ADVERTISEMENT

ಸಂಪಾದಕೀಯ | ವಿಧಾನಮಂಡಲ: ಚರ್ಚೆಗೆ ನಕಾರ ಸಮರ್ಥನೀಯ ನಡೆ ಅಲ್ಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 23:35 IST
Last Updated 26 ಜುಲೈ 2024, 23:35 IST
<div class="paragraphs"><p>ಸಂಪಾದಕೀಯ</p></div>

ಸಂಪಾದಕೀಯ

   

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ಕುರಿತು ಚರ್ಚೆಯನ್ನು ನಡೆಸಲು ಅವಕಾಶ ಕಲ್ಪಿಸದೇ ಇರುವ ಮೂಲಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಯವರು ತಪ್ಪು ಮಾದರಿಯನ್ನು ಅನುಸರಿಸಿದ್ದಾರೆ. ಇದು, ಲೋಕಸಭಾ ಸ್ಪೀಕರ್ ಹಾಗೂ ರಾಜ್ಯಸಭೆಯ ಸಭಾಪತಿ ಅನುಸರಿಸಿದ ಕೆಲವು ತಪ್ಪು ಮಾದರಿಗಳಂತೆಯೇ ಇದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಕೆಲವು ವಾರಗಳಿಂದ ಮುನ್ನೆಲೆಗೆ ಬಂದಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಮೂಡಿವೆ. ಸಾರ್ವಜನಿಕವಾಗಿ ಮಹತ್ವದ್ದಾಗಿರುವ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಸಿಗಬೇಕು ಎಂದು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಸದಸ್ಯರು ಆಗ್ರಹಿಸಿದ್ದರು.
ಆದರೆ ಇದು ತೀರಾ ಈಚೆಗಿನ ವಿಷಯ ಅಲ್ಲ, ಇದರ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಲಾಗಿದೆ ಎಂಬ ಕಾರಣವನ್ನು ಮುಂದೊಡ್ಡಿ, ‘ಚರ್ಚೆಗೆ ಅವಕಾಶ ನೀಡಬೇಕು’ ಎಂಬ ಬೇಡಿಕೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ತಿರಸ್ಕರಿಸಿದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರೂ ಚರ್ಚೆಗೆ ಅವಕಾಶ ಕಲ್ಪಿಸಲಿಲ್ಲ. ಸ್ಪೀಕರ್ ಅವರ ನಿಲುವನ್ನು ಸಮರ್ಥಿಸಿ, ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ ಪುಸ್ತಕವನ್ನು ಪ್ರದರ್ಶಿಸಿದರು.

ಚರ್ಚೆಗೆ ಅವಕಾಶ ಕಲ್ಪಿಸದೇ ಇರುವುದರ ಪರವಾಗಿರುವ ವಾದಗಳು ಸಮರ್ಥನೀಯವಾಗಿಲ್ಲ. ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಡಾ ಕೈಗೊಂಡ ತೀರ್ಮಾನವು ಬಹಳ ಹಿಂದಿನದೇ ಆಗಿರಬಹುದು. ಆದರೆ, ಈ ವಿಚಾರವು ಬಹಿರಂಗವಾಗಿರುವುದು ಈಚೆಗೆ. ಸರ್ಕಾರವು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದಮಾತ್ರಕ್ಕೆ ಅದರ ಬಗ್ಗೆ ಸದನದಲ್ಲಿ ಚರ್ಚೆಯಾಗಬಾರದು ಎಂದೇನೂ ಇಲ್ಲ. ಪ್ರಕರಣವೊಂದರ ಕುರಿತು ಚರ್ಚೆ ಆಗದಂತೆ ನೋಡಿಕೊಳ್ಳುವುದಕ್ಕಾಗಿಯೇ, ವಿಷಯವನ್ನು ತೆರೆಯ ಹಿಂದಕ್ಕೆ ಸರಿಸುವ ಉದ್ದೇಶದಿಂದಲೇ ತನಿಖೆಗೆ ಆದೇಶ ನೀಡಿದ ನಿದರ್ಶನಗಳೂ ಇವೆ. ತನಿಖೆಯ ಮೇಲೆ ಪರಿಣಾಮ ಉಂಟಾಗದಂತೆ ಚರ್ಚೆ ನಡೆಸುವುದಾಗಿ ವಿರೋಧ ಪಕ್ಷಗಳ ಸದಸ್ಯರು ಹೇಳಿದ್ದರು. ಚರ್ಚೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ನಿಯಮಗಳನ್ನು ಆಶ್ರಯಿಸುವುದು ಸರಿಯಾದ ಕ್ರಮ ಅಲ್ಲ. ಹಾಗೆ ಮಾಡುವುದು, ಯಾವುದೋ ಒಂದು ಸಂಗತಿಯನ್ನು ಮರೆಮಾಚಲು ತಾಂತ್ರಿಕ ಅಂಶಗಳ ಆಶ್ರಯ ಪಡೆಯುವುದಕ್ಕೆ ಸಮನಾಗುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸರ್ಕಾರದ ನೇತೃತ್ವ ವಹಿಸಿರುವವರು ವಿವರಣೆ ನೀಡಿದ್ದಾರೆ. ‘ತನಿಖೆ ನಡೆಯುತ್ತಿದೆ’ ಎಂಬ ಕಾರಣವನ್ನು ಮುಂದಿಟ್ಟಿದ್ದಾರೆ. ಆದರೆ ಈ ವಿವರಣೆಯು ಸಾರ್ವಜನಿಕರಲ್ಲಿ ಮೂಡಿರುವ ಸಂಶಯವನ್ನು ನಿವಾರಿಸುವ ರೀತಿಯಲ್ಲಿ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಗಳಿಂದ ಹಣವನ್ನು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಸರ್ಕಾರ ಒ‍ಪ್ಪಿಕೊಂಡಿದೆ. ಆದರೆ ಈ ಹಗರಣದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಹಾಗೂ ನಿಗಮದ ಅಧಿಕಾರಿಗಳ ಮೇಲೆ ಸರ್ಕಾರ ಬೊಟ್ಟು ಮಾಡಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ ಎಂಬುದು ನಿಜವೇ ಆಗಿದ್ದರೆ, ಅದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸದನವನ್ನು ಬಳಸಿಕೊಳ್ಳಲು ಅವಕಾಶ ಇತ್ತು.   

ADVERTISEMENT

ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನಿರಾಕರಿಸಿದ ಕಾರಣಕ್ಕೆ ವಿರೋಧ ಪಕ್ಷಗಳು ಪ್ರತಿಭಟನೆಯ ಬೇರೆ ಬೇರೆ ಮಾರ್ಗಗಳನ್ನು ತುಳಿದವು. ವಿರೋಧ ಪಕ್ಷಗಳ ಸದಸ್ಯರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಸದನದ ಹೊರಗೆ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಪ್ರತಿಭಟನೆಗಳು ಆಗಿವೆ. ಆ ಮೂಲಕ ಮುಡಾ ಹಗರಣವು ಸಾರ್ವಜನಿಕರ ಗಮನವನ್ನು ಹೆಚ್ಚು ಸೆಳೆದಿದೆ. ತಮ್ಮ ವಿರುದ್ಧದ ಹಾಗೂ ತಮ್ಮ ಕುಟುಂಬದ ಸದಸ್ಯರ ವಿರುದ್ಧದ ಆರೋಪಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಗಳೆದಿದ್ದಾರೆ. ಸುದ್ದಿಗೋಷ್ಠಿಯೊಂದನ್ನು ನಡೆಸಿರುವ ಅವರು, ತಮ್ಮ ವಾದಕ್ಕೆ ಪೂರಕವಾಗಿ ಒಂದಿಷ್ಟು ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಕೆಲಸವನ್ನು ಅವರು ವಿಧಾನಸಭೆಯಲ್ಲಿ ಹಾಗೂ ವಿಧಾನ ಪರಿಷತ್ತಿನಲ್ಲಿ ಮಾಡಬೇಕಿತ್ತು. ಏಕೆಂದರೆ, ರಾಜ್ಯದಲ್ಲಿ ಮಹತ್ವದ ವಿಷಯಗಳ ಕುರಿತು ಅತ್ಯಂತ ಹೆಚ್ಚು ಪ್ರಜಾಸತ್ತಾತ್ಮಕವಾದ ಚರ್ಚೆಗಳಿಗೆ ಅವಕಾಶ ಕಲ್ಪಿಸುವ ಸಾಂವಿಧಾನಿಕ ವೇದಿಕೆಗಳು ಅವು. ಸದನದಲ್ಲಿ ಚರ್ಚೆಗೆ ಹಿಂದೇಟು ಹಾಕಿ, ಹೊರಗಡೆ ಅದರ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸಮರ್ಥನೀಯ? ಹಿಂದೆ ಹಲವು ಸಂದರ್ಭಗಳಲ್ಲಿ ಲೋಕಸಭೆ, ರಾಜ್ಯಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆಗೆ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಮಂಡಿಸಿದ್ದ ಕೋರಿಕೆಯನ್ನು ಸಕಾರಣವಿಲ್ಲದೆ ತಿರಸ್ಕರಿಸಿದ ಹಾಗೂ ಸಂಸದರನ್ನು ಅಮಾನತು ಮಾಡಿದ ನಿದರ್ಶನಗಳು ಇವೆ. ಅಲ್ಲಿ ಕೈಗೊಂಡ ಅಂತಹ ತೀರ್ಮಾನಗಳನ್ನು ಇಲ್ಲಿಯೂ ಕೈಗೊಳ್ಳಬಾರದು ಎಂಬ ಪಾಠವನ್ನು ಕಲಿಯಬೇಕಿತ್ತು. ನಿಯಮಗಳೇ ಅಡ್ಡಿಪಡಿಸಿದರೂ ಅವುಗಳನ್ನು ಮೀರಿ ಮಾತುಕತೆಗೆ ಸಿದ್ಧವಿರುವ, ಮುಕ್ತ ವಾತಾವರಣವನ್ನು ಕಲ್ಪಿಸುವ ಮಾದರಿಯನ್ನು ಅನುಸರಿಸಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.