ADVERTISEMENT

ಸಂಪಾದಕೀಯ: ಡಿ.ಅರೆಸ್ಟ್‌, ಸೈಬರ್ ವಂಚನೆ ತಡೆಗೆ ಜಾಗೃತಿ, ಮುನ್ನೆಚ್ಚರಿಕೆಯೇ ಮಾರ್ಗ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 0:28 IST
Last Updated 30 ಅಕ್ಟೋಬರ್ 2024, 0:28 IST
ಸಂಪಾದಕೀಯ
ಸಂಪಾದಕೀಯ   

ಡಿಜಿಟಲ್‌ ಅರೆಸ್ಟ್‌ ಮತ್ತು ಇತರ ಸೈಬರ್‌ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ತಮ್ಮ ‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಈ ವಿಚಾರ ಎಷ್ಟು ಗಂಭೀರ ಎಂಬುದನ್ನು ಸೂಚಿಸುತ್ತದೆ. ಎರಡು ವರ್ಷಗಳ ಹಿಂದೆ ಡಿಜಿಟಲ್‌ ಅರೆಸ್ಟ್‌ ನಮಗೆ ಗೊತ್ತೇ ಇಲ್ಲದ ಮತ್ತು ನಂಬಲು ಕೂಡ ಸಾಧ್ಯವಿಲ್ಲದ ಸಂಗತಿಯಾಗಿತ್ತು. ಆದರೆ ಈಗ, ಡಿಜಿಟಲ್‌ ಅರೆಸ್ಟ್‌ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ಪ್ರಧಾನಿಯೇ ಎಚ್ಚರಿಕೆ ನೀಡುವಷ್ಟು ಗಂಭೀರವೂ ಆಗಿದೆ. ವಂಚಕರು ಪೊಲೀಸ್‌, ಸಿಬಿಐ, ಡ್ರಗ್ಸ್‌ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. ವಂಚನೆಯು ಭಾರತದ ಒಳಗಿನಿಂದ ಮಾತ್ರವಲ್ಲದೆ, ಮ್ಯಾನ್ಮಾರ್‌, ಲಾವೋಸ್‌, ಕಾಂಬೋಡಿಯಾದಂತಹ ದೇಶಗಳಿಂದಲೂ ನಡೆಯುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ. ಭಾರತೀಯ ಸೈಬರ್‌ ಅಪರಾಧ ತಡೆ ಸಮನ್ವಯ ಕೇಂದ್ರದ ಮೂಲಕ ಗೃಹ ಸಚಿವಾಲಯವು ಸೈಬರ್‌ ಅಪರಾಧ ಕೃತ್ಯಗಳನ್ನು ನಿಯಂತ್ರಿಸುತ್ತದೆ. ಆದರೆ, ವಂಚನೆ ನಡೆಸಲು ಈ ಕೇಂದ್ರದ ಹೆಸರನ್ನು ಬಳಸಿಕೊಂಡದ್ದೂ ಇದೆ.

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನರು ಡಿಜಿಟಲ್‌ ಅರೆಸ್ಟ್‌ನಿಂದಾಗಿ ಸುಮಾರು ₹120 ಕೋಟಿ ಕಳೆದುಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳುತ್ತಿವೆ. ಡಿಜಿಟಲ್‌ ಅರೆಸ್ಟ್‌ ಮಾತ್ರವಲ್ಲ, ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಪರಿಷ್ಕರಣೆ, ಬ್ಯಾಂಕ್‌ ಖಾತೆ, ಷೇರು ವಹಿವಾಟು, ಹೂಡಿಕೆ ಇತ್ಯಾದಿ ಹೆಸರಿನಲ್ಲಿ ಕೂಡ ವಂಚನೆ ನಡೆಯುತ್ತಿದೆ. ವಿದ್ಯಾವಂತರು ಮತ್ತು ತಿಳಿವಳಿಕೆಯುಳ್ಳವರು ಸಹ ಸೈಬರ್‌ ವಂಚನೆಯ ಸಂತ್ರಸ್ತರಾಗಿದ್ದಾರೆ. ಕೈಗಾರಿಕೋದ್ಯಮಿಯೊಬ್ಬರನ್ನು ಡಿಜಿಟಲ್‌ ಅರೆಸ್ಟ್‌ಗೆ ಒಳಪಡಿಸಿ ₹7 ಕೋಟಿ ದೋಚಿದ ಘಟನೆಯೂ ನಡೆದಿದೆ. ದೇಶವು ಈಗ ಡಿಜಿಟಲ್‌ ಲೋಕ ಪ್ರವೇಶಿಸಿದೆ ಮತ್ತು ನಮ್ಮ ಜೀವನದ ವಿವಿಧ ಆಯಾಮಗಳಲ್ಲಿ ಡಿಜಿಟಲ್‌ ಜಗತ್ತು ಹಾಸುಹೊಕ್ಕಾಗಿದೆ. ಹಲವು ಜನರು ಡಿಜಿಟಲ್‌ ಡೇಟಾ ಮತ್ತು ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ತಳೆದಿದ್ದಾರೆ. ಜಾಗೃತಿ ಕೊರತೆಯ ಕಾರಣದಿಂದ ಜನರು ವಂಚಕರ ಬಲೆಗೆ ಬೀಳುತ್ತಾರೆ. ಸರ್ಕಾರದ ಕೆಲವು ಸಂಸ್ಥೆಗಳ ಕುರಿತು ಇರುವ ಭಯದಿಂದಾಗಿ ಈ ಸಂಸ್ಥೆಗಳ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರಿಗೆ ಜನರು ಪ್ರಶ್ನಿಸದೆಯೇ ಶರಣಾಗಿಬಿಡುತ್ತಾರೆ. ಚಾತುರ್ಯದಿಂದ ಹೆಣೆದ ಮೋಸದ ಬಲೆಯೊಳಗೆ ಬಿದ್ದ ಜನ ಹೆಚ್ಚಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ಸ್ವತಂತ್ರ ಚಿಂತನೆಯನ್ನು ಕಳೆದುಕೊಂಡುಬಿಡುತ್ತಾರೆ. ಜನರಲ್ಲಿ ಅಂತರ್ಗತವಾಗಿರುವ ನಂಬುವ ಸ್ವಭಾವ, ತಮಗೆ ಹೇಳಿದ ವಿಚಾರ ಅಥವಾ ತಮ್ಮ ಮುಂದೆ ಇರಿಸಲಾದ ಸಂಗತಿಯನ್ನು ಪ್ರಶ್ನಿಸುವುದಕ್ಕೆ ಇರುವ ಇರುಸುಮುರುಸು ಜನ ವಂಚನೆಗೆ ಒಳಗಾಗಲು ಮುಖ್ಯ ಕಾರಣಗಳಾಗಿರುತ್ತವೆ. ಇದು ಒಂದು ಹಣದ ಆಟ; ಇದು ನಿಜವೆಂದೇ ಕುರುಡಾಗಿ ನಂಬುವ ಜನ ಆಟದಲ್ಲಿ ಸೋಲುತ್ತಾರೆ. 

ನ್ಯಾಷನಲ್‌ ಸೈಬರ್‌ ಕ್ರೈಮ್‌ ರಿಪೋರ್ಟಿಂಗ್‌ ಪೋರ್ಟಲ್‌ನಲ್ಲಿ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಏಳು ಲಕ್ಷ ದೂರುಗಳು ದಾಖಲಾಗಿವೆ. ನಾಚಿಕೆಯ ಕಾರಣಕ್ಕೆ ಅಥವಾ ಕಳೆದುಕೊಂಡ ಹಣಕ್ಕೆ ಸಮರ್ಪಕ ದಾಖಲೆ ಇಲ್ಲದ ಕಾರಣಕ್ಕೆ ಹಲವರು ದೂರು ದಾಖಲಿಸುವ ಗೋಜಿಗೇ ಹೋಗುವುದಿಲ್ಲ. ಹಾಗಾಗಿ, ಸೈಬರ್‌ ವಂಚನೆ ಪ್ರಕರಣಗಳ ಸಂಖ್ಯೆ ಇನ್ನೂ ಬಹಳ ಹೆಚ್ಚೇ ಇರಬಹುದು. ‘ಜನರು ಹೆದರಿಕೊಳ್ಳಬಾರದು ಮತ್ತು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಶಾಂತವಾಗಿ ಇರಬೇಕು. ತಕ್ಷಣವೇ ಸೈಬರ್‌ ಪೊಲೀಸರಿಗೆ ದೂರು ನೀಡಬೇಕು’ ಎಂದು ಪ್ರಧಾನಿ ಹೇಳಿದ್ದಾರೆ. ಸೈಬರ್‌ ಭದ್ರತಾ ಸಂಸ್ಥೆಗಳು ಮತ್ತು ವ್ಯವಸ್ಥೆ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಸೈಬರ್‌ ವಂಚಕರಿಗಿಂತ ಭದ್ರತಾ ಸಂಸ್ಥೆಯು ಹೆಚ್ಚು ಚಾತುರ್ಯದಿಂದ ಕೆಲಸ ಮಾಡಿ, ವಂಚನೆಯನ್ನು ತಡೆಯಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.