ADVERTISEMENT

ಸಂಪಾದಕೀಯ | ಬ್ರಿಟನ್‌ ಪ್ರಧಾನಿ ರಿಷಿ ಮುಂದೆ ಸವಾಲುಗಳ ಸಾಲು ಸಾಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 21:00 IST
Last Updated 25 ಅಕ್ಟೋಬರ್ 2022, 21:00 IST
ರಿಷಿ ಸುನಕ್‌
ರಿಷಿ ಸುನಕ್‌   

ರಿಷಿ ಅವರು ಅತ್ಯುನ್ನತ ಅಧಿಕಾರ ಸ್ಥಾನಕ್ಕೆ ಏರಿರುವುದು ಬ್ರಿಟನ್‌ನ ಪ್ರಜಾಸತ್ತೆಯು ಅತ್ಯಂತ ಪ್ರಬುದ್ಧ ಸ್ಥಿತಿಗೆ ತಲುಪಿದೆ ಎಂಬ ಸೂಚನೆಯನ್ನೂ ನೀಡುತ್ತದೆ.

ಬ್ರಿಟನ್‌ ಆರ್ಥಿಕವಾಗಿ ಅತೀವ ಸಂಕಷ್ಟದಲ್ಲಿರುವ ಮತ್ತು ರಾಜಕೀಯವಾಗಿ ಚಂಚಲ ಹಾಗೂ ಅಸ್ಥಿರ ವಾಗಿರುವ ಈ ಹೊತ್ತಿನಲ್ಲಿ ರಿಷಿ ಸುನಕ್‌ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ನಾಯಕತ್ವಕ್ಕಾಗಿ ನಡೆದ ಪೈಪೋಟಿಯಲ್ಲಿ ಲಿಜ್‌ ಟ್ರಸ್‌ ಅವರು ರಿಷಿ ಅವರನ್ನು ಸೋಲಿಸಿದ್ದರು. 44 ದಿನಗಳ ಸಂಕಷ್ಟಮಯ ಆಳ್ವಿಕೆಯ ನಂತರ ಟ್ರಸ್‌ ಅವರು ಅಧಿಕಾರ ತೊರೆಯುವುದಾಗಿ ಘೋಷಿಸಿದರು. ಹಾಗಾಗಿ, ಪ್ರಧಾನಿ ಹುದ್ದೆಗೆ ರಿಷಿ ಅವರನ್ನು ಬಿಟ್ಟು ಬೇರೆ ಆಯ್ಕೆಯೇ ಇಲ್ಲದ ಸ್ಥಿತಿ ನಿರ್ಮಾಣ ಆಗಿತ್ತು. ಸಾಂಪ್ರದಾಯಿಕವಲ್ಲದ ರೀತಿಯಲ್ಲಿಯೇ ಅವರ ಆಯ್ಕೆ ನಡೆಯಿತು.

ಮತದಾನವೇ ಇಲ್ಲದೆ ಅವರು ಸ್ಪರ್ಧೆಯಲ್ಲಿ ಗೆದ್ದರು. ಸ್ಪರ್ಧಿಸಲು ಅಗತ್ಯವಾದ 100 ಸಂಸದರ ಬೆಂಬಲ ಗಳಿಸಲು ಕೂಡ ಆಕಾಂಕ್ಷಿ
ಗಳಾಗಿದ್ದ ಇತರರಿಗೆ ಸಾಧ್ಯವಾಗದಿದ್ದುದು ರಿಷಿ ಅವರ ಗೆಲುವನ್ನು ಸುಲಲಿತವಾಗಿಸಿತು. ನಾಲ್ಕು ತಿಂಗಳಲ್ಲಿ ಬ್ರಿಟನ್‌ನ ಪ್ರಧಾನಿಯಾದ ಮೂರನೇ ವ್ಯಕ್ತಿಯಾಗಿರುವ ಇವರು ಸದ್ಯವೇ ಹೊಸ ತಂಡವನ್ನು ಕಟ್ಟಿಕೊಳ್ಳಲಿದ್ದಾರೆ. 2016ರಲ್ಲಿನ ಬ್ರೆಕ್ಸಿಟ್‌ ಜನಮತಗಣನೆಯ ಬಳಿಕ ಪ್ರಧಾನಿ ಹುದ್ದೆಗೇರಿದ ಕನ್ಸರ್ವೇಟಿವ್ ಪಕ್ಷದ ಐದನೇ ನಾಯಕ ಇವರು. ಎರಡು ಶತಮಾನಗಳಲ್ಲಿಯೇ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ. ಅವರು ಈ ಹುದ್ದೆಗೇರಿದ ಬಿಳಿಯನಲ್ಲದ, ಏಷ್ಯಾದ ಮತ್ತು ಹಿಂದೂ ಧರ್ಮದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

ರಿಷಿ ಅವರ ಮುಂದೆ ಹತ್ತು ಹಲವು ಸವಾಲುಗಳಿವೆ. ಲಿಜ್‌ ಟ್ರಸ್‌ ಅವರ ಅವಧಿಯಲ್ಲಿ ಮಂಡಿಸಲಾದ ಕಿರು–ಬಜೆಟ್‌ನ ಪರಿಣಾಮವಾಗಿ ತತ್ತರಗೊಂಡ ಅರ್ಥ ವ್ಯವಸ್ಥೆಯನ್ನು ಅವರು ಸರಿದಾರಿಗೆ ತರಬೇಕಿದೆ. ಹಣದುಬ್ಬರವನ್ನು ನಿಯಂತ್ರಿಸಬೇಕಿದೆ ಮತ್ತು ಆರ್ಥಿಕ ಹಿಂಜರಿತದ ಅಪಾಯವನ್ನು ತಪ್ಪಿಸಬೇಕಿದೆ. ಇಂಧನ ದರದಲ್ಲಿ ಆಗಿರುವ ಭಾರಿ ಏರಿಕೆ, ಬಡ್ಡಿ ದರದ ತೀವ್ರ ಹೆಚ್ಚಳವು ದೇಶದ ಆರ್ಥಿಕತೆಯನ್ನು ಬಾಧಿಸಿದೆ. ಹಾಗೆಯೇ ಅದು ಕುಟುಂಬ ನಿರ್ವಹಣೆಯ ವೆಚ್ಚವನ್ನು ಆಗಸಕ್ಕೇರಿಸಿದೆ. ಇದನ್ನು ಸರಿಪಡಿಸಬೇಕಿದೆ.
ರಾಷ್ಟ್ರೀಯ ಆರೋಗ್ಯ ಸೇವೆಯು ಮರುಚಾಲನೆಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಆರ್ಥಿಕ ಹಿಂಜರಿತ ಮತ್ತು ಹಣಕಾಸು ಸಮಸ್ಯೆಗಳು ಈಗ ಆರಂಭವಾಗಿದ್ದೇನೂ ಅಲ್ಲ.

ಅವುಗಳ ಮೂಲವನ್ನು ಬ್ರೆಕ್ಸಿಟ್‌ ಕಾಲದಲ್ಲಿ ಮತ್ತು ಅದಕ್ಕಿಂತಲೂ ಹಿಂದೆಯೇ ಗುರುತಿಸಬಹುದು. ಈ ಹಿಂದೆ ಆಳ್ವಿಕೆ ನಡೆಸಿದ ಕೆಲವರು ಈ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಲಿಲ್ಲ. ಲಿಜ್‌ ಟ್ರಸ್‌ ಅವರ ಪ್ರಯೋಗಗಳು ಫಲ ಕೊಡಲಿಲ್ಲ ಮಾತ್ರವಲ್ಲ ಅವು ಸಮಸ್ಯೆಗಳನ್ನು ಇನ್ನಷ್ಟು ಗೋಜಲುಗೊಳಿಸಿದವು. ಹಣಕಾಸಿನ ಕುರಿತು ಅರಿವು ಇರುವ ವೃತ್ತಿಪರ ವ್ಯಕ್ತಿ ಎಂಬ ಖ್ಯಾತಿ ರಿಷಿ ಅವರಿಗೆ ಇದೆ. ಹಾಗೆಯೇ ಹಣಕಾಸು ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಕೋವಿಡ್‌ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿದ್ದರು ಎಂದೂ ಜನರು ಅವರನ್ನು ಹೊಗಳಿದ್ದಾರೆ. ತೆರಿಗೆ ಕಡಿತಗೊಳಿಸುವ ಯೋಜನೆಯನ್ನು ಟ್ರಸ್ ಅವರು ಪ್ರಕಟಿಸಿದಾಗ, ಅದು ತಿರುಗುಬಾಣ ಆಗಬಹುದು ಎಂಬ ಎಚ್ಚರಿಕೆಯನ್ನು ರಿಷಿ ಅವರು ನೀಡಿದ್ದರು ಎಂಬುದು ಗಮನಾರ್ಹ. ಅರ್ಥ ವ್ಯವಸ್ಥೆಯನ್ನು ಸರಿಪಡಿಸುವುದು ಸುದೀರ್ಘವಾದ ಪ್ರಕ್ರಿಯೆ. ಆದರೆ, ರಿಷಿ ಅವರಿಗೆ ಬಹಳಷ್ಟು ಸಮಯವೇನೂ ಇಲ್ಲ.

2025ರ ಜನವರಿಯಲ್ಲಿ ಚುನಾವಣೆ ಇದೆ. ಅದಕ್ಕೂ ಮುಂಚೆ ಇನ್ನೊಂದು ಬಾರಿ ನಾಯಕತ್ವ ಬದಲಾವಣೆಗೆ ಕನ್ಸರ್ವೇಟಿವ್ ಪಕ್ಷವು ಕೈಹಾಕದು. ವಿರೋಧ ಪಕ್ಷ ಲೇಬರ್‌ ಪಾರ್ಟಿಯು ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿದೆ. ರಿಷಿ ಅವರು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಜನರಿಂದ ಆಯ್ಕೆ ಆದವರು ಅಲ್ಲ ಎಂಬುದು ಆ ಪಕ್ಷವು ಅವಧಿಪೂರ್ವ ಚುನಾವಣೆಗೆ ನೀಡುತ್ತಿರುವ ಕಾರಣ.

ರಿಷಿ ಅವರು ಅತ್ಯುನ್ನತ ಅಧಿಕಾರ ಸ್ಥಾನಕ್ಕೆ ಏರಿರುವುದು ಬ್ರಿಟನ್‌ನ ಪ್ರಜಾಸತ್ತೆಯು ಅತ್ಯಂತ ಪ್ರಬುದ್ಧ ಸ್ಥಿತಿಗೆ ತಲುಪಿದೆ ಎಂಬ ಸೂಚನೆಯನ್ನೂ ನೀಡುತ್ತದೆ. ಅವರು ಬ್ರಿಟನ್‌ನಲ್ಲಿಯೇ ಹುಟ್ಟಿ ಬೆಳೆದವರು. ಆದರೆ ಅವರಿಗೆ ಬೇರೆ ಅಸ್ಮಿತೆಗಳೂ ಇವೆ. ಈ ಭಿನ್ನ ಅಸ್ಮಿತೆಗಳೇ ಉನ್ನತ ಹುದ್ದೆ ಪಡೆಯುವುದಕ್ಕೆ ಅವರಿಗೆ ಅಡ್ಡಿ ಆಗಬಹುದಿತ್ತು. ಬಿಳಿಯರಲ್ಲದ ಮತದಾರರು ಅಷ್ಟಾಗಿ ಇಷ್ಟಪಡದ ಕನ್ಸರ್ವೇಟಿವ್ ಪಕ್ಷದ ನಾಯಕ ಅವರು ಎಂಬುದು ಕೂಡ ಗಮನಿಸಬೇಕಾದ ವಿಚಾರವೇ ಆಗಿದೆ.

ಆ ಸಮಾಜವು ಹೆಚ್ಚು ಹೆಚ್ಚು ಒಳಗೊಳ್ಳುವ ಗುಣವನ್ನು ಬೆಳೆಸಿಕೊಂಡಿದೆ ಎಂಬುದರ ಸಂಕೇತವಾಗಿಯೂ ರಿಷಿ ಅವರ ಆಯ್ಕೆಯನ್ನು ನೋಡಬಹುದು. ಇತರ ಹಲವು ದೇಶಗಳಲ್ಲಿ ಅಸಹಿಷ್ಣುತೆ ಮತ್ತು ಸಂಕುಚಿತ ಭಾವವೇ ವಿಜೃಂಭಿಸುತ್ತಿರುವ ಕಾಲದಲ್ಲಿ ಬ್ರಿಟನ್‌ ಹೆಚ್ಚು ಪ್ರಬುದ್ಧವಾಗಿ ವರ್ತಿಸುತ್ತಿರುವುದು ಸ್ವಾಗತಾರ್ಹ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.