ಉತ್ತರಪ್ರದೇಶದ ಝಾನ್ಸಿಯಲ್ಲಿನ ಮಹಾರಾಣಿ ಲಕ್ಷ್ಮಿಬಾಯಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವಾರ್ಡ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ 10 ನವಜಾತ ಶಿಶುಗಳು ಪ್ರಾಣ ಕಳೆದುಕೊಂಡಿರುವುದು ಹೃದಯ
ವಿದ್ರಾವಕ. ಮಕ್ಕಳು, ಅದರಲ್ಲೂ ಮುಖ್ಯವಾಗಿ ನವಜಾತ ಶಿಶುಗಳು ಇಂತಹ ದುರಂತಗಳಲ್ಲಿ ಪ್ರಾಣ ಕಳೆದುಕೊಳ್ಳುವ ಅಪಾಯ ಹೆಚ್ಚು. ಶಿಶುಗಳ ಸಾವು ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಮುದಾಯದ ಮಟ್ಟದಲ್ಲಿ ಬಹಳ ನೋವನ್ನು ಉಂಟುಮಾಡುತ್ತದೆ. ಬೆಂಕಿಗೆ ಆಹುತಿಯಾಗುವುದು ಘೋರ. ಅದರಲ್ಲೂ, ಆಸ್ಪತ್ರೆಯಲ್ಲಿ ಬೆಂಕಿಗೆ ಆಹುತಿಯಾಗಿ ಜೀವ ಕಳೆದುಕೊಳ್ಳುವುದು ಇತರ ಯಾವುದೇ ಸ್ಥಳದಲ್ಲಿ ಉಂಟಾಗುವ ಅಗ್ನಿ ಅನಾಹುತಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಮೂಡಿಸುತ್ತದೆ. ಈ ಆಸ್ಪತ್ರೆಯಲ್ಲಿ 18 ಜನರಿಗೆ ಮಾತ್ರ ಜಾಗ ಇರುವ ತೀವ್ರ ನಿಗಾ ಘಟಕದಲ್ಲಿ (ಐಸಿಯು) 49 ಶಿಶುಗಳು ಇದ್ದವು ಎಂದು ವರದಿಗಳು ಹೇಳುತ್ತವೆ. 31 ಶಿಶುಗಳನ್ನು ಬೆಂಕಿಯಿಂದ ರಕ್ಷಿಸಲಾಗಿದೆ. ಕೆಲವು ಶಿಶುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಉತ್ತರಪ್ರದೇಶ ಸರ್ಕಾರವು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗು
ತ್ತದೆ. ಆಸ್ಪತ್ರೆ ಮತ್ತು ಮುಖ್ಯವಾಗಿ ನವಜಾತ ಶಿಶುಗಳಿಗಾಗಿನ ಐಸಿಯು ಬೆಂಕಿ ದುರಂತಕ್ಕೆ ತುತ್ತಾದುದು ಹೇಗೆ? ಈ ದುರಂತಕ್ಕೆ ಕಾರಣ ಏನು? ಅಲ್ಲಿನ ಅಗ್ನಿ ಸುರಕ್ಷತಾ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿತ್ತೇ? ಎಲ್ಲ ಹಂತಗಳ ಅಗ್ನಿಶಾಮಕ ವ್ಯವಸ್ಥೆಗಳು ಕೆಲಸ ಮಾಡುತ್ತಿದ್ದವು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ, ಎಲ್ಲವೂ ಸರಿಯಾಗಿ ಕೆಲಸ ಮಾಡಿಲ್ಲ. ಈ ಆಸ್ಪತ್ರೆ ಮಾತ್ರವೇ ಅಲ್ಲದೆ ದೇಶದ ಬೇರೆ ಕಟ್ಟಡಗಳಲ್ಲಿಯೂ ಅಗ್ನಿ ದುರಂತಗಳನ್ನು ತಡೆಯುವಲ್ಲಿನ ಸಿದ್ಧತೆಗಳು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಈ ದುರಂತವು ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ.
ಅಗ್ನಿ ಅನಾಹುತಗಳಲ್ಲಿ ಶಿಶುಗಳು ಜೀವ ಕಳೆದು
ಕೊಳ್ಳುವುದು ಹೊಸದೇನೂ ಅಲ್ಲ. ಈ ವರ್ಷದ ಮೇ ತಿಂಗಳಲ್ಲಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಏಳು ನವಜಾತ ಶಿಶುಗಳು ಜೀವ ಕಳೆದುಕೊಂಡವು. 2021ರಲ್ಲಿ ನಾಗ್ಪುರ ಸಮೀಪದ ಆಸ್ಪತ್ರೆಯೊಂದರಲ್ಲಿ ನಡೆದ ಇಂತಹ ಅನಾಹುತದಲ್ಲಿ 10 ಶಿಶುಗಳು ಪ್ರಾಣ ಕಳೆದುಕೊಂಡವು. ಈ ವರ್ಷದ ಮೇ ತಿಂಗಳಲ್ಲಿ ರಾಜ್‌ಕೋಟ್‌ನ ಗೇಮಿಂಗ್ ಕೇಂದ್ರವೊಂದರಲ್ಲಿ ಹೊತ್ತಿಕೊಂಡ ಬೆಂಕಿಯ ಪರಿಣಾಮವಾಗಿ ಕನಿಷ್ಠ 33 ಮಂದಿ ಸಾವಿಗೀಡಾದರು. 1997ರಲ್ಲಿ ದೆಹಲಿಯ ಉಪಹಾರ್ ಸಿನಿಮಾ ಕಟ್ಟಡ
ದಲ್ಲಿ ನಡೆದ ದುರಂತ, ಬೆಂಗಳೂರಿನ ಕಾರ್ಲ್‌ಟನ್ ಟವರ್ಸ್‌ನಲ್ಲಿ 2010ರಲ್ಲಿ ನಡೆದ ಅವಘಡ, ಕೋಲ್ಕತ್ತದ ಎಎಂಆರ್‌ಐ ಆಸ್ಪತ್ರೆಯಲ್ಲಿ 2011ರಲ್ಲಿ ನಡೆದ ಬೆಂಕಿ ಅನಾಹುತ ಸೇರಿದಂತೆ ಹಲವು ಅಗ್ನಿ ಅನಾಹುತಗಳು ದೇಶದಲ್ಲಿ ಆಗಿವೆ. ದುರಂತ ಸಂಭವಿಸಿದ ನಂತರ ನಡೆಸುವ ತನಿಖೆಗಳಿಂದ, ತನಿಖಾ ಸಮಿತಿಗಳು ನೀಡುವ ಶಿಫಾರಸುಗಳಿಂದ ಅಂತಹ ದುರಂತಗಳು ಆಗದಂತೆ ನೋಡಿಕೊಳ್ಳುವ ಯಾವ ಪಾಠವನ್ನೂ ಸಂಬಂಧಪಟ್ಟವರು ಕಲಿತಂತಿಲ್ಲ.
ಆಸ್ಪತ್ರೆಗಳು, ಮನೆಗಳು, ವಾಣಿಜ್ಯ ಮಳಿಗೆಗಳು, ಸಿನಿಮಾ ಮಂದಿರಗಳು, ಮನರಂಜನಾ ಕೇಂದ್ರಗಳನ್ನು ನಿರ್ಮಿಸುವಾಗ ಪಾಲನೆ ಮಾಡಬೇಕಿರುವ ಅಗ್ನಿ ಸುರಕ್ಷತಾ ಕ್ರಮಗಳು ಹಾಗೂ ಇತರ ಸುರಕ್ಷತಾ ಕ್ರಮಗಳ ಪಾಲನೆ ಆಗುತ್ತಿಲ್ಲ. ನಿಯಮಗಳನ್ನು ಉಲ್ಲಂಘಿಸುವ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡಗಳ ಮಾಲೀಕರು ಹಾಗೂ ಗುತ್ತಿಗೆದಾರರ ಜೊತೆ ಷಾಮೀಲಾಗಿರುವುದೂ ಇದೆ. ಅವರಿಗೆ ರಾಜಕಾರಣಿಗಳ ಬೆಂಬಲವೂ ಹಲವು ಸಂದರ್ಭಗಳಲ್ಲಿ ಇರುತ್ತದೆ. ಮಹಾರಾಷ್ಟ್ರದಲ್ಲಿನ ಶೇಕಡ 80ರಷ್ಟು ಸರ್ಕಾರಿ ಆಸ್ಪತ್ರೆಗಳು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಹೊಂದಿಲ್ಲದಿರುವುದು ಈಚೆಗೆ ನಡೆದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಇದೇ ಪರಿಸ್ಥಿತಿ ಇತರೆಡೆಗಳಲ್ಲಿಯೂ ಇದ್ದಿರಬಹುದು. ಅಗ್ನಿಶಾಮಕ ಠಾಣೆಗಳ ಸಂಖ್ಯೆ ಸೇರಿದಂತೆ ಅಗ್ನಿಶಾಮಕ ವ್ಯವಸ್ಥೆಯು ದೇಶದ ಜನಸಂಖ್ಯೆಯ ಅಗತ್ಯಕ್ಕೆ ಅನುಗುಣವಾಗಿ ಇಲ್ಲ. ದೊಡ್ಡ ಪ್ರಮಾಣದ ಅಗ್ನಿ ದುರಂತ ಸಂಭವಿಸಿದಾಗ, ದುರಂತಗಳನ್ನು ಎದುರಿಸಲು ಅಗತ್ಯವಿರುವ ಸಿದ್ಧತೆಗಳು ಯಾವುವು ಎಂಬುದು ಚರ್ಚೆಗೆ ಬರುತ್ತದೆ. ಆದರೆ, ಆ ಚರ್ಚೆಗಳು ಕ್ರಿಯಾರೂಪದಲ್ಲಿ, ನಿರ್ದಿಷ್ಟ ಕ್ರಮಗಳ ರೂಪದಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಇಂತಹ ದುರಂತಗಳಿಗೆ ಕಾರಣರಾದ ವ್ಯಕ್ತಿಗಳು ಸಾಮಾನ್ಯವಾಗಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂಬುದು ವಿಷಾದಕರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.