ADVERTISEMENT

ಸಂಪಾದಕೀಯ: ರಾಜಕೀಯ ಪಕ್ಷಗಳಲ್ಲಿ ವಂಶಾಡಳಿತ ಪ್ರಜಾತಂತ್ರದ ಮೌಲ್ಯಗಳಿಗೆ ವ್ಯತಿರಿಕ್ತ

ಸಂಪಾದಕೀಯ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
   

ತಮಿಳುನಾಡಿನ ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಆ ರಾಜ್ಯದ ಅತಿ ದೊಡ್ಡ ರಾಜಕೀಯ ಪಕ್ಷ. ಪಕ್ಷಕ್ಕೆ ಸುದೀರ್ಘವಾದ ಪರಂಪರೆಯೂ ಇದೆ. ಪಕ್ಷದ ಮುಖ್ಯಸ್ಥರ ಮಕ್ಕಳೇ ಉತ್ತರಾಧಿಕಾರಿಗಳಾಗಿ ಅಧಿಕಾರ ಪಡೆದುಕೊಳ್ಳುವ ಪರಂಪರೆಯನ್ನೂ ಈ ಪಕ್ಷವು ಹೊಂದಿದೆ. ಈಗಲೂ ಪಕ್ಷದ ಮುಖ್ಯಸ್ಥರ ಮಗ, ಪಕ್ಷ ಮತ್ತು ಸರ್ಕಾರದಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಮಗ ಉದಯನಿಧಿ ಸ್ಟಾಲಿನ್‌ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಏರಿಸಿರುವುದು ಈ ಪರಂಪರೆಯನ್ನು ಸಾರಿ ಹೇಳಿದೆ.

46 ವರ್ಷ ವಯಸ್ಸಿನ ಉದಯನಿಧಿ ಅವರು ಪಕ್ಷ ಮತ್ತು ಸರ್ಕಾರದ ಅತ್ಯುನ್ನತ ಹುದ್ದೆಯ ಸನಿಹದಲ್ಲಿ ಬಂದು ನಿಂತಿದ್ದಾರೆ. ಪಕ್ಷದ ಮುಖ್ಯಸ್ಥರಾಗಿದ್ದ ಕರುಣಾನಿಧಿಯವರ ಬಳಿಕ ಸ್ಟಾಲಿನ್‌ ಉನ್ನತ ಹುದ್ದೆಗೆ ಏರಿದರು. ಅದೇ ರೀತಿಯಲ್ಲಿ ಸಮಯ ಬಂದಾಗ ಉದಯನಿಧಿ ಕೂಡ ಈ ಹುದ್ದೆಯನ್ನು ಪಡೆಯಲಿದ್ದಾರೆ. ಉದಯನಿಧಿಯವರ ರಾಜಕೀಯ ಏಳಿಗೆಯು ಬಹಳ ತ್ವರಿತವಾಗಿ ನಡೆದಿದೆ. ಅವರು ಸ್ವಲ್ಪ ಕಾಲ ಸಿನಿಮಾ ರಂಗದಲ್ಲಿ ಇದ್ದರು. ಸಿನಿಮಾ ರಂಗದಲ್ಲಿ ಕೆಲ ಕಾಲ ಕೆಲಸ ಮಾಡುವುದು ದ್ರಾವಿಡ ರಾಜಕಾರಣಕ್ಕೆ ಅತ್ಯಗತ್ಯವೇನೋ ಎಂಬ ರೀತಿಯಲ್ಲಿ ಈ ಪ್ರವೃತ್ತಿ ಇದೆ. ಅವರು 2018ರಲ್ಲಷ್ಟೇ ರಾಜಕೀಯ ರಂಗಕ್ಕೆ ಬಂದರು. ಆ ಬಳಿಕ ಅವರು, ತಂದೆ ರೂಪಿಸಿದ ಯೋಜನೆಯಂತೆಯೇ ಅತಿ ವೇಗವಾಗಿ ಮುಂದಕ್ಕೆ ಸಾಗಿದರು. 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಉದಯನಿಧಿ ಅವರು ಪಕ್ಷದ ತಾರಾ ಪ್ರಚಾರಕರಾಗಿದ್ದರು. ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನವೂ ಅವರದಾಗಿತ್ತು. 2021ರಲ್ಲಿ ತಮಿಳುನಾಡು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಬಳಿಕ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.  

ಉದಯನಿಧಿಯವರಿಗೆ ಉನ್ನತ ಸ್ಥಾನ ನೀಡಿರುವುದರ ಕುರಿತು ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳು ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿಲ್ಲ. ಆದರೆ, ಪಕ್ಷದ ಮುಖ್ಯಸ್ಥರ ಮಕ್ಕಳೇ ಉತ್ತರಾಧಿಕಾರಿಗಳಾಗುವುದರಿಂದ ರಾಜಕೀಯವಾಗಿ ಪಕ್ಷ ಬಲಹೀನವಾಗುತ್ತಾ ಹೋಗುತ್ತದೆ. ಕುಟುಂಬದ ಹಿಡಿತ ಬಿಗಿಯಾಗುತ್ತಾ ಹೋದಂತೆ ಪಕ್ಷದ ಸಂಘಟನೆಯ ಸ್ಫೂರ್ತಿ ಇಲ್ಲವಾಗುತ್ತದೆ. ಪಕ್ಷವು ಕುಸಿತದ ಹಾದಿಯಲ್ಲಿ ತಕ್ಷಣ ಸಾಗದೇ ಇರಬಹುದು. ಆದರೆ, ಕ್ರಮೇಣ ಹಾಗಾಗುವುದು ಖಚಿತ. ಸಾಮಾಜಿಕ ನ್ಯಾಯ, ಸಮಾನತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ವೈಚಾರಿಕತೆಯನ್ನು ಪ್ರತಿಪಾದಿಸಿಕೊಂಡು ಬಂದ ಪಕ್ಷವು ವಂಶಾಡಳಿತಕ್ಕೆ ಮಣೆ ಹಾಕುವುದು ಈ ಸಿದ್ಧಾಂತಗಳಿಗೆ ವ್ಯತಿರಿಕ್ತ ನಡವಳಿಕೆ. ಕರುಣಾನಿಧಿಯವರ ಕುಟುಂಬವು ಪಕ್ಷದಲ್ಲಿರುವ ಇತರರ ಕುಟುಂಬಗಳಿಗಿಂತ ಹೆಚ್ಚು ಸಮಾನ. ಕರುಣಾನಿಧಿಯವರ ಮಕ್ಕಳು, ಮೊಮ್ಮಕ್ಕಳಷ್ಟೇ ಅಲ್ಲ, ಸಂಬಂಧಿಕರು ಕೂಡ ಅಧಿಕಾರದ ಸ್ಥಾನಗಳಲ್ಲಿ ಇದ್ದಾರೆ. ಪಕ್ಷದ ಇತರರಿಗೆ ಎಟುಕದ ಸ್ಥಾನಗಳು ಈ ಕುಟುಂಬದವರಿಗೆ ಸಿಕ್ಕಿವೆ. 

ADVERTISEMENT

ವಂಶಪಾರಂಪರ್ಯ ರಾಜಕಾರಣವನ್ನು ನಡೆಸುತ್ತಿರುವ ಮತ್ತು ಪ್ರೋತ್ಸಾಹಿಸುತ್ತಿರುವ ಪಕ್ಷ ಡಿಎಂಕೆ ಮಾತ್ರವೇ ಅಲ್ಲ. ಪ್ರತಿಯೊಂದು ಪ್ರಾದೇಶಿಕ ಪಕ್ಷವೂ ಒಂದು ಕುಟುಂಬದ ಹಿಡಿತದಲ್ಲಿಯೇ ಇರುತ್ತದೆ. ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್‌ ಯಾದವ್‌ ಕುಟುಂಬದ್ದಾದರೆ ಶಿವಸೇನಾವು ಠಾಕ್ರೆ ಕುಟುಂಬದ್ದಾಗಿದೆ. ಕಾಶ್ಮೀರದ ಎರಡು ಪ್ರಮುಖ ಪಕ್ಷಗಳು ಎರಡು ಕುಟುಂಬಗಳ ನಿಯಂತ್ರಣ
ದಲ್ಲಿವೆ. ಜೆಡಿಎಸ್‌ಗೆ ದೇವೇಗೌಡ ಕುಟುಂಬದ್ದೇ ಆಧಿಪತ್ಯ. ಕುಟುಂಬದ ಹಿಡಿತದಲ್ಲಿ ಇಲ್ಲದ ಪ್ರಾದೇಶಿಕ ಪಕ್ಷವೇ ಇಲ್ಲ ಎನ್ನಬಹುದು. ರಾಷ್ಟ್ರೀಯ ಪಕ್ಷಗಳಲ್ಲಿಯೂ ವಂಶಪಾರಂಪರ್ಯದ ಆಳ್ವಿಕೆ ಇದೆ. ನೆಹರೂ–ಗಾಂಧಿ ಕುಟುಂಬವು ಕಾಂಗ್ರೆಸ್‌ ಪಕ್ಷವನ್ನು ಹಲವು ತಲೆಮಾರುಗಳಿಂದ ಹಿಡಿತದಲ್ಲಿ ಇರಿಸಿಕೊಂಡಿದೆ. ವಂಶಾಡಳಿತದ ತೀವ್ರ ಟೀಕಾಕಾರ ಪಕ್ಷವಾಗಿರುವ ಬಿಜೆಪಿಯ ಕೆಳ ಹಂತಗಳಲ್ಲಿ ನಾಯಕರ ಮಕ್ಕಳೇ ಅವರ  ಉತ್ತರಾಧಿಕಾರಿಗಳಾಗುತ್ತಿದ್ದಾರೆ. ಎಡಪಕ್ಷಗಳು ಮಾತ್ರ ವಂಶಾಡಳಿತದಿಂದ ಮುಕ್ತವಾಗಿವೆ. ವಂಶಾಡಳಿತವು ಪ್ರಜಾ‍ಪ್ರಭುತ್ವವನ್ನು ಕುಗ್ಗಿಸುತ್ತದೆ.


ಪ್ರಜಾಪ್ರಭುತ್ವದ ಮೂಲ ತತ್ವಗಳಿಗೇ ಇದು ವಿರುದ್ಧವಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವುದು, ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತಾಗುವುದೇ ಪ್ರಜಾಪ್ರಭುತ್ವದ ಮೌಲ್ಯ. ವಂಶಾಡಳಿತದ ಕಾಯಿಲೆಯು ಭಾರತಕ್ಕೆ ಸೀಮಿತವಾದುದೂ ಅಲ್ಲ. ರಾಜಕಾರಣವು ಕುಟುಂಬ ವ್ಯವಹಾರವಾಗಿ ಪರಿ
ವರ್ತನೆಗೊಂಡರೆ ಅದರಿಂದಾಗುವ ನಷ್ಟವನ್ನು ದೇಶ ಮತ್ತು ದೇಶದ ಜನರು ಅನುಭವಿಸಬೇಕಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.