ADVERTISEMENT

ಸಂಪಾದಕೀಯ | ಬಿಹಾರದಲ್ಲಿ ಸೇತುವೆಗಳ ಕುಸಿತ: ಆಡಳಿತ ವೈಫಲ್ಯದ ಸಂಕೇತ

ಸೇತುವೆ ಕುಸಿತದಂತಹ ದುರ್ಘಟನೆಗಳಿಗೆ ದುರಾಡಳಿತ, ಭ್ರಷ್ಟಾಚಾರವೂ ಪ್ರಮುಖ ಕಾರಣಗಳು ಎಂಬುದು ನಿರ್ವಿವಾದ

ಸಂಪಾದಕೀಯ
Published 10 ಜುಲೈ 2024, 0:49 IST
Last Updated 10 ಜುಲೈ 2024, 0:49 IST
   

ಬಿಹಾರದ ಸೇತುವೆಗಳಿಗೆ ಕುಸಿಯುವ ಸಾಂಕ್ರಾಮಿಕ ತಗುಲಿದಂತಿದೆ. ಬಿಹಾರ ರಾಜ್ಯದಾದ್ಯಂತ ಎರಡು ವಾರಗಳ ಅವಧಿಯಲ್ಲಿ 12 ಸೇತುವೆಗಳು ಕುಸಿದುಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಸಾವು, ನೋವು ಸಂಭವಿಸಿಲ್ಲ. ನಿತೀಶ್‌ ಕುಮಾರ್‌ ನೇತೃತ್ವದ ರಾಜ್ಯ ಸರ್ಕಾರವು ಸೇತುವೆಗಳ ಕುಸಿತ ಕುರಿತು ತನಿಖೆ ನಡೆಸುವುದಕ್ಕಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿದೆ. ಬಿಹಾರದಲ್ಲಿನ ಎಲ್ಲ ಸೇತುವೆಗಳ ಸುರಕ್ಷತೆ ಮತ್ತು ದೃಢತೆಯ ಬಗ್ಗೆಯೂ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ  ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ 16 ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ, ಇಷ್ಟೇ ಕ್ರಮ ಕೈಗೊಂಡರೆ ಸಾಕಾಗುವುದಿಲ್ಲ. ಪ್ರತಿ ಸೇತುವೆಯ ಕುಸಿತದ ಹಿಂದೆ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳು ಕಾರಣರಾಗಿರುವುದು ಖಚಿತ. ಹೀಗಿರುವಾಗ ಕೆಲವೇ ಅಧಿಕಾರಿಗಳನ್ನು ಅಮಾನತು ಮಾಡುವುದು ಕಣ್ಣೊರೆಸುವ ಕ್ರಮವಾಗುತ್ತದೆ. ಅಲ್ಲಿ ಮುಂಗಾರು ಬಿರುಸಾಗುತ್ತಿರುವುದರಿಂದ ಮತ್ತಷ್ಟು ಸೇತುವೆಗಳು ಕುಸಿಯಬಹುದು ಎಂದು ಎಂಜಿನಿಯರ್‌ಗಳ ಸಂಘವೊಂದು ಎಚ್ಚರಿಕೆ ನೀಡಿದೆ. ಈಗ ಕುಸಿದಿರುವ ಸೇತುವೆಗಳಲ್ಲಿ ಕೆಲವು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವು ಬಳಕೆಯಲ್ಲಿದ್ದವು. ಸೇತುವೆಗಳ ಕುಸಿತವು ನಿರ್ಮಾಣ ಕಾಮಗಾರಿಯ ಗುಣಮಟ್ಟದ ಆಚೆಗೂ ಪ್ರಶ್ನೆಗಳನ್ನು ಮೂಡಿಸಿದೆ. ಆ ಪ್ರಶ್ನೆಗಳು ಬಿಹಾರದ ಆಡಳಿತ ಮತ್ತು ರಾಜಕಾರಣಕ್ಕೆ ಸಂಬಂಧಿಸಿವೆ.

ವಿನ್ಯಾಸದಲ್ಲಿನ ದೋಷ, ಕಳಪೆ ಗುಣಮಟ್ಟದ ನಿರ್ಮಾಣ ಕಾಮಗಾರಿ, ಕಳಪೆ ಸಾಮಗ್ರಿಗಳ ಬಳಕೆ, ನಿರ್ವಹಣೆಯಲ್ಲಿನ ದೋಷ, ಸೇತುವೆಗಳ ಬಳಿ ಅವೈಜ್ಞಾನಿಕವಾಗಿ ಹೂಳು ಮತ್ತು ಮರಳು ತೆರವು ಮಾಡಿರುವುದರಿಂದ ಪಿಲ್ಲರ್‌ಗಳು ದುರ್ಬಲಗೊಂಡಿರುವುದೂ ಸೇರಿದಂತೆ ಸೇತುವೆಗಳ ಸರಣಿ ಕುಸಿತಕ್ಕೆ ಹಲವು ಕಾರಣಗಳನ್ನು ನೀಡಲಾಗಿದೆ. ಇವೆಲ್ಲವೂ ತೆಳು ಗ್ರಹಿಕೆಯ ಮತ್ತು ತಕ್ಷಣಕ್ಕೆ ಗುರುತಿಸಿದ ಕಾರಣಗಳಷ್ಟೆ. ಕೆಟ್ಟ ವಿನ್ಯಾಸ, ಕಳಪೆ ಕಾಮಗಾರಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ, ಮೇಲುಸ್ತುವಾರಿ ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯಕ್ಕೆ ಅವಕಾಶ ಕಲ್ಪಿಸಿದ ಆಡಳಿತದ ವೈಫಲ್ಯವೇ ನಿಜವಾದ ಕಾರಣ. ಗುತ್ತಿಗೆದಾರರು ಕಾಮಗಾರಿಯ ವೆಚ್ಚದ ಒಂದು ಭಾಗವನ್ನು, ಕೆಲವೊಮ್ಮೆ ದೊಡ್ಡ ಮೊತ್ತವನ್ನೇ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚವಾಗಿ ನೀಡಬೇಕು ಎಂಬುದು ರಹಸ್ಯವೇನೂ ಅಲ್ಲ. ಗುತ್ತಿಗೆದಾರರು ತಮ್ಮ ಲಾಭದ ಪ್ರಮಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾಮಗಾರಿಯ ನಿರ್ಮಾಣ ವೆಚ್ಚದಲ್ಲಿ ಕಡಿತ ಮಾಡುತ್ತಾರೆ ಮತ್ತು ಗುಣಮಟ್ಟದಲ್ಲಿ ರಾಜಿಯಾಗುತ್ತಾರೆ. ಬಿಹಾರದಲ್ಲಿ ಹಿಂದೆಯೂ ಸೇತುವೆಗಳ ಕುಸಿತದ ದುರ್ಘಟನೆಗಳು ಸಂಭವಿಸಿದ್ದವು. ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೂರು ಕಿಲೊಮೀಟರ್‌ ಉದ್ದದ ಸೇತುವೆಯು ಕಳೆದ ವರ್ಷ ಎರಡು ಬಾರಿ ಕುಸಿದಿತ್ತು. ಈ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳಿದರು. ಸೇತುವೆ ಕುಸಿತದ ಬಗ್ಗೆ ತನಿಖೆ ನಡೆಯಿತಾದರೂ ಕುಸಿತಕ್ಕೆ ಕಾರಣವಾದ ಅಂಶಗಳ ಕುರಿತು ತನಿಖಾ ವರದಿ ಬೆಳಕು ಚೆಲ್ಲಲಿಲ್ಲ. ಸೇತುವೆ ಕುಸಿತದಂತಹ ದುರ್ಘಟನೆಗಳಿಗೆ ದುರಾಡಳಿತ, ಭ್ರಷ್ಟಾಚಾರವೂ ಪ್ರಮುಖ ಕಾರಣಗಳು ಎಂಬುದು ನಿರ್ವಿವಾದ. ಆದರೆ, ಇಂತಹ ಪ್ರಕರಣಗಳಲ್ಲಿ ಯಾವುದೇ ಸಚಿವ ಅಥವಾ ರಾಜಕಾರಣಿಯನ್ನು ಹೊಣೆಗಾರರನ್ನಾಗಿ ಮಾಡಿದ ಉದಾಹರಣೆ ಸಿಗುವುದಿಲ್ಲ. ನದಿಯ ಪಾಲಾದ, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೇಬು ಸೇರಿದ ಸಾರ್ವಜನಿಕರ ತೆರಿಗೆಯ ಹಣವನ್ನು ವಸೂಲಿ ಮಾಡಿದ ಪ್ರಕರಣಗಳೂ ವಿರಳ. ಸೇತುವೆ ಕುಸಿತದಿಂದ ಜನರಿಗೆ ಅನನುಕೂಲ ಆಗುವುದಷ್ಟೇ ಅಲ್ಲ, ಸೇತುವೆಯ ತ್ಯಾಜ್ಯವು ನದಿಯೊಳಗೆ ಸೇರಿ ತೀವ್ರ ಸ್ವರೂಪದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಯಾರೂ ಗಮನಿಸುತ್ತಿಲ್ಲ.

ಬಿಹಾರದಲ್ಲಿ ರಸ್ತೆಗಳು, ಎಕ್ಸ್‌ಪ್ರೆಸ್‌ ಹೆದ್ದಾರಿಗಳು, ಸೇತುವೆಗಳು, ಕಟ್ಟಡಗಳು, ಚೆಕ್‌ ಡ್ಯಾಮ್‌ಗಳಷ್ಟೇ ಅಲ್ಲದೆ ದೊಡ್ಡ ಅಣೆಕಟ್ಟೆಗಳೂ ಕುಸಿಯುತ್ತಿವೆ. ಈ ವಿಚಾರದಲ್ಲಿ ಬಿಹಾರವು ದೇಶದಲ್ಲೇ ಕುಖ್ಯಾತಿ ಪಡೆದಿದೆ. ಗುಜರಾತ್‌ನಲ್ಲಿ 2022ರಲ್ಲಿ ಮೋರ್ಬಿ ಸೇತುವೆ ಕುಸಿದು 140ಕ್ಕೂ ಹೆಚ್ಚು ಮಂದಿ ಮೃತ
ಪಟ್ಟಿದ್ದರು. ದೆಹಲಿ, ರಾಜ್‌ಕೋಟ್‌, ಲಖನೌ ಮತ್ತು ಜಬಲ್ಪುರದಲ್ಲಿ ವಿಮಾನ ನಿಲ್ದಾಣಗಳ ಹೊರಾಂಗಣದ ಮೇಲ್ಚಪ್ಪರಗಳು ಕುಸಿದಿದ್ದವು. ಇವೆಲ್ಲ ಆಡಳಿತದಲ್ಲಿನ ವೈಫಲ್ಯದ ಸಂಕೇತಗಳು. ಬಿಹಾರವು ಇಂತಹ ಸಂಕೇತಗಳನ್ನು ಆಗಾಗ ನೀಡುತ್ತಲೇ ಇದೆ. ಸಾರ್ವಜನಿಕ ಜೀವನದಲ್ಲಿರುವವರು ಮತ್ತು ಅಧಿಕಾರಿಗಳಿಗೆ ಸುರಕ್ಷತೆ, ಗುಣಮಟ್ಟ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯು ದಿಕ್ಸೂಚಿಯಂತಾಗದಿದ್ದರೆ ಇಂತಹ ಅವಘಡಗಳನ್ನು ತಪ್ಪಿಸುವುದು ಕಷ್ಟ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.