ಪಂಜಾಬ್, ಹರಿಯಾಣ ಅಥವಾ ರಾಜಸ್ಥಾನದಲ್ಲಿ ಯಾವುದೇ ಚುನಾವಣೆ ನಡೆಯುವಾಗ ಡೇರಾ ಸಚ್ಚಾ ಸೌದಾ ಎಂಬ ಧಾರ್ಮಿಕ ಗುಂಪಿನ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಜೈಲಿನಲ್ಲಿ ಬಂದಿಯಾಗಿ ಇರಬಾರದು ಎಂಬ ಹೊಸ ನಿಯಮವು ಅಘೋಷಿತವಾಗಿ ಚಾಲ್ತಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲೂ ಅದನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಲಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯಾಗಿರುವ ಗುರ್ಮೀತ್‌ನನ್ನು ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳ ಮುಂಚೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ 15ನೇ ಬಾರಿಗೆ ಈತನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಈತನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದ ಪ್ರತಿ ಸಂದರ್ಭ ದಲ್ಲಿಯೂ ಲೋಕಸಭೆ, ವಿಧಾನಸಭೆ, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇದ್ದವು ಎಂಬುದು ಕಾಕತಾಳೀಯ ಆಗಿರಲಾರದು. ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿರುವ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಈತನನ್ನು ರೋಹ್ಟಕ್ ಕಾರಾಗೃಹದಲ್ಲಿ ಇರಿಸಲಾಗಿದೆ. ಪತ್ರಕರ್ತರೊಬ್ಬರನ್ನು ಕೊಲೆ ಮಾಡಿದ ಪ್ರಕರಣದಲ್ಲೂ ಈತ ಅಪರಾಧಿ ಎಂದು ಸಾಬೀತಾಗಿದೆ. ಆಗಸ್ಟ್‌ನಲ್ಲಿ ಈತನನ್ನು 21 ದಿನಗಳ ‘ಫರ್ಲೊ’ (ತಾತ್ಕಾಲಿಕ ಬಿಡುಗಡೆ) ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಜೈಲಿಗೆ ಮರಳಿದ ಕೆಲವೇ ದಿನಗಳಲ್ಲಿ ಪೆರೋಲ್ ಕೋರಿ ಈತ ಸಲ್ಲಿಸಿದ್ದ ಅರ್ಜಿಯನ್ನೂ ಮಾನ್ಯ ಮಾಡಲಾಗಿದ್ದು, ಜೈಲಿನಿಂದ 20 ದಿನ ಹೊರಗಿರಲು ಅವಕಾಶ ನೀಡಲಾಗಿದೆ.
ಗಂಭೀರ ಸ್ವರೂಪದ ಕೌಟುಂಬಿಕ ವಿಚಾರಗಳ ಆಧಾರದಲ್ಲಿ ಮಾತ್ರ ಪೆರೋಲ್ ನೀಡಲು ಅವಕಾಶವಿದೆ. ಬಂದಿಯನ್ನು ಪೆರೋಲ್ ಮೇಲೆ ಕಳುಹಿಸದಿದ್ದರೆ ಆತನ ಜೀವನದ ಮೇಲೆ ತೀವ್ರ ಸ್ವರೂಪದ ಪರಿಣಾಮಗಳಾಗುತ್ತವೆ ಎಂಬಂತಹ ಸಮಸ್ಯೆಗಳಿದ್ದರೆ ಮಾತ್ರ ಪೂರಕವಾಗಿ ತೀರ್ಮಾನ ಕೈಗೊಳ್ಳಬಹುದು. ಆದರೆ, ಪೆರೋಲ್ ಕೋರಿ ಗುರ್ಮೀತ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಪ್ರಕ್ರಿಯೆಯು ಶರವೇಗದಲ್ಲಿ ನಡೆದು, ಪೂರಕ ತೀರ್ಮಾನ ಹೊರಬಿದ್ದಿದೆ. ಈ ರೀತಿ ಅತಿವೇಗದಲ್ಲಿ ತೀರ್ಮಾನ ಕೈಗೊಂಡ ಪ್ರಕರಣಗಳು ವಿರಳ. ಮುಖ್ಯಮಂತ್ರಿ ಕಚೇರಿಯಿಂದ ಅರ್ಜಿಯು ಕಾರಾಗೃಹ ಇಲಾಖೆಗೆ ಹೋಗಿ, ಅಲ್ಲಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ತಲುಪಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ತುರ್ತಾಗಿ ಸಭೆ ನಡೆಸಿ ಒಪ್ಪಿಗೆಯನ್ನೂ ಸೂಚಿಸಿದ್ದಾರೆ. 20 ದಿನಗಳ ಪೆರೋಲ್ ಅವಧಿಯಲ್ಲಿ ರಾಮ್ ರಹೀಂ ಸಿಂಗ್ ಉತ್ತರ ಪ್ರದೇಶದ ಬಾಗಪತ್‌ನಲ್ಲಿರುವ ತನ್ನ ಆಶ್ರಮದಲ್ಲಿ ತಂಗಲಿದ್ದಾನೆ. ಪೆರೋಲ್ ನೀಡುವಾಗ ಕಠಿಣ ಷರತ್ತು ಗಳನ್ನೇನೂ ವಿಧಿಸಿಲ್ಲ. ಪೆರೋಲ್ ಅವಧಿಯಲ್ಲಿ ಅಪರಾಧಿಯು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿ
ಕೊಳ್ಳುವಂತಿಲ್ಲ ಮತ್ತು ಹರಿಯಾಣಕ್ಕೆ ಭೇಟಿ ನೀಡುವಂತಿಲ್ಲ ಎಂಬ ಷರತ್ತುಗಳನ್ನು ಹಾಕಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಚಾರ ಮತ್ತು ಇತರ ವಿಧಾನಗಳು ಜನರನ್ನು ಹೆಚ್ಚು ಪ್ರಭಾವಿಸುವ ಈ ಕಾಲಘಟ್ಟದಲ್ಲಿ ರಾಮ್ ರಹೀಂ ಸಿಂಗ್‌ಗೆ ವಿಧಿಸಿರುವ ಷರತ್ತುಗಳು ಗೌಣ ಎನಿಸುತ್ತವೆ. ಈತನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಯಾರು ಅನುಕೂಲ ಮಾಡಿಕೊಟ್ಟಿದ್ದಾರೋ ಅವರ ಪರವಾಗಿ ಈತನ ಅನುಯಾಯಿಗಳಲ್ಲಿ ಸದ್ಭಾವ ಮೂಡಿಸುವುದಕ್ಕಾಗಿಯೇ ಪೆರೋಲ್ ನೀಡಲಾಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದೇ ಇರಲಾರದು. ಹರಿಯಾಣದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಈತನ ಅನುಯಾಯಿಗಳಿದ್ದು, ಪ್ರಬಲವಾದ ಹಿಡಿತ ಹೊಂದಿದ್ದಾನೆ. ಸಾರ್ವಜನಿಕ ಭಾಷಣ ಇಲ್ಲದೆಯೂ ತನ್ನ ಅನುಯಾಯಿಗಳಿಗೆ ಸಂದೇಶ ರವಾನಿಸಲು ಈತನಿಗೆ ಈಗ ಸಾಧ್ಯವಾಗಲಿದೆ.
ರಾಮ್ ರಹೀಂ ಸಿಂಗ್‌ಗೆ ಪೆರೋಲ್ ನೀಡಿರುವುದು ಚುನಾವಣಾ ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಿತ್ತು. ಆದರೆ, ಆಯೋಗವು ಅದನ್ನು ಮಾನ್ಯ ಮಾಡಿಲ್ಲ. ಹರಿಯಾಣದಲ್ಲಿ ತೀವ್ರವಾದ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕಾರಣದಿಂದ ಹತಾಶವಾಗಿರುವ ಬಿಜೆಪಿಯು ಬೆಂಬಲ ಗಿಟ್ಟಿಸುವ ಕೊನೆಯ ಅಸ್ತ್ರವಾಗಿ ಈತನಿಗೆ ಪೆರೋಲ್ ಸಿಗಲು ಸಹಕರಿಸಿದೆ ಎಂಬ ಟೀಕೆಗಳಿವೆ. ಅತ್ಯುತ್ತಮ ರಾಜಕೀಯ ಮತ್ತು ಚುನಾವಣಾ ಪದ್ಧತಿಯನ್ನು ಬೆಂಬಲಿಸುವುದಾಗಿ ಹೇಳಿಕೊಳ್ಳುತ್ತಿರುವ ರಾಜಕೀಯ ಪಕ್ಷವೊಂದು ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಪರಾಧಿಯೊಬ್ಬನ ಬೆಂಬಲ ಬಯಸುತ್ತಿರುವುದು ದುರದೃಷ್ಟಕರ. ಇದು ಅತ್ಯಂತ ಕೆಟ್ಟ ರಾಜಕೀಯ ಮಾದರಿ. ಇಂತಹ ನಡೆಗೆ ಸಮ್ಮತಿಯ ಮುದ್ರೆ ಒತ್ತುವ ಮೂಲಕ ಚುನಾವಣಾ ಆಯೋಗವು ತನ್ನ ಘನತೆಗೆ ತಾನೇ ಹಾನಿ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.