸಾಲ ಪಡೆದು ಕೈಗೆತ್ತಿಕೊಳ್ಳುವುದು ಅತ್ಯಂತ ಅಪಾಯಕಾರಿ ನಡೆ. ಇದರಿಂದ ಸ್ಥಳೀಯ ಸಂಸ್ಥೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು. ಬಿಬಿಎಂಪಿಯು ಈಗಾಗಲೇ ಅನುಷ್ಠಾನ ಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸುಮಾರು ₹6,000 ಕೋಟಿಯಷ್ಟು ಬಿಲ್ ಬಾಕಿ ಉಳಿಸಿಕೊಂಡಿದೆ. ಜನಸಮೂಹದ ನೈಜ ಅಗತ್ಯಗಳನ್ನು ಅರಿಯದೆ ಮತ್ತು ತಜ್ಞರ ಅಭಿಪ್ರಾಯ ಆಲಿಸದೆ ಕೆಲವೇ ವ್ಯಕ್ತಿಗಳ ಅಭಿಪ್ರಾಯ, ಆಕಾಂಕ್ಷೆಯನ್ನು ಆಧರಿಸಿ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸಮಂಜಸವಲ್ಲ. ಬೃಹತ್ ಯೋಜನೆಗಳ ಅಗತ್ಯ, ಅವು ಉಂಟುಮಾಡಬಹುದಾದ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿದ ಬಳಿಕ ನಿರ್ಧಾರಕ್ಕೆ ಬರುವುದು ಉತ್ತಮ.
ಬೆಂಗಳೂರಿನ ಆಚೆಗೆ ಹೂಡಿಕೆದಾರರನ್ನು ಸೆಳೆಯಲು ರಾಜ್ಯ ಸರ್ಕಾರವು ‘ಬಿಯಾಂಡ್ ಬೆಂಗಳೂರು’ ಘೋಷಣೆಯಡಿ ಪ್ರಯತ್ನಗಳನ್ನು ನಡೆಸಿದೆ. ರಾಜ್ಯ ಸರ್ಕಾರವು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಷ್ಟೇ ಒತ್ತು ನೀಡುವುದನ್ನು ಬಿಟ್ಟು, ಇತರ ನಗರಗಳು ಮತ್ತು ಜಿಲ್ಲಾ ಕೇಂದ್ರಗಳ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಆ ಮೂಲಕ ಅಭಿವೃದ್ಧಿಯ ವಿಕೇಂದ್ರೀಕರಣಕ್ಕೆ ಒತ್ತು, ಬೆಂಗಳೂರಿನತ್ತ ವಲಸೆ ತಡೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಉತ್ತೇಜನ ನೀಡಬೇಕು. ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಬೃಹತ್ ಯೋಜನೆಗಳ ಅನುಷ್ಠಾನಕ್ಕೆ ಕೈ ಹಾಕುವುದು ಆದ್ಯತೆಯನ್ನೇ ಅದಲು–ಬದಲು ಮಾಡಿದಂತೆ.
ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಗಳ ಮರು ಡಾಂಬರೀಕರಣ, ದುರಸ್ತಿ, ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣದಂತಹ ಕೆಲಸಗಳಿಗೆ ಆದ್ಯತೆ ನೀಡಬೇಕಾದ ತುರ್ತು ಇದೆ. ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಸ್ ಸಂಚಾರ ಜಾಲದ ಬಲವರ್ಧನೆ, ಮೆಟ್ರೊ ರೈಲು ಮಾರ್ಗದ ವಿಸ್ತರಣೆ, ಕೊನೆಯ ತಾಣದವರೆಗೆ ನಿರಂತರ ಸಾರಿಗೆ ಸೌಲಭ್ಯ ಕಲ್ಪಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಿದೆ. ಸಾರ್ವಜನಿಕ ಸಾರಿಗೆಯನ್ನು ಬಳಸುವವರಿಗೆ ಉತ್ತೇಜನಗಳನ್ನು ನೀಡುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದರತ್ತ ಗಮನಹರಿಸಿದರೆ ಸಂಚಾರ ದಟ್ಟಣೆ ತುಸುವಾದರೂ ತಗ್ಗೀತು. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲಿಗೆ ವರ್ಷಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಸರ್ಕಾರ ಮತ್ತು ಬಿಬಿಎಂಪಿಗೆ ಆದ್ಯತೆಯಾಗಬೇಕು.
ಸ್ಕೈಡೆಕ್ ಯೋಜನೆಯು ಆಡಂಬರ ಪ್ರದರ್ಶನದ ಯೋಜನೆ ಎಂಬ ಟೀಕೆಯಲ್ಲಿ ಹುರುಳಿದೆ. ಅದಕ್ಕೆ ದುಬಾರಿ ವೆಚ್ಚದ ಮೂಲಸೌಕರ್ಯವೂ ಅಗತ್ಯ. ಆದರೆ, ಅದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ. ಇಂತಹ ಯೋಜನೆಗಳು ತುರ್ತು ಅಗತ್ಯದ ಕೆಲಸಗಳಿಗೆ ಒದಗಿಸಬೇಕಾದ ಆರ್ಥಿಕ ಸಂಪನ್ಮೂಲವನ್ನು ತಮ್ಮತ್ತ ಸೆಳೆದುಕೊಳ್ಳುತ್ತವೆ. ಬೆಂಗಳೂರು ನಗರಕ್ಕೆ ಇಂತಹ ದುಬಾರಿ ವೆಚ್ಚದ ಯೋಜನೆಗಳ ಅಗತ್ಯ ನಿಜಕ್ಕೂ ಇದೆಯೇ? ಆಳುವವರ ಪ್ರತಿಷ್ಠೆಯ ಕಾರಣಕ್ಕಾಗಿ ಹಣ ಪೋಲಾಗುವುದು ತರವಲ್ಲ. ಬೆಂಗಳೂರಿನ ಜನರು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಒದಗಿಸುವುದಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ದೃಢ ಹೆಜ್ಜೆ ಇಡಬೇಕು. ನಗರದ ಅಭಿವೃದ್ಧಿ ಮತ್ತು ಜನರ ಜೀವನಮಟ್ಟ ಸುಧಾರಣೆಗೆ ಮೂಲಸೌಕರ್ಯಗಳ ಹೆಚ್ಚಳ ಅಗತ್ಯ. ಆದರೆ, ಸಾಲ ಮಾಡಿ ಆಡಂಬರದ ಯೋಜನೆಗಳನ್ನು ಕೈಗೊಳ್ಳುವ ಪ್ರಸ್ತಾವವನ್ನು ಮರುಪರಿಶೀಲನೆಗೆ ಒಳಪಡಿಸುವುದು ಜನಹಿತದ ದೃಷ್ಟಿಯಿಂದ ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.