ಕೊರೊನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವಾಗಲೇ ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ ಮತ್ತೆ ಕಾಣಿಸಿಕೊಂಡಿದೆ. ಈ ಎರಡೂ ಸೋಂಕುಗಳ ವಿರುದ್ಧ ಏಕಕಾಲಕ್ಕೆ ಸೆಣಸಬೇಕಾದ ಸ್ಥಿತಿ ರಾಜ್ಯ ಸರ್ಕಾರಕ್ಕೆ ಈಗ ಎದುರಾಗಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಆದರೆ, ಮಂಗನ ಕಾಯಿಲೆ ನಿಯಂತ್ರಣದ ವಿಚಾರದಲ್ಲಿ ಅಂತಹ ಕಳಕಳಿ ಕಂಡುಬಂದಿಲ್ಲ ಏಕೆ ಎಂಬ ಪ್ರಶ್ನೆ ಮಲೆನಾಡಿನ ಭಾಗದ ಜನರನ್ನು ಕಾಡುತ್ತಿದೆ.
ಮಂಗನ ಕಾಯಿಲೆಯು ಮಲೆನಾಡಿಗೆ ಹೊಸದಲ್ಲ; ಇದರ ಬಗ್ಗೆ ಸರ್ಕಾರಗಳ ನಿರ್ಲಕ್ಷ್ಯವೂ ಹೊಸದಲ್ಲ. ಆದರೆ, ಅದು ಈ ಸಲ ಕೂಡ ಪುನರಾವರ್ತನೆ ಆಗದಿರಲಿ ಎಂಬುದು ಜನರ ಹಾರೈಕೆ. ನಿಯಂತ್ರಣ ಕ್ರಮಗಳನ್ನು ಕೂಡಲೇ ತೆಗೆದುಕೊಂಡರೆ ಸಾವು–ನೋವು ತಡೆಯಬಹುದು. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ; ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ; ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕೊಪ್ಪ ಭಾಗಗಳಲ್ಲಿ ಕಾಯಿಲೆಬಾಧಿತರ ಸಂಖ್ಯೆ ಈಗ ದಿನದಿಂದ ದಿನಕ್ಕೆ ಏರತೊಡಗಿದೆ. ಸಾವಿನ ಸರಣಿಯೂ ಆರಂಭವಾಗಿದೆ. ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. 114 ಜನರಲ್ಲಿ ಮಂಗನ ಕಾಯಿಲೆ ಸೋಂಕು ಇರುವುದು ದೃಢಪಟ್ಟಿದೆ.
ಇಂತಹ ಸೂಕ್ಷ್ಮ ಸಂದರ್ಭದಲ್ಲಿ, ಮಂಗನ ಕಾಯಿಲೆ ನಿಯಂತ್ರಿಸುವುದುಆಡಳಿತದ ಆದ್ಯತೆಯಾಗಬೇಕು. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಡಳಿತ ಪಕ್ಷದ ಕೆಲವು ಶಾಸಕರೇ ವಿಧಾನಸಭೆಯಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸೋಂಕಿತರಿಗೆ ಉಚಿತ ಚಿಕಿತ್ಸೆ ಕಲ್ಪಿಸುವುದಾಗಿ ಸರ್ಕಾರ ಕಳೆದ ವರ್ಷ ಘೋಷಿಸಿತ್ತು. ಆದರೆ, ಕಳೆದ ವರ್ಷ ನೀಡಿದ್ದ ಚಿಕಿತ್ಸೆಯ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಆಸ್ಪತ್ರೆಗಳು ಈಗ ಚಿಕಿತ್ಸೆ ನಿರಾಕರಿಸುತ್ತಿವೆ ಎಂದು ಶಾಸಕರು ದೂರಿದ್ದಾರೆ. ಸೋಂಕಿತರನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್‌ಗಳನ್ನು ಸಿದ್ಧ ಇಡಬೇಕು; ಸೋಂಕು ಪತ್ತೆಗೆ ಬೇಕಾದ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಆರೋಗ್ಯ ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಅವರು ನೀಡಿರುವ ಭರವಸೆಯು ತ್ವರಿತವಾಗಿ ಕಾರ್ಯರೂಪಕ್ಕೆ ಬರಬೇಕು.
ಮಂಗನ ಕಾಯಿಲೆಯು ಕಾಡಂಚಿನ ಪ್ರದೇಶಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾ ಬಂದಿದೆ. ಅರಣ್ಯ ಪ್ರದೇಶದ ಒತ್ತುವರಿಯೂ ಈ ಸೋಂಕು ಹರಡುವ ಕಾರಣಗಳಲ್ಲೊಂದು ಎಂದೇ ಗುರುತಿಸಲಾಗಿದೆ. ಸೋಂಕು ಹರಡುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಕಾಡಂಚಿನ ಜನರು ಮಾತ್ರ ಈ ಕಾಯಿಲೆಗೆ ಸದ್ಯ ನೀಡುತ್ತಿರುವ ಲಸಿಕೆಯನ್ನು ನಿರಾಕರಿಸುತ್ತಿದ್ದಾರೆಂಬ ಮಾತು ಇದೆ. ಕಳೆದ ವರ್ಷ ಲಸಿಕೆ ಹಾಕಿಸಿಕೊಂಡವರಲ್ಲೂ ಈ ವರ್ಷ ಸೋಂಕು ಪತ್ತೆಯಾಗಿರುವುದು ವರದಿಯಾಗಿದೆ. ಆರೋಗ್ಯ ಇಲಾಖೆಯು ಕಾಡಂಚಿನ ಜನರನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಂಡು, ಅವರಲ್ಲಿ ಜಾಗೃತಿ ಮೂಡಿಸಬೇಕು. ಅವರಲ್ಲಿರುವ ಆತಂಕ, ಅನುಮಾನಗಳನ್ನು ನಿವಾರಿಸಬೇಕು. ಇಲ್ಲದಿದ್ದರೆ ಮಾಡುವ ಕೆಲಸವೆಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಗುತ್ತದೆ.
ಮಲೆನಾಡಿನ ಕ್ಯಾಸನೂರಿನಲ್ಲಿ1957ರಲ್ಲಿ ಮೊದಲ ಬಾರಿಗೆ ಮಂಗನ ಕಾಯಿಲೆಯನ್ನು ಗುರುತಿಸಲಾಯಿತು. ಅಂದಿನಿಂದ ಇಂದಿನವರೆಗೂ ಈ ಕಾಯಿಲೆಗೆ ಪರಿಣಾಮಕಾರಿ ಲಸಿಕೆಯನ್ನು ಕಂಡುಹಿಡಿಯಲು ಸಾಧ್ಯವಾಗದಿರುವುದು ವಿಷಾದದ ಸಂಗತಿ. ಮಂಗನ ಕಾಯಿಲೆಗೆ ಈಗಲೂ ರೋಗನಿರೋಧಕ ಲಸಿಕೆ ಮಾತ್ರ ನೀಡಲಾಗುತ್ತದೆ ವಿನಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಪ್ರತೀ ಬೇಸಿಗೆ ಕಾಲದಲ್ಲಿ ಈ ಭಾಗದ ಜನರನ್ನು ವಾರ್ಷಿಕ ಪಿಡುಗಾಗಿ ಕಾಡುತ್ತಿದ್ದ ಈ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಾಲದಲ್ಲೂ ಕಾಣಿಸಿಕೊಂಡು ಬೆಚ್ಚಿಬೀಳಿಸಿದೆ. ಮಲೆನಾಡಿನಲ್ಲಿ ಮಾತ್ರವಲ್ಲದೆ, ಬಂಡೀಪುರ ಭಾಗದಲ್ಲೂ ಕಳೆದ ವರ್ಷ ಕಾಣಿಸಿಕೊಂಡಿತ್ತು. ನೆರೆರಾಜ್ಯಗಳಾದ ಕೇರಳ, ತಮಿಳುನಾಡಿನ ಕೆಲವು ಪ್ರದೇಶಗಳಿಗೂ ಹರಡಿತ್ತು. ಹಾಗಾಗಿ, ಬಾಧಿತ ರಾಜ್ಯಗಳು ಈ ಬಗ್ಗೆ ಗಂಭೀರವಾಗಿ ಆಲೋಚಿಸಿ, ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿಯುವ ಕೆಲಸಕ್ಕೆ ಬಲ ತುಂಬಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.