ADVERTISEMENT

ಆರ್‌ಟಿಐ ವ್ಯಾಪ್ತಿಗೆ ಸಿಜೆಐ ಕಚೇರಿ ‘ಸುಪ್ರೀಂ’ ತೀರ್ಪು ಐತಿಹಾಸಿಕ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 23:44 IST
Last Updated 14 ನವೆಂಬರ್ 2019, 23:44 IST
   

‘ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಕಚೇರಿಯೂ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ, ಆದರೆ ಕೆಲವು ಷರತ್ತುಗಳು ಅನ್ವಯಿಸುತ್ತವೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದು ಹಾಗೂ ದೂರಗಾಮಿ ಪರಿಣಾಮ ಬೀರುವಂತಹದ್ದು. ‘ಪಾರದರ್ಶಕತೆ ಕಾಯ್ದುಕೊಳ್ಳುವಾಗ ನ್ಯಾಯಾಂಗದ ಸ್ವಾತಂತ್ರ್ಯವನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು’ ಎಂದು ಪೀಠವು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ಪ್ರಕರಣದ ಹಿನ್ನೆಲೆ ಕುತೂಹಲಕರವಾಗಿದೆ. 12 ವರ್ಷಗಳ ಹಿಂದೆ, ಕೇಂದ್ರ ಮಾಹಿತಿ ಆಯುಕ್ತರ ಆದೇಶಕ್ಕೆ ಪೂರಕವಾಗಿ, ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆರ್‌ಟಿಐ ಕಾಯ್ದೆಯಡಿ ಬಹಿರಂಗಪಡಿಸಲು ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್‌ ನಿರಾಕರಿಸಿದ್ದರು.

ಈ ನಿಲುವಿನ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. 2010ರ ಜನವರಿಯಲ್ಲಿ ಈ ಸಂಬಂಧ ಆದೇಶ ನೀಡಿದ್ದ ದೆಹಲಿ ಹೈಕೋರ್ಟ್‌, ‘ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಕಚೇರಿಯು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಡಿ ಬರುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿಸ್ವತಂತ್ರವಾಗಿ ಕಾರ್ಯನಿರ್ವಹಿಸುವುದು ನ್ಯಾಯಮೂರ್ತಿಗಳ ವಿಶೇಷಾಧಿಕಾರ ಅಲ್ಲ. ಆದರೆ ಆ ಹುದ್ದೆ ಅವರ ಮೇಲಿನ ಜವಾಬ್ದಾರಿ’ ಎಂದು ಸ್ಪಷ್ಟಪಡಿಸಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನ ಮಹಾ ಕಾರ್ಯದರ್ಶಿ ಹಾಗೂ ಕೇಂದ್ರ ಮಾಹಿತಿ ಆಯುಕ್ತರು (ಸಿಐಸಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಏಪ್ರಿಲ್‌ 4ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈ ಕುರಿತ ತೀರ್ಪು ಈಗ ಹೊರಬಿದ್ದಿದೆ.

ADVERTISEMENT

ನ್ಯಾಯಾಂಗದ ಸ್ವಾತಂತ್ರ್ಯ ಎಂದಿಗೂ ನಮ್ಮಲ್ಲಿ ಚರ್ಚೆಯ ವಿಷಯವೇ ಆಗಿದೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯುವಲ್ಲಿ ಇರುವ ಲಕ್ಷ್ಮಣರೇಖೆ ಯಾವುದು ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಾದ ಪ್ರತಿವಾದಗಳೂ ನಡೆದಿವೆ. ‘ಕಾರ್ಯಾಂಗವು ನ್ಯಾಯಾಂಗದಲ್ಲಿ ಹಸ್ತಕ್ಷೇಪ ನಡೆಸುವುದನ್ನು ತಪ್ಪಿಸಲು ಹಿಂದೆ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆಯನ್ನು ಅಸಿಂಧುಗೊಳಿಸಲಾಗಿತ್ತು. ಹಾಗೆಂದ ಮಾತ್ರಕ್ಕೆ ನ್ಯಾಯಾಂಗದ ನಡೆಯು ಸಾರ್ವಜನಿಕ ಪರಿಶೀಲನೆಯಿಂದ ಹೊರತಲ್ಲ’ ಎಂದು, ಮಾಹಿತಿ ಹಕ್ಕು ಕಾರ್ಯಕರ್ತಎಸ್‌.ಸಿ.ಅಗರವಾಲ್‌ ಅವರ ಪರವಾಗಿ ಈ ಪ್ರಕರಣದಲ್ಲಿ ವಾದ ಮಂಡಿಸಿದ್ದ ವಕೀಲ ಪ್ರಶಾಂತ್‌ ಭೂಷಣ್‌ ಅವರು ಹೇಳಿದ್ದುದು ಗಮನಾರ್ಹ.

ಸರ್ಕಾರದ ಇತರ ಅಂಗಸಂಸ್ಥೆಗಳಲ್ಲಿ ಪಾರದರ್ಶಕ ನೀತಿ ಅಳವಡಿಸಿಕೊಳ್ಳಬೇಕಾದ ಅಗತ್ಯವನ್ನು ಹಲವು ಪ್ರಕರಣಗಳಲ್ಲಿ ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ತನ್ನ ಕಾರ್ಯನಿರ್ವಹಣೆಯಲ್ಲಿಯೇ ಪಾರದರ್ಶಕ ನೀತಿಯನ್ನು ಅನುಸರಿಸಲು ಹಿಂದೇಟು ಹಾಕುತ್ತಿರುವುದೇಕೆ ಎನ್ನುವ ಪ್ರಶ್ನೆಯೂ ಉದ್ಭವಿಸಿತ್ತು. ಇಂತಹ ಕಳಕಳಿಗೆ ಪೂರಕವಾಗಿ ಹೊರಬಿದ್ದಿರುವ ಈಗಿನ ತೀರ್ಪು, ನ್ಯಾಯಾಂಗ ಸಹಿತ ಪ್ರಜಾಪ್ರಭುತ್ವದ ಯಾವುದೇ ಅಂಗವಾದರೂ ಅಗತ್ಯ ಮಾಹಿತಿಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದಕ್ಕೆ ಕುಂಟುನೆಪ ಒಡ್ಡದಂತೆ ನೆರವಾಗುವ ಆಶಾಭಾವ ಹುಟ್ಟಿಸಿದೆ.

ಭಾರತದಂತಹ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾರ್ವಜನಿಕ ಸೇವಕರ ಕಾರ್ಯವೈಖರಿಯನ್ನು ಅರಿಯುವ ನಾಗರಿಕರ ಹಕ್ಕು ಈಗ ಅಬಾಧಿತ. ಹೀಗಾಗಿ, ನ್ಯಾಯಾಂಗದ ಕಾರ್ಯವೈಖರಿಗೆ ಸಂಬಂಧಿಸಿ ಇದನ್ನು ಒಂದು ಐತಿಹಾಸಿಕ ತೀರ್ಪು ಎಂದೇ ಪರಿಗಣಿಸಬಹುದು. ಈ ತೀರ್ಪು ಹೊರಬೀಳಲು 10 ವರ್ಷಗಳಷ್ಟು ಸುದೀರ್ಘ ಅವಧಿ ಹಿಡಿದದ್ದು ದುರದೃಷ್ಟಕರ.

ಇದೇ ವೇಳೆ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸುತ್ತಲೇ, ಮಾಹಿತಿ ಪಡೆಯುವ ಹಕ್ಕನ್ನು ಚಲಾಯಿಸಲು ಜನ ಹೆಚ್ಚು ಜಾಣ್ಮೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರವು ಮಾಹಿತಿ ಆಯುಕ್ತರ ಅಧಿಕಾರವನ್ನು ಇತ್ತೀಚೆಗೆ ಮೊಟಕುಗೊಳಿಸಿರುವುದಲ್ಲದೆ, ಅವರಿಗಿದ್ದ ಕೆಲವು ಸೌಲಭ್ಯಗಳಿಗೂ ಕತ್ತರಿ ಹಾಕಿದೆ. ಈ ಬೆಳವಣಿಗೆಯ ಹೊರತಾಗಿಯೂ, ಮಾಹಿತಿ ಆಯಕ್ತರಿಗೆ ಇರುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದು ಸ್ವಾಗತಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.