ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಬೇಕಿರುವ ನಿಯಮಗಳನ್ನು
ಅಧಿಸೂಚನೆಯಲ್ಲಿ ಪ್ರಕಟಿಸಿದ ಕೇಂದ್ರ ಸರ್ಕಾರದ ನಡೆಯ ಹಿಂದೆ ಇದ್ದುದು ಚುನಾವಣಾ ಲೆಕ್ಕಾಚಾರ ಎಂಬುದು ಸ್ಪಷ್ಟ. ಈ ಕಾಯ್ದೆಯ ಜಾರಿಗೆ ನಾಲ್ಕು ವರ್ಷಗಳಿಂದ ಯಾವ ಕ್ರಮವನ್ನೂ ಕೇಂದ್ರವು ಕೈಗೊಂಡಿರಲಿಲ್ಲ. ಭಾರತದ ನೆರೆಹೊರೆಯ, ಮುಸ್ಲಿಂ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಅಫ್ಗಾನಿಸ್ತಾನ
ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತವನ್ನು
ಪ್ರವೇಶಿಸಿದ ಹಿಂದೂ, ಪಾರ್ಸಿ, ಸಿಖ್, ಜೈನ, ಬೌದ್ಧ, ಕ್ರೈಸ್ತ ಸಮುದಾಯದವರಿಗೆ ಭಾರತದ
ಪೌರತ್ವ ನೀಡುವ ಉದ್ದೇಶವನ್ನು ಸಿಎಎ ಹೊಂದಿದೆ. ಲೋಕಸಭಾ ಚುನಾವಣೆಗೆ ಮಾದರಿ
ನೀತಿ ಸಂಹಿತೆಯು ಇನ್ನು ಕೆಲವೇ ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ. ಈ ಹೊತ್ತಿನಲ್ಲಿ ಕೇಂದ್ರವು ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಹೀಗಾಗಿ, ಇದನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳುವ ಉದ್ದೇಶ ಕೇಂದ್ರಕ್ಕೆ ಇದೆ ಎಂಬುದು ಖಚಿತ. ಅಧಿಸೂಚನೆಯು ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ, ಪಶ್ಚಿಮ ಬಂಗಾಳದಂತಹ ರಾಜ್ಯಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿರುವ ಸಾಧ್ಯತೆ ಇದೆ. ನಾಲ್ಕು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಈ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸದೇ ಇದ್ದುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ಇಲ್ಲ.
ಈ ಕಾಯ್ದೆಯು ಆರಂಭದಿಂದಲೂ ವಿವಾದಾತ್ಮಕವಾಗಿಯೇ ಇದೆ. ಇದು ಅಸಾಂವಿಧಾನಿಕ, ತಾರತಮ್ಯದಿಂದ ಕೂಡಿರುವಂಥದ್ದು ಎಂಬ ಟೀಕೆಗೆ ಗುರಿಯಾಗಿದೆ. ಈ ಕಾಯ್ದೆಗೆ ಅಸ್ಸಾಂ ಮತ್ತು ದೆಹಲಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ತೀವ್ರ ಪ್ರತಿರೋಧ ಕೂಡ ವ್ಯಕ್ತವಾಗಿತ್ತು. ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಕೂಡ ನಡೆದಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ತೀವ್ರವಾಗಿ ಹರಡಿದ ನಂತರದಲ್ಲಿ ಈ ಪ್ರತಿಭಟನೆಗಳು ಕಡಿಮೆ ಆಗಿದ್ದವು. ಅಸ್ಸಾಂನಲ್ಲಿ ಇದನ್ನು ತೀವ್ರವಾಗಿ ವಿರೋಧಿಸಲಾಗಿದೆ ಎಂಬುದು ಉಲ್ಲೇಖಾರ್ಹ. ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕಾಯ್ದೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ತನ್ನ ನಿಲುವು ಹೇಳಿಲ್ಲ. ಈ ಹೊತ್ತಿನಲ್ಲಿ ಕೇಂದ್ರವು ನಿಯಮಗಳನ್ನು ಅಧಿಸೂಚನೆ ಯಲ್ಲಿ ಪ್ರಕಟಿಸಿದೆ. ಈಗ ನಿಯಮಗಳನ್ನು ಕೂಡ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದು ಖಚಿತ. ಆಡಳಿತ ಪಕ್ಷವು ತಾನು ನೀಡಿದ್ದ ಇನ್ನೊಂದು ಆಶ್ವಾಸನೆಯನ್ನು ಈಡೇರಿಸಿರುವುದಾಗಿ ಹೇಳಿಕೊಂಡಿದೆ.ಆದರೆ ಸರ್ಕಾರ ಇರಿಸಿರುವ ಹೆಜ್ಜೆಯು ಸಮಾಜವನ್ನು ಧ್ರುವೀಕರಿಸುವ, ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಇನ್ನೊಂದು ನಡೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.
ಸಿಎಎ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗೆ ಇರಿಸಿರುವುದು ಇದರ ಬಗ್ಗೆ ಇರುವ ಪ್ರಮುಖ ತಕರಾರು. ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಬಂದರೆ, ಮುಸ್ಲಿಮರಿಗೆ ಪೌರತ್ವದ ನಿರಾಕರಣೆ ಆಗಬಹುದು ಎಂಬ ಭೀತಿ ಕೂಡ ಇದೆ. ಎನ್‌ಆರ್‌ಸಿ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಎನ್‌ಆರ್‌ಸಿ ಹಾಗೂ ಸಿಎಎ ಒಟ್ಟಾಗಿ ಜಾರಿಗೆ ಬಂದಾಗ ಸಮಾಜದಲ್ಲಿ ಪಲ್ಲಟಗಳು ಉಂಟಾಗಬಹುದು ಮತ್ತು ರಾಜಕೀಯ ಸಮೀಕರಣದಲ್ಲಿ ಭಾರಿ ಬದಲಾವಣೆಗಳು ಆಗಬಹುದು. ನೆರೆಹೊರೆಯ ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ ಎಂಬುದು ಆಕ್ಷೇಪಕ್ಕೆ ಕಾರಣವಲ್ಲ. ಆದರೆ ಪೌರತ್ವ ನೀಡುವಾಗ ಧರ್ಮವನ್ನು ಆಧಾರವಾಗಿ ಇರಿಸಿಕೊಳ್ಳಲಾಗುತ್ತದೆ, ತಾರತಮ್ಯ ಎಸಗಲಾಗುತ್ತದೆ ಎಂಬುದು ಆಕ್ಷೇಪಕ್ಕೆ ಕಾರಣ. ಇದು, ದೇಶದ ಸಂವಿಧಾನವು ಪೌರತ್ವದ ವಿಚಾರವಾಗಿ ಹೊಂದಿರುವ ಆಶಯಗಳಿಗೆ ವಿರುದ್ಧವಾಗಿದೆ. ಈಗ ಈ ಕಾಯ್ದೆಯು ಚುನಾವಣೆಯಲ್ಲಿ ಅಸ್ತ್ರವಾಗಿ ಬಳಕೆ ಆಗಲಿದೆ. ಬಹುಶಃ ಕಾಯ್ದೆಯನ್ನು ಭವಿಷ್ಯದಲ್ಲಿಯೂ ಬಳಕೆ ಮಾಡಿಕೊಳ್ಳುವ ಉದ್ದೇಶವೊಂದು ಇರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.