ADVERTISEMENT

ಸಂಪಾದಕೀಯ | ಕೊರೊನಾ ಕಾಲಘಟ್ಟದಲ್ಲಿ ಸಂಸ್ಕೃತಿ ಯಾರಿಗೂ ಬೇಡದ ಮಗುವಾಗಿದೆಯೇ?

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 1:22 IST
Last Updated 23 ಜೂನ್ 2020, 1:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಭಾರತದಲ್ಲಿ ಆರೋಗ್ಯಕರ ಪರಿಕಲ್ಪನೆಗಳಿಗಿಂತಲೂ ಅಪಕಲ್ಪನೆಗಳೇ ಹೆಚ್ಚು. ಗಾಂಧೀಜಿ ಅವರೇನೋ, ‘ಒಂದು ರಾಷ್ಟ್ರದ ಸಂಸ್ಕೃತಿ ಅಲ್ಲಿನ ಜನರ ಹೃದಯ ಮತ್ತು ಆತ್ಮಗಳಲ್ಲಿ ನೆಲೆಗೊಂಡಿರುತ್ತದೆ’ ಎಂದು ವ್ಯಾಖ್ಯಾನಿಸಿದರು. ಆದರೆ, ಸಂಸ್ಕೃತಿಯ ಕುರಿತ ನಮ್ಮ ಪರಿಭಾಷೆಯಲ್ಲಿ ಹೃದಯವೂ ಇಲ್ಲ, ಆತ್ಮವೂ ಇಲ್ಲ. ಹಾಗಾಗಿಯೇ ಕೊರೊನಾ ಕಾರಣದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ವಲಯದ ಪ್ರಸ್ತಾಪ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಆದರೆ, ಕೊರೊನಾ ಬಿಕ್ಕಟ್ಟಿನಿಂದಾಗಿ ನಲುಗಿರುವ ಸಮಾಜವನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ವಿವಿಧ ದೇಶಗಳು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿವೆ. ಮನರಂಜನಾ ಕ್ಷೇತ್ರದ ಪುನಶ್ಚೇತನಕ್ಕಾಗಿಇಟಲಿ ಬೃಹತ್‌ ಮೊತ್ತವನ್ನು ಒದಗಿಸಿದೆ. ರಂಗಮಂದಿರಗಳು, ಮ್ಯೂಸಿಯಂಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಪೋಷಣೆಗಾಗಿಜರ್ಮನಿ ದೊಡ್ಡ ಮೊತ್ತ ತೆಗೆದಿರಿಸಿದೆ. ಸ್ಪೇನ್, ಫ್ರಾನ್ಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಂತಹ ದೇಶಗಳು ಸಾಂಸ್ಕೃತಿಕ ವಲಯದ ರಕ್ಷಣೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ಕಾಳಜಿಯ ನಡುವೆಯೂ ಸಾಂಸ್ಕೃತಿಕ ವಲಯದ ಪುನಶ್ಚೇತನಕ್ಕೆ ಒದಗಿಸಿರುವ ಹಣ ಸಾಲದೆಂದು ಅಲ್ಲಿನ ಕಲಾವಲಯ ದೂರುತ್ತಿದೆ.

ನಮ್ಮಲ್ಲಿ ಮಾತ್ರ ಪರಿಸ್ಥಿತಿ ತಿರುಗುಮುರುಗು. ಸಂಸ್ಕೃತಿಯ ಹೆಗ್ಗಳಿಕೆಯ ಕುರಿತಾಗಿ ಭಾರತದ ಪ್ರಜಾಪ್ರತಿನಿಧಿಗಳು ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾರೆ. ಆದರೆ, ಅಂಥ ಬಹುತೇಕ ಮಾತುಗಳು ರಾಜಕೀಯ ಪ್ರೇರಿತವಾಗಿದ್ದು, ಜನರ ನಡುವೆ ಒಡಕು ಉಂಟುಮಾಡುವ ಪ್ರಯತ್ನಗಳಾಗಿವೆ. ಭಾವಾವೇಶದ ಬಡಾಯಿಯಿಂದಲೇ ಸಾಹಿತ್ಯ-ಸಂಸ್ಕೃತಿಯ ಪೋಷಣೆಯಾಗುತ್ತದೆಂದು ರಾಜಕಾರಣಿಗಳು ಭಾವಿಸಿರುವಂತಿದೆ. ಜನರ ಬದುಕಿಗೆ ಸಾಹಿತ್ಯ-ಸಂಸ್ಕೃತಿ ಯಾವ ರೀತಿಯಲ್ಲಿ ಅನಿವಾರ್ಯ ಎನ್ನುವ ಒಳನೋಟಗಳು ನಮ್ಮನ್ನು ಪ್ರತಿನಿಧಿಸುವ ಬಹಳಷ್ಟು ಪ್ರತಿನಿಧಿಗಳಿಗಿಲ್ಲ. ಇಂಥವರಿಗೆ, ‘ನೃಪತುಂಗನೆ ಚಕ್ರವರ್ತಿ, ಪಂಪನಿಲ್ಲಿ ಮುಖ್ಯಮಂತ್ರಿ’ ಎನ್ನುವ ಕುವೆಂಪು ಕಾಣ್ಕೆಯ ‘ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ’ದ ಪರಿಚಯವಿರುವುದು ಹೇಗೆ ಸಾಧ್ಯ?

ADVERTISEMENT

ಕಲೆಯ ಮೂಲಕ ವಿಕಾಸಗೊಂಡ ನಂಬಿಕೆಗಳ ರೂಪವಾದ ಸಂಸ್ಕೃತಿಯು ಜೀವನದ ಸೌಂದರ್ಯವನ್ನಷ್ಟೇ ಹೆಚ್ಚಿಸುವುದಿಲ್ಲ; ಬದುಕಿಗೆ ಬೇಕಾದ ಬಲವನ್ನೂ ನೀಡುತ್ತದೆ. ನೆಮ್ಮದಿಯ ಕಾಲದಲ್ಲಿ ಒದಗುವಂತೆ, ಸಂಕಟದ ಕಾಲವನ್ನು ಎದುರಿಸಲೂ ಊರುಗೋಲಾಗುತ್ತದೆ. ಹಾಗೆ ನೆರವಿಗೆ ಬಾರದೆಹೋದರೆ ಸಂಸ್ಕೃತಿಯ ಹೆಸರಿನಲ್ಲಿ ನಾವು ಗಳಿಸಿರುವುದು ಬುರುಗೆಂದಷ್ಟೇ ಅರ್ಥ ಹಾಗೂ ಈ ಹೊತ್ತಿನ ಸಂಸ್ಕೃತಿ ನಿರೂಪಕರು ಜಡ್ಡುಗಟ್ಟಿದ್ದಾರೆ ಎಂದೂ ಹೇಳಬಹುದು.

ಕಲಾವಿದರು ಕಂಗಾಲಾಗಿರುವ, ರಾಜ್ಯದಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚೂಕಡಿಮೆ ಸ್ಥಗಿತಗೊಂಡಿರುವ ಇಂದಿನ ಸಂದರ್ಭ ನಮ್ಮ ಸಾಂಸ್ಕೃತಿಕ ಅವಜ್ಞೆಗೆ ಉದಾಹರಣೆಯಂತಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಹೊಸ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕಲಾವಿದರ ನೆರವಿಗೆ ಬರಬೇಕಿತ್ತು ಹಾಗೂ ಆ ಕಾರ್ಯಕ್ರಮಗಳ ಮೂಲಕ ಜನರ ಒಟ್ಟಾರೆ ಬದುಕಿಗೆ ತುಸುವಾದರೂ ನೆಮ್ಮದಿ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನಿಸಬಹುದಿತ್ತು. ಆದರೆ, ಕೆಲವಷ್ಟೇ ಕಲಾವಿದರಿಗೆ ಎರಡು ಸಾವಿರ ರೂಪಾಯಿ ಸಹಾಯಧನ ನೀಡುವಷ್ಟಕ್ಕೆ ಸರ್ಕಾರ ತನ್ನ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಸೀಮಿತಗೊಳಿಸಿಕೊಂಡಿದೆ. ಸಾಂಸ್ಕೃತಿಕ ವಲಯಕ್ಕೆ ಹೊಸದಾಗಿ ಅನುದಾನ ಬಿಡುಗಡೆಮಾಡುವುದಿರಲಿ, ಈಗಾಗಲೇ ಇರುವ ವಾರ್ಷಿಕ ಅನುದಾನವನ್ನೂ ಕಡಿತಗೊಳಿಸುತ್ತಿದೆ. ಸಾಂಸ್ಕೃತಿಕ ಕ್ಷೇತ್ರದ ವ್ಯಾಪಕ ಸಾಧ್ಯತೆಗಳ ಬಗ್ಗೆ ಸರ್ಕಾರದಲ್ಲಿ ಇರುವವರಿಗೇ ತಿಳಿದಂತಿಲ್ಲ.

ಕನ್ನಡ ಮತ್ತು ಸಂಸ್ಕೃತಿ ಖಾತೆಗೆ ರಾಜಕೀಯ ಲೆಕ್ಕಾಚಾರದಲ್ಲಿ ನಗಣ್ಯವಾದ ಸ್ಥಾನ. ಈ ಇಲಾಖೆಯ ವ್ಯಾಪ್ತಿ ಅತ್ಯಂತ ಸೀಮಿತವಾದುದೆಂಬ ಭಾವನೆಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕನ್ನಡ ಮತ್ತು ಸಂಸ್ಕೃತಿಯನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಉದ್ದೇಶಿತ ವಿಲೀನದಿಂದಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಸ್ತಿತ್ವಕ್ಕೆ ಸಂಚಕಾರ ಒದಗುವ ಸಾಧ್ಯತೆಯಿದ್ದರೂ ನಮ್ಮ ಸಾಂಸ್ಕೃತಿಕ ಲೋಕ ನಿರ್ಲಿಪ್ತವಾಗಿದೆ. ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಕಲಾವಿದರ ಬದುಕು ದುಸ್ತರಗೊಂಡಿರುವ ಬಗ್ಗೆಯೂ ಸಾಂಸ್ಕೃತಿಕ ಲೋಕದ ಗಣ್ಯರು ತಲೆಕೆಡಿಸಿಕೊಂಡಂತಿಲ್ಲ. ಜನರನ್ನು ವೈಚಾರಿಕ ಹಾಗೂ ಭಾವನಾತ್ಮಕವಾಗಿ ಒಟ್ಟುಗೂಡಿಸಬೇಕಾದ ಸಾಂಸ್ಕೃತಿಕ ಮನಸ್ಸುಗಳಿಗೂ ಜಡ್ಡು ಆವರಿಸಿರುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.